ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಮಲೇಗೌಡನ ದೊಡ್ಡಿಯಲ್ಲಿ ಶಿಲಾಯುಗದ ಕುರುಹು

ಕಾರ್ಯಾಗಾರದಲ್ಲಿ ಪುರಾತತ್ವಶಾಸ್ತ್ರಜ್ಞ ಪ್ರವೀಣ್‌ಕುಮಾರ್ ಕೆ. ಅಭಿಪ್ರಾಯ
Published 5 ಅಕ್ಟೋಬರ್ 2023, 6:12 IST
Last Updated 5 ಅಕ್ಟೋಬರ್ 2023, 6:12 IST
ಅಕ್ಷರ ಗಾತ್ರ

ರಾಮನಗರ: ‘ಪುರಾತತ್ವ ಅಧ್ಯಯನದ ದೃಷ್ಟಿಯಿಂದ ತಿರುಮಲೆಗೌಡನ ದೊಡ್ಡಿ ಮತ್ತು ಕೂಟಗಲ್ ಪ್ರದೇಶವು ದಕ್ಷಿಣ ಕರ್ನಾಟಕದ ವಿಶೇಷ ಪುರಾತತ್ವ ನೆಲೆಯಾಗಿವೆ. ಶಿಲಾಯುಗ, ಕಬ್ಬಿಣ ಯುಗ ಹಾಗೂ ಆದಿ ಇತಿಹಾಸ ಕಾಲದ ಅನೇಕ ಕುರುಹುಗಳು ಇಲ್ಲಿ ಪತ್ತೆಯಾಗಿವೆ’ ಎಂದು ಪುಣೆಯ ಡೆಕ್ಕನ್ ಕಾಲೇಜಿನ ಸಂಶೋಧಕ ಹಾಗೂ ಪುರಾತತ್ವಶಾಸ್ತ್ರಜ್ಞ ಪ್ರವೀಣ್‌ಕುಮಾರ್ ಕೆ. ಅಭಿಪ್ರಾಯಪಟ್ಟರು.

ಬೆಂಗಳೂರಿನ ಸುರಾನಾ ಕಾಲೇಜು ಮತ್ತು ರಾಮನಗರದ ಸಾಂಸ್ಕೃತಿಕ ಪರಂಪರೆಯ ಸಂಶೋಧನಾ ಕೇಂದ್ರದ (ಆರ್‌ಸಿಸಿಎಚ್‌) ಸಹಯೋಗದಲ್ಲಿ ತಾಲ್ಲೂಕಿನ ನಿಜಿಯಪ್ಪನ ದೊಡ್ಡಿಯಲ್ಲಿ ಮಂಗಳವಾರ ನಡೆದ ‘ನವ ಶಿಲಾಯುಗ, ಕಬ್ಬಿಣ ಯುಗ, ಆದಿ ಇತಿಹಾಸ ಹಾಗೂ ಮಧ್ಯಕಾಲೀನ ಕಾಲದ ನೆಲೆಯಾದ ತಿರುಮಲೇಗೌಡನ ದೊಡ್ಡಿಯ ಇತಿಹಾಸ ಮತ್ತು ಪುರಾತತ್ವ ಒಳನೋಟಗಳು’ ವಿಷಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ರಾಮನಗರ ಜಿಲ್ಲೆಯು ಭೌಗೊಳಿಕವಾಗಿ ವಿಶೇಷವಾದುದು. ಸೂಕ್ಷ್ಮ ಶಿಲಾಯುಗ (ಸುಮಾರು ಕ್ರಿ.ಪೂ. 5500 ಕೊನೆಯ ಹಂತ), ನವ ಶಿಲಾಯುಗ, ಕಬ್ಬಿಣ ಯುಗದ (ಕ್ರಿ.ಪೂ. 600– ಕ್ರಿ.ಶ. 100) ಜನರಿಗೆ ವಾಸ ಮಾಡಲು ಯೋಗ್ಯವಾದ ಭೂ ಸಾದೃಶ್ಯವನ್ನು ಇಂದು ಹೊಂದಿತ್ತು. ಹಾಗಾಗಿಯೇ ಶಿಲಾಯುಗದ ಮಾನವರು ಇಲ್ಲಿ ನೆಲೆಸಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ’ ಎಂದರು.

250ಕ್ಕೂ ಹೆಚ್ಚು ಸಮಾಧಿ ಪತ್ತೆ: ‘ಕಬ್ಬಿಣ ಯುಗಕ್ಕೆ ಸಂಬಂಧಪಟ್ಟಂತೆ ತಿರುಮಲೇಗೌಡನ ದೊಡ್ಡಿ ಮತ್ತು ಕೂಟಗಲ್‌ನಲ್ಲಿ 250ಕ್ಕೂ ಹೆಚ್ಚು ಸಮಾಧಿಗಳು ಒಂದೇ ಕಡೆ ಪತ್ತೆಯಾಗಿವೆ. ಬೆಟ್ಟದ ತಪ್ಪಲು ಮತ್ತು ಹಾಸುಬಂಡೆಗಲ್ಲಿನ ಮೇಲೆ ಈ ಸಮಾಧಿಗಳು ಹೆಚ್ಚಾಗಿ ಕಂಡುಬಂದಿವೆ. ಜೊತೆಗೆ ಸಮಾಧಿ ಬಳಿ ಶಿಲೆ ಮತ್ತು ಕಬ್ಬಿಣದ ಅವಶೇಷಗಳು ಸಿಕ್ಕಿವೆ’ ಎಂದು ತಿಳಿಸಿದರು.

‘ಇವುಗಳ ಮಧ್ಯೆ ಸುಮಾರು 17 ಮೀಟರ್ ಉದ್ದದ ಒಂದು ದಿಬ್ಬ ಸಮಾಧಿ ಕಂಡುಬಂದಿದೆ. ಇವುಗಳ ವ್ಯವಸ್ಥಿತವಾದ ಅಧ್ಯಯನ ಮಾಡಿದಾಗ ದಿಬ್ಬ ಸಮಾಧಿ ಆ ಕಾಲದ ಜನಾಂಗದ ಮುಖ್ಯಸ್ಥನ ಸಮಾಧಿ ಇರಬಹುದು. ಉಳಿದವುಗಳ ಬಳಿ ಕಂಡುಬಂದಿರುವ ಕಬ್ಬಿಣ ಮತ್ತು ಶಿಲೆಯ ಅವಶೇಷಗಳನ್ನು ಆಧರಿಸಿ ಅವು ಬೇಟೆಗಾರರ, ಸೈನಿಕರು ಅಥವಾ ಸಮುದಾಯದ ಮುಖ್ಯಸ್ಥರ ಸಮಾಧಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಹೇಳಿದರು.

‘ಈ ಸಮಾಧಿಗಳು ಸುಮಾರು 2,500 ವರ್ಷಗಳ ಕಬ್ಬಿಣ ಯುಗದ ಸಂಸ್ಕೃತಿಯ ಮಾನವರ ಸಾಮಾಜಿಕ ಮತ್ತು ಸಾಂಕೇತಿಕ ಆಚರಣೆಗಳನ್ನು ತಿಳಿಸುತ್ತೇವೆ. ಇಲ್ಲಿ ಸಿಕ್ಕಿರುವ ಕುರುಹುಗಳನ್ನು ಆಧರಿಸಿ, ಅವರ ಕಾಲದ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಮತ್ತಷ್ಟು ಅಧ್ಯಯನ ನಡೆಸಲಾಗುತ್ತಿದೆ’ ಎಂದರು.

ಬೆಂಗಳೂರಿನ ಸುರಾನಾ ಕಾಲೇಜಿನ ಇತಿಹಾಸ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸ್ಥಳದಲ್ಲಿ ಸಿಕ್ಕ ನವ ಶಿಲಾಯುಗ ಮತ್ತು ಕಬ್ಬಿಣ ಯುಗದ ಕುರುಹುಗಳನ್ನು ಪ್ರದರ್ಶಿಸಲಾಯಿತು.

ಸುರಾನಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ನವರುಣ ಬೋರ್ಹ, ಉಪನ್ಯಾಸಕ ಕೆ.ಆರ್. ಶ್ರೀವತ್ಸ, ಆರ್‌ಸಿಸಿಎಚ್‌ ಕಾರ್ಯದರ್ಶಿ ಸುರೇಂದ್ರ ಎನ್.ಆರ್, ಕಾರ್ಯಕಾರಿ ವ್ಯವಸ್ಥಾಪಕ ಪ್ರಕಾಶ್ ಇದ್ದರು.

‘ಗಣಿಗಾರಿಕೆಯಿಂದ ಕುರುಹು ನಾಶ ಆತಂಕ’

‘ಪುರಾತತ್ವ ದೃಷ್ಟಿಯಿಂದ ವಿಶೇಷ ಸ್ಥಳಗಳೆಂದು ಗುರುತಿಸಲಾಗಿರುವ ಬ್ರಹ್ಮಗಿರಿ ಹಿರೇಬೆನಕಲ್ ಚಂದ್ರವಳ್ಳಿ ಸಂಗನಕಲ್ಲು ಸೇರಿದಂತೆ ಅನೇಕ ಪುರಾತತ್ವ ನೆಲೆಗಳ ಸಾಲಿಗೆ ತಿರುಮಲೇಗೌಡನ ದೊಡ್ಡಿ ಸಹ ಸೇರುತ್ತದೆ. ಇದು ದಕ್ಷಿಣ ಕರ್ನಾಟಕದಲ್ಲೇ ದೊಡ್ಡ ನೆಲೆ ಎಂದು ಗುರುತಿಸಬಹುದಾಗಿದೆ. ಇದರ ಸುತ್ತಮುತ್ತ ಕಲ್ಲು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದ್ದು ಪುರಾತತ್ವ ಕುರುಹುಗಳು ನಾಶವಾಗುವ ಆತಂಕ ಎದುರಾಗಿದೆ. ಹಾಗಾಗಿ ಸದ್ಯ ಗುರುತಿಸಿರುವ ಸ್ಥಳಗಳನ್ನು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು ಸಂರಕ್ಷಣೆ ಮಾಡಬೇಕಿದೆ’ ಎಂದು ಪ್ರವೀಣ್‌ಕುಮಾರ್ ಕೆ. ಒತ್ತಾಯಿಸಿದರು. ‘ಕಣ್ವ ಅರ್ಕಾವತಿ ಕಣಿವೆಯಲ್ಲಿವೆ ಪುರಾತತ್ವ ನೆಲೆ’ ‘ಕಣ್ವ ಮತ್ತು ಅರ್ಕಾವತಿ ನದಿ ಕಣಿವೆಯಲ್ಲಿ ಸುಮಾರು 60 ಪುರಾತತ್ವ ನೆಲೆಗಳು ಮತ್ತು ವಸತಿ ನೆಲೆಗಳನ್ನು ಗುರುತಿಸಲಾಗಿದೆ. ಇಲ್ಲಿ ಸೂಕ್ಷ್ಮ ಶಿಲಾಯುಗ ನವ ಶಿಲಾಯುಗ ಹಾಗೂ ಕಬ್ಬಿಣ ಯುಗಕ್ಕೆ ಸಂಬಂಧಿಸಿದ ಕಲ್ಲಿನ ಮೊನೆ ಬಾಣ ಕೃಷಿ ಸಂಸ್ಕೃತಿಯ ಕುಟ್ಟುವ ಕಲ್ಲು ಅರೆಯುವ ಕಲ್ಲು ಕೊಡಲಿ ಯುದ್ಧ ಮತ್ತು ಬೇಟೆಗೆ ಬಳಸಿರಬಹುದಾದ ಈಟಿ ಕಬ್ಬಿಣದ ಕಟಾರಿ ಕತ್ತಿ ವಿವಿಧ ಕಲ್ಲಿನ ಆಯುಧಗಳು ಹಾಗೂ ಅಂತ್ಯಸಂಸ್ಕಾರದಲ್ಲಿ ಬಳಸಿರಬಹುದಾದ ಮಡಿಕೆ ಸೇರಿದಂತೆ ಸಾಕಷ್ಟು ಕುರುಹುಗಳು ಸಿಕ್ಕಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT