ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ–ಬಿಡದಿ ಮಾರ್ಗದಲ್ಲಿ ಶಿವಮೊಗ್ಗ ಎಕ್ಸ್‌ಪ್ರೆಸ್‌ ರೈಲು ದರೋಡೆ

ಮಾಸ್ಕ್ ಧರಿಸಿದ್ದ ದರೋಡೆಕೋರರು, ಪ್ರಯಾಣಿಕರ ಮೇಲೆ ಹಲ್ಲೆ
Last Updated 22 ಡಿಸೆಂಬರ್ 2018, 1:47 IST
ಅಕ್ಷರ ಗಾತ್ರ

ರಾಮನಗರ: ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಶಿವಮೊಗ್ಗ ಎಕ್ಸ್‌ಪ್ರೆಸ್‌ (ತಾಳಗುಪ್ಪ) ರೈಲಿನಲ್ಲಿ ಗುರುವಾರ ರಾತ್ರಿ ದರೋಡೆ ನಡೆದಿದೆ.

ರಾತ್ರಿ 9.30ರ ಸುಮಾರಿಗೆ ರೈಲು ಚನ್ನಪಟ್ಟಣದಲ್ಲಿ ನಿಂತಿದ್ದ ವೇಳೆ ಎಂಟು ಮಂದಿ ದರೋಡೆಕೋರರು ಒಳ ಪ್ರವೇಶಿಸಿದ್ದಾರೆ. ಬಳಿಕ ಮಾರಕಾಸ್ತ್ರಗಳನ್ನು ಹಿಡಿದು ಎಸ್‌ 1ರಿಂದ 3ರವರೆಗಿನ ಬೋಗಿಗಳ ಬಾಗಿಲುಗಳನ್ನು ಬಂದ್ ಮಾಡಿದ್ದಾರೆ. ಅಲ್ಲಿ ಪ್ರಯಾಣಿಕರನ್ನು ಬೆದರಿಸಿ ಹಣ, ಒಡವೆ, ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. ಪ್ರತಿರೋಧ ತೋರಿದ ಪ್ರಯಾಣಿಕರೊಬ್ಬರಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.

ರೈಲು ರಾಮನಗರವನ್ನು ತಲುಪುವ ವೇಳೆಗೆ ಎರಡು ಬೋಗಿಗಳಲ್ಲಿ ದರೋಡೆ ಮಾಡಿ, ಬಳಿಕ ಬಿಡದಿವರೆಗೆ ಇನ್ನೊಂದು ಬೋಗಿಯಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡಿದ್ದಾರೆ. ರೈಲು ಬಿಡದಿ ನಿಲ್ದಾಣದ ದಾಟಿ ಕೆಂಗೇರಿ ಸಮೀಪ ಕ್ರಾಸಿಂಗ್‌ಗೆ ನಿಲ್ಲುತ್ತಲೇ ಅಲ್ಲಿಂದ ಕೆಳಗಿಳಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

‘ಆರೋಪಿಗಳು ದರೋಡೆ ಸಮಯದಲ್ಲಿ ಮುಖಕ್ಕೆ ಮಾಸ್ಕ್‌ ಧರಿಸಿದ್ದರು. ಮೂರು ಬೋಗಿಗಳಲ್ಲಿ ಸುಮಾರು 150 ಪ್ರಯಾಣಿಕರಿದ್ದೆವು. ನಮ್ಮನ್ನು ಬೆದರಿಸಿ ನಮ್ಮಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡರು. ಮೊಬೈಲ್‌ಗಳಲ್ಲಿ ವಿಡಿಯೊ ಮಾಡಲು ಪ್ರಯತ್ನಿಸಿದವರ ಮೇಲೆ ಹಲ್ಲೆ ನಡೆಸಿದರು. ರೈಲು ಕ್ರಾಸಿಂಗ್‌ಗೆ ನಿಲ್ಲಿಸಿದ ಸಂದರ್ಭ ಕೆಳಗೆ ಜಿಗಿದು ಪರಾರಿಯಾದರು. ರೈಲು ಮೆಜೆಸ್ಟಿಕ್ ನಿಲ್ದಾಣಕ್ಕೆ ತಲುಪಿದ ಬಳಿಕ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದರು.

ತನಿಖೆಗೆ ತಂಡ ರಚನೆ: ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು–ಮೂರು ತಂಡಗಳು ಒಟ್ಟಿಗೆ ದರೋಡೆ ನಡೆಸಿರುವ ಸಾಧ್ಯತೆ ಇದೆ. ತನಿಖೆಗಾಗಿ ಆರ್‌ಪಿಎಫ್ ಅಧಿಕಾರಿಗಳ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT