ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರು ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಬರೆದಿದ್ದಾರೆ. ಈ ಕುರಿತ ಚರ್ಚೆ ತಾಲ್ಲೂಕಿನಲ್ಲಿ ಗರಿಗೆದರಿವೆ. ಸೋಲೂರು ಮಾಗಡಿ ಭಾಗವಾಗಿರಬೇಕೇ ಅಥವಾ ನೆಲಮಂಗಲಕ್ಕೆ ಬಿಟ್ಟು ಕೊಡಬೇಕೇ ಎಂಬುದರ ಕುರಿತು ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ರಾಮನಗರ ಜಿಲ್ಲೆಯ ಗಡಿ ಭಾಗವಾಗಿರುವ ಸೋಲೂರು ಹೋಬಳಿಯನ್ನು ಕ್ಷೇತ್ರ ಪುನರ್‌ವಿಂಗಡಣೆ ಸಂದರ್ಭದಲ್ಲಿ ಮಾಗಡಿ ಕ್ಷೇತ್ರದಿಂದ ಕೈಬಿಟ್ಟು ನೆಲಮಂಗಲಕ್ಕೆ ಸೇರಿಸಲಾಯಿತು. ಲೋಕಸಭಾ ಕ್ಷೇತ್ರದ ವಿಷಯಕ್ಕೆ ಬಂದರೆ, ಹೋಬಳಿಯು ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಬರಲಿದೆ. ಅಂದಿನಿಂದ ನೆಲಮಂಗಲಕ್ಕೆ ಹೋಬಳಿಯನ್ನು ಸೇರಿಸಬೇಕೆಂಬ ಕೂಗು ಶುರುವಾಗಿದೆ. ಅದೀಗ, ಜನಪ್ರತಿನಿಧಿಗಳ ಅಂಗಳ ತಲುಪಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲು ಮುಂದಾಗಿರುವ ಬೆನ್ನಲ್ಲೇ, ಸೋಲೂರನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಬೇಕೆಂಬ ಕೂಗ ಹಿಂದಿಗಿಂತಲೂ ಈಗ ಹೆಚ್ಚಾಗಿದೆ.
ಪತ್ರದಲ್ಲೇನಿದೆ?: ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯು ನೆಲಮಂಗಲ ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವುದರಿಂದ, ಜನ ತಮ್ಮ ಸರ್ಕಾರಿ ಕೆಲಸಗಳು ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗಳಿಗೆ ಮಾಗಡಿ ತಾಲೂಕಿಗೆ ಬರಬೇಕು. ಇದರಿಂದ ಸಾಕಷ್ಟು ಗೊಂದಲವಾಗುತ್ತಿದೆ. ಮಾಗಡಿಗೆ ಬಂದರೆ, ಶಾಸಕರು ಬದಲಾಗುತ್ತಾರೆ. ನೆಲಮಂಗಲಕ್ಕೆ ಹೋದರೆ ತಮ್ಮ ಕೆಲಸವಾಗುವುದಿಲ್ಲ. ಈ ಗೊಂದಲದಿಂದ ಜನ ಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ, ಜಿಲ್ಲಾಸ್ಪತ್ರೆಗೆ ಹೋಗಬೇಕಾದರೆ 50–60 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಹಾಗಾಗಿ, ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಬೇಕು ಎಂದು ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಮತ್ತು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರ ನಿರ್ಮಿಸಲು ಮುಂದಾಗಿರುವ ಉಪನಗರ ಟೌನ್‌ಶಿಪ್ ಪಟ್ಟಿಯಲ್ಲಿ ಸೋಲೂರು ಹೆಸರು ಕೂಡ ಇದೆ. ರಾಜಧಾನಿ ಬೆಂಗಳೂರಿಗೆ ಹತ್ತಿರವಾಗಿರುವ ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಿದರೆ ಈ ಭಾಗದ ಭೂಮಿಗೆ ಚಿನ್ನದ ಬೆಲೆ ಬರುತ್ತದೆ. ಮತ್ತಷ್ಟು ಅಭಿವೃದ್ಧಿಗೆ ತೆರೆದುಕೊಳ್ಳುವ ಜೊತೆಗೆ ಆಡಳಿತಾತ್ಮಕವಾಗಿಯೂ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಶಾಸಕ ಹಾಗೂ ಸಂಸದರು ಪತ್ರ ಬರೆದಿದ್ದಾರೆ ಎನ್ನುತ್ತವೆ ಮೂಲಗಳು.
ಮಾಗಡಿ ಒಡನಾಟವೇ ಹೆಚ್ಚು: ಸೋಲೂರು ಜನ ಮಾಗಡಿ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬೇರೆ ಕಡೆ ಮತದಾನ ಮಾಡಿದರೂ, ತಮ್ಮ ವ್ಯಾಪಾರ–ವ್ಯವಹಾರದ ನಂಟನ್ನು ಮಾಗಡಿಯೊಂದಿಗೆ ಇಟ್ಟುಕೊಂಡಿದ್ದಾರೆ. ಇದೀಗ, ನೆಲಮಂಗಲ ತಾಲ್ಲೂಕಿಗೆ ಹೋಬಳಿ ಸೇರಿಸಿದರೆ ಮಾಗಡಿ ಬಾಂಧವ್ಯ ಕಳಚಿಕೊಳ್ಳಲಿದೆ ಎಂಬ ಅಭಿಪ್ರಾಯ ಸ್ಥಳೀಯರದ್ದು. ಸೋಲೂರು ನೆಲಮಂಗಲಕ್ಕೆ ಸೇರಿದರೆ ಅನುಕೂಲ ಎನ್ನುವ ಅಭಿಪ್ರಾಯದ ಜೊತೆಗೆ, ಸೋಲೂರನ್ನೇ ಮಾಗಡಿ ಕ್ಷೇತ್ರಕ್ಕೆ ಸೇರಿಸಿದರೆ ಒಳ್ಳೆಯದೆಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.
ಜಿಲ್ಲೆ ವ್ಯಾಪ್ತಿಯಲ್ಲಿ ಜಿ.ಪಂ. ಕ್ಷೇತ್ರ: ರಾಮನಗರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಲಾಗಿದ್ದು, ಸೋಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರವು ರಾಮನಗರ ಜಿಲ್ಲೆ ವ್ಯಾಪ್ತಿಗೆ ಸೇರಿದೆ. ಅಲ್ಲದೆ ಹೋಬಳಿ ವ್ಯಾಪ್ತಿಯಲ್ಲಿ ಸೋಲೂರು, ಲಕ್ಕೇನಹಳ್ಳಿ ಹಾಗೂ ಮೋಟಗಾನಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಮಾಗಡಿ ತಾ.ಪಂ. ವ್ಯಾಪ್ತಿಗೆ ಬರಲಿವೆ. ಗ್ರಾಮ ಪಂಚಾಯಿತಿಗಳಾದ ಮೋಟಗಾನಹಳ್ಳಿ, ಸೋಲೂರು, ಲಕ್ಕೇನಹಳ್ಳಿ, ಗುಡೆಮಾರನಹಳ್ಳಿ, ಬಾನವಾಡಿ ಹಾಗೂ ಬಿಟ್ಟಸಂದ್ರ ಗ್ರಾಮ ಪಂಚಾಯಿತಿಗಳು ಹೋಬಳಿ ವ್ಯಾಪ್ತಿಯಲ್ಲಿವೆ.
ಒಂದು ವೇಳೆ ಸೋಲೂರು ನೆಲಮಂಗಲಕ್ಕೆ ಸೇರ್ಪಡೆಯಾದರೆ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ಜಿ.ಪಂ. ಕ್ಷೇತ್ರ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾ.ಪಂ. ಗಳ ವಿಷಯ ಏನಾಗಲಿದೆ? ಎಂಬ ಪ್ರಶ್ನೆ ಮೂಡಿದೆ. ಜನಸಂಖ್ಯೆ ಆಧರಿಸಿ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯಾಗಿರುವುದರಿಂದ, ಸೋಲೂರು ಕೈ ಬಿಟ್ಟರೆ ಮಾಗಡಿ ಕ್ಷೇತ್ರದ ಜನಸಂಖ್ಯೆಯಲ್ಲಿ ವ್ಯತ್ಯಯವಾಗಲಿದೆ. ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮಾಗಡಿ ತಾಲ್ಲೂಕಿಗೆ ಕಡಿಮೆಯಾಗಲಿದೆ.
ಸೋಲೂರು ರಾಮನಗರ ಜಿಲ್ಲಾ ಕೇಂದ್ರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರಕ್ಕೆ ಸಮಾನ ಅಂತರದಲ್ಲಿದೆ. ಹಾಗಾಗಿ, ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಿದರೆ ಹೆಚ್ಚು ಅನುಕೂಲಕರ ಎಂಬ ವಾದ ಜನಪ್ರತಿನಿಧಿಗಳದ್ದು. ಆದರೆ, ಸೇರ್ಪಡೆಯಿಂದ ತಾಂತ್ರಿಕವಾಗಿಯೂ ಹಲವು ಗೊಂದಲಗಳು ಎದುರಾಗುತ್ತವೆ. ಇದಕ್ಕೆ ಯಾವ ರೀತಿಯ ಪರಿಹಾರವನ್ನು ಸರ್ಕಾರ ಕಂಡುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಬೇಕೆಂಬುದು ಬಹುವರ್ಷಗಳ ಬೇಡಿಕೆ. ಈ ಕುರಿತು ಸಿ.ಎಂ ಮತ್ತು ಕಂದಾಯ ಸಚಿವರ ಜೊತೆಗೂ ಚರ್ಚಿಸಿಯೇ ಸಚಿವ ಸಂಪುಟಕ್ಕೆ ತರುವಂತೆ ಮನವಿ ಮಾಡಲಾಗಿದೆಎನ್. ಶ್ರೀನಿವಾಸ್ ನೆಲಮಂಗಲ ಶಾಸಕ
ಮಾಗಡಿ ಭಾಗವಾಗಿರುವ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವುದರಿಂದ ಆಗುವ ಸಾಧಕ–ಬಾಧಕಗಳ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿದೆ. ಹಾಗಾಗಿ ಈ ಕುರಿತು ಹೆಚ್ಚು ಪ್ರತಿಕ್ರಿಯೆ ನೀಡಲಾಗಿದೆಎಚ್.ಸಿ. ಬಾಲಕೃಷ್ಣ ಮಾಗಡಿ ಶಾಸಕ
ಮತದಾನ ಮಾಡುವ ತಾಲ್ಲೂಕಿಗೆ ಹೋಬಳಿ ಸೇರುವುದರಿಂದ ಹೆಚ್ಚು ಅಭಿವೃದ್ಧಿಯಾಗುತ್ತದೆ. ಸೋಲೂರು ಜನರ ಅಭಿಪ್ರಾಯ ಪಡೆದು ನೆಲಮಂಗಲ ತಾಲ್ಲೂಕಿಗೆ ಹೋಬಳಿಯನ್ನು ಸೇರಿಸುವುದು ಸೂಕ್ತಎಚ್.ಎಂ. ರೇವಣ್ಣ ರಾಜ್ಯಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಶಾಸಕ ಎನ್. ಶ್ರೀನಿವಾಸ್ ಮತ್ತು ಸಂಸದ ಡಾ. ಕೆ. ಸುಧಾಕರ್ ಪತ್ರದಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ಪರಿಶೀಲಿಸಿ ಸಚಿವ ಸಂಪುಟದ ಮುಂದೆ ತರಬೇಕು ಎಂದು ಮುಖ್ಯಮಂತ್ರಿ ಷರಾ ಬರೆದಿದ್ದಾರೆ. ಈ ಬೆಳವಣಿಗೆ ಬಳಿಕ ರಾಮನಗರ ಜಿಲ್ಲಾಧಿಕಾರಿಗೆ ಸೆ. 12ರಂದು ಪತ್ರ ಬರೆದಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನ್ವರ್ ಪಾಷ ಸಂಪುಟದಲ್ಲಿ ವಿಷಯವನ್ನು ಮಂಡಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಭಿಪ್ರಾಯದೊಂದಿಗೆ ಅತಿ ಜರೂರಾಗಿ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಹೋಬಳಿಯು ನೆಲಮಂಗಲಕ್ಕೆ ಸೇರಬೇಕೇ ಬೇಡವೇ ಎಂಬುದು ಅಂತಿಮವಾಗಿ ಸಚಿವ ಸಂಪುಟದಲ್ಲಿ ತೀರ್ಮಾನವಾಗಬೇಕಿದೆ.
‘ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವುರಿಂದ ತಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಪರಿಹರಿಸಬೇಕು ಎಂದು ಇಲ್ಲಿನ ಸ್ಥಳೀಯರೇ ನನ್ನ ಬಳಿ ಅಳಲು ತೋಡಿಕೊಂಡಿದ್ದರು. ಅವರ ಅಳಲನ್ನೇ ಪತ್ರದ ಮುಖೇನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸ್ಥಳೀಯರ ಮನವಿಯನ್ನು ಪುರಸ್ಕರಿಸಬೇಕು ಎಂದು ಕೋರಿದ್ದೇನೆ’ ಎಂದು ಇತ್ತೀಚೆಗೆ ಸೋಲೂರಿಗೆ ಪಕ್ಷದ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ತಾಂತ್ರಿಕವಾಗಿ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲು ಆಗುವುದಿಲ್ಲ. ಜನರಿಗೆ ಮರುಳು ಮಾಡಲು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುತ್ತೇವೆ ಎಂದು ಗಿಮಿಕ್ ಅನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಒಂದು ತಾಲ್ಲೂಕಿಗೆ ಭೌಗೋಳಿಕವಾಗಿಯಷ್ಟೇ ಅಲ್ಲದೆ ಜನಸಂಖ್ಯೆಗೆಅನುಗುಣವಾಗಿ ವಿಂಗಡಣೆ ಮಾಡಲಾಗಿರುತ್ತದೆ. ಈಗ ಒಂದು ಹೋಬಳಿಯನ್ನೇ ಕೈ ಬಿಟ್ಟರೆ ತಾಲ್ಲೂಕು ಕೇಂದ್ರಕ್ಕೆ ಸಮಸ್ಯೆಯಾಗಲಿದೆ’ ಎಂದು ಮಾಗಡಿಯ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಆಗಿರುವ ಎ. ಮಂಜುನಾಥ್ ಹೇಳಿದರು.
‘ಮಾಗಡಿ ತಾಲ್ಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಸೋಲೂರು ಮಾಗಡಿಯಲ್ಲೇ ಇರಬೇಕು. ಹಿಂದುಳಿದ ತಾಲ್ಲೂಕಾಗಿರುವ ಮಾಗಡಿ ವ್ಯಾಪ್ತಿಯ ಸೋಲೂರು ಹೋಬಳಿ ಸಮೀಪ ವಿಮಾನ ನಿಲ್ದಾಣ ಸೇರಿದಂತೆ ಕೈಗಾರಿಕೆಗಳು ಸ್ಥಾಪನೆಯಾಗುವ ಲಕ್ಷಣಗಳಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ. ಇದರಿಂದ ಮಾಗಡಿ ತಾಲ್ಲೂಕಿನ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಯಾವುದೇ ಕಾರಣಕ್ಕೂ ಸೋಲೂರನ್ನು ನೆಲಮಂಗಲಕ್ಕೆ ಸೇರಿಸಬಾರದು’ ಎಂದು ಬಿಜೆಪಿ ಮುಖಂಡ ಕೆ.ಆರ್. ಪ್ರಸಾದ್ ಗೌಡ ಆಗ್ರಹಿಸಿದರು.
‘ಚಿಕ್ಕಬಳ್ಳಾಪುರದ ಮಾಜಿ ಸಂಸದರಾಗಿರುವ ವೀರಪ್ಪ ಮೊಯಿಲಿ ಹಾಗೂ ಮಾಜಿ ಸಚಿವ ಅಂಜನ್ ಮೂರ್ತಿ ಅವರು ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಪ್ರಯತ್ನ ಮಾಡಿದ್ದರು. ನಾವು ನೆಲಮಂಗಲ ಕ್ಷೇತ್ರದಲ್ಲಿ ಮತದಾನ ಮಾಡುತ್ತಿರುವುದರಿಂದ ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವುದೇ ಹೆಚ್ಚು ಸೂಕ್ತ. ಇದಕ್ಕೆ ನಮ್ಮ ಬೆಂಬಲವಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ವಿ. ಜಯರಾಂ ಹೇಳಿದರು.
‘ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯಪಾಲರ ಅಂಕಿತ ಬಿದ್ದರೆ ಜಿಲ್ಲೆ ಹೆಸರು ಅಧಿಕೃತವಾಗಿ ಬದಲಾಗಲಿದೆ. ಸೋಲೂರು ಹೋಬಳಿಗೂ ಮತ್ತಷ್ಟು ಅನುಕೂಲವಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಹೋಬಳಿ ಸೇರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು. ಈ ಬಗ್ಗೆ ಸ್ಥಳೀಯರು ಸಹ ದನಿ ಎತ್ತಬೇಕು. ಹೋಬಳಿಯು ಮಾಗಡಿಯಲ್ಲೇ ಉಳಿಯಬೇಕು. ಈ ಗೊಂದಲಕ್ಕೆ ಸರ್ಕಾರ ತೆರೆ ಎಳೆಯಬೇಕು’ ಎಂದು ಸೋಲೂರು ನಿವಾಸಿ ರಾಘವೇಂದ್ರ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.