ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಗೆಲ್ಲುವುದೇ ಗುರಿ: ಯೋಗೇಶ್ವರ್

Published 19 ಜನವರಿ 2024, 4:53 IST
Last Updated 19 ಜನವರಿ 2024, 4:53 IST
ಅಕ್ಷರ ಗಾತ್ರ

ರಾಮನಗರ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ನಮ್ಮವರು ಪ್ರತಿನಿಧಿಸಬೇಕು. ಗ್ರಾಮಾಂತರ ಗೆಲುವೇ ನಮ್ಮ ಗುರಿಯಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.

ನಗರದ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ಗುರುವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ವೀಕ್ಷಣೆ ಮತ್ತು ರಾಮನಗರ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗ್ರಾಮಾಂತರ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ, ಎಲ್ಲರೂ ಒಕ್ಕೋರಲಿನಿಂದ ಗೆಲುವಿಗಾಗಿ ದುಡಿಯಬೇಕು’ ಎಂದು ಕರೆ ನೀಡಿದರು.

‘ಈ ಕುರಿತು ನಾನು, ಮುಖಂಡ ಅಶ್ವತ್ಥ ನಾರಾಯಣಗೌಡ ಸೇರಿದಂತೆ ಸ್ಥಳೀಯ ನಾಯಕರೆಲ್ಲರೂ ಮಾತನಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಸಂಸದರು ಬಂದ ಬಳಿಕ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಅಭಿವೃದ್ಧಿ ಕೆಲಸಗಳಿಗೆ ನಾಂದಿ ಹಾಡೋಣ’ ಎಂದರು.

‘ಪಕ್ಷ ನಿಷ್ಠೆ ಗಮನಸಿ ವರಿಷ್ಠರು ಆನಂದ ಸ್ವಾಮಿ ಅವರನ್ನು ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ನಾವೆಲ್ಲರೂ ಅವರೊಂದಿಗೆ ಕೈ ಜೋಡಿಸೋಣ. ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸೋಣ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸೋಣ’ ಎಂದು ತಿಳಿಸಿದರು.

ಪಕ್ಷದ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮಾತನಾಡಿ, ‘ಬಿ.ವೈ. ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಮಂಕು ಕವಿದಂತಿದ್ದ ಕಾರ್ಯಕರ್ತರಲ್ಲಿ ಸಂಚಲನ ಮೂಡಿದೆ. ಕಾರ್ಯಕರ್ತರಲ್ಲಿ ಅವರು ಉತ್ಸಾಹ ತುಂಬುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮಾಡಿದ್ದಾರೆ’ ಎಂದರು.

‘ಆನಂದಸ್ವಾಮಿ ಅವರು ಉತ್ತಮವಾದ ಕಾಲದಲ್ಲಿ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೋರ್ಚಾ, ಪ್ರಕೋಷ್ಠಗಳನ್ನು ಒಳಗೊಂಡಂತೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತಂಡ ರಚಿಸಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು. ತಾಲ್ಲೂಕು ಪ್ರವಾಸ ಕೈಗೊಂಡು ಕಾರ್ಯಕರ್ತರಿಗೆ ವಿಶ್ವಾಸ ತುಂಬಿ’ ಎಂದು ಹೇಳಿದರು.

ಪಕ್ಷದ ನೂತನ ಅಧ್ಯಕ್ಷ ಆನಂದಸ್ವಾಮಿ, ‘ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಲುವಾಗಿ, ಬೂತ್‌ ಮಟ್ಟದಿಂದ ಕಾರ್ಯರ್ತರನ್ನು ಸಂಘಟಿಸಿಕೊಂಡು ಕೆಲಸ ಮಾಡುವೆ’ ಎಂದರು.

ಪಕ್ಷದ ಹಿಂದಿನ ಅಧ್ಯಕ್ಷ ಹುಲುವಾಡಿ ದೇವರಾಜ್ ಅವರು ಪಕ್ಷದ ಧ್ವಜವನ್ನು ಆನಂದಸ್ವಾಮಿ ಅವರಿಗೆ ಹಸ್ತಾಂತರಿಸುವ ಮೂಲಕ, ಅಧಿಕಾರ ಹಸ್ತಾಂತರಿಸಿದರು. ಪಕ್ಷದ ಜಿಲ್ಲೆ ಮತ್ತು ತಾಲ್ಲೂಕುಗಳ ಮಾಜಿ ಅಧ್ಯಕ್ಷರು, ಕರಸೇವಕರು ಹಾಗೂ ಪಕ್ಷದ ಮುಖಂಡರನ್ನು ಸನ್ಮಾನಿಸಲಾಯಿ. ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರು ಇದ್ದರು.

‘ನಾಯಕರ ಬೆನ್ನು ಬೀಳದೆ ಕೆಲಸ ಮಾಡಿ’

‘ವಿರೋಧ ಪಕ್ಷದಲ್ಲಿದ್ದಾಗ ಹೋರಾಟಕ್ಕೆ ವಿಫುಲ ಅವಕಾಶವಿರುತ್ತದೆ. ಆನಂದ ಸ್ವಾಮಿ ಅವರು ರೈತರು ಮಹಿಳೆ ಮಕ್ಕಳು ಸಮಾಜದ ಕಟ್ಟಡ ಕಡೆಯ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡಬೇಕು. ಪಕ್ಷ ಸಂಘಟಿಸಿದರೆ ಜನ ನಿಮ್ಮನ್ನು ಗುರುತಿಸುತ್ತಾರೆ. ಯಡಿಯೂರಪ್ಪ ಅವರು ಹೋರಾಟದ ಕಾರಣಕ್ಕಾಗಿ ಅಧಿಕಾರಕ್ಕೇರಿದರು. ನೀವೂ ಅಷ್ಟೇ ನನ್ನ ಅಥವಾ ಯಾವುದೋ ನಾಯಕನ ಬೆನ್ನು ಬೀಳದೆ ಕೆಲಸ ಮಾಡಿ. ನಿಮಗೆ ಭವಿಷ್ಯವಿದೆ’ ಎಂದು ಪಕ್ಷದ ವಕ್ತಾರ ಅಶ್ವತ್ಥ ನಾರಾಯಣಗೌಡ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT