ಶನಿವಾರ, ಸೆಪ್ಟೆಂಬರ್ 25, 2021
22 °C
ವೀರಾಪುರ, ಬಾನಂದೂರು ಗ್ರಾಮಗಳ ಅಭಿವೃದ್ಧಿಗೆ ತಲಾ ₹25ಕೋಟಿ ನೀಡಿದ ಸರ್ಕಾರ

ತಲೆ ಎತ್ತಲಿದೆ ಶ್ರೀಗಳ ಪ್ರತಿಮೆ, ಭವನ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರ ಹಾಗೂ ಆದಿಚುಂಚನಗಿರಿ ಪೀಠದ ಬಾಲಗಂಗಾಧರನಾಥ ಶ್ರೀಗಳ ತವರು ಬಾನಂದೂರು ಗ್ರಾಮಗಳನ್ನು ಶಿರಡಿ, ಪುಟ್ಟಪರ್ತಿ ಮೊದಲಾದವುಗಳ ಮಾದರಿಯ ಧಾರ್ಮಿಕ ಕ್ಷೇತ್ರವನ್ನಾಗಿ ರೂಪಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ರಾಮನಗರ ಜಿಲ್ಲೆಯು ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಹಲವು ಮಹನೀಯರನ್ನು ಕೊಡುಗೆಯಾಗಿ ನೀಡಿದೆ. ಅವರಲ್ಲಿ ಇಬ್ಬರು ಮಹನೀಯರಾದ ಶಿವಕುಮಾರ ಶ್ರೀಗಳ ಊರು ವೀರಾಪುರ ಹಾಗೂ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಾದ ರಾಮ ನಗರ ತಾಲ್ಲೂಕಿನ ಬಾನಂದೂರು ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ತಲಾ ₹25 ಕೋಟಿ ಹಣ ಬಿಡುಗಡೆ ಮಾಡಿದೆ.

ಸರ್ಕಾರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಿಲ್ಲಾಧಿಕಾರಿ ಖಾತೆಗೆ ಅನುದಾನ ಬಿಡುಗಡೆಯಾಗುತ್ತಲೇ ಯೋಜನೆಯ ರೂಪುರೇಷೆಗಳು ಚುರುಕುಗೊಂಡಿವೆ. ಎರಡೂ ಗ್ರಾಮಗಳ ಅಭಿವೃದ್ಧಿಯ ವಿಸ್ತ್ರೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಈಗಾಗಲೇ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ವೀರಾಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಏನೇನು ಇರಲಿದೆ?: ಶಿವಕುಮಾರ ಶ್ರೀಗಳು ಹುಟ್ಟಿ ಬೆಳೆದ ಊರಾದ ವೀರಾಪುರದಲ್ಲಿ ಶ್ರೀಗಳ ಬೃಹತ್‌ ಪ್ರತಿಮೆ
ಯೊಂದನ್ನು ನಿರ್ಮಿಸಲು ಸರ್ಕಾರವು ಉದ್ದೇಶಿಸಿದೆ. ಶ್ರೀಗಳ 111 ಅಡಿ ಎತ್ತರದ ಪ್ರತಿಮೆಯನ್ನು ಅಲ್ಲಿ ಸ್ಥಾಪನೆ ಮಾಡಬೇಕು ಎಂದು ಈಗಾಗಲೇ ಕೆಲವು ಸಂಘ–ಸಂಸ್ಥೆಗಳು ಹಾಗೂ ಅಭಿಮಾನಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಅಷ್ಟು ಎತ್ತರ ಮೂರ್ತಿಯನ್ನು ಸರ್ಕಾರ ನಿರ್ಮಿಸುವುದು ಅನುಮಾನ. 35ರಿಂದ 40 ಅಡಿ ಎತ್ತರದ ಮೂರ್ತಿ ನಿರ್ಮಾಣಕ್ಕೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸುವ ಸಾಧ್ಯತೆ
ಇದೆ.

ಶಿವಕುಮಾರ ಶ್ರೀಗಳು ತ್ರಿವಿಧ ದಾಸೋಹದ ಮೂಲಕವೇ ಜಗತ್ತಿನಾದ್ಯಂತ ಹೆಸರಾದವರು. ಹೀಗಾಗಿ ಅವರ ಹೆಸರಿನಲ್ಲಿ ಹುಟ್ಟೂರಿನಲ್ಲಿ ದಾಸೋಹ ಭವನವೂ ತಲೆ ಎತ್ತಲಿದೆ. ಶ್ರೀಗಳ ಜೀವನ ಗಾಥೆಯನ್ನು ಬಿಂಬಿಸುವ ವಸ್ತು ಸಂಗ್ರಹಾಲಯವನ್ನೂ ಇಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಜನೆಗೆ ಅನುಕೂಲವಾಗುವಂತೆ ಜ್ಞಾನ ಮಂದಿರವೂ ಇರಲಿದೆ.

ಮನೆಗಳಿಗೆ ಬಣ್ಣ: ಧಾರ್ಮಿಕತೆಯ ಸಂಕೇತವಾದ ಕಾವಿಯ ಬಣ್ಣವನ್ನು ಗ್ರಾಮದಲ್ಲಿನ ಮನೆಗಳಿಗೆ ತುಂಬಿಸಲೂ ಯೋಜಿಸಲಾಗುತ್ತಿದೆ. ಅಂದುಕೊಂಡಂತೆ ಆದರೆ ಇಡೀ ಗ್ರಾಮವೇ ಖಾವಿ ಅರ್ಥಾತ್‌ಕೇಸರಿ ಮಯವಾಗಲಿದೆ. ಇದಲ್ಲದೆ ಗ್ರಾಮದಲ್ಲಿನ ರಸ್ತೆಗಳ ಅಭಿವೃದ್ಧಿ, ಯಾತ್ರಿಕರಿಗೆ ಅನುಕೂಲ ಆಗುವಂತೆ ಭವನ ನಿರ್ಮಾಣ ಮೊದಲಾದ ಅಂಶಗಳೂ ಅಭಿವೃದ್ಧಿ ಯೋಜನೆಯಲ್ಲಿ ಸೇರಿವೆ.

ಸಿದ್ಧಗಂಗಾ ಶ್ರೀಗಳ ತಂದೆ ಹೊನ್ನೇಗೌಡರ ಸಮಾಧಿ ಇರುವ 1 ಎಕರೆ ಪ್ರದೇಶದ ಅಭಿವೃದ್ಧಿ ಜೊತೆಗೆ 10 ಎಕರೆಯಷ್ಟು ಜಾಗದಲ್ಲಿ ವಿವಿಧ ಕಾಮಗಾರಿಗಳು, ಕೆಇಬಿ ವತಿಯಿಂದ ಮಾದರಿ ಗ್ರಾಮ ನಿರ್ಮಾಣ, ಶ್ರೀಗಳ ಹೆಸರಿನಲ್ಲಿ ಅಧ್ಯಯನ ಪೀಠ ನಿರ್ಮಾಣಕ್ಕೂ ಯೋಜಿಸಲಾಗುತ್ತಿದೆ. ವೀರಾಪುರದ ಸಮಗ್ರ ಅಭಿವೃದ್ಧಿಯ ಉಸ್ತುವಾರಿಗಾಗಿ ಸರ್ಕಾರವು ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡುವ ಸಾಧ್ಯತೆಯೂ ಇದೆ.

ಕಳೆದ ಒಂದು ದಶಕದಿಂದಲೂ ಈ ಎರಡು ಗ್ರಾಮಗಳ ಅಭಿವೃದ್ಧಿ ಬಗ್ಗೆ ಮಾತು ಕೇಳಿ ಬರುತ್ತಿದೆ. ಹಲವು ಬಜೆಟ್‌ಗಳಲ್ಲಿ ಅನುದಾನ ಘೋಷಿಸಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಈ ಹಿಂದೆಯೂ ಸರ್ಕಾರ ತಲಾ ₹10 ಕೋಟಿ ಘೋಷಿಸಿ ಸುಮ್ಮನಾಗಿತ್ತು. ಈ ಬಾರಿಯಾದರೂ ಸಂಪೂರ್ಣ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎನ್ನುವುದು ಶ್ರೀಗಳ ಅಭಿಮಾನಿಗಳ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು