ಸೋಮವಾರ, ಏಪ್ರಿಲ್ 12, 2021
30 °C
ಬಜೆಟ್‌ನಲ್ಲಿ ಶಿಕ್ಷಣಕ್ಕೆ ಆದ್ಯತೆ; ದೊರೆಸ್ವಾಮಿ ವಿಶ್ವಾಸ

ಶಾಲೆ ದತ್ತು, ಸಂಸದರಿಗೂ ಮನವಿ: ಎಂ.ಆರ್. ದೊರೆಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಶಾಸಕರಂತೆ ವಿಧಾನ ‍ಪರಿಷತ್‌ ಸದಸ್ಯರು ಹಾಗೂ ಸಂಸದರೂ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಪತ್ರದ ಮೂಲಕ ಮನವಿ ಮಾಡಲಾಗುವುದು ಎಂದು ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್. ದೊರೆಸ್ವಾಮಿ ತಿಳಿಸಿದರು.

‘ಪ್ರತಿ ಶಾಸಕರು ತಮ್ಮ ಕ್ಷೇತ್ರದ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೆ. ಅದರಂತೆ ಸರ್ಕಾರ ಕಳೆದ ಬಜೆಟ್‍ನಲ್ಲಿ ಸರ್ಕಾರ ಘೋಷಣೆ ಮಾಡಿದ್ದು, ಎಲ್ಲ 224 ಮಂದಿ ಶಾಸಕರೂ ಈ ಕರೆಗೆ ಸ್ಪಂದಿಸಿದ್ದರು. ‘ರಾಜ್ಯದಲ್ಲಿರುವ ವಿವಿಧ 35 ವಿಶ್ವವಿದ್ಯಾಲಯಗಳು ಸಹ ಶಾಲೆಗಳನ್ನು ದತ್ತು ತೆಗೆದುಕೊಂಡಿವೆ. ಇದರ ಮುಂದುವರಿದ ಭಾಗವಾಗಿ ಪರಿಷತ್‌ ಸದಸ್ಯರು ತಲಾ ಮೂರು ಶಾಲೆ, ಸಂಸದರು ತಲಾ 5 ಶಾಲೆಗಳನ್ನು ದತ್ತು ಪಡೆಯುವಂತೆ ಕೋರಿ ಸರ್ಕಾರದ ಮೂಲಕವೇ ಪತ್ರ ಬರೆಯಲಾಗುವುದು’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಆಗಬೇಕು. ಮಹನೀಯರ ಜಯಂತಿಗಳು ಕೇವಲ ರಜೆ ಪಡೆಯುವ ದಿನಗಳಾಗದೇ ಅರ್ಥಪೂರ್ಣ ಆಚರಣೆಗಳಾಗಬೇಕು, ಪ್ರಾಥಮಿಕ ಶಿಕ್ಷಣ ಗಟ್ಟಿಯಾಗಿದ್ದರೆ, ಮಕ್ಕಳ ಭವಿಷ್ಯವೂ ಉಜ್ವಲವಾಗಿರುತ್ತದೆ’ ಎಂದು ಅವರು ಹೇಳಿದರು.

ಸರ್ಕಾರಕ್ಕೆ 12 ಬೇಡಿಕೆ: ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವಂತೆ ಕೋರಿ 12 ಬೇಡಿಕೆಗಳನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ. ಶಿಕ್ಷಕರ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೂ ತರಬೇತಿಯ ಅಗತ್ಯವಿದ್ದು, ಇದಕ್ಕೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದ ಎಲ್ಲಾ 48 ಸಾವಿರ ಶಾಲೆಗಳಿಗೂ ಡಿಜಿಟಲ್‌ ಆರೋಗ್ಯ ಕಾರ್ಡ್‌ ವಿತರಣೆ ಮಾಡಬೇಕು. ಇದಕ್ಕೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಎಲ್ಲಾ 56 ಮೆಡಿಕಲ್ ಕಾಲೇಜುಗಳಿಗೆ ಜವಾಬ್ದಾರಿ ನೀಡಬೇಕು ಎಂದು ಕೋರಲಾಗಿದೆ ಎಂದರು.

ಶುದ್ಧ ನೀರು ಸರಬರಾಜು: ಜಲಜೀವನ್ ಮಿಷನ್ ಅಡಿಯಲ್ಲಿ ರಾಜ್ಯದ 21 ಸಾವಿರ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದಾಗಿ ಆರ್‌ಡಿಪಿಆರ್‌ ಹೇಳಿದೆ, ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳು ವಹಿಸಿಕೊಳ್ಳಬೇಕು ಎಂದು ದೊರೆಸ್ವಾಮಿ ತಿಳಿಸಿದರು.

ನನ್ನ ಊರು, ನನ್ನ ಶಾಲೆ ಯೋಜನೆ: ತಾನು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 'ನನ್ನ ಊರು ನನ್ನ ಶಾಲೆ' ಎನ್ನುವ ಯೋಜನೆಯನ್ನು ಜಾರಿಗೆ ತರಲಾಗಿದೆ. ನ್ಯಾಯಮೂರ್ತಿ ಗೋಪಾಲಗೌಡ ಸೇರಿದಂತೆ ಹಲವರು ತಾವು ಕಲಿತ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದರ ಜತೆಗೆ ಬೆಂಗಳೂರಿನ ಐ.ಟಿ. ಕಂಪನಿಗಳು ತಮ್ಮ ಸಿಎಸ್‍ಆರ್ ನಿಧಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಳಕೆ ಮಾಡುವಂತೆ ಕೋರಲಾಗುವುದು. ಜ್ಞಾನ ಪೀಠ ಪುರಸ್ಕೃತರು ಕಲಿತ 8 ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಹ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡ ಮೇಲೆ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ಸಂಬಂಧ 15 ಅಂಶಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಸಮಿತಿಯ ಸದಸ್ಯರಾದ ಲೋಕೇಶ್, ಡಾ. ಶ್ರೀನಿವಾಸ್, ಡಿಡಿಪಿಐ ಸೋಮಶೇಖರಯ್ಯ, ಬಿಇಒಗಳಾದ ಬಿ.ಎಂ. ಮರಿಗೌಡ ನಾಗರಾಜು, ಡಿವೈಪಿಸಿ ಸೀತಾರಾಂ ಮುಂತಾದವರು ಇದ್ದರು.

ಶಾಲೆ ಆರಂಭಕ್ಕೆ ಶಿಫಾರಸು
‘ನಾನು ಭೇಟಿ ನೀಡಿದ ಕಡೆಗಳಲ್ಲಿ ಪೋಷಕರು 1ರಿಂದ 4ನೇ ತರಗತಿಗಳನ್ನು ಆರಂಭಿಸುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಕೆಲವು ತಜ್ಞರು ಈ ವಿಚಾರದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ದೇವರೇ ಇಲ್ಲದ ದೇವಸ್ಥಾನಕ್ಕೆ ಹೋಗಲು ಮನಸ್ಸಾಗದು. ಹೀಗಾಗಿ ಶಾಲೆಗಳ ಪುನರಾರಂಭ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಅವರು ಹೇಳಿದರು.

ಎಲ್ಲೆಲ್ಲಿ ಯಾವ್ಯಾವ ಶಾಲೆ ದತ್ತು?
ಜಿಲ್ಲೆಯ ಶಾಸಕರು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿವಿಧ ಶಾಲೆಗಳನ್ನು ದತ್ತು ಪಡೆದಿದ್ದಾರೆ.

ಮಾಗಡಿ ಶಾಸಕ ಎ ಮಂಜುನಾಥ್ ಮಾಗಡಿ ತಾಲ್ಲೂಕಿನ ಹುಲಿಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುದೂರು ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ರಾಮನಗರ ತಾಲ್ಲೂಕಿನ ಜಾಲಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ.

ಚನ್ನಪಟ್ಟಣ ಶಾಸಕ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಕರ್ನಾಟಕ ಪಬ್ಲಿಕ್ ಶಾಲೆ, ಎಂ.ಎನ್. ಹೊಸಹಳ್ಳಿ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನಪಟ್ಟಣ ಟೌನ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪೌಢಶಾಲೆ ವಿಭಾಗ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ.

ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಕನಕಪುರ ತಾಲ್ಲೂಕಿನ ತಟ್ಟೆಕೆರೆಯ ಹಿರಿಯ ಪ್ರಾಥಮಿಕ ಶಾಲೆ, ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ರಾಮನಗರ ಬೀಡಿ ಕಾರ್ಮಿಕರ ಕಾಲೊನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.

ಶಾಲೆಗಳಲ್ಲಿ ಪರಿಶೀಲನೆ
ಎಂ.ಆರ್. ದೊರೆಸ್ವಾಮಿ ಮಂಗಳವಾರ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದರು.
ಕೂನಮುದ್ದನಹಳ್ಳಿಯ ಸ.ಕಿ.ಪ್ರಾಥಮಿಕ ಪಾಠ ಶಾಲೆ, ಜಾಲಮಂಗಲ ಸರ್ಕಾರಿ ಪ್ರೌಢ ಶಾಲೆ, ಬ್ರಹ್ಮಣೀಪುರ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಅವರು ಭೇಟಿ ನೀಡಿದರು. ಶಾಲೆಯಲ್ಲಿ ಜಲಜೀವನ್ ಯೋಜನೆ ಅಡಿ ನೀರಿನ ಸಂಪರ್ಕ, ಶೌಚಾಲಯ ವ್ಯವಸ್ಥೆ, ಅಡುಗೆ ಮನೆ, ಶಾಲಾ ಕೊಠಡಿಯಲ್ಲಿ ಮಕ್ಕಳಿಗೆ ಬೇಕಿರುವ ಪೀಠೋಪಕರಣಗಳ ವ್ಯವಸ್ತೆಗಳ ಬಗ್ಗೆ ಪರಿಶೀಲಿಸಿ ಶಿಕ್ಷಕರು ಹಾಗೂ ಮಕ್ಕಳ ಜೊತೆ ಸಂವಾದ ನಡೆಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಸೋಮಸುಂದರ್ ಜೊತೆಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು