ಶುಕ್ರವಾರ, ಫೆಬ್ರವರಿ 21, 2020
29 °C
ಪರಿಸರ ಪ್ರೀತಿಗೆ ಶಿಕ್ಷಣ ಇಲಾಖೆಯಿಂದ ಶಹಬ್ಬಾಸ್‌ ಗಿರಿ * ಈ ಶಾಲೆಯತ್ತಲೇ ಎಲ್ಲರ ಗಮನ

ಚನ್ನಪಟ್ಟಣ: ಕಿರು ಅರಣ್ಯವನ್ನೇ ಸೃಷ್ಟಿಸಿದ ಶಿಕ್ಷಕ

ಎಚ್.ಎಂ.ರಮೇಶ್ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಮಕ್ಕಳಿಗೆ ವಿದ್ಯೆ ಹೇಳಿಕೊಟ್ಟು ಅವರಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಆಸಕ್ತಿ ಬೆಳೆಸುವುದು ಶಿಕ್ಷಕರ ಕರ್ತವ್ಯ. ಆದರೆ, ತಾಲ್ಲೂಕಿನ ಇಗ್ಗಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಎಚ್.ಸಿ.ಚಂದ್ರಶೇಖರ್ ಕಲಿಕೆ ಜತೆಯಲ್ಲೇ ಸ್ವಂತ ಖರ್ಚಿನಲ್ಲಿ ಶಾಲಾ ಆವರಣದಲ್ಲಿ ಬಹುಮುಖಿ ಕಾರ್ಯಗಳನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ತಾಲ್ಲೂಕಿನ ಹರೂರು ಗ್ರಾಮದ ದೇವಮ್ಮ–ಚನ್ನಯ್ಯ ದಂಪತಿ ಪುತ್ರರಾದ ಚಂದ್ರಶೇಖರ್, ಶಿಕ್ಷಕ ವೃತ್ತಿ ಜತೆಗೆ ಶಾಲಾವರಣದಲ್ಲಿ ನೂರಾರು ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಹೂವು, ಸೊಪ್ಪು, ತರಕಾರಿ ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. 

ಶಾಲಾ ಆವರಣದಲ್ಲಿರುವ 10 ಗುಂಟೆ ಜಮೀನಿನಲ್ಲಿ ಆಲ, ಅರಳಿ, ಹತ್ತಿ, ಬನ್ನಿ, ಬಿಲ್ವಪತ್ರೆ, ಮಾವು, ಬೇವು, ಹಲಸು, ಬೂರುಗ, ತೇಗ, ಹೊನ್ನೆ, ಬೀಟೆ, ಶ್ರೀಗಂಧ (100), ರಕ್ತಚಂದನ, ಹೊಂಗೆ, ಅಶೋಕ, ಹುಣಸೆ, ಹರ್ಕ್ಯುಲೆಸ್, ಬೆಟ್ಟದ ನೆಲ್ಲಿ, ಸಿಲ್ವರ್, ಬಿದಿರು, ಬಸುರಿ, ನೇರಳೆ, ಸರ್ವೆ, ಹಿಪ್ಪೆ, ಮತ್ತಿ ಸೇರಿದಂತೆ ವಿವಿಧ ಜಾತಿ ಮರಗಳನ್ನು ಬೆಳೆಸಿ ಪರಿಸರ ಪ್ರೇಮ ಮೆರೆದಿದ್ದಾರೆ. 

ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಸೀಬೆ, ಸಪೋಟ, ಪಪ್ಪಾಯಿ, ಬಾಳೆ, ನಿಂಬೆ, ದಾಳಿಂಬೆ, ಸೀತಾಫಲ, ಬೇಲ, ಎಬೋನಿ, ಅಂಜೂರ, ನುಗ್ಗೆ, ನೋನಿ, ಮೆಣಸು, ವೀಳ್ಯದೆಲೆ, ಸಂಪಿಗೆ, ಕಾಕಡ, ಮಲ್ಲಿಗೆ, ಸುಗಂಧರಾಜ, ದಾಸವಾಳ, ಕಣಗಿಲೆ, ಕನಕಾಂಬರ, ಚೆಂಡು ಮಲ್ಲಿಗೆ, ಮೆಹಂದಿ, ಪಾರಿಜಾತ, ಬ್ರಹ್ಮಕಮಲ, ಗುಲಾಬಿ ಇತ್ಯಾದಿ ಬೆಳೆದು ಶಾಲಾ ವಾತಾವರಣ ಸುಂದರಗೊಳಿಸಿದ್ದಾರೆ.

ಔಷಧ ಸಸ್ಯಗಳಾದ ತುಳಸಿ, ಭೃಂಗರಾಜ, ಅಮೃತಬಳ್ಳಿ, ಒಂದೆಲಗ, ನಿಂಬೆಹುಲ್ಲು, ಅಶ್ವಗಂಧ, ಅಘನಾಶಿನಿ, ದೊಡ್ಡಪತ್ರೆ, ಕರಿಬೇವು, ಲೋಕಸರ, ಬಿಳಿಎಕ್ಕದಗಿಡ, ಚಕ್ರಮುನಿ, ಇನ್ಸುಲಿನ್, ನಾಗದಾಳೆ, ಶಂಕಪುಷ್ಪ, ಕರಿಲಕ್ಕಿ, ಧೂಪ, ಗುಲಗಂಜಿ ಇತ್ಯಾದಿ ಬೆಳೆಸಿದ್ದಾರೆ. ಈಗಾಗಲೇ ವಿನಾಶದ ಅಂಚು ತಲುಪಿರುವ ಔಷಧ ಗಿಡಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜತೆಗೆ ಅವುಗಳನ್ನು ಉಳಿಸುವ ಧ್ಯೇಯವೂ ಅವರದ್ದಾಗಿದೆ. 

ಕೀರೆ, ಹೊನಗನೆ, ದಂಟು, ಪಾಲಾಕ್, ಗಣಿಕೆ, ಮೂಲಂಗಿ, ಮರಗೆಣಸು, ಬೆಂಡೆ, ಆಹಾರ ಧಾನ್ಯಗಳಾದ ಮೆಕ್ಕೆಜೋಳ, ಜೋಳ, ತೊಗರಿ, ಅವರೆಕಾಳು ಇತ್ಯಾದಿ ಬೆಳೆದಿದ್ದಾರೆ. ಶಾಲಾ ಆವರಣದಲ್ಲಿ ಅಂತರ್ಜಲ ಉಳಿಸುವ ದೃಷ್ಟಿಯಿಂದ ಇಂಗು ಗುಂಡಿ ನಿರ್ಮಿಸಿದ್ದಾರೆ. ಮಳೆ ನೀರು ಸಂಗ್ರಹ ಪದ್ಧತಿ, ನೀರು ಶುದ್ದೀಕರಣ ಘಟಕ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಹಸಿರೆಲೆ ಹಾಗೂ ಒಣಎಲೆ, ಎರೆಹುಳು ಗೊಬ್ಬರ ಕೂಡ ತಯಾರಿಸುತ್ತಾರೆ.  ‌

ಕಳೆದ ವರ್ಷ ಶಾಲೆ ನರ್ಸರಿಯಲ್ಲಿ ಬೆಳೆಸಿದ್ದ ಸುಮಾರು 500ಕ್ಕೂ ಹೆಚ್ಚು ವಿವಿಧ ಜಾತಿ ಗಿಡಗಳನ್ನು ತಾಲ್ಲೂಕಿನ ವಿವಿಧ ಶಾಲೆಗಳಿಗೆ ಉಚಿತವಾಗಿ ಹಂಚಿ ಪರಿಸರ ಪ್ರೇಮ ಮೆರೆದಿದ್ದಾರೆ. ಶಾಲೆ ಆವರಣದಲ್ಲಿರುವ ಚಿಕ್ಕ ಜಾಗದಲ್ಲಿಯೇ ಭತ್ತ ನಾಟಿ ಮಾಡಿ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ.

ಎಲ್ಲ ಮರ ಗಿಡಗಳಿಗೂ ಹೆಸರು ಬರೆಸಿ ತೂಗು ಹಾಕಿದ್ದಾರೆ. ನೂರಕ್ಕೂ ಹೆಚ್ಚು ಕುಂಡಗಳಲ್ಲಿ ಹೂಬಳ್ಳಿ ಬೆಳೆಸಿ ಹಸಿರು ವಾತಾವರಣ ಸೃಷ್ಟಿಸಿದ್ದಾರೆ. ಇದೆಲ್ಲಕ್ಕೂ ಶಾಲೆ ಮುಖ್ಯಶಿಕ್ಷಕ, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರ ಕಾರಣ ಎಂದು ಚಂದ್ರಶೇಖರ್ ನೆನೆಯುತ್ತಾರೆ.

ಬೋಧನಾ ವಿಷಯ ಕನ್ನಡದಲ್ಲಿ ಪ್ರತಿವರ್ಷ ನೂರಕ್ಕೆ ನೂರು ಫಲಿತಾಂಶ ದಾಖಲಿಸುತ್ತಾ ಬಂದಿರುವ ಅವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿಯೂ ಜನಾನುರಾಗಿ ಎಂದೆನಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು