ಮಂಗಳವಾರ, ಮೇ 17, 2022
26 °C
ಕ್ಷೇತ್ರ ಪುನರ್‌ವಿಂಗಡಣೆಗೆ ಚಾಲನೆ ನೀಡಿದ ಚುನಾವಣಾ ಆಯೋಗ

ರಾಮನಗರ: ಜಿ.ಪಂ. ಹೆಚ್ಚು; ತಾ.ಪಂ ಕ್ಷೇತ್ರ ಕಡಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಚಾಲನೆ ದೊರೆತಿದೆ. ಈ ಬಾರಿ ಜಿ.ಪಂ. ಕ್ಷೇತ್ರಗಳು ಏರಿಕೆ ಆಗಲಿದ್ದರೆ, ತಾ.ಪಂ. ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ.

ಕ್ಷೇತ್ರಗಳನ್ನು ಜನಸಂಖ್ಯೆ ಆಧಾರದಲ್ಲಿ ಪುನರ್ ವಿಂಗಡಣೆ ಮಾಡಿ ಇದೇ 22ರ ಒಳಗೆ ವರದಿ ಸಲ್ಲಿಕೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗವು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ರವಾನಿಸಿದೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 22 ಕ್ಷೇತ್ರಗಳಿಂದ ಪ್ರತಿನಿಧಿಗಳು ಆಯ್ಕೆಯಾಗಿದ್ದರು. ಈ ಬಾರಿ ಮಾಗಡಿ ಮತ್ತು ಚನ್ನಪಟ್ಟಣ ತಾಲ್ಲೂಕಿನಲ್ಲಿ ತಲಾ ಒಂದು ಸ್ಥಾನಗಳು ಹೆಚ್ಚಾಗಿದ್ದು, ಕನಕಪುರ ಮತ್ತು ರಾಮನಗರ ತಾಲ್ಲೂಕಿನಲ್ಲಿ ಸ್ಥಾನಗಳು ಯಥಾ ಸ್ಥಿತಿ ಇವೆ. ಮೊದಲು ಮಾಗಡಿ ಮತ್ತು ಚನ್ನಪಟ್ಟಣ ತಲಾ 5 ಕ್ಷೇತ್ರಗಳಿದ್ದವು. ರಾಮನಗರ ಮತ್ತು ಕನಕಪುರದಲ್ಲಿ ಕ್ರಮವಾಗಿ 4 ಮತ್ತು 8 ಸ್ಥಾನಗಳಿದ್ದು ಇವುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸ್ಥಾನ ಕಳೆದುಕೊಂಡ ತಾಪಂ: ಜಿಲ್ಲೆಯಲ್ಲಿ 15 ತಾ.ಪಂ. ಕ್ಷೇತ್ರಗಳು ಪುನರ್ ವಿಂಗಡನೆ ಹಿನ್ನೆಲೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಂದ 80 ಕ್ಷೇತ್ರಗಳಿದ್ದು, ಈಗ ಇದನ್ನು 65ಕ್ಕೆ ಚುನಾವಣಾ ಆಯೋಗ ಇಳಿಸಿದೆ. ರಾಮನಗರದಲ್ಲಿ 2, ಚನ್ನಪಟ್ಟಣದಲ್ಲಿ 4, ಕನಕಪುರದಲ್ಲಿ 6 ಮತ್ತು ಮಾಗಡಿಯಲ್ಲಿ 3 ಕ್ಷೇತ್ರಗಳು ಕಡಿಮೆ ಆಗುತ್ತಿವೆ.

ಜನಸಂಖ್ಯೆ ಆಧಾರ: ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ 35-40 ಸಾವಿರ ಜನ ಸಂಖ್ಯೆ ಇರಬೇಕು, ಅದೇ ರೀತಿ ಪ್ರತಿ ತಾ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ 12,500 ಜನಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಒಂದು ಗ್ರಾಮ ಪಂಚಾಯಿತಿ ಎರಡು ಜಿ.ಪಂ. ಇಲ್ಲವೇ ತಾ.ಪಂ. ವ್ಯಾಪ್ತಿಗೆ ಹಂಚಿಕೆ ಆಗದಂತೆಯೂ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಆಕಾಂಕ್ಷಿಗಳಿಗೆ ನಿರಾಸೆ
ಈ ಬಾರಿ ಹಿಂದಿಗಿಂತ ಎರಡು ಹೆಚ್ಚುವರಿ ಜಿ.ಪಂ. ಕ್ಷೇತ್ರಗಳು ರಚನೆ ಆಗಲಿರುವುದು ಸ್ಪರ್ಧಾಕಾಂಕ್ಷಿಗಳ ಉತ್ಸಾಹ ಹೆಚ್ಚಿಸಿದೆ. ಆದರೆ ಇದೇ ವೇಳೆ ಜಿಲ್ಲೆಯಲ್ಲಿ 15 ತಾ.ಪಂ. ಕ್ಷೇತ್ರಗಳು ಕಡಿಮೆ ಆಗುತ್ತಿರುವುದು ತಾ.ಪಂ. ಪ್ರತಿನಿಧಿ ಆಗಬಯಸುವವರ ಉತ್ಸಾಹ ಕುಂದಿಸಿದೆ.

ಒಂದೆಡೆ ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯನ್ನೇ ರದ್ದುಮಾಡಲು ಬಯಸಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ ಕುಳಿತಿದೆ. ಈ ನಡುವೆ ತಾ.ಪಂ. ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಆಕಾಂಕ್ಷಿಗಳಲ್ಲಿ ನಿರಾಸೆ ತಂದಿದೆ. ಈ ನಡುವೆ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಯಾವ ಊರುಗಳು ಯಾವ ಕ್ಷೇತ್ರ ಪಾಲಾಗಲಿವೆ ಎನ್ನುವ ಖಾತ್ರಿ ಇಲ್ಲದೇ ಇರುವುದು ಸ್ಪರ್ಧಿಗಳಲ್ಲಿ ನಿರುತ್ಸಾಹ ಮೂಡಿಸಿದೆ.

ಜಿ.ಪಂ. ಕ್ಷೇತ್ರ ವಿಂಗಡನೆ
ತಾಲ್ಲೂಕು: ಮೊದಲು; ಈಗ

ರಾಮನಗರ; 4; 4
ಚನ್ನಪಟ್ಟಣ; 5; 6
ಕನಕಪುರ; 8; 8
ಮಾಗಡಿ; 5; 6
ಒಟ್ಟು; 22; 24

ತಾ,ಪಂ. ಕ್ಷೇತ್ರ ವಿಂಗಡಣೆ
ತಾಲ್ಲೂಕು; ಮೊದಲು; ಈಗ
ರಾಮನಗರ;
14; 12
ಚನ್ನಪಟ್ಟಣ; 19; 15
ಕನಕಪುರ; 29; 23
ಮಾಗಡಿ; 18; 15
ಒಟ್ಟು; 80; 65

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು