ಭಾನುವಾರ, ಆಗಸ್ಟ್ 1, 2021
27 °C
ಕೋವಿಡ್‌ ರೋಗಿಯ ಅಂತ್ಯಕ್ರಿಯೆ ಅವಾಂತರ

ಶಿವಮೊಗ್ಗ: ಕೋವಿಡ್‌ ರೋಗಿಯ ಪಾರ್ಥಿವ ಶರೀರ ಪೂರ್ತಿ ದಹಿಸದೇ ಮರಳಿದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Covid19

ಶಿವಮೊಗ್ಗ: ಕೋವಿಡ್‌ನಿಂದ ಮೃತಪಟ್ಟಿದ್ದ 62 ವರ್ಷದ ಕಾಯಿ ವ್ಯಾಪಾರಿಯ ಪಾರ್ಥಿವ ಶರೀರವನ್ನು ಇಲ್ಲಿನ ಗಾಂಧಿಬಜಾರ್ ಕಸ್ತೂರ ಬಾ ರಸ್ತೆಯಲ್ಲಿನ ಚಿತಾಗಾರದಲ್ಲಿಟ್ಟು, ದೇಹ ದಹನಗೊಳ್ಳುವ ಮೊದಲೇ ಸಿಬ್ಬಂದಿ ತೆರಳಿರುವುದಕ್ಕೆ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಮೆಗ್ಗಾನ್ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಸಂಜೆ ಮೃತಪಟ್ಟ ವ್ಯಾಪಾರಿಯ ಶವವನ್ನು ರಾತ್ರಿ 8ಕ್ಕೆ ಚಿತಾಗಾರಕ್ಕೆ ತಂದ ಪಾಲಿಕೆ ಸಿಬ್ಬಂದಿ, ಟ್ರೇ ನಂ 6ರಲ್ಲಿ ಹಾಕಿ ಕಟ್ಟಿಗೆ ಜೋಡಿಸಿಟ್ಟು ಮರಳಿದ್ದಾರೆ. ಸ್ಥಳದಲ್ಲಿ ಭಾರಿ ಸಂಖ್ಯೆಯ ನಾಯಿಗಳು ಜಮಾಯಿಸಿದ್ದನ್ನು ಗಮನಿಸಿದ ಅಲ್ಲಿನ ಕಾಲವಲುಗಾರ್ತಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪಾಲಿಕೆ ವಿರೋಧ ಪಕ್ಷದ ಸದಸ್ಯರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಬೆಳಗಾಗುವ ಮೊದಲೇ ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು, ಪೊಲೀಸರು ಸನ್ನಿವೇಶ ಗಮನಿಸಿದ ತಕ್ಷಣ ಶವ ದಹಿಸಲು ವ್ಯವಸ್ಥೆ ಮಾಡಿದ್ದಾರೆ.

ಚಿತಾಗಾರದಲ್ಲೇ ಪಿಪಿಇ ಕಿಟ್‌: ದಹನ ಕಾರ್ಯಕ್ಕೆ ಬಂದಿದ್ದ ಪಾಲಿಕೆ ಸಿಬ್ಬಂದಿ, ಸ್ವಯಂ ಸೇವಕರು ತಾವು ಧರಿಸಿದ್ದ ಪಿಪಿಇ ಕಿಟ್‌ಗಳನ್ನು ಅಲ್ಲೇ ಎಸೆದು ಹೋಗಿದ್ದಾರೆ. ಅವುಗಳನ್ನು ನಾಯಿಗಳು ಎಳೆದಾಡಿವೆ. 

ಲಘು ಲಾಠಿ ಪ್ರಹಾರ: ಚಿತಾಗಾರದ ಪಕ್ಕದಲ್ಲೇ ಇರುವ ರಾಜೀವ್‌ಗಾಂಧಿ ಬಡಾವಣೆಯ ನಾಗರಿಕರು ಕೋವಿಡ್‌ ರೋಗಿಗಳ ದಹನಕ್ಕೆ ಇಲ್ಲಿ ಅವಕಾಶ ನೀಡಬಾರದು ಎಂದು ಪಾರ್ಥಿವ ಶರೀರ ಸಾಗಿಸಲು ರಾತ್ರಿ ಅಡ್ಡಿ ಪಡಿಸಿದ್ದರು. ಆಗ ಪೊಲೀಸರು ಲಘು ಲಾಠ ಪ್ರಹಾರ ನಡೆಸಿ, ಗುಂಪು ಚದುರಿಸಿದ್ದರು.

‘ಕೋವಿಡ್‌ ರೋಗಿಗಳ ಅಂತ್ಯ ಸಂಸ್ಕಾರದಲ್ಲಿ ನಿರ್ಲಕ್ಷ್ಯ ತೋರುವುದು ಅಕ್ಷಮ್ಯ. ಸ್ಮಶಾನಕ್ಕೆ ಮೃತದೇಹ ತರುವ ಮೊದಲೇ ಬೇಕಾದ ಸಿದ್ಧತೆ ಮಾಡಿಕೊಂಡಿರಬೇಕು. ಅರ್ಧ ಗಂಟೆ ಮೊದಲು ಸ್ಥಳೀಯರಿಗೂ ವಿಷಯ ತಿಳಿಸಬೇಕು. ಮನೆಯಿಂದ ಹೊರಗೆ ಬಾರದಂತೆ ವಿನಂತಿಸಬೇಕು. ಬಳಸಿದ ಪಿಪಿಇ ಕಿಟ್‌ಗಳನ್ನು ಮೃತ ವ್ಯಕ್ತಿಯ ಚಿತೆಯ ಜತೆಗೇ ಸುಡಬೇಕು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೀಶ್ ಆಗ್ರಹಿಸಿದರು.

ಶವ ಸಂಸ್ಕಾರಕ್ಕೆ 50 ಸ್ವಯಂ ಸೇವಕರು

ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ನೆರವೇರಿಸಲು 50ಕ್ಕೂ ಹೆಚ್ಚು ಮುಸ್ಲಿಂ ಯುವಕರು ಮುಂದೆ ಬಂದಿದ್ದಾರೆ. ಅವರ ಸೇವೆಯನ್ನು ಪಾಲಿಕೆ ಬಳಸಿಕೊಳ್ಳುತ್ತಿದೆ. 

ಈ ಸ್ವಯಂಸೇವಕರು ಪೀಸ್‌ ಆರ್ಗನೈಜೇಶನ್‌, ಪ್ಯಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ, ಜಮಾತೆ ಇಸ್ಲಾಮಿ ಹಿಂದ್, ಸೋಸಿಯಲ್‌ ಡೆಮೊಕ್ರಾಟಿಕ್ ಆಫ್ ಇಂಡಿಯಾ ಕಾರ್ಯಕರ್ತರಾಗಿದ್ದಾರೆ.

***

ಹಸಿ ಕಟ್ಟಿಗೆ ಇದ್ದ ಕಾರಣ ಬೆಂಕಿ ಹತ್ತಿಕೊಂಡಿಲ್ಲ. ಇದನ್ನು ಗಮನಿಸಿದೇ ಸಿಬ್ಬಂದಿ ಮರಳಿದ್ದಾರೆ. ಮುಂದೆ ಇಂತಹ ಅವಘಡ ಎದುರಾಗದಂತೆ ಎಚ್ಚರ ವಹಿಸಲಾಗುವುದು.

–ಚಿದಾನಂದ ವಟಾರೆ, ಆಯುಕ್ತರು, ನಗರ ಪಾಲಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು