ಆನಂದಪುರ: ನಾಲ್ಕೈದು ದಿನಗಳಿಂದ ಬಿಡುವು ಕೊಟ್ಟ ಮಳೆ, ಸೋಮವಾರ ಸುರಿದ ಮಘೆ ಮಳೆಯ ಅಬ್ಬರದಿಂದ ಭತ್ತದ ಗದ್ದೆಗಳು, ಅಡಿಕೆ ತೋಟಗಳು ಕೊಚ್ಚಿಕೊಂಡು ಹೋಗಿವೆ.
ಆನಂದಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ 1 ಗಂಟೆಗಳ ಕಾಲ ಬಿರುಸು ಮಳೆ ಸುರಿಯಿತು.
ಮುಂಬಾಳು ಗ್ರಾಮ ಒಂದರಲ್ಲೇ ಸುಮಾರು ನೂರಾರು ಎಕರೆ ಜಲಾವೃತಗೊಂಡಿದೆ. ಭಾರಿ ಮಳೆಯಿಂದಾಗಿ ಈಚೆಗೆ ನಾಟಿ ಮಾಡಿದ ಭತ್ತದ ಗದ್ದೆಗಳು ಸಹ ಕೊಚ್ಚಿಕೊಂಡು ಹೋಗಿವೆ. ಜೊತೆಗೆ ಅಡಿಕೆ ತೋಟವೂ ಮುಳುಗಿದ್ದು, ನೀರಿನ ಅಬ್ಬರಕ್ಕೆ ಸಾಕಷ್ಟು ಅಡಿಕೆ ಸಸಿಗಳು ತೇಲಿಕೊಂಡು ಹೋಗಿವೆ.
ಗುಡುಗು, ಮಿಂಚು ಸಹಿತ ಅಬ್ಬರದ ಮಳೆಯಿಂದಾಗಿ ಕೇವಲ ಒಂದು ಗಂಟೆಯಲ್ಲಿ ಮುಂಬಾಳು ಗ್ರಾಮದ ನೂರಾರು ಎಕರೆ ಜಮೀನು ಜಲಾವೃತವಾಗಿ ಕೊಚ್ಚಿಕೊಂಡು ಹೋಗಿದೆ. ಒಮ್ಮೆಲೆ ರಭಸದ ನೀರು ಜಮೀನಿನ ಮೇಲೆ ಉಕ್ಕಿರುವುದರಿಂದ ಮಣ್ಣು, ಕಲ್ಲುಗಳು ಜಮೀನಿನಲ್ಲಿ ತುಂಬಿದ್ದು, ಮರು ನಾಟಿಯೂ ಅಸಾಧ್ಯವಾಗಿದೆ.
ಮಳೆ ಹೆಚ್ಚಾಗಿ ಹಳ್ಳದ ದಂಡೆಗಳು ಸಹ ಒಡೆದಿದ್ದು, ಮುಂಬಾಳು, ಸಣ್ಣಮನೆಸರ ಗ್ರಾಮದ ಸಂಪರ್ಕ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದೇ ಮೊದಲ ಬಾರಿ ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ.
‘ಈ ವರ್ಷದ ಮುಂಗಾರು ವೇಳೆ ಇಂತಹ ಅಬ್ಬರದ ಮಳೆಯಾಗಿಲ್ಲ. ಒಂದೇ ಗಂಟೆ ಸುರಿದ ಬಿರುಸಾದ ಮಳೆಯಿಂದಾಗಿ ನಮ್ಮ ಅಡಿಕೆ ತೋಟ ಹಾಗೂ ನಾಟಿ ಮಾಡಿದ ಭತ್ತದ ಗದ್ದೆಗಳು ಹಾನಿಗೀಡಾಗಿವೆ’ ಎಂದು ರೈತ ಹೊಳಿಯಪ್ಪ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ 69ರ ಮೇಲೆ ಮುಂಬಾಳು ಗ್ರಾಮದ ಸಮೀಪ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ರಸ್ತೆ ಕಾಣದೆ ಪರದಾಡುವಂತಾಯಿತು.
ಆನಂದಪುರ ಸಮೀಪದ ಮುಂಬಾಳು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ನಾಟಿ ಮಾಡಿದ ಗದ್ದೆ ಜಲಾವ್ರತಗೊಂಡಿದೆ.