ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ನಡೆದು ಬಂದ ಹಾದಿಯತ್ತ ತಿರುಗಿ ನೋಡಿದಾಗ ಶಿವಮೊಗ್ಗ ಜಿಲ್ಲೆ ಹತ್ತು ಹಲವು ಸಂಗತಿಗಳಿಗೆ ಸಾಕ್ಷಿಯಾಯಿತು. ವರ್ಷವಿಡೀ ಜಿಲ್ಲೆಯಲ್ಲಿ ನಡೆದ ರಾಜಕೀಯ ಮೇಲಾಟಗಳು, ಅನಿರೀಕ್ಷಿತ ಬೆಳವಣಿಗೆಗಳು. ಮುನಿಸಿಕೊಂಡ ವರುಣ, ಮತ್ತೆ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿ ಒಡಮೂಡಿದ್ದು, ನೂತನ ವಿಮಾನ ನಿಲ್ದಾಣದ ಲೋಕಾರ್ಪಣೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಕಾರ್ಯಕರ್ತರಿಗೆ ಸಿಗದ ಅಧಿಕಾರದಿಂದ ಬೇಸರಗೊಂಡ ಕಾಂಗ್ರೆಸ್ಸಿಗರು. ವರ್ಷಾಂತ್ಯದಲ್ಲಿ ಲೋಕಸಭೆ ತಾಲೀಮಿಗೆ ಮುಂದಾದ ರಾಜಕೀಯ ಪಕ್ಷಗಳು. ಸಂಕಷ್ಟಕ್ಕೆ ಸಿಲುಕಿದ ರೈತ ಸಮೂಹ. ಹೀಗೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಹಿನ್ನೋಟ ಇಲ್ಲಿದೆ.

ಸೋಗಾನೆಗೆ ರೆಕ್ಕೆ ಮೂಡಿದಾಗ..

ಲೋಹದ ಹಕ್ಕಿಗಳ ಕಲರವ ಆಲಿಸುವ ಮಲೆನಾಡಿಗರ ಕನಸು ನನಸಾಗಿದ್ದು, 2023ರ ಆರಂಭದ ಮೊದಲ ಪ್ರಮುಖ ಹೆಜ್ಜೆ. ಫೆಬ್ರುವರಿ 27ರಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನ ನೂತನ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಮಧ್ಯ ಕರ್ನಾಟಕದ ಮೊದಲ ವಿಮಾನ ನಿಲ್ದಾಣ ಎಂಬ ಶ್ರೇಯ ಗಳಿಸಿದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಈಗ ರಾಜ್ಯದ ನಾಲ್ಕು ದಿಕ್ಕಿಗೂ ಎರಡು ವಿಮಾನಗಳು ಹಾರಾಟ ನಡೆಸುತ್ತಿವೆ.

ಹೊಸ ರಾಜಕೀಯ ಮನ್ವಂತರ..

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯ ಜೋಡೆತ್ತುಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಕಣದಲ್ಲಿ ಕಾಣಲಿಲ್ಲ. ಕಾಂಗ್ರೆಸ್ನ ಭೀಷ್ಮ ಕಾಗೋಡು ತಿಮ್ಮಪ್ಪ ಕೂಡ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾದರು. ಹೀಗಾಗಿ ಐದು ದಶಕಗಳ ಕಾಲ ಮಲೆನಾಡಿನಲ್ಲಿ ಸದ್ದು ಮಾಡಿದ್ದ ಹಿರಿಯರ ರಾಜಕಾರಣ ಬಹುತೇಕ ಸ್ತಬ್ಧವಾಯಿತು. ಎಸ್.ಎನ್.ಚನ್ನಬಸಪ್ಪ ಹಾಗೂ ಬಿ.ವೈ.ವಿಜಯೇಂದ್ರ ಮೊದಲ ಬಾರಿಗೆ ಶಾಸಕರಾದ ಶ್ರೇಯಕ್ಕೆ ಪಾತ್ರರಾದರು. ಐದು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಪಲ್ಲಟವಾಯಿತು. 2018ರ ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ವರ್ಷ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್ ಎರಡು ಕ್ಷೇತ್ರ ಹೆಚ್ಚಿಸಿಕೊಂಡರೆ ಜೆಡಿಎಸ್ ಒಂದು ಕಡೆ ಗೆಲುವಿನ ನಗೆ ಬೀರಿತು.

ಬಿಜೆಪಿಯಲ್ಲಿ ಬಂಡೆದ್ದ ಆಯನೂರು ಮಂಜುನಾಥ್ ಪಕ್ಷದಿಂದ ಹೊರನಡೆದರೆ, ಬೇಳೂರು ಗೋಪಾಲಕೃಷ್ಣ ದಶಕದ ನಂತರ ಶಾಸಕರಾಗಿ ಆಯ್ಕೆಯಾದರು. ಆರಗ ಜ್ಞಾನೇಂದ್ರ ಹಾಗೂ ಬಿ.ಕೆ.ಸಂಗಮೇಶ್ವರ ಗೆಲುವಿನ ಯಾತ್ರೆ ಮುಂದುವರೆಸಿದರು.

ಬರದ ಛಾಯೆ, ರೈತಾಪಿ ವರ್ಗ ಮಂಕು..

ಮಲೆನಾಡಿನ ರೈತರ ಪಾಲಿಗೆ 2023 ಸಂಕಷ್ಟದ ವರ್ಷವಾಗಿಯೇ ಕಂಡಿತು. ಮುಂಗಾರು ಹಂಗಾಮು ವಿಫಲವಾಗಿ ಮುನಿಸಿಕೊಂಡ ವರುಣ ರೈತಾಪಿ ವರ್ಗದ ಉತ್ಸಾಹ ಉಡುಗಿಸಿದನು. ಜುಲೈ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗಿದ್ದು ಹೊರತುಪಡಿಸಿದರೆ ಮುಂಗಾರಿನದ್ದು ಕಣ್ಣಾಮುಚ್ಚಾಲೆ ಆಟ. ತುಂಗೆ ಭರ್ತಿಯಾದರೂ ಭದ್ರೆಯ ಒಡಲು ಮಾತ್ರ ತುಂಬಲೇ ಇಲ್ಲ. ಲಿಂಗನಮಕ್ಕಿಯದ್ದೂ ಅದೇ ಸ್ಥಿತಿ. ವಾಡಿಕೆಗಿಂತ ಅರ್ಧದಷ್ಟು ಮಳೆ (ಶೇ 40 ಮಾತ್ರ) ಕಡಿಮೆ ಆಗಿ ತೀರ್ಥಹಳ್ಳಿ, ಸಾಗರ, ಹೊಸನಗರದ ಮಳೆಯಾಶ್ರಿತ ಗದ್ದೆಗಳಲ್ಲಿ ಸಂಪೂರ್ಣ ನಾಟಿ ಸಾಧ್ಯವಾಗಲೇ ಇಲ್ಲ. ಇದೇ ಮೊದಲ ಬಾರಿಗೆ ಜಿಲ್ಲೆಯ ಅಷ್ಟೂ ತಾಲೂಕುಗಳನ್ನು ಸರ್ಕಾರ ಬರಪೀಡಿತವೆಂದು ಘೋಷಣೆ ಮಾಡಿತು.

ಜಿ.ಪಂ-ತಾ.ಪಂ ಚುನಾವಣೆ: ಗರಿಗೆದರಿದ ನಿರೀಕ್ಷೆ

ಜಿಲ್ಲಾ ಪಂಚಾಯಿತಿ-ತಾಲ್ಲೂಕು ಪಂಚಾಯಿತಿ ಚುನಾವಣೆ ವಿಚಾರದಲ್ಲಿ ಇತ್ತೀಚೆಗೆ ನ್ಯಾಯಾಲಯ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಚಾಟಿ ಬೀಸಿರುವುದು ಆಕಾಂಕ್ಷಿಗಳಲ್ಲಿ ಭರವಸೆ ಗರಿಗೆದರುವಂತೆ ಮಾಡಿದೆ. ಕ್ಷೇತ್ರ ಪುನರ್ವಿಂಗಡಣೆ, ಆಕ್ಷೇಪಣೆ, ಅರ್ಜಿ ವಿಚಾರಣೆಯಲ್ಲೇ ವರ್ಷ ಕಳೆಯಿತು. ವರ್ಷಾಂತ್ಯಕ್ಕೆ ಕ್ಷೇತ್ರಗಳು ಅಂತಿಮಗೊಂಡರೂ ಇನ್ನೂ ಮೀಸಲಾತಿ ಘೋಷಣೆಯಾಗಿಲ್ಲ. ಲೋಕಸಭೆ ಚುನಾವಣೆಗೆ ಮುನ್ನವೇ ಚುನಾವಣೆ ನಡೆಯಬಹುದು ಎಂಬುದು ಆಕಾಂಕ್ಷಿಗಳ ನಿರೀಕ್ಷೆ.

ಗಣೇಶೋತ್ಸವ; ರಾಗಿಗುಡ್ಡದಲ್ಲಿ ಗಲಭೆ

ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಈ ವರ್ಷವಾದರೂ ಸಂಪೂರ್ಣ ಶಾಂತಿಯುತವಾಗಿ ಆಚರಿಸಬೇಕೆಂಬ ಪೊಲೀಸ್ ಇಲಾಖೆಯ ಪ್ರಯತ್ನಕ್ಕೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಇಂಬು ನೀಡಲಿಲ್ಲ. ಘರ್ಷಣೆ, ಲಾಠಿ ಚಾರ್ಜ್, ಆರೋಪ–ಪ್ರತ್ಯಾರೋಪ, ರಾಜಕೀಯ ಮೇಲಾಟಗಳಿಗೂ ರಾಗಿಗುಡ್ಡದ ಘಟನೆ ವೇದಿಕೆ ಕಲ್ಪಿಸಿತು. ಟಿಪ್ಪು ಸುಲ್ತಾನ್ ಕಟೌಟ್ಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಯಿತು. ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಸ್ವತಃ ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದರು. ರಾಗಿಗುಡ್ಡ–ಶಾಂತಿನಗರ ಪ್ರದೇಶದಲ್ಲಿ ಎರಡು ವಾರಗಳ ಕಾಲ 144ನೇ ಸೆಕ್ಷನ್ ಜಾರಿಗೊಳಿಸಿ ಅಲ್ಲಿ ಶಾಂತಿ ಮರು ಸ್ಥಾಪನೆಗೆ ಜಿಲ್ಲಾಡಳಿತ ಶ್ರಮಿಸಿತು.

ಮೃತದೇಹ ಕಚ್ಚಿ ಓಡಿದ ನಾಯಿ

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಮೃತದೇಹವನ್ನು ಬೀದಿ ನಾಯಿಯೊಂದು ಕಚ್ಚಿಕೊಂಡು ಹೋಗಿದ್ದಕ್ಕೆ ಇಲ್ಲಿನ ಮೆಗ್ಗಾನ್ ಆಸ್ಪತ್ರೆ ಸಾಕ್ಷಿಯಾಯಿತು. 2023ರ ಮಾ.31ರಂದು ಹೆಣ್ಣು ಶಿಶುವಿನ ಮೃತದೇಹವನ್ನು ಕಚ್ಚಿಕೊಂಡು ನಾಯಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿ ಆತಂಕ ಸೃಷ್ಟಿಸಿತ್ತು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ರೌಡಿಶೀಟರ್ಗಳ ಕಾಲಿಗೆ ಗುಂಡೇಟು

ಅಪರಾಧ ಕೃತ್ಯಗಳಲ್ಲಿ ಪದೇ ಪದೇ ಭಾಗಿಯಾಗುತ್ತಿದ್ದ ಆರು ಮಂದಿ ರೌಡಿಶೀಟರ್ಗಳು ಈ ವರ್ಷ ಪೊಲೀಸರಿಂದ ಗುಂಡೇಟು ತಿಂದಿದ್ದಾರೆ. ಸಾಕ್ಷ್ಯ ಸಂಗ್ರಹ, ಬಂಧನಕ್ಕೆ ತೆರಳಿದ ವೇಳೆ, ಸ್ಥಳ ಪರಿಶೀಲನೆ ವೇಳೆ ಪೊಲೀಸರ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದಾಗ ಪೊಲೀಸರು ಆತ್ಮರಕ್ಷಣೆಗೆ ಗುಂಡು ಹೊಡೆದಿದ್ದಾರೆ ಎನ್ನಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವರ್ಷದ ಆರಂಭದಲ್ಲಿ ರೌಡಿಶೀಟರ್ ಸೈಫುಲ್ಲಾ ಅಲಿಯಾಸ್ ಸೈಫು ಕಾಲಿಗೆ ಜಯನಗರ ಠಾಣೆ ಪೊಲೀಸರು ಆಯನೂರು ಬಳಿ ಗುಂಡು ಹಾರಿಸಿ ಬಂಧಿಸಿದ್ದರು. ರೌಡಿಶೀಟರ್ ಮಂಜುನಾಥ ಅಲಿಯಾಸ್ ಒಲಂಗಾ ಮಂಜನ ಕಾಲಿಗೆ ಈಚೆಗೆ ಜಯನಗರ ಠಾಣೆ ಇನ್ಸ್ಪೆಕ್ಟರ್ ಸಿದ್ದೇಗೌಡ ಗುಂಡು ಹೊಡೆದಿದ್ದರು.

ಮನೆಯಲ್ಲಿ ಸ್ಫೋಟಕ ಪತ್ತೆ

ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ ಅಧಿಕಾರಿಗಳು ಜುಲೈ 27ರಂದು ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸೀನ್ ಸಂಬಂಧಿ ಮನೆಯಲ್ಲಿ ಸ್ಫೋಟಕ ವಶಪಡಿಸಿಕೊಂಡಿದ್ದರು.

ಎಂಜಿನಿಯರ್ ಪತ್ನಿ ಕೊಲೆ

ಶಿವಮೊಗ್ಗದ ವಿಜಯನಗರ ಬಡಾವಣೆಯ ನಿವಾಸಿ, ಹೊಸದುರ್ಗದಲ್ಲಿ ನೀರಾವರಿ ಇಲಾಖೆ ಎಂಜಿನಿಯರ್ ಅವರ ಪತ್ನಿ ಕಮಲಮ್ಮ ಅವರನ್ನು ಜೂನ್ 17ರಂದು ₹35 ಲಕ್ಷ ಲಪಟಾಯಿಸಲು ಮನೆಯ ಕಾರು ಚಾಲಕನೇ ಕೊಲೆ ಮಾಡಿದ್ದ. ಚಾಲಕ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ₹33.74 ಲಕ್ಷ ಮೌಲ್ಯದ ನಗ–ನಾಣ್ಯಗಳನ್ನು ಜಪ್ತಿ ಮಾಡಿದ್ದರು. ಈ ಪ್ರಕರಣ ಶಿವಮೊಗ್ಗ ನಗರವನ್ನು ಬೆಚ್ಚಿ ಬೀಳಿಸಿತ್ತು.

ರೈಲ್ವೆ ನಿಲ್ದಾಣ, ಆತಂಕ ಸೃಷ್ಟಿ

ಶಿವಮೊಗ್ಗ ರೈಲು ನಿಲ್ದಾಣದ ಕಾಂಪೌಂಡ್ ಬಳಿ ನವೆಂಬರ್ 5ರಂದು ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಎರಡು ಬಾಕ್ಸ್ಗಳು ಇಡೀ ನಗರವನ್ನು 24 ಗಂಟೆಗಳ ಕಾಲ ಆತಂಕದ ಹುದುಗಿನಲ್ಲಿಟ್ಟಿದ್ದವು. ಬೆಂಗಳೂರಿನಿಂದ ಬಂದ ಬಾಂಬ್ ಪತ್ತೆದಳ ಪೆಟ್ಟಿಗೆಗಳನ್ನು ತೆಗೆದು ಅದರಲ್ಲಿ ಇಡಲಾಗಿದ್ದ ಅಡುಗೆ ಉಪ್ಪನ್ನು ಹೊರ ತೆಗೆದಾಗ ರಾಜ್ಯವೇ ನಿಟ್ಟುಸಿರುಬಿಟ್ಟಿತ್ತು.

ಈ ವರ್ಷ ಅಗಲಿದ ಗಣ್ಯರು..

ಶಿವಮೊಗ್ಗ ಧರ್ಮಕ್ಷೇತ್ರದ ನಿವೃತ್ತ ಬಿಷಪ್ ಇಗ್ನೀಷಿಯಸ್ ಪೌಲ್ಪಿಂಟೋ (98) ನಗರದ ಆಧ್ಯಾತ್ಮ ಕ್ಷೇತ್ರದ ಕೊಂಡಿ ಆಗಿದ್ದ ವಿದ್ವಾನ್ ಅ.ಪ.ರಾಮಭಟ್ಟ (73) ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ (94) ಜ.8ರಂದು ಬೆಳಗಿನ ಜಾವ ಕುವೆಂಪು ರಸ್ತೆಯಲ್ಲಿರುವ ಮನೆಯಲ್ಲಿ ಉದ್ಯಮಿ ಶರತ್ ಭೂಪಾಳಂ (39) ವಿದ್ಯುತ್ ಅವಘಡಕ್ಕೆ ಸಿಲುಕಿ ನಿಧನರಾದರು.

ರಾಜ್ಯೋತ್ಸವ ಪ್ರಶಸ್ತಿಯ ಸಂಭ್ರಮ

ಕರ್ನಾಟಕ ಹೆಸರು ನಾಮಕರಣಗೊಂಡ ಚಿನ್ನದ ಹಬ್ಬದ ಸಂಭ್ರಮದಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಹಾಗೂ ಸಾಗರ ತಾಲ್ಲೂಕು ಹೆಗ್ಗೋಡಿನ ರಂಗಕರ್ಮಿ ಎ.ಜಿ.ಚಿದಂಬರರಾವ್ ಜಂಬೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದರು. 93ನೇ ವಸಂತದ ಸಂಭ್ರಮದಲ್ಲಿರುವ ಕರ್ನಾಟಕ ಸಂಘಕ್ಕೆ ಇದು ಎರಡನೇ ಬಾರಿ ಒಡಮೂಡಿದ ಗರಿ. ಕಾಗೋಡು ಅವರಿಗೆ ಅರಸು ಪ್ರಶಸ್ತಿ ಗೌರವ.. ಸಮಾಜವಾದಿ ಹೋರಾಟದ ಮೂಸೆಯಲ್ಲಿ ಅರಳಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಈ ವರ್ಷ ದೇವರಾಜ ಅರಸು ಪ್ರಶಸ್ತಿ ನೀಡಿ ಪುರಸ್ಕರಿಸುವ ಮೂಲಕ ಸಕ್ರಿಯ ರಾಜಕಾರಣದಿಂದ ನಿವೃತ್ತರಾದ ಅವರಿಗೆ ಗೌರವದ ವಿದಾಯ ನೀಡಲಾಯಿತು. ಯಡಿಯೂರಪ್ಪಗೆ ಗೌರವ ಡಾಕ್ಟರೇಟ್ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

ಕೊಠಡಿಯೊಳಗೆ ಗಾಂಜಾ ಬೆಳೆ; ಮೂವರ ಬಂಧನ

ಶಿವಮೊಗ್ಗದ ಚನ್ನಗಿರಿ ರಸ್ತೆಯ ಶಿವಗಂಗಾ ಲೇಔಟ್ನಲ್ಲಿ ಮನೆ ಬಾಡಿಗೆ ಪಡೆದಿದ್ದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮನೆಯ ಕೊಠಡಿಯಲ್ಲಿ ಕೃತಕ ವಾತಾವರಣ ಸೃಷ್ಟಿಸಿ ಗಾಂಜಾ ಬೆಳೆದು ಮಾರಾಟ ಮಾಡುವಾಗ ಸಿಕ್ಕಿಬಿದ್ದದ್ದು ಇಡೀ ರಾಜ್ಯದ ಗಮನ ಸೆಳೆದಿತ್ತು. ಶಿವಮೊಗ್ಗದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಈ ವಿದ್ಯಾರ್ಥಿಗಳಲ್ಲಿ ಒಬ್ಬ ಯುವತಿ ಕೂಡ ಇದ್ದಳು. ಆನ್ಲೈನ್ ಮೂಲಕ ಗಾಂಜಾ ಬೀಜ ತರಿಸಿ ಕುಂಡಗಳಲ್ಲಿ ವೈಜ್ಞಾನಿಕವಾಗಿ ಬೆಳೆದು ಒಣಗಿಸಿ ಮಾರಾಟ ಮಾಡುತ್ತಿದ್ದರು. ಈ ಜಾಲವನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬೇಧಿಸಿದ್ದರು.

ಮಧು ಬಂಗಾರಪ್ಪಗೆ ಸಚಿವ ಸ್ಥಾನದ ಶ್ರೇಯ

ಜೆಡಿಎಸ್ ತೊರೆದು ಎರಡು ವರ್ಷಗಳ ಹಿಂದೆಯೇ ಕಾಂಗ್ರೆಸ್ ಸೇರಿದ್ದ ಮಧು ಬಂಗಾರಪ್ಪ ವಿಧಾನಸಭೆ ಚುನಾವಣೆಯಲ್ಲಿ ಸೊರಬದಿಂದ ಸ್ಪರ್ಧಿಸಿ ಭಾರೀ ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಸಚಿವರ ಮಹತ್ವದ ಜವಾಬ್ದಾರಿ ದೊರೆತಿದ್ದು ಜಿಲ್ಲೆಯ ಉಸ್ತುವಾರಿ ಕೂಡ ಹೊಂದಿದ್ದಾರೆ. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿದ್ದರು. ಆನಂತರ ಇದೇ ಮೊದಲ ಬಾರಿಗೆ ಬಂಗಾರಪ್ಪ ಕುಟುಂಬಕ್ಕೆ ಸರ್ಕಾರದಲ್ಲಿ ಮಹತ್ವದ ಸ್ಥಾನ ದೊರೆತಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.