ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಹಳ್ಳಿಗಳಲ್ಲಿ ಸುರೇಶ್ ಪ್ರಚಾರ ಸಂಚಲನ

ಸ್ಥಳೀಯ ಸ್ವಾಭಿಮಾನದ ಅಸ್ತ್ರ ಪ್ರಯೋಗ
Published 17 ಏಪ್ರಿಲ್ 2024, 4:18 IST
Last Updated 17 ಏಪ್ರಿಲ್ 2024, 4:18 IST
ಅಕ್ಷರ ಗಾತ್ರ

ಹಾರೋಹಳ್ಳಿ: ನೆತ್ತಿ ಸುಡುವ ಬಿಸಿಲು ಲೆಕ್ಕಿಸದೆ ನೆಚ್ಚಿನ ಅಭ್ಯರ್ಥಿಯನ್ನು ಕಣ್ತುಂಬಿಕೊಂಡು ಮಾತು ಆಲಿಸಲು ನೆರೆದ ಜನ ಒಂದೆಡೆಯಾದರೆ, ತೆರೆದ ವಾಹನದಲ್ಲಿ ಕಾರ್ಯಕರ್ತರತ್ತ ಕೈ ಬೀಸುತ್ತಾ ಸಾಗಿದ ಅಭ್ಯರ್ಥಿಯಿಂದ ಮತಬೇಟೆಯ ಮಾತುಗಳು ಮತ್ತೊಂದೆಡೆ. ಮಾತಿನ ಮಧ್ಯೆ ಜೈಕಾರ, ಕೇಕೆ, ಕೂಗಾಟ, ಶಿಳ್ಳೆ. ಅಭಿಮಾನದ ಹಾರ–ತುರಾಯಿ, ಕೈ ಕುಲಕಿ ಮತ ಭರವಸೆಯ ಮಾತು...

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಮಂಗಳವಾರ ಹಾರೋಹಳ್ಳಿಯಿಂದ ಆರಂಭಿಸಿ ರಾಮನಗರದಲ್ಲಿ ಅಂತ್ಯಗೊಳಿಸಿದ ಚುನಾವಣಾ ಪ್ರಚಾರದಲ್ಲಿ ಕಂಡುಬಂದ ದೃಶ್ಯಗಳಿವು...

ಗ್ರಾಮೀಣ ಭಾಗದಲ್ಲಿ ಮಂಗಳವಾರ ಬೆಳಗ್ಗೆಯಿಂದ ರಾತ್ರಿವರೆಗೆ ಪ್ರಚಾರದಲ್ಲಿ ತೊಡಗಿಸಿಕೊಂಡ ಸುರೇಶ್ ಹೋದ ಕಡೆಯಲ್ಲೆಲ್ಲಾ ‘ಕೈ’ ಕಾರ್ಯಕರ್ತರಲ್ಲಿ ಸಂಚಲನ ಸೃಷ್ಟಿಸಿದರು.

ದಿನದ ಪ್ರಚಾರವನ್ನು ಹಾರೋಹಳ್ಳಿ ಪಟ್ಟಣದ ವೃತ್ತದಲ್ಲಿ ಶುರು ಮಾಡಿದ ಅವರಿಗೆ ಕಾರ್ಯಕರ್ತರು ಸೇಬಿನಿಂದ ತಯಾರಿಸಿದ ಬೃಹತ್ ಹಾರದ ಸ್ವಾಗತ ನೀಡಿದರು. ಭೇಟಿ ನೀಡಿದ ಗ್ರಾಮದ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಸಾಗಿದ ಅವರು, ಜನಜಂಗುಳಿ ಹೆಚ್ಚಾಗಿದ್ದ ಕಡೆ ಭಾಷಣ ಮಾಡಿ ಹುರಿದುಂಬಿಸಿದರು.

ಪಟ್ಟಣದಿಂದ ಪ್ರಚಾರ ಶುರು ಮಾಡಿದ ಅವರು ತಾಲ್ಲೂಕಿನ ತಟ್ಟೆಕೆರೆ, ಮರಳವಾಡಿ, ಪಡುವಣಗೆರೆ, ಬನ್ನಿಕುಪ್ಪೆ, ಕೊಟ್ಟಗಾಳು ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಮಧ್ಯಾಹ್ನ ಜಕ್ಕಸಂದ್ರದಲ್ಲಿರುವ ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ಊಟ ಸವಿದರು. ಕಾರ್ಯಕರ್ತರೊಂದಿಗೆ ಫೊಟೊ, ಸೆಲ್ಫಿ ತೆಗೆಸಿಕೊಳ್ಳಲು ಬೇಸರಿಸಿಕೊಳ್ಳಲಿಲ್ಲ.  

ಸಂಜೆ ರಾಮನಗರ ತಾಲ್ಲೂಕಿನ ಕೈಲಾಂಚ, ಬನ್ನಿಕುಪ್ಪೆ, ಹುಸಣಸನಹಳ್ಳಿ, ರಾತ್ರಿ ಕೆಂಪೇಗೌಡನ ದೊಡ್ಡಿ ಹಾಗೂ ಮಾಯಗಾನಹಳ್ಳಿಯಲ್ಲಿ ಮತ ಯಾಚನೆಯೊಂದಿಗೆ ದಿನದ ಪ್ರಚಾರ ಅಂತ್ಯಗೊಳಿಸಿದರು. ಶಾಸಕ ಎಚ್‌.ಎ. ಇಕ್ಬಾಲ್‌ ಹುಸೇನ್, ಪಕ್ಷದ ಸ್ಥಳೀಯ ಮುಖಂಡರು  ಸಾಥ್ ನೀಡಿದರು.

ಎದುರಾಳಿಯತ್ತ ಹರಿಯದ ಮಾತು: ಒಂದೇ ದಿನ 11 ಕಡೆ ಸುತ್ತಾಡಿ ಪ್ರಚಾರ ನಡೆಸಿದ ಸುರೇಶ್, ತಮ್ಮ ಭಾಷಣದಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಲಿಲ್ಲ. ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಹೇಳುತ್ತಲೇ, ‘ನಾನು ಮಾಡಿದ ಅಭಿವೃದ್ಧಿ ಕೆಲಸಕ್ಕೆ ಕೂಲಿ ಕೊಡಿ’ ಎಂದು ಮತ ಯಾಚಿಸಿದರು.

ಸಂಸದರಾಗಿ ತಾವು ಮತ್ತು ಅಣ್ಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಜಿಲ್ಲೆಗೆ ತಂದಿರುವ ಯೋಜನೆಗಳನ್ನು ಪ್ರಸ್ತಾಪಿಸುತ್ತಲೇ, ಜೆಡಿಎಸ್ ನಾಯಕರಾದ ಎಚ್‌.ಡಿ. ದೇವೇಗೌಡರು ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು.

‘ಹೊರಗಿನಿಂದ ಬಂದು ಎರಡೂವರೆ ದಶಕಗಳಿಂದ ಏನೂ ಮಾಡದವರು ಬೇಕೋ ಅಥವಾ ಜಿಲ್ಲೆಯ ಅಭಿವೃದ್ಧಿಗೆ ಬದ್ಧವಾಗಿರುವ ಇಲ್ಲಿಯವನೇ ಆದ ನಾನು ಬೇಕೊ ತೀರ್ಮಾನಿಸಿ’ ಎಂದು ಹೋದ ಕಡೆಯಲ್ಲೆಲ್ಲಾ ಸ್ಥಳೀಯ ಸ್ವಾಭಿಮಾನದ ಅಸ್ತ್ರವನ್ನು ಬಿಟ್ಟರು.

ಪ್ರಚಾರಕ್ಕಾಗಿ ಹಾರೋಹಳ್ಳಿ ಪಟ್ಟಣದಲ್ಲಿ ಮಂಗಳವಾರ ಬಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿಗೆ ಕಾರ್ಯಕರ್ತರು ಬೃಹತ್ ಹೂವಿನಹಾರದ ಸ್ವಾಗತ ನೀಡಿದರು. ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಇದ್ದಾರೆ
ಪ್ರಚಾರಕ್ಕಾಗಿ ಹಾರೋಹಳ್ಳಿ ಪಟ್ಟಣದಲ್ಲಿ ಮಂಗಳವಾರ ಬಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿಗೆ ಕಾರ್ಯಕರ್ತರು ಬೃಹತ್ ಹೂವಿನಹಾರದ ಸ್ವಾಗತ ನೀಡಿದರು. ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಇದ್ದಾರೆ

‘ನಾ ಅವರಂತಲ್ಲ; ಬದುಕಿದರೂ ಇಲ್ಲೆ ಸತ್ತರೂ ಇಲ್ಲೇ’

ಹೊರಗಿನಿಂದ ಬಂದು ಜಿಲ್ಲೆಯನ್ನು 25 ವರ್ಷ ಆಳಿ ಪ್ರಧಾನಿ ಮುಖ್ಯಮಂತ್ರಿ ಹುದ್ದೆಗೇರಿದವರಿಗೆ (ಎಚ್‌.ಡಿ. ದೇವೇಗೌಡ ಅವರಿಗೆ) ಇಲ್ಲಿನ ಅಭಿವೃದ್ಧಿ ಬೇಕಿಲ್ಲ. ಅವರ ಬಳಿಕ ಮಗ (ಎಚ್‌.ಡಿ. ಕುಮಾರಸ್ವಾಮಿ) ಸೊಸೆ (ಅನಿತಾ ಕುಮಾರಸ್ವಾಮಿ) ಮೊಮ್ಮಗ (ನಿಖಿಲ್ ಕುಮಾರಸ್ವಾಮಿ) ಈಗ ಅಳಿಯನಿಗೆ (ಡಾ. ಸಿ.ಎನ್. ಮಂಜುನಾಥ್) ಒಳ್ಳೆಯದಾಗಬೇಕಷ್ಟೇ ಎಂದು ಮರಳವಾಡಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು. ಇಲ್ಲಿಯವರು ಯಾರೂ ಸಿಗಲಿಲ್ಲವೆಂದು ಹಾಸನದಿಂದ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ. ನಾನು ಅವರಂತಲ್ಲ. ಬದುಕಿದ್ದರೂ ಇಲ್ಲೆ ಸತ್ತರೂ ಇಲ್ಲೇ. ಅವರಂತೆ ನನ್ನ ಒಂದು ಕಣ್ಣು ರಾಮನಗರ ಮತ್ತೊಂದು ಕಣ್ಣು ಚನ್ನಪಟ್ಟಣ ಎಂದು ಹೇಳುವುದಿಲ್ಲ. ಈಗ ಎರಡೂ ಕಣ್ಣುಗಳನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮುಂದೆ ಮಂಡ್ಯ ನನ್ನ ಮೂರನೇ ಕಣ್ಣು ಎನ್ನುತ್ತಾರೆ. ಈ ನಾಟಕ ನೋಡಿ ಸಾಕಾಗಿದೆ. ಸ್ಥಳೀಯರಾದ ನಾನು ಜಿಲ್ಲೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT