ವಿಮಾನ ನಿಲ್ದಾಣಕ್ಕೆ ₹6.5 ಕೋಟಿ ಬಿಡುಗಡೆ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಉಪಕರಣಗಳ ಅಳವಡಿಕೆಗೆ ಅಗತ್ಯವಿರುವ ₹6.5 ಕೋಟಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಪ್ರಸನ್ನಕುಮಾರ್ ಹೇಳಿದರು. ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ರಾಜ್ಯ ಸರ್ಕಾರಕ್ಕೆ ವಹಿಸಿ ತಪ್ಪು ಮಾಡಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅರ್ಥವಿಲ್ಲದ ಮಾತು ಆಡಿದ್ದಾರೆ. ಅವರಿಗೆ ಗೊತ್ತಿರಲಿ. ವಿಮಾನ ನಿಲ್ದಾಣ ರಾಜ್ಯ ಸರ್ಕಾರದ ಹಣದಲ್ಲಿ ಕಟ್ಟಲಾಗಿದೆ ಹೊರತು ಅವರ ಮನೆಯಿಂದ ದುಡ್ಡು ತಂದು ಕಟ್ಟಿಲ್ಲ. ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡದೆ ಅವರೇನು ತಮ್ಮ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದಾರಾ ಎಂದು ಟೀಕಿಸಿದರು. ಡಿಸಿಎಂ ಆಗಿದ್ದಾಗ ರಾಯಣ್ಣ ಬ್ರಿಗೇಡ್ ಮೂಲಕ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಡಿಸುವುದಾಗಿ ಓಡಾಡಿ ಏನೂ ಮಾಡದ ಡಿಸಿಎಂ ಕೆ.ಎಸ್.ಈಶ್ವರಪ್ಪ ಜಾತಿ ಗಣತಿ ಹಿಂದೂ ಸಮಾಜ ಒಡೆಯುವ ಕೆಲಸ ಎಂದು ಅರ್ಥವಿಲ್ಲದ ಮಾತನಾಡುತ್ತಿದ್ದಾರೆ ಎಂದು ಪ್ರಸನ್ನಕುಮಾರ್ ಛೇಡಿಸಿದರು. ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದಾಗ ಈಶ್ವರಪ್ಪನವರದ್ದು ಅಡ್ಡಮಾತು ಇದ್ದೇ ಇರುತ್ತದೆ. ಸಿದ್ಧರಾಮಯ್ಯ ಅವರಿಗೆ ಬೈದರೆ ಮಾತ್ರ ರಾಜಕೀಯದಲ್ಲಿ ಚಾಲ್ತಿಯಲ್ಲಿರಬಹುದು ಅಂದು ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.