ಶನಿವಾರ, ಮೇ 28, 2022
28 °C
ಶಾಲೆ ಬಿಟ್ಟಿರುವ ಮಕ್ಕಳನ್ನು ಕರೆತರಲು ಕಾರ್ಯಾಚರಣೆ

ಆನವಟ್ಟಿ: ಕೊರೊನಾ ರಜೆಯಿಂದ ಶಾಲೆಯನ್ನೇ ಮರೆತ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ಕೊರೊನಾ ಹರಡದಂತೆ ತಡೆಯುವ ಉದ್ದೇಶದಿಂದ ಸರ್ಕಾರವು ಶಾಲೆಗೆ ರಜೆ ನೀಡಿದ್ದರಿಂದ ಸಾಕಷ್ಟು ಮಕ್ಕಳು ಶಾಲೆಗೆ ಹೋಗುವುದನ್ನೇ ಮರೆತುಬಿಟ್ಟಿದ್ದಾರೆ.

ಕೂಲಿ ಕಾರ್ಮಿಕರ, ರೈತರ, ಬಡವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ಬಿಟ್ಟಿದ್ದಾರೆ. ಇವರಲ್ಲಿ ಕೊರೊನಾದಿಂದ ತಂದೆ-ತಾಯಿ ಹಾಗೂ ಪೋಷಕರನ್ನು ಕಳೆದುಕೊಂಡ ಮಕ್ಕಳೂ ಇದ್ದಾರೆ. ಮನೆಯ ಆರ್ಥಿಕ ಸಮಸ್ಯೆಯ ಕಾರಣ ಕೆಲ ಮಕ್ಕಳು ದುಡಿಮೆಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಪೋಷಕರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಇಂತಹ ಹಠಮಾರಿತನ ಬೆಳೆಸಿಕೊಂಡಿರುವ ಮಕ್ಕಳ ಮನವೊಲಿಸುವ ಪ್ರಯತ್ನವನ್ನು ಶಿಕ್ಷಣಾಧಿಕಾರಿ ಮಾಡಿದ್ದು, ಶಾಲೆ ಬಿಟ್ಟ ಮಕ್ಕಳು ಇದೀಗ ಶಾಲೆಯತ್ತ ಮುಖ ಮಾಡುತ್ತಿದ್ದಾರೆ.

ಶಾಲೆ ಪ್ರಾರಂಭವಾದ ದಿನದಿಂದ ಶಾಲೆಗೆ ಬಾರದ ಮಕ್ಕಳ ಪಟ್ಟಿ ಸಿದ್ಧ ಮಾಡಿಕೊಂಡ ಕ್ಷೇತ್ರ ಸಮನ್ವಯಾಧಿಕಾರಿ ಎಚ್. ಆಂಜನೇಯ, ಆನವಟ್ಟಿ ಸಿಆರ್‌ಪಿ ರಾಜು ಗಂಜೇರ್, ಸಮನವಳ್ಳಿ ಸಿಆರ್‌ಪಿ ವೇಂಕಟೇಶ ನಾಯ್ಕ, ಹಂಚಿ ಸಿಆರ್‌ಪಿ ಮೋಹನ, ಉರ್ದು ಶಾಲೆಗಳ ಸಿಆರ್‌ಪಿ ಅಬ್ಬು ಸೈಯದ್ ತಂಡ ಕಾರ್ಯಾಚರಣೆ ನಡೆಸಿದೆ. ತಾಲ್ಲೂಕಿನಲ್ಲಿ ಶಾಲೆಬಿಟ್ಟ ಮಕ್ಕಳ ಪೈಕಿ ಆನವಟ್ಟಿ, ಜಡೆ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, 62 ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

‘ನನ್ನ ಮಗ ದಾದಾಪೀರ್ 8ನೇ ತರಗತಿಯಲ್ಲಿರುವಾಗ ಶಾಲೆಗೆ ಸರಿಯಾಗಿ ಹೋಗುತ್ತಿದ್ದ. ಕೊರೊನಾ ಕಾರಣ ಎರಡು ವರ್ಷ ಮನೆಯಲ್ಲೇ ಇದ್ದಿದ್ದರಿಂದ ಈಗೆ ಶಾಲೆಗೆ ಹೋಗಲು ಮನಸ್ಸು ಮಾಡುತ್ತಿಲ್ಲ. ನಾವು ಸಾಕಷ್ಟು ಬುದ್ಧಿ ಹೇಳಿದರೂ ಕೇಳುತ್ತಿಲ್ಲ. ದೂರದ ಸಂಬಂಧಿ ಮನೆಗೆ ಹೋಗಿದ್ದಾನೆ. ಅಧಿಕಾರಿಗಳು ಮಗನನ್ನು ಕರೆಯಿಸಿ ಮಾತನಾಡುವ ಭರವಸೆ ನೀಡಿದ್ದಾರೆ’ ಎಂದು ಪೋಷಕರಾದ ಜಾವೀದ್ ಹಾಗೂ ಪೇರುನ್ನೀಸಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ತಂದೆ ಮಾಲತೇಶ ಅವರನ್ನು ಕಳೆದುಕೊಂಡಿರುವ ಬಾಲಕ ಮದನ್‌ಕುಮಾರ ಮನೆಯಲ್ಲಿ ಅಜ್ಜಿಯೊಂದಿಗೆ ಇದ್ದ. ಮನೆಯ ಆರ್ಥಿಕ ಸ್ಥಿತಿಯ ಕಾರಣ ಹಾಲು ಮಾರಾಟದ ಜೊತೆಗೆ ಕೆಲವು ಅಂಗಡಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ಶಾಲೆ ಹೋಗುತ್ತಿಲ್ಲ. ಅಜ್ಜಿಗೆ ವಯಸ್ಸಾಗಿದ್ದು, ಅವರ ಮಾತನ್ನೂ ಕೇಳುತ್ತಿರಲಿಲ್ಲ. ಅಧಿಕಾರಿಗಳ ತಂಡ ಬಾಲಕನ ಮನೆಗೆ ಭೇಟಿ ನೀಡಿ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

‘15 ವರ್ಷ ಮೇಲಿನ ಇನ್ನೂ 8 ಮಕ್ಕಳನ್ನು ಶಾಲೆಗೆ ಕರೆ ತರುವುದು ಬಾಕಿ ಇದೆ. ಅವರು ಬೇರೆ ಕಡೆಗಳಲ್ಲಿ ಕೆಲಸಕ್ಕೆ ತೆರಳಿರುವ ಕಾರಣ ಸಂಪರ್ಕಿಸಲು ಸಾಧ್ಯವಾಗಿಲ್ಲ. ಪೋಷಕರಿಗೆ ಅವರ ಭವಿಷ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೆಲ ಪೋಷಕರು ಮಕ್ಕಳನ್ನು ವಾಪಸ್‌ ಕರೆಯಿಸುವ ಭರವಸೆ ನೀಡಿದ್ದಾರೆ. ಇನ್ನೂ ಹೆಚ್ಚಿನ ಪ್ರಯತ್ನ ನಡೆಸಿ, ಶಾಲೆ ಬಿಟ್ಟ ಮಕ್ಕಳನ್ನು ವಾಪಸ್‌ ಕರೆತರುವ ಮೂಲಕ ಶೇ 100 ಹಾಜರಾತಿ ಸಾಧಿಸುವ ಗುರಿ ಹೊಂದಲಾಗಿದೆ’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಚ್. ಆಂಜನೇಯ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು