ಮಂಗಳವಾರ, ಮೇ 26, 2020
27 °C
ಯುಟ್ಯೂಬ್‌ ಚಾನೆಲ್‌ ಲಭ್ಯ

ನಿಡಗುಂದಿ: ವಿಶಿಷ್ಟ ನಲಿಕಲಿ ಕೋಣೆ; ಸ್ಮಾರ್ಟ್ ಕ್ಲಾಸ್ ನಿರ್ಮಾಣ

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Prajavani

ನಿಡಗುಂದಿ: ಇಲ್ಲಿನ ನಿಡಗುಂದಿ ತಾಂಡಾದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ‘ನಲಿ ಕಲಿ’ ಸೇರಿದಂತೆ ಹಲವು ಕಲಿಕಾ ಚಟುವಟಿಕೆಗಳಿಂದ ಜಿಲ್ಲೆಯೆಡೆ ಪ್ರಸಿದ್ಧಿಯಾಗಿದೆ.

1 ರಿಂದ 5ನೇ ವರ್ಗದ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಆರ್.ಎ.ನದಾಫ್‌ ಹಾಗೂ ಎಂ.ಎಚ್.ಲಷ್ಕರಿ ಅವರ ಸೃಜನಶೀಲತೆಯಿಂದ ಚಲನಶೀಲ ಚಟುವಟಿಕೆಗಳು ನಡೆಯುತ್ತಿವೆ. ನಲಿಕಲಿ ಶಿಕ್ಷಕ ಎಂ.ಎಚ್‌.ಲಷ್ಕರಿ ಅವರ ಸೃಜನಶೀಲತೆಯಿಂದ ‘ನಲಿ ಕಲಿ’ ವರ್ಗಕೋಣೆಯು ಜಿಲ್ಲೆಯಲ್ಲಿಯೇ ಮಾದರಿಯಾಗಿದೆ. 

ನಲಿಕಲಿ ವಿಧಾನದಲ್ಲಿಯ ಭಾಷೆ, ಗಣಿತ, ಪರಿಸರ ಅಧ್ಯಯನ ಹಾಗೂ ಇಂಗ್ಲಿಷ್‌ ಕಲಿಕೆಯು ಸದಾ ಚಟುವಟಿಕೆಯ ಆಧಾರದಲ್ಲಿದ್ದು, ಮಕ್ಕಳಿಗೆ ನಿರಂತರವಾಗಿ ಸಂತಸದಾಯಕ-, ಕುತೂಹಲ -ಹಾಗೂ ಸ್ವ ಕಲಿಕೆಗೆ ಲಷ್ಕರಿ ಅವರು ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಹಾಡು, ಕಥೆ, ಮೂಕಾಭಿನಯ, ಆಟಗಳು, ಚಿತ್ರ ರಚನೆ, ಅಂತಾಕ್ಷರಿ, ಸರಳ ಪ್ರಯೋಗ, ಅಣಕುನುಡಿ, ಸವಾಲ್‌ ಜವಾಬ್‌, ಚರ್ಚೆಗಳು, ಪೊಪೆಟ್ ಶೋ, ಹವಾಮಾನ ನಕ್ಷೆ, ಸಂಭಾಷಣೆ, ಸನ್ನಿವೇಶ ರಚನೆ, ಪದಬಂಧ ಹೀಗೆ ವಿವಿಧ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ರಾಜ್ಯದಲ್ಲೆ ಮೊದಲ ಬಾರಿಗೆ ಮಕ್ಕಳಿಗೆ ನಲಿಕಲಿ ಟೇಬಲ್‌ (ತಟ್ಟೆಗಳು) ಹಾಗೂ ಖುರ್ಚಿಗಳನ್ನು, ಅಕ್ಷರ ಬಾವಿ ಹೀಗೆ ಇತರೆ ಕಲಿಕೋಪಕರಣಗಳನ್ನು ಈ ಶಾಲೆಯ ಶಿಕ್ಷಕರಾದ ಆರ್.ಎ. ನದಾಫ್‌, ಎಂ.ಎಚ್.ಲಷ್ಕರಿ ಅವರು ತಮ್ಮ ಸ್ವಂತ ಖರ್ಚಿನಿಂದ ತಯಾರಿಸಿರುವುದು ವಿಶೇಷ.

ಶಾಲೆಯಲ್ಲಿ ₹20 ಸಾವಿರ ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್ ನಿರ್ಮಿಸಲಾಗಿದ್ದು, ಅದರ ಮೂಲಕ ಬೋಧನೆ ಮಾಡಲಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಇವರ ಶಾಲೆಗೆ ಭೇಟಿ ನೀಡಿದ ಸದ್ಭವ ಕನ್‌ಸ್ಟ್ರಕ್ಷನ್‌ ಕಂಪನಿಯವರು, ಶಾಲೆಯ ಸ್ವಚ್ಛತೆ, ಶಿಸ್ತು, ಕಲಿಕಾಮಟ್ಟ ವೀಕ್ಷಿಸಿ ₹50 ಸಾವಿರ ಬಹುಮಾನ ನೀಡಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯಿತಿ, ಎಸ್‌ಡಿಎಂಸಿ, ದಾನಿಗಳಿಂದ ಹಣ ಕೂಡಿಸಿ ಶಾಲೆಯ ಕಾಂಪೌಂಡ್‌, ಗೇಟ್‌ ನಿರ್ಮಿಸಲಾಗಿದೆ. ಶಾಸಕ ಶಿವಾನಂದ ಪಾಟೀಲ ಅವರು ₹2 ಲಕ್ಷದ ಕಾಮಗಾರಿ ಮಂಜೂರಿ ಮಾಡಿಸಿದ್ದಾರೆ.

ಬಿಸಿಯೂಟಕ್ಕೆ ಬೇಕಾಗುವ ಪಾಲಕ್‌, ಹುಣಸಿಕೆ, ಬದನೆಕಾಯಿ, ಮೆಣಸಿನಕಾಯಿ, ಕೊತ್ತಂಬರಿ, ಬೆಂಡೆಕಾಯಿಯನ್ನು ಸಾವಯ ವಿಧಾನದಲ್ಲಿ ಬೆಳೆಯಲಾಗುತ್ತಿದೆ.

ಶಿಕ್ಷಕ ಎಂ.ಎಚ್.ಲಷ್ಕರಿ ಅವರ ನಲಿಕಲಿ ಬೋಧನೆ, ಹಾಡು, ಚಟುವಟಿಕೆಗಳು ‘ನಲಿಕಲಿ ಲಷ್ಕರಿ’ ಯುಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿದ್ದು, ಸಹಸ್ರಾರು ಜನ ವೀಕ್ಷಿಸಿ, ಲೈಕ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು