ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳ ಪರಿಶೀಲನೆ ನಂತರ ಬಗರ್‌ಹುಕುಂ ಅರ್ಜಿ ವಿಲೇವಾರಿ- ಶಾಸಕ ಎಚ್.ಹಾಲಪ್ಪ ಹರತಾಳು

Last Updated 15 ಜನವರಿ 2022, 7:56 IST
ಅಕ್ಷರ ಗಾತ್ರ

ಸಾಗರ: ಸ್ಥಳ ಪರಿಶೀಲನೆ ನಡೆಸಿದ ನಂತರವೇ ಬಗರ್‌ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಸಾಗುವಳಿ ಇದ್ದಲ್ಲಿ ಮಾತ್ರ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದ್ದಾರೆ.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ನಿಜಕ್ಕೂ ಕೃಷಿಭೂಮಿಯ ಸಾಗುವಳಿ ಮಾಡದ ಹಾಗೂ ಸ್ಥಳದಲ್ಲಿ ವಾಸವಾಗಿರದ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ಹಕ್ಕುಪತ್ರ ನೀಡುವುದಿಲ್ಲ. ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವವರು ಕೂಡ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಅಂತಹವರ ಅರ್ಜಿಗಳನ್ನು ಮುಲಾಜಿಲ್ಲದೆ ವಜಾ ಮಾಡಲಾಗುವುದು’ ಎಂದರು.

ಬಗರ್‌ಹುಕುಂ ಕಾಯ್ದೆಯಡಿ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ಸ್ಥಳದಿಂದ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಸೊಪ್ಪಿನಬೆಟ್ಟ, ಗೋಮಾಳ, ಕಾನು ಪ್ರದೇಶಕ್ಕೆ ಸಂಬಂಧಪಟ್ಟಂತೆ ಹಕ್ಕುಪತ್ರ ನೀಡಲು ಕಾನೂನಿನ ತೊಡಕು ಇದೆ. ಈ ತೊಡಕನ್ನು ನಿವಾರಿಸುವ ಸಂಬಂಧ ಮಾತುಕತೆ ನಡೆಸಲಾಗಿದೆ. ಕಂದಾಯ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

‘ಬಡವರಿಗೆ ಭೂಮಿಯ ಹಕ್ಕುಪತ್ರ ಕೊಡಿಸುವ ವಿಚಾರದಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಕೆಲಸ ಮಾಡಿದ್ದರೂ ನಾನು ಪ್ರಚಾರ ಪಡೆಯಲು ಮುಂದಾಗಿಲ್ಲ. ಅದರ ಅವಶ್ಯಕತೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಬಗರ್‌ಹುಕುಂ ಸಮಿತಿ ಸದಸ್ಯರಾದ ಆರ್.ಎಸ್. ಗಿರಿ, ರೇವಪ್ಪ ಹೊಸಕೊಪ್ಪ, ಗಂಗಮ್ಮ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಪರಮೇಶ್ವರ್ ಟಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT