ಮಂಗಳವಾರ, ಅಕ್ಟೋಬರ್ 26, 2021
20 °C
ಪೊಟ್ಯಾಶ್‌ ಬಳಕೆಗೆ ರೈತರ ಒಲವು

ಮಲೆನಾಡ ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ: ರಸಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

 ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆಚುಕ್ಕಿ ರೋಗಕ್ಕೆ ರಸಗೊಬ್ಬರ ಬಳಕೆಯೇ ಪರಿಣಾಮಕಾರಿ ಔಷಧ ಎಂದು ವಿಜ್ಞಾನಿಗಳು ಶಿಫಾರಸು ಮಾಡಿದ ಬೆನ್ನಲ್ಲೇ ಈ ಭಾಗದ ರೈತರು ರಸಗೊಬ್ಬರಕ್ಕೆ ಮುಗಿಬಿದ್ದಿದ್ದಾರೆ.

ಮಲೆನಾಡು ಭಾಗದಲ್ಲಿ ಹೆಚ್ಚಿರುವ ಅಡಿಕೆ ಬೆಳೆಗಾರರು ತಮ್ಮ ತೋಟವನ್ನು ಉಳಿಸಿಕೊಳ್ಳಲು ಶಿಲೀಂಧ್ರ ನಾಶಕ ಸಿಂಪಡಣೆ ಮತ್ತು ಪೊಟ್ಯಾಶ್ ಬಳಸುತ್ತಿದ್ದಾರೆ. ಇದರಿಂದ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ.

ಆದರೆ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಕಂಡುಬಂದಿದ್ದು, ಯಾವ ಅಂಗಡಿಯಲ್ಲೂ ಪೊಟ್ಯಾಶ್ ಮಾರಾಟಕ್ಕೆ ಲಭ್ಯವಿಲ್ಲ ಎಂಬುದು ರೈತರ ದೂರು.

ಎಲೆಚುಕ್ಕಿ ರೋಗ ಶೀಲಿಂಧ್ರದಿಂದ ಹರಡುವ ರೋಗವಾಗಿದೆ. ನಿರಂತರ ಮಳೆ, ಹೆಚ್ಚು ತೇವಾಂಶ ಇರುವುದು ರೋಗ ಹರಡಲು ಕಾರಣ. ಇಲ್ಲಿನ ತೋಟಗಳಲ್ಲಿ ಪೊಟ್ಯಾಶ್ ಕೊರತೆ ಇದ್ದು, ಪೊಟ್ಯಾಶ್ ಬಳಕೆಯಿಂದ ರೋಗ ನಿಯಂತ್ರಣ ಮಾಡಬಹುದಾಗಿದೆ ಎಂದು ನವುಲೆಯ ಕೃಷಿ ಸಂಶೋಧಾನಾಲಯ ಹಾಗೂ ಕಾಸರಗೋಡಿನ ಸಿಪಿಸಿಆರ್‌ಐ ತಂಡದ ವಿಜ್ಞಾನಿಗಳು ವರದಿ ನೀಡಿದ್ದಾರೆ. ಇದರಿಂದ ಜಾಗೃತರಾದ ರೈತರು ಪೊಟ್ಯಾಶ್ ಬಳಕೆಯತ್ತ ಮುಖ ಮಾಡಿದ್ದಾರೆ. ಇದರಿಂದ ಪೊಟ್ಯಾಶ್‌ಗೆ ದಿಢೀರ್ ಬೇಡಿಕೆ ಬಂದಿದೆ. ದಿಢೀರ್‌ ಬೇಡಿಕೆಯಿಂದ ರೈತರಿಗೆ ಪೊಟ್ಯಾಶ್ ಗಗನ ಕುಸುಮವಾಗಿದೆ. ಕೃತಕ ಅಭಾವ ಸೃಷ್ಟಿಯ ಆತಂಕ ಮನೆ ಮಾಡಿದೆ.

ಆದರೆ ಅಧಿಕಾರಿಗಳು ಪೊಟ್ಯಾಶ್ ದಾಸ್ತಾನು ಇದೆ ಎನ್ನುತ್ತಾರೆ. 

ಕಾಳಸಂತೆಯಲ್ಲಿ ಮಾರಾಟ: ರಸಗೊಬ್ಬರ ಮಾರಾಟಗಾರರು ಮಾರಾಟದ ನಿರ್ವಹಣೆ ಮಾಡದ ಕಾರಣ ತಂತ್ರಾಂಶದಲ್ಲಿ ಪೊಟ್ಯಾಶ್ ಲಭ್ಯತೆ ಕಂಡುಬರುತ್ತಿದೆ. ಕೃಷಿ ಇಲಾಖೆ ದಾಸ್ತಾನು ವಿವರವನ್ನು ಭೌತಿಕವಾಗಿ ಪ್ರದರ್ಶಿಸಬೇಕು. ಬೇರೆ ಬೇರೆ ಕಾರಣಗಳಿಂದಲೂ ಪೊಟ್ಯಾಶ್ ಸಮರ್ಪಕವಾಗಿ ಪೂರೈಕೆಯಾಗಿಲ್ಲ. ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.

ಜಿಲ್ಲೆಯ ಲಭ್ಯತೆ ಆಧಾರದಲ್ಲಿ ಆಗಸ್ಟ್ 30ರೊಳಗೆ ಜಿಲ್ಲೆಗೆ ಬರಬೇಕಿದ್ದ 1002 ಟನ್ ಪೊಟ್ಯಾಶ್ ತಾಂತ್ರಿಕ ಕಾರಣಗಳಿಂದ ಸರಬರಾಜು ಆಗದೇ ಇರುವುದು ಕೊರತೆಗೆ ಮುಖ್ಯಕಾರಣ ಎನ್ನಲಾಗುತ್ತಿದೆ. ಈ ಪ್ರಮಾಣದ ಪೊಟ್ಯಾಶ್ ಸರಬರಾಜು ಆಗಿದ್ದರೆ ಅಭಾವ ಸೃಷ್ಟಿ ಆಗುತ್ತಿರಲಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ರಸಗೊಬ್ಬರ ವಿತರಣೆ ಸಂಬಂಧ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ
ನಿರ್ವಹಿಸುತ್ತಿರುವ ಎಂಎಫ್ಎಂಎಸ್ ತಂತ್ರಾಶದಲ್ಲಿ ಪ್ರತಿದಿನ ಮಾರಾಟ ಮತ್ತು ದಾಸ್ತಾನು ಅಪ್‌ಲೋಡ್ ಮಾಡಲಾಗುತ್ತದೆ. ಈ ಆಧಾರದಲ್ಲಿ ರಸಗೊಬ್ಬರ ಹಂಚಿಕೆ ಕೂಡ ನಡೆಯುತ್ತದೆ. ವಾರ್ಷಿಕ ಸರಾಸರಿಗೆ ಹೋಲಿಸಿದರೆ ಶೇ 51ರಷ್ಟು ಪೊಟ್ಯಾಶ್ ಪೊರೈಕೆ ಕಡಿಮೆ ಆಗಿರುವುದು ಕಾರಣ ಎನ್ನಲಾಗುತ್ತಿದೆ.

ನಕಲಿ ಔಷಧದ ಹಾವಳಿ: ವಿಜ್ಞಾನಿಗಳು ರೋಗ ನಿಯಂತ್ರಣಕ್ಕೆ ಶಿಲೀಂಧ್ರ ನಾಶಕವಾದ ಮ್ಯಾಂಕೋಜೆಬ್, ಹೆಕ್ಸಕೋನಜೋಲ್, ಸಾಫ್ ಸಿಂಪಡಣೆ ಪರಿಣಾಮಕಾರಿ ಎಂದಿದ್ದಾರೆ. ಈ ವರದಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಗೊಬ್ಬರ ಮತ್ತು ಔಷಧ ಮಾರಾಟ ಕೇಂದ್ರಗಳು ಭಾರಿ ಬೆಲೆಯ ಔಷಧಗಳನ್ನು ಸೂಚಿಸುತ್ತಿವೆ. ಅಲ್ಲದೆ ಕೆಲ ಕಂಪನಿಗಳವರು ಹಳ್ಳಿ ಹಳ್ಳಿಗೆ ಧಾವಿಸುತ್ತಿದ್ದು, ಬಗೆ ಬಗೆಯ ಆಮಿಷವೊಡ್ಡುತ್ತಿದ್ದಾರೆ.

ರೈತರಿಗೆ ವಿವಿಧ ರೀತಿಯಲ್ಲಿ ಮೋಸ ಮಾಡುತ್ತಿರುವ ಕಂಪನಿಗಳ ವಿರುದ್ಧವಾಗಿ ಇಲಾಖೆ ಕ್ರಮ ಜರುಗಿಸಲು ಮುಂದಾಗಬೇಕು. ನಕಲಿ ಔಷಧ ಮತ್ತು ಗೊಬ್ಬರಗಳ ಮಾರಾಟದ ಮೇಲೆ ನಿಯಂತ್ರಣ ಹೇರಬೇಕು ಎಂದು ರೈತ ಸಂಘದ ಅಧ್ಯಕ್ಷ ರವೀಂದ್ರ ಒತ್ತಾಯಿಸುತ್ತಾರೆ.

***

ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ವಿಜ್ಞಾನಿಗಳು ಪೊಟ್ಯಾಶ್ ಬಳಕೆಗೆ ಸೂಚಿಸಿರುವ ಕಾರಣ ರೈತರು ಸಹಜವಾಗಿ ರಸಗೊಬ್ಬರಕ್ಕೆ ಮುಗಿಬಿದ್ದಿದ್ದಾರೆ. ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಸ್ವಲ್ಪ ಮಟ್ಟಿನ ಕೊರತೆ ಇದೆ. ಉಳಿದ ತಾಲ್ಲೂಕಿನಲ್ಲಿ ದಾಸ್ತಾನಿದೆ.

ಡಾ. ಎಂ. ಕಿರಣಕುಮಾರ್, ಜಂಟಿ ಕೃಷಿ ನಿರ್ದೇಶಕ

ತಂತ್ರಾಂಶದಲ್ಲಿ ಲಭ್ಯತೆ ಇದೆ. ಆದರೆ ಭೌತಿಕವಾಗಿ ಯಾವ ಮಾರಾಟ ಕೇಂದ್ರದಲ್ಲೂ ಪೊಟ್ಯಾಶ್ ಇಲ್ಲವಾಗಿದೆ.

ಪುರುಷೋತ್ತಮ ಬೆಳ್ಳಕ್ಕ, ಕೃಷಿಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು