ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಶಿಥಿಲ ಶಾಲೆ: ಬಿರುಕು ಬಿಟ್ಟ ಗೋಡೆ; ಉದುರುವ ಕಾಂಕ್ರೀಟ್

ಬಾರೆದೊಡ್ಡಿ ಶಾಲೆ: ಶಿಥಿಲಾವಸ್ಥೆ ತಲುಪಿದ ಹಳೆ ಕಟ್ಟಡ, ಆತಂಕದಲ್ಲೇ ಮಕ್ಕಳಿಗೆ ನಿತ್ಯ ಪಾಠ
Published 28 ಜೂನ್ 2024, 4:20 IST
Last Updated 28 ಜೂನ್ 2024, 4:20 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿಯ ಸಮೀಪದ ಛತ್ರ ಗ್ರಾಮದ ಬಾರೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆ ತಲುಪಿದೆ. ಶಾಲೆಯು ಎರಡು ಕಟ್ಟಡಗಳನ್ನು ಹೊಂದಿದ್ದು, ಎರಡೂ ಹಳೆಯದಾಗಿವೆ. ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ, ವಿಧಿ ಇಲ್ಲದೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೊಂದದಲ್ಲೇ ಮಕ್ಕಳಿಗೆ ಪಾಠ–ಪ್ರವಚನ ನಡೆಯುತ್ತಿದೆ.

ಬಿಡದಿ ಪಟ್ಟಣದಿಂದ ಬಾನಂದೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಈ ಶಾಲೆಯು 1983ರಲ್ಲಿ ಸ್ಥಾಪನೆಯಾಗಿದೆ. ಸದ್ಯ ಕೈಗಾರಿಕಾ ಪ್ರದೇಶಕ್ಕೆ ಕೂಗಳತೆ ದೂರದಲ್ಲಿದ್ದು, ಬಿಡದಿ ಪುರಸಭೆಯ ವಾರ್ಡ್ 15ರ ವ್ಯಾಪ್ತಿಗೆ ಬರುತ್ತದೆ. ಸದ್ಯ ಇರುವ ಆರ್‌ಸಿಸಿ ಕಟ್ಟಡವು 2007ರಲ್ಲಿ ನಿರ್ಮಾಣವಾಗಿದೆ. ಆದರೆ, ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದರಿಂದ 17 ವರ್ಷದಲ್ಲೇ ಕಟ್ಟಡವು ಶಿಥಿಲಾವಸ್ಥೆ ತಲುಪಿದೆ.

ಕಿತ್ತು ಹೋಗಿರುವ ಕಾಂಕ್ರೀಟ್: ರಸ್ತೆಗೆ ಹೊಂದಿಕೊಂಡಂತಿರುವ ಶಾಲಾ ಕಟ್ಟಡದ ಕೊಠಡಿಗೆ ಹೋಗುವುದಕ್ಕೆ ಮುಂಚೆ, ಹೊರಗಡೆ ಒಮ್ಮೆ ಕಣ್ಣಾಡಿಸಿದರೆ ಕಟ್ಟಡ ಶಿಥಿಲವಾಗಿರುವ ಕುರುಹುಗಳು ಗೋಚರಿಸುತ್ತವೆ. ಪೇಯಿಂಟ್ ಕಂಡು ವರ್ಷಗಳಾಗಿರುವುದರಿಂದ ಕಟ್ಟಡದ ಮೇಲೆ ಬರೆದಿರುವ ಶಾಲೆಯ ಹೆಸರು ಬಹುತೇಕ ಅಳಿಸಿ ಅಸ್ಪಷ್ಟವಾಗಿ ಕಾಣುತ್ತದೆ. ಮಳೆ ಮತ್ತು ಬಿಸಿಲಿನ ಏಟಿಗೆ ಪೇಯಿಂಟ್‌ ಚಕ್ಕೆಗಳು ಮೇಲಕ್ಕೆದ್ದಿವೆ.

ತರಗತಿ ನಡೆಯುವ ಕೊಠಡಿಯತ್ತ ಕಣ್ಣು ಹಾಯಿಸಿದತ್ತೆಲ್ಲಾ ಮಳೆ ನೀರು ಸೋರಿಕೆಯಾಗಿ, ಕೆಲವೆಡೆ ಗೋಡೆ ಪಾಚಿಗಟ್ಟಿ ಕಪ್ಪು ಬಣ್ಣಕ್ಕೆ ತಿರುಗಿರುವುದು ಕಾಣುತ್ತದೆ. ಚಾವಣಿಯ ಕಾಂಕ್ರೀಟ್‌ ಅಲ್ಲಲ್ಲಿ ಕಿತ್ತು ಹೋಗಿದ್ದು, ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಹೊರಗಡೆ ಇಣುಕಿ ನೋಡುತ್ತಿವೆ. ಗೋಡೆಯ ಕೆಲ ಭಾಗಗಳು ಸಣ್ಣದಾಗಿ ಬಿರುಕು ಬಿಟ್ಟಿವೆ. ಶಾಲಾವಧಿ ಮುಗಿಯುವವರೆಗೆ, ಶಿಕ್ಷಕಿ ಮತ್ತು ವಿದ್ಯಾರ್ಥಿಗಳು ಆತಂಕದಲ್ಲೇ ಕಾಲ ಕಳೆಯಬೇಕಾಗಿದೆ.

ದುರಸ್ತಿ ಭರವಸೆ: ‘ಶಾಲೆಯು ಶಿಥಿಲಗೊಂಡು ಸೋರುತ್ತಿರುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜೊತೆಗೆ, ಬಿಡದಿ ಪುರಸಭೆಯ ಸ್ಥಳೀಯ ವಾರ್ಡ್ ಸದಸ್ಯರೂ ಶಾಲೆಯನ್ನು ಗಮನಿಸಿ ದುರಸ್ತಿ ಮಾಡಿಸುವ ಭರವಸೆ ನೀಡಿದ್ದಾರೆ. ಸದ್ಯದಲ್ಲೇ ದುರಸ್ತಿ ಕಾರ್ಯ ಶುರುವಾಗಲಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಉಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕಟ್ಟಡದ ಕಾರಣಕ್ಕಾಗಿಯೇ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿಯೂ ಕುಸಿಯುತ್ತಿದೆ. ಕಳೆದ ವರ್ಷ 37 ಇದ್ದ ಮಕ್ಕಳ ಸಂಖ್ಯೆ ಈ ಸಲ, 34ಕ್ಕೆ ಇಳಿಕೆಯಾಗಿದೆ. ಒಂದನೇ ತರಗತಿಯಲ್ಲಿ 4, ಎರಡನೇ ತರಗತಿಯಲ್ಲಿ 8, ಮೂರನೇ ತರಗತಿಯಲ್ಲಿ 10, ನಾಲ್ಕನೇ ತರಗತಿಯಲ್ಲಿ 6 ಹಾಗೂ ಐದನೇ ತರಗತಿಯಲ್ಲಿ 7 ಮಕ್ಕಳು ಕಲಿಯುತ್ತಿದ್ದಾರೆ.

ಪರ್ಯಾಯದ ಸವಾಲು: ‘ಹಿಂದೆ ದಾನಿಯೊಬ್ಬರು ನೀಡಿದ ಜಾಗದಲ್ಲಿ ಶಾಲೆ ನಿರ್ಮಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ದುರಸ್ತಿ ಮಾಡುವ ಬದಲು, ಹೊಸ ಕಟ್ಟಡ ನಿರ್ಮಿಸುವುದೇ ಸೂಕ್ತ. ಆದರೆ, ಹೊಸ ಕಟ್ಟಡಕ್ಕಾಗಿ ಹಳೆಯ ಕಟ್ಟಡ ನೆಲಸಮಗೊಳಿಸಿದರೆ, ತರಗತಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಸವಾಲು ಇದೆ. ಅದಕ್ಕಾಗಿ, ಸ್ಥಳೀಯವಾಗಿ ಬಾಡಿಗೆ ಕಟ್ಟಡವನ್ನು ಹುಡುಕಬೇಕಿದೆ’ ಎಂದು ಗ್ರಾಮದ ಮುಖಂಡ ರೇಣುಕಪ್ಪ ಅಭಿಪ್ರಾಯಪಟ್ಟರು.

ರಾಮನಗರ ತಾಲ್ಲೂಕಿನ ಬಿಡದಿಯ ಛತ್ರ ಗ್ರಾಮದ ಬಾರೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕೊಠಡಿಯು ಶಿಥಿಲಾವಸ್ಥೆ ತಲುಪಿದ್ದು ಮಕ್ಕಳು ಮತ್ತು ಶಿಕ್ಷಕಿ ಆತಂಕದಲ್ಲೇ ನಿತ್ಯ ಶಾಲೆಗೆ ಬಂದು ಹೋಗುತ್ತಾರೆ 
ರಾಮನಗರ ತಾಲ್ಲೂಕಿನ ಬಿಡದಿಯ ಛತ್ರ ಗ್ರಾಮದ ಬಾರೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕೊಠಡಿಯು ಶಿಥಿಲಾವಸ್ಥೆ ತಲುಪಿದ್ದು ಮಕ್ಕಳು ಮತ್ತು ಶಿಕ್ಷಕಿ ಆತಂಕದಲ್ಲೇ ನಿತ್ಯ ಶಾಲೆಗೆ ಬಂದು ಹೋಗುತ್ತಾರೆ 
ಕಟ್ಟಡ ಶಿಥಿಲವಾಗಿರುವುದರಿಂದ ಶಾಲೆಯ ಚಾವಣಿಯ ಕಾಂಕ್ರೀಟ್ ಕಿತ್ತು ಹೋಗಿದ್ದು ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಕಾಣುತ್ತಿವೆ
ಕಟ್ಟಡ ಶಿಥಿಲವಾಗಿರುವುದರಿಂದ ಶಾಲೆಯ ಚಾವಣಿಯ ಕಾಂಕ್ರೀಟ್ ಕಿತ್ತು ಹೋಗಿದ್ದು ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಕಾಣುತ್ತಿವೆ

ಶಿಥಿಲವಾಗಿರುವ ನಮ್ಮೂರ ಶಾಲೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸುವ ಬದಲು ಸುಸಜ್ಜಿತವಾದ ಉತ್ತಮ ಗುಣಮಟ್ಟದ ಹೊಸ ಕಟ್ಟಡವನ್ನು ಶಿಕ್ಷಣ ಇಲಾಖೆಯವರು ನಿರ್ಮಿಸಿ ಕೊಡಬೇಕಿದೆ. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ

– ರೇಣುಕಾ ಸ್ಥಳೀಯ ಮುಖಂಡ ಬಾರೆದೊಡ್ಡಿ

ಬಾರೆದೊಡ್ಡಿ ಶಾಲೆಯು ಶಿಥಿಲಾವಸ್ಥೆ ತಲುಪಿರುವುದು ಗಮನಕ್ಕೆ ಬಂದಿದೆ. ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಶಾಲಾ ಕಟ್ಟಡದ ದುರಸ್ತಿಯನ್ನು ಸೇರಿಸಲಾಗಿದ್ದು ಅನುದಾನ ಬಂದ ತಕ್ಷಣ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು

– ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ

ವಲಸೆ ಕಾರ್ಮಿಕರ ಮಕಳೇ ಹೆಚ್ಚು

ಶಾಲೆಯು ಹಳೆಯದಾಗಿ ಶಿಥಿಲವಾಗಿರುವ ಕಾರಣಕ್ಕೆ ಸ್ಥಳೀಯರು ಶಾಲೆಗೆ ಮಕ್ಕಳನ್ನು ಕಳಿಸುವುದಿಲ್ಲ. ಕೂಗಳತೆ ದೂರದಲ್ಲೇ ಬಿಡದಿ ಪಟ್ಟಣ ಮತ್ತು ಪಕ್ಕದ ಬಾನಂದೂರಿನಲ್ಲಿ ಬಿಜಿಎಸ್ ಶಾಲೆ ಸೇರಿದಂತೆ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಒಂದರಿಂದ 5ನೇ ತರಗತಿವರೆಗಿನ ಈ ಶಾಲೆಯು ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಉದ್ಯೋಗ ಅರಸಿ ಬರುವ ಕಾರ್ಮಿಕರ ಮಕ್ಕಳ ಅಕ್ಷರಾಭ್ಯಾಸದ ತಾಣವಾಗಿದೆ. ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಹೋಗುವವರು ಬಾರೇದೊಡ್ಡಿ ಸುತ್ತಮುತ್ತ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಕೆಲಸಕ್ಕೆ ಹೋಗುವಾಗ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಹೋಗುತ್ತಾರೆ. ಹೀಗೆ ಕಾರ್ಮಿಕರ ಮಕ್ಕಳ ಪಾಲಿನ ಅಕ್ಷರ ದೇಗುಲವಾಗಿರುವ ಶಾಲೆಯು ದುಃಸ್ಥಿತಿ ತಲುಪಿದ್ದು ಶಿಕ್ಷಣ ಇಲಾಖೆಯವರು ಕೂಡಲೇ ಇತ್ತ ಗಮನ ಹರಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

‘ಹೊಸ ಕಟ್ಟಡಕ್ಕೆ ಶಾಸಕರ ಭರವಸೆ’

ಶಿಥಿಲವಾಗಿರುವ ಗ್ರಾಮದ ಶಾಲಾ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಿ ಕೊಡಬೇಕೆಂದು ಶಾಸಕರಾದ ಎಚ್‌.ಸಿ. ಬಾಲಕೃಷ್ಣ ಅವರಿಗೆ ಮನವಿ ಮಾಡಲಾಗಿದೆ. ಅವರು ಸಹ ಪೂರಕವಾಗಿ ಸ್ಪಂದಿಸಿದ್ದಾರೆ. ಕಟ್ಟಡ ದುರಸ್ತಿ ಮಾಡಿ ಮತ್ತೊಂದು ಕೊಠಡಿ ನಿರ್ಮಾಣಕ್ಕೆ ಶಾಸಕರು ಹಿಂದೆ ₹13 ಲಕ್ಷ ಬಿಡುಗಡೆ ಮಾಡಿದ್ದರು. ಆದರೆ ಶಾಲೆಗೆ 2 ಕೊಠಡಿ ಶೌಚಾಲಯ ಹಾಗೂ ಅಡುಗೆ ಮನೆ ಬೇಕಿರುವುದರಿಂದ ಹೊಸ ಕಟ್ಟಡದ ಅಗತ್ಯವಿದೆ ಎಂದು ಶಿಕ್ಷಕರು ಮನವಿ ಮಾಡಿದರು. ಹಾಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಬಿಡದಿ ಪುರಸಭೆಯ 15ನೇ ವಾರ್ಡ್‌ ಸದಸ್ಯೆಯಾಗಿರುವ ಬಾರೆದೊಡ್ಡಿಯ ಬಿಂದಿಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ದಾನಿಗಳ ಹೆಸರಿನಲ್ಲಿದ್ದ ಶಾಲೆಯ ಜಾಗವನ್ನು ಸರ್ಕಾರದ ಹೆಸರಿಗೆ ನೋಂದಣಿ ಮಾಡಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಈಗಿರುವ ಕಟ್ಟಡವನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಳ್ಳಲು ಅಗತ್ಯ ನೆರವು ನೀಡುವುದಾಗಿ ಹೇಳಿರುವೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಟೊಯೊಟಾ ಕಂಪನಿಯವರಿಗೂ ಮನವಿ ಮಾಡಿದ್ದೇವೆ’ ಎಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT