ಭಾನುವಾರ, ಏಪ್ರಿಲ್ 18, 2021
31 °C
ಚೀನಾ ಸಿಲ್ಕ್‌ಗೆ ಸುಂಕ ಹೆಚ್ಚಿಸಿ, ದೇಸಿ ಉತ್ಪನ್ನಕ್ಕೆ ಜಾಗತಿಕ ಮನ್ನಣೆ ಒದಗಿಸಲು ಆಗ್ರಹ

ರಾಮನಗರ: ರೇಷ್ಮೆ ವಲಯಕ್ಕೆ ಬೇಕಿದೆ ಸರ್ಕಾರದ ಉತ್ತೇಜನ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ದೇಸಿ ಉತ್ಪನ್ನ, ಉತ್ಪಾದನೆಗೆ ಆದ್ಯತೆ ನೀಡುವುದಾಗಿ ಹೇಳುವ ಮೋದಿ ಸರ್ಕಾರ ದೇಸಿ ವಸ್ತ್ರವಾದ ರೇಷ್ಮೆಗೆ ಕಾಯಕಲ್ಪ ನೀಡುತ್ತದೆಯೇ? ಅದರ ಉತ್ಪಾದನೆಗೆ ಬೆಂಬಲವಾಗಿ ನಿಲ್ಲಲಿದೆಯೇ?

ಇಂತಹದ್ದೊಂದು ನಿರೀಕ್ಷೆ ಹೊತ್ತು ರೇಷ್ಮೆ ಬೆಳೆಗಾರರು ಹಾಗೂ ಅದನ್ನೇ ನಂಬಿರುವ ವಸ್ತ್ರ ಉತ್ಪಾದಕರು ಈ ಬಾರಿಯ ಕೇಂದ್ರ ಬಜೆಟ್‌ ಅನ್ನು ಎದುರು ನೋಡುತ್ತಿದ್ದಾರೆ. ಕಳೆದ ಐದು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರದಿಂದ ರೇಷ್ಮೆ ವಲಯಕ್ಕೆ ಸಿಕ್ಕಿರುವ ಕೊಡುಗೆಗಳು ಅತ್ಯಲ್ಪ. ಹೊಸ ಸರ್ಕಾರದ ಮೊದಲ ಬಜೆಟ್‌ನಲ್ಲಿ ಆದರೂ ಈ ಕ್ಷೇತ್ರಕ್ಕೆ ಬೆಂಬಲ ಸಿಗಬಹುದು ಎನ್ನುವ ನಿರೀಕ್ಷೆ ರೈತರದ್ದು.

ದೇಶದಲ್ಲಿ ರೇಷ್ಮೆ ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರ ಸ್ಥಾನ. 1785ರಲ್ಲಿ ಮೈಸೂರು ಸಂಸ್ಥಾನದಲ್ಲಿ ಆರಂಭವಾದ ರೇಷ್ಮೆ ಕೃಷಿ ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿದೆ. ಆದಾಗ್ಯೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಈ ವಲಯದ ಶೇ 88ರಷ್ಟು ಚಟುವಟಿಕೆಗಳು ಕೇಂದ್ರೀಕೃತವಾಗಿವೆ.

‘ಈಚಿನ ದಿನಗಳಲ್ಲಿ ರೇಷ್ಮೆಗೂಡು ಧಾರಣೆ ಸಾಕಷ್ಟು ಏರಿಳಿತ ಕಾಣುತ್ತಿದ್ದು, ಅದಕ್ಕೊಂದು ಬೆಂಬಲ ಬೆಲೆ ನಿರ್ಧರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇದರಿಂದ ಬೆಳೆಗಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅದಕ್ಕೊಂದು ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು’ ಎಂದು ಆಗ್ರಹಿಸುತ್ತಾರೆ ರೈತ ಹೋರಾಟಗಾರ ಸಿ. ಪುಟ್ಟಸ್ವಾಮಿ.

‘ರೇಷ್ಮೆ ವಲಯದ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳ ನಡುವೆ ಉತ್ತಮ ಸಂವಹನ ಇರಬೇಕು. ಜವಳಿ ಸಚಿವಾಲಯ, ಆಮದು ಮತ್ತು ಸುಂಕ ಇಲಾಖೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ಐದು ವರ್ಷದ ಹಿಂದೆಯೇ ಸಿಲ್ಕ್‌ ಪಾರ್ಕ್‌ ಘೋಷಣೆ ಮಾಡಿತ್ತು. ಅಂತಹ ಯೋಜನೆಗಳು ಇನ್ನಾದರೂ ಕಾರ್ಯಕತಗೊಳ್ಳಬೇಕು ’ ಎಂದು ಅವರು ಸಲಹೆ ನೀಡುತ್ತಾರೆ.

‘ಸದ್ಯ ದೇಶದಾದ್ಯಂತ ಗೂಡು ಮಾರುಕಟ್ಟೆಗಳಲ್ಲಿ ಬೆರಳ ತುದಿಯಿಂದ ಗೂಡು ಹಿಚುಕಿ ಹರಾಜು ಕೂಗುವ ವ್ಯವಸ್ಥೆ ಇದೆ. ಅದರ ಬದಲಿಗೆ ಗುಣಮಟ್ಟ ಮತ್ತು ಇಳುವರಿ ಆಧರಿತ ಗೂಡು ವಿಂಗಡನೆ ಮತ್ತು ಮಾರಾಟ ವ್ಯವಸ್ಥೆ ಜಾರಿಗೆ ಬರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಕಷ್ಟು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರಗಳು ಮುಚ್ಚುವ ಹಂತ ತಲುಪಿದ್ದು, ಅವುಗಳನ್ನು ಪುನಶ್ಚೇತನಗೊಳಿಸಬೇಕು. ರೇಷ್ಮೆ ಕೈಗಾರಿಕೆಗಳ ವಿನ್ಯಾಸಗಳನ್ನು ಬದಲಿಸಿ ಅವುಗಳಿಗೆ ಉತ್ತೇಜನ ನೀಡಬೇಕು’ ಎಂಬುದು ರೈತರ ಆಗ್ರಹವಾಗಿದೆ.

ಕೈಗಾರಿಕೆಗೂ ಬೇಕು ಉತ್ತೇಜನ: ಚೀನಾ ರೇಷ್ಮೆ ಭಾರತಕ್ಕೆ ಲಗ್ಗೆ ಇಟ್ಟ ಮೇಲೆ ಇಲ್ಲಿನ ರೇಷ್ಮೆ ವಲಯಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಹೀಗಾಗಿ ರೇಷ್ಮೆ ಆಮದು ನೀತಿ ಬಿಗಿಯಾಗಬೇಕು. ದೇಸಿ ಗೂಡು ಉತ್ಪಾದನೆ ಮತ್ತು ಸಂಸ್ಕರಣೆ ಚಟುವಟಿಕೆಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎನ್ನುವುದು ಬೆಳೆಗಾರರು ಮತ್ತು ಉದ್ಯಮಿಗಳ ಆಗ್ರಹವಾಗಿದೆ.

‘ಈ ಹಿಂದೆ ಚೀನಾ ರೇಷ್ಮೆಗೆ ಕೇಂದ್ರ ಸರ್ಕಾರ ಶೇ 38ರಿಂದ 40ರಷ್ಟು ತೆರಿಗೆ ವಿಧಿಸುತಿತ್ತು. ಈಗ ಅದನ್ನು ಶೇ 15–16ಕ್ಕೆ ಇಳಿಸಿದ್ದು, ಇದರಿಂದ ವಿದೇಶಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಈ ಆಮದು ಸುಂಕವನ್ನು ಹೆಚ್ಚಿಸುವ ಅಗತ್ಯವಿದೆ’ ಎನ್ನುತ್ತಾರೆ ರಾಮನಗರ ರೇಷ್ಮೆ ರೀಲರ್‌ಗಳ ಸಂಘದ ಅಧ್ಯಕ್ಷ ಮುಹಿಬ್‌ ಪಾಷ.

ಕೇಂದ್ರ ಸರ್ಕಾರವು ದೇಶದಲ್ಲಿ ಜಿಎಸ್‌ಟಿ ಜಾರಿಗೆ ತಂದ ಬಳಿಕ ಸಂಸ್ಕರಿತ ನೂಲಿಗೆ ಶೇ 5ರಿಂದ 8ರಷ್ಟು ತೆರಿಗೆ ವಿಧಿಸುತ್ತಿದೆ. ರೇಷ್ಮೆ ನೂಲನ್ನೂ ಕೃಷಿ ಉತ್ಪನ್ನ ಎಂದು ಪರಿಗಣಿಸಿ ಸಂಪೂರ್ಣ ತೆರಿಗೆ ವಿನಾಯಿತಿ ನೀಡಬೇಕು ಎನ್ನುವುದು ಉದ್ಯಮಿಗಳ ಮನವಿ.

ರೇಷ್ಮೆ ಉಪ ಉತ್ಪನ್ನಗಳ ತಯಾರಿಕೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಗ್ರಾಮಗಳ ಮಟ್ಟದಲ್ಲಿ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಆರ್ಥಿಕ ನೆರವು ನೀಡುವ ಮೂಲಕ ರೇಷ್ಮೆ ಕೈಗಾರಿಕೆಗಳನ್ನು ಉತ್ತೇಜಿಸಬೇಕು. ಈಗಾಗಲೇ ಮುಚ್ಚಿರುವ ದೊಡ್ಡ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಬೇಕು. ಸಂಸ್ಕರಣಾ ಘಟಕಗಳಿಗೂ ನೆರವು ನೀಡಬೇಕು ಎಂಬುದು ಉದ್ಯಮ ಕ್ಷೇತ್ರದ ಮನವಿಯಾಗಿದೆ.

**

ರೇಷ್ಮೆ ಕೃಷಿ ಮತ್ತು ಕೈಗಾರಿಕೆಗೆ ತನ್ನದೇ ಆದ ಇತಿಹಾಸ ಇದೆ. ಅದಕ್ಕೆ ಜಾಗತಿಕ ಮನ್ನಣೆ ಒದಗಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕು
– ಸಿ. ಪುಟ್ಟಸ್ವಾಮಿ, ರೈತ ಮುಖಂಡ

**
ಚೀನಾ ಸಿಲ್ಕ್‌ ಮೇಲಿನ ತೆರಿಗೆ ಇಳಿಸಿದ್ದರಿಂದಾಗಿ ಸ್ಥಳೀಯ ಉತ್ಪಾದನೆಗೆ ಹೊಡೆತ ಬಿದ್ದಿದೆ. ಆಮದು ಸುಂಕ ಹೆಚ್ಚಿಸಿ ಸ್ಥಳೀಯ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು
ಮುಹೀಬ್‌ ಪಾಷ, ರಾಮನಗರ ರೇಷ್ಮೆ ರೀಲರ್‌ಗಳ ಸಂಘದ ಅಧ್ಯಕ್ಷ

**

ಅಂಕಿ–ಅಂಶ
98 ಸಾವಿರ ಹೆಕ್ಟೇರ್‌–ರಾಜ್ಯದಲ್ಲಿ ರೇಷ್ಮೆ ಬೆಳೆಯುವ ಪ್ರದೇಶ
60–65 ಸಾವಿರ ಟನ್‌–ವಾರ್ಷಿಕ ರೇಷ್ಮೆಗೂಡು ಉತ್ಪಾದನೆ ಪ್ರಮಾಣ
10.7 ಲಕ್ಷ–ಜನರಿಗೆ ರಾಜ್ಯದಲ್ಲಿ ರೇಷ್ಮೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ನೀಡಿದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು