ಭಾನುವಾರ, ಸೆಪ್ಟೆಂಬರ್ 25, 2022
20 °C

ಪಿಕೆಟಿಂಗ್ ಮಾಡಿ ಬಂಧಿತರಾದೆವು: ಹೋರಾಟವನ್ನು ಮೆಲುಕು ಹಾಕಿದ ಸ್ವಾತಂತ್ರ್ಯ ಯೋಧ

ಕೆ.ಎನ್.ಶ್ರೀಹರ್ಷ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ‘ಇಡೀ ರಾಷ್ಟ್ರ ಸ್ವರಾಜ್ಯ ಹೋರಾಟದಲ್ಲಿ ಮುಳುಗಿದ್ದ ವೇಳೆ ನಾವು ನಮ್ಮ ನಾಯಕರ ಕರೆಯಂತೆ ಈಗಿನ ಕೃಷಿ ಇಲಾಖೆ ಹಿಂಭಾಗದ ಅಂದಿನ ಕೋರ್ಟ್ ಹತ್ತಿರ ತೆರಳಿ ಕಕ್ಷಿದಾರರನ್ನು ತಡೆದು ಅವರು ಕೋರ್ಟ್‌ನ ಒಳಗೆ ಪ್ರವೇಶಿಸದಂತೆ ಸುಮಾರು ಒಂದು ಗಂಟೆ ಕಾಲ ಪಿಕೆಟಿಂಗ್ ಮಾಡಿ ಬಂಧಿತರಾದೆವು’ ಎಂದು ತಮ್ಮ ಹೋರಾಟದ ದಿನಗಳನ್ನು ಮೆಲುಕು ಹಾಕಿದರು ಸ್ವಾತಂತ್ರ್ಯ ಹೋರಾಟಗಾರ 93 ವಯಸ್ಸಿನ ಎಂ.ನಾಗಪ್ಪ.

ತಮ್ಮ 18ನೇ ವಯಸ್ಸಿನಲ್ಲಿ ಮೂರು ತಿಂಗಳು ಜೈಲು ವಾಸ ಅನುಭವಿಸಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಶಿವಮೊಗ್ಗ ಮಂಡಗದ್ದೆ ಬಳಿಯ ಮಿಲ್ಟ್ರಿಕ್ಯಾಂಪ್ ಜೈಲಿನಿಂದ ಬಿಡುಗಡೆ ಹೊಂದಿದ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಹೋರಾಟದ ದಿನಗಳನ್ನು ಹಂಚಿಕೊಳ್ಳುವಾಗ ಜತೆಗಾರರನ್ನು ನೆನೆದು ಮೌನವಾದರು.

‘ಆಗ ನನ್ನೊಂದಿಗೆ ರಾಧಾರತ್ನಮ್ಮ, ಭೀಮಶೆಟ್ರು, ನರಸಿಂಹಮೂರ್ತಿ ಸೇರಿ ಇನ್ನಿಬ್ಬರು ಇದ್ದರು. ಅವರ ಹೆಸರು ಮರೆತಿದ್ದೇನೆ. ಅವರು ನಿಧನರಾಗಿದ್ದಾರೆ. ಈಗ ತಾಲ್ಲೂಕಿನಲ್ಲಿ ಇರುವ ಏಕೈಕ ಸ್ವತಂತ್ರ್ಯ ಹೋರಾಟಗಾರ ಎಂದು ತಹಶೀಲ್ದಾರ್ ನನ್ನನ್ನು ಗೌರವಿಸಿ ಧ್ವಜ ನೀಡಿದ್ದಾರೆ. ಇದು ಹೆಮ್ಮೆ ಎನಿಸಿದೆ’ ಎಂದು ಹೇಳುವಾಗ ಅವರ ಕಣ್ಣಾಲಿಗಳಲ್ಲಿ ನೀರು ತೇಲಿತು.

‘ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅತಿ ಉತ್ಸಾಹ ತಂದಿದೆ. ಧ್ವಜ ಹಾರಾಟ ಎಲ್ಲೆಡೆ ನಡೆಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು’ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

ಹೋರಾಟ ನಿರಂತರ: ‘ಸ್ವಾತಂತ್ರ್ಯ ಸಿಕ್ಕ ನಂತರ ನಮ್ಮ ಹಕ್ಕಿಗಾಗಿ ನಿರಂತರ ಹೋರಾಟ ಮಾಡಿದರೂ ಒಂದು ನಿವೇಶನ ಸಿಗಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ₹75 ಮಾಸಿಕ ನೆರವು ಕೊಡುತ್ತಿದ್ದ ಕಾಲದಿಂದ ಈಗ ₹10,000 ಪಡೆಯುವ ತನಕ ನಮ್ಮ ಹೋರಾಟ ಮುನ್ನಡೆದಿದೆ’ ಎಂದು ಸ್ವಾತಂತ್ರ್ಯಾನಂತರದ ತಮ್ಮ ಬದುಕಿನ ಹೋರಾಟವನ್ನು ತೆರೆದಿಟ್ಟರು.

‘ಕಾಗೋಡು ತಿಮ್ಮಪ್ಪ, ಎಸ್.ಎಂ.ಕೃಷ್ಣ ಅವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಲಿಲ್ಲ. ಯಡಿಯೂರಪ್ಪ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿ ಮಾಸಿಕ ಹಣವನ್ನು ₹10,000ಕ್ಕೆ ಹೆಚ್ಚಿಸಿದರು. ನಿವೇಶನ ಹೋರಾಟ ಕನಸಾಗಿಯೇ ಉಳಿಯಿತು’ ಎಂದು ನೆನೆಯುತ್ತಾರೆ.

‘ಈಗ ಯುವಕರಲ್ಲಿ ದೇಶಾಭಿಮಾನ, ಹೋರಾಟ ಕಡಿಮೆಯಾಗಿದೆ.ಇದು ಬದಲಾಗಿ ನಾವು ಹೋರಾಟ ಮಾಡುತ್ತಿದ್ದ ರೀತಿಯಲ್ಲಿ ಇಂದಿನ ಯುವಕರು ಸ್ವಾಭಿಮಾನದ ಬದುಕು ನಡೆಸಬೇಕು’ ಎಂಬುದೇ 75ರ ಸಂಭ್ರಮದ ಉದ್ದೇಶವಾಗಲಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು