ಬುಧವಾರ, ಆಗಸ್ಟ್ 17, 2022
23 °C

ಸಾಹಿತ್ಯಕ್ಕೆ ಸಿದ್ದಲಿಂಗಯ್ಯ ಕೊಡುಗೆ ಅನನ್ಯ: ನುಡಿ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ, ದಲಿತ ಸಾಹಿತ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ಮುನ್ನುಡಿ ಬರೆದ ಹೆಗ್ಗಳಿಕೆ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಸಲ್ಲುತ್ತದೆ’ ಎಂದು ದಲಿತ ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ತುಂಗಣಿ ಉಮೇಶ್‌ ಹೇಳಿದರು.

ಇಲ್ಲಿನ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭದ ಮುಂಭಾಗದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ದಲಿತ ಸೇನೆ ರಾಜ್ಯ ಯುವ ಘಟಕದಿಂದ ಶನಿವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದಲಿಂಗಯ್ಯ ಅವರು ಬಾಲ್ಯದಿಂದಲೇ ಅಂಬೇಡ್ಕರ್‌, ಗಾಂಧೀಜಿ ಅವರ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡಿದ್ದರು. ಶೋಷಿತರ ಸಮಾನತೆಗೆ ಹೋರಾಡಿದ್ದಾರೆ. ದಲಿತ ಸಮುದಾಯವನ್ನೇ ತಮ್ಮ ಕಾವ್ಯವಾಗಿಸಿಕೊಂಡು ನಿಂತ ನೀರಾಗಿದ್ದ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ ಎಂದರು.

ಸಾಹಿತ್ಯದ ಮೂಲಕ ಎರಡು ತಲೆಮಾರಿನ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು. ಶೋಷಿತರ ಪರ ಹೋರಾಟಗಾರರೂ ಆಗಿದ್ದರು. ಜತೆಗೆ ರಾಜಕೀಯ ಪ್ರವೇಶ ಮಾಡಿ ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾಗಿ ಉಳಿದು ಹತ್ತು ಹಲವಾರು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದಾರೆ. ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್‌ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ನಾಡೋಜ ಪ್ರಶಸ್ತಿ ಪಡೆದಿದ್ದ ಅವರು ನಮ್ಮನ್ನು ಭೌತಿಕವಾಗಿ ಅಗಲಿದ್ದಾರೆ. ಆದರೆ, ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ ಎಂದರು.

ಟಿಎಪಿಸಿಎಂಎಸ್‌ ನಿರ್ದೇಶಕ ಕೈಲಾಸ್‌ಮೂರ್ತಿ, ನಗರಸಭೆ ಮಾಜಿ ಸದಸ್ಯ ಲೋಕೇಶ್, ಮುಖಂಡರಾದ ರವಿಪ್ರಸಾದ್‌, ವಕೀಲ ಮರಿಸ್ವಾಮಿ, ಲೋಕಪ್ರಿಯಾ, ಚೂಡಲಿಂಗ, ಸುರೇಶ್‌, ಶಿವಬಸವರಾಜು,‍ ಸಾಗರ್‌
ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು