ಭಾನುವಾರ, ಜನವರಿ 26, 2020
24 °C
ರಾಮನಗರ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ

ವಿದ್ಯಾರ್ಥಿ ವೇತನ ಪಾವತಿಗೆ ವಿಶೇಷ ಗಮನ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ ವಿದ್ಯಾರ್ಥಿವೇತನ ಪಾವತಿಯಾಗದೆ ಇರುವ ವಿದ್ಯಾರ್ಥಿಗಳ ವಿವರ ಪಡೆದು ವಿಶೇಷ ಗಮನ ಹರಿಸಿ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹೇಳಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳ ಖಾತೆಗಳು ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಬೇಕಾದರೆ ಅಥವಾ ಕೆಲವು ತಾಂತ್ರಿಕ ತೊಂದರೆಯಿಂದ ವಿದ್ಯಾರ್ಥಿ ವೇತನ ಪಾವತಿಯಾಗಿರುವುದಿಲ್ಲ. ಇದರ ಬಗ್ಗೆ ಪರಿಶೀಲಿಸಿ ಶೀಘ್ರವಾಗಿ ವಿದ್ಯಾರ್ಥಿ ವೇತನ ಪಾವತಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಿ ಅವರ ವಿದ್ಯಾಭ್ಯಾಸಕ್ಕಾಗಿ 50 ಸಾವಿರದವರೆಗೆ ಅನುದಾನ ಸಹ ಇಲಾಖೆ ವತಿಯಿಂದ ನೀಡಲಾಗುತ್ತದೆ. ಆದರೆ ಆ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಇರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ ಎಂದು ಸಭೆಗೆ ತಿಳಿಸಿದರು. ಆಗ, ಜಿಲ್ಲಾಧಿಕಾರಿಗಳು ಮುಂದಿನ ಸಾಲಿನಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸುವ ಮೊದಲು ಪ್ರತಿಷ್ಠಿತ ಶಾಲೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅವರು ಪರಿಶೀಲಿಸಿ ವರದಿ ನೀಡಿದ ನಂತರ ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದಾಖಲಿಸಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾತನಾಡಿ ಖಾಸಗಿ ಶಾಲೆಗಳಲ್ಲಿ ಪಡೆಯುವ ಶುಲ್ಕಗಳ ವಿವರವನ್ನು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ. ಖಾಸಗಿ ಶಾಲೆಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಶುಲ್ಕದ ವಿವರ ಪ್ರಕಟಿಸಿರುತ್ತಾರೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು ಖಾಸಗಿ ಶಾಲೆಗಳಲ್ಲಿ ಪಡೆಯುವ ಶುಲ್ಕದ ವಿವರವನ್ನು ಬೋರ್ಡ್ ನಲ್ಲಿ ಅನಾವರಣಗೊಳಿಸಿ ಅಧಿಕಾರಿಗಳು ಪರಿಶೀಲನೆಗೆ ಬಂದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಇಡುತ್ತಾರೆ. ಇದರ ಬದಲು ಅದನ್ನು ಶಾಶ್ವತವಾಗಿ ಗೋಡೆ ಬರಹದಲ್ಲಿ ಅನಾವರಣಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಸ್ಟೆಲ್ ಗಳಲ್ಲಿ ನೀಡಲಾಗುತ್ತಿರುವ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ತಾಜಾ ತರಕಾರಿಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುತ್ತಿಲ್ಲ ಎಂದು ತಿಳಿಸಿದಾಗ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಹೊಸದಾಗಿ ಟೆಂಡರ್ ಕರೆಯಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ವಾಟ್ಸ್ ಆ್ಯಪ್‌ ಗ್ರೂಪ್ ರಚಿಸಿಕೊಂಡು ಪ್ರತಿದಿನ ಹಾಸ್ಟಲ್ ಗಳಲ್ಲಿ ವಿತರಿಸಲಾಗುತ್ತಿರುವ ಆಹಾರದ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು. ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ಉಪವಿಭಾಗಾಧಿಕಾರಿ ಡಾ. ದಾಕ್ಷಾಯಿಣಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸದಸ್ಯರಾದ ಶಿವಕುಮಾರ ಸ್ವಾಮಿ, ಶಿವಶಂಕರ್, ನಾಗೇಶ್, ಶ್ರೀನಿವಾಸ್, ಚೆನ್ನಕೇಶವ, ಆರ್. ಮೂರ್ತಿ ನಾಯಕ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು