ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಿಜೆಪಿ ಹಠಾವೋ, ತಾಂಡಾ ಬಚಾವೋ’ ಆಂದೋಲನ 11ಕ್ಕೆ

ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಆರ್. ಗಿರೀಶ್
Last Updated 6 ಏಪ್ರಿಲ್ 2023, 6:34 IST
ಅಕ್ಷರ ಗಾತ್ರ

ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣ ಕುರಿತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಹಿಂಪಡೆಯದಿದ್ದರೆ ಏಪ್ರಿಲ್‌ 11ರಂದು ಬಿಜೆಪಿ ಸರ್ಕಾರದ ವಿರುದ್ಧ ‘ಬಿಜೆಪಿ ಹಠಾವೋ, ತಾಂಡಾ ಬಚಾವೋ’ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಆರ್. ಗಿರೀಶ್ ಹೇಳಿದರು.

‘ಅವೈಜ್ಞಾನಿಕವಾಗಿ ನ್ಯಾ. ಸದಾಶಿವ ಆಯೋಗದ ವರದಿ ಸಿದ್ಧಪಡಿಸಲಾಗಿದೆ. ಚುನಾವಣಾ ಸಮಯದಲ್ಲಿ ಸಮುದಾಯವನ್ನು ಒಡೆದು ಆಳುವ ದೃಷ್ಟಿಯಿಂದ ಕೇಂದ್ರಕ್ಕೆ ವರದಿ ಶಿಫಾರಸು ಮಾಡಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಏ.10ರೊಳಗಾಗಿ ವರದಿ ಹಿಂಪಡೆಯಬೇಕು. ಅದನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು. ಇಲ್ಲದಿದ್ದರೆ, ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯದಿಂದ ರಾಜ್ಯದ ಪ್ರತಿ ತಾಂಡಾದಲ್ಲಿಯೂ ಸರ್ಕಾರದ ವಿರುದ್ಧ ಅಂದೋಲನ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾರ್ಚ್ 27ರಂದು ನಡೆದ ಶಿಕಾರಿಪುರದ ಗಲಭೆಗೂ, ಬಂಜಾರ ಸಮುದಾಯಕ್ಕೂ ಸಂಬಂಧವಿಲ್ಲ ಎಂದ ಅವರು, ‘ಮೀಸಲಾತಿ ವಿಷಯವಾಗಿ, ಸಮುದಾಯದ ಮುಖಂಡರು ಶಾಂತ ರೀತಿಯಲ್ಲಿಯೇ ಪ್ರತಿಭಟಿಸಿದ್ದರು. ಬಿಜೆಪಿಯವರೇ ಈ ಗಲಭೆಗೆ ಪ್ರತ್ಯಕ್ಷ ರೂವಾರಿಗಳು. ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಿದವರು ಸಮುದಾಯದ ಹೋರಾಟಗಾರರಲ್ಲ. ಆದರೆ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಬಂಧಿಸಿದ್ದಾರೆ’ ಎಂದು ಆರೋಪಿಸಿದರು.

ಗಲಭೆಯಲ್ಲಿ ಸಮುದಾಯದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗಲಭೆಯನ್ನು ಡ್ರೋಣ್ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅದನ್ನು ಪರಿಶೀಲಿಸಿ ಬಂಧಿಸಲು ಮುಂದಾಗಬೇಕಿತ್ತು ಎಂದರು.

ಶಿಕಾರಿಪುರ ಪ್ರತಿಭಟನೆಯಲ್ಲಿ ಅಮಾಯಕರ ವಿರುದ್ಧ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು. ಸದಾಶಿವ ಆಯೋಗದ ವರದಿಯನ್ನು ಶಿಫಾರಸು ಮಾಡಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ರವಿ ಯು.ಸಿ., ಪ್ರಮುಖರಾದ ಜಯಾನಾಯ್ಕ್, ಉಮಾ ಮಹೇಶ್ವರ ನಾಯ್ಕ್, ಚಿತ್ರಪ್ಪ, ಉಷಾ ನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT