ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಸ್ವಾಮೀಜಿ ಕುರಿತ ಹೇಳಿಕೆ: ಹಂಸಲೇಖ ಬೆಂಬಲಕ್ಕೆ ದಲಿತ ಸಂಘರ್ಷ ಸಮಿತಿ

Last Updated 16 ನವೆಂಬರ್ 2021, 11:08 IST
ಅಕ್ಷರ ಗಾತ್ರ

ಶಿವಮೊಗ್ಗ: ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡಿದೆ.

ಪೇಜಾವರ ಶ್ರೀಗಳು ಸೇರಿದಂತೆ ಮುಂದುವರಿದ ಜಾತಿಗಳ ಮಠಾಧೀಶರು, ನಾಯಕರು ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವುದಕ್ಕಿಂತ ದಲಿತರನ್ನೇ ತಮ್ಮ ಮನೆಗೆ ಕರೆಯಿಸಿ ಊಟ ಹಾಕಿಸಲಿ ಎಂಬ ಹಂಸಲೇಖ ಅವರ ಹೇಳಿಕೆ ಅತ್ಯಂತ ಸಮಂಜಸ. ಭಗವದ್ಗೀತೆಗಿಂತ ಸಂವಿಧಾನಕ್ಕೆ ಹೆಚ್ಚು ಗೌರವ ಕೊಡಬೇಕು ಎನ್ನುವ ಅವರ ಮಾತು ಅಕ್ಷರಶಃ ನಿಜ. ಭಗವದ್ಗೀತೆ ಸಂವಿಧಾನ ಆಗಲಾರದು. ಯಾವುದೆ ಧರ್ಮ ಸಂವಿಧಾನಕ್ಕಿಂತ ದೊಡ್ಡದಲ್ಲ ಎನ್ನುವ ಅವರ ಮಾತುಗಳಿಗೆ ಸಂಪೂರ್ಣ ಬೆಂಬಲ ನೀಡುವೆವು ಎಂದು ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೆಲವರು ಅವರ ಮಾತು ಅರಗಿಸಿಕೊಳ್ಳಲಾರದೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿದ್ದಾರೆ. ಕ್ಷಮೆ ಕೋರುವಂತೆ ಒತ್ತಡ ಹಾಕಿದ್ದಾರೆ. ದೇಶದಲ್ಲಿ ಶೇ 15ರಷ್ಟು ಇರುವ ಮನುವಾದಿಗಳಿಂದ ಇಂತಹ ಒತ್ತಡ ತಂತ್ರಗಳು ನಡೆಯುತ್ತಲೇ ಇವೆ. ಶೇ 85ರಷ್ಟು ಇರುವ ದಲಿತರು, ಹಿಂದುಳಿದವರು ಮನುವಾದಿಗಳಿಗೆ ಹೆದರಿ ಜೀವಿಸಬೇಕಾಗಿದೆ. ದಲಿತಪರ ದನಿಗಳು ಅಡಗಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಮೈಸೂರು ಸಂಸದ ಪ್ರತಾಪಸಿಂಹ ಒಬ್ಬ ಅವಿವೇಕಿ. ಪ್ರಿಯಾಂಕ ಖರ್ಗೆ ಅವರ ಕುರಿತು ಮಾತನಾಡಿರುವ ರೀತಿ ಅಸಹ್ಯಕರ. ಪ್ರಿಯಾಂಕ ಎಂದು ಹೆಸರಿಟ್ಟುಕೊಂಡಿರುವ ಖರ್ಗೆ ಗಂಡೋ? ಹೆಣ್ಣೋ ಎಂದು ಪ್ರಶ್ನಿಸುವ ಮೂಲಕ ತಮ್ಮ ಪ್ರತಾಪ ತೋರಿಸಿದ್ದಾರೆ. ಪ್ರತಾಪಸಿಂಹ ಎಂದರೆ ಆತ ಮೃಗದ ಜಾತಿಗೆ ಸೇರಿದವರೇ ಎಂದು ಪ್ರಶ್ನಿಸಿದರು.

ದಲಿತರ ಅಭಿವೃದ್ಧಿಗೆ ಸರ್ಕಾರ ಮೀಸಲಿಟ್ಟಿದ್ದ ₹ 30,415 ಕೋಟಿಯಲ್ಲಿ ₹ 11,861 ಕೋಟಿ ಖರ್ಚು ಮಾಡಲಾಗಿದೆ. ಉಳಿದ ಹಣ ವಾಪಸ್‌ ಕಳಿಸಿ ಎಂದು ಸಚಿವ ಗೋವಿಂದ ಕಾರಜೋಳ ನಿಡಿರುವ ಹೇಳಿಕೆ ಖಂಡನೀಯ. ದಲಿತರಿಗಾಗಿ ಮೀಸಲಿಟ್ಟಿರುವ ಹಣ ಬೇರೆ ಯಾವ ಇಲಾಖೆಗಳೂ ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ದಸಂಸ ನಾಲ್ಕು ಬಣಗಳು ವಿಲೀನ
ಪ್ರೊ.ಬಿ.ಕೃಷ್ಣಪ್ಪ ಹೆಸರಿನಲ್ಲಿದ್ದ ದಲಿತ ಸಂಘರ್ಷ ಸಮಿತಿಯ ನಾಲ್ಕು ಬಣಗಳು ವಿಲೀನವಾಗಿವೆ ಎಂದು ಸಂಘಟನೆಯ ಮುಖಂಡರಾದ ಎಂ.ಗುರುಮೂರ್ತಿ, ರಾಯಚೂರಿನ ಹನುಮಂತಪ್ಪ, ಚಿಕ್ಕಬಳ್ಳಾಪುರದ ಗಂಗಾಧರ್, ಹಾಸನದ ಸೋಮಶೇಖರ್, ಮಂಡ್ಯದ ಅಂದಾನಿ ಅವರು ಮಂಗಳವಾರ ಶಿವಮೊಗ್ಗದಲ್ಲಿ ಘೋಷಿಸಿದರು.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಸಂಘಟನೆಗಳು ಬೇರೆಬೇರೆ ಬಣಗಳಾಗಿ ಗುರುತಿಸಿಕೊಂಡಿದ್ದವು. ಮೊದಲ ಹಂತದಲ್ಲಿ ನಾಲ್ಕು ಸಂಘಟನೆಗಳನ್ನು ವಿಲೀನಗೊಳಿಸಲಾಗಿದೆ. ಫೆಬ್ರವರಿ 11 ಮತ್ತು 12ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT