ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೊರಬ: ಹೆಚ್ಚುತ್ತಿದೆ ಮಾರಕ ಡೆಂಗಿ ಪ್ರಮಾಣ

ತೀವ್ರ ಬಳಲಿಕೆ; ಆತಂಕದಲ್ಲಿ ಜನಸಮೂಹ
Published 22 ಮೇ 2024, 7:26 IST
Last Updated 22 ಮೇ 2024, 7:26 IST
ಅಕ್ಷರ ಗಾತ್ರ

ಸೊರಬ: ನಾಲ್ಕೈದು ತಿಂಗಳಿಂದ ಬಿಸಿಲ ತಾಪಕ್ಕೆ ಹೈರಾಣಾಗಿದ್ದ ತಾಲ್ಲೂಕಿನ ಜನರು ಈಗ ಡೆಂಗಿಯಿಂದ ಬಳಲುತ್ತಿದ್ದಾರೆ. ತಾಲ್ಲೂಕಿನ ವಿವಿಧೆಡೆ ಡೆಂಗಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಡೆಂಗಿ ಸೋಂಕು ತಗುಲಿದವರಲ್ಲಿ ಚಿಕಿತ್ಸೆ ಪಡೆದ ನಂತರವೂ ಕೈ, ಕಾಲು ನೋವು ಹಾಗೂ ಅತಿಯಾದ ಬಳಲಿಕೆ ಕಂಡುಬರುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ.

ಪ್ರಸ್ತುತ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 19 ಜನರಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಂಖ್ಯೆ ದುಪ್ಪಟ್ಟಾಗಿದೆ. ಡೆಂಗಿಯಿಂದ ತೀವ್ರವಾಗಿ ಬಳಲುತ್ತಿದ್ದ ಇಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರಕರಣಗಳು ಮಳೆ ಬಂದು ಬಿಸಿಲು ಬೀಳುವುದರಿಂದ ಮುಂದಿನ ಮುಂಗಾರು ಸಮಯದಲ್ಲಿ ಹೆಚ್ಚುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ. ಆರೋಗ್ಯ ಇಲಾಖೆ ಡೆಂಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಡೆಂಗಿ ನಿಯಂತ್ರಣ ದಿನದಂದು ಸಮುದಾಯದೊಂದಿಗೆ ಡೆಂಗಿ ನಿಯಂತ್ರಣದ ಘೋಷ ವಾಕ್ಯದೊಂದಿಗೆ ಜಾಗೃತಿ ಅಭಿಯಾನ ನಡೆಸಿದೆ.

‘ಡೆಂಗಿ ಸೋಂಕಿತ ವ್ಯಕ್ತಿಗೆ ವಿಪರೀತ ಜ್ವರ ಕಾಣಿಸಿಕೊಂಡು, ಬಿಳಿರಕ್ತ ಕಣ ಕಡಿಮೆಯಾಗಿ ನಿತ್ರಾಣಗೊಳ್ಳುವ ಸಾಧ್ಯತೆ ಇರುತ್ತದೆ. ಕಾಯಿಲೆ ಹತೋಟಿಗೆ ಬರಲಿಲ್ಲ ಎಂದರೆ ಅದು ಚಿಕೂನ್ ಗುನ್ಯ ಕಾಯಿಲೆಗೂ ವರ್ಗಾವಣೆ ಆಗುವ ಸಂಭವವನ್ನು ತಳ್ಳಿ‌ಹಾಕುವಂತಿಲ್ಲ’ ಎನ್ನುತ್ತಾರೆ ಆರೋಗ್ಯ ಅಧಿಕಾರಿ ಡಾ.ವಿನಯ್ ಪಾಟೀಲ್.

‘ಸಾರ್ವಜನಿಕರು ಡೆಂಗಿ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು. ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಬೇಕಿದೆ’ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.

ಆದರೆ, ಡೆಂಗಿ ಹರಡುವ ಏಡಿಸ್‌ ಈಜಿಪ್ಟೈ ಸೊಳ್ಳೆಯ ನಿಯಂತ್ರಣಕ್ಕೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಯಿಂದ ಅಗತ್ಯ ಫಾಗಿಂಗ್‌ಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕಳೆದ ವರ್ಷ 8 ಜನರಲ್ಲಿ ಡೆಂಗಿ ಕಾಣಿಸಿಕೊಂಡಿತ್ತು. ಈ ವರ್ಷ 19 ಪ್ರಕರಣಗಳು ದೃಢಪಟ್ಟಿವೆ. ದನಕರುಗಳಿಗೆ ಕುಡಿಯುವ ನೀರಿಗಾಗಿ ಇರುವ ತೊಟ್ಟಿಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿದ ನಂತರ ನೀರು ತುಂಬಬೇಕು.
–ಡಾ.ವಿನಯ್ ಪಾಟೀಲ್, ತಾಲ್ಲೂಕು ಆರೋಗ್ಯಾಧಿಕಾರಿ ಸೊರಬ
ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ನಮ್ಮ ಆರೋಗ್ಯದ ಬಗ್ಗೆ ಸ್ವಯಂ ಕಾಳಜಿ ವಹಿಸುವುದು ಅಗತ್ಯ.
–ರೇಣುಕಮ್ಮ ಗೌಳಿ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT