ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯಾಹತ ಸಾಗುವಳಿಗೆ ನಲುಗಿದ ಜೀವವೈವಿಧ್ಯ ಅರಣ್ಯ ಪ್ರದೇಶ

Last Updated 14 ಜೂನ್ 2021, 3:48 IST
ಅಕ್ಷರ ಗಾತ್ರ

ಸೊರಬ: ಮಲೆನಾಡು, ಅರೆ ಮಲೆನಾಡಿನ ಸುಂದರ ಭೌಗೋಳಿಕ ಲಕ್ಷಣಗಳನ್ನು ಹೊಂದಿರುವ ಸೊರಬ ತಾಲ್ಲೂಕು 95 ಸಾವಿರ ಹೆಕ್ಟೇರ್ ಭೂ ವಿಸ್ತೀರ್ಣ ಒಳಗೊಂಡಿದೆ. ಶೇ 38ರಷ್ಟು ಅರಣ್ಯ ಭೂಮಿ ಇದೆ. ತಾಲ್ಲೂಕಿನಲ್ಲಿ ಅಧಿಸೂಚಿತ ಅರಣ್ಯ ಭೂಮಿ 25 ಸಾವಿರ ಹೆಕ್ಟೇರ್ ಹಾಗೂ ಪರಿಭಾವಿತ ಅರಣ್ಯ (ಡ್ರೀಮ್ಡ್ ಫಾರೆಸ್ಟ್) 18 ಸಾವಿರ ಹೆಕ್ಟೇರ್ ಇದೆ. ವೈವಿಧ್ಯಮಯ ವಾತಾವರಣದ ಜತೆಗೆ ಪ್ರಕೃತಿ ಸೌಂದರ್ಯದ ಸೊಬಗು ಒಡಲಿನಲ್ಲಿ ಹುದುಗಿಸಿಕೊಂಡಿದೆ.

ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಗೆ ಒಳಪಡುವ ಕಸಬಾ, ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಹಿರಿದಾದ ಕಾಡು ಬೆಳೆದು ನಿಂತಿದೆ. ಇಲ್ಲಿ ವಿವಿಧ ಜಾತಿಯ ಬೃಹದಾಕಾರದ ಮರಗಳನ್ನು ಕಾಣಬಹುದು. ಕಾಡಿನ ಬಹುತೇಕ ಪ್ರದೇಶದಲ್ಲಿ ಅಪಾರವಾದ ಜೀವ ಸಂಕುಲ ಹಾಗೂ ಔಷಧೀಯ ಗುಣವುಳ್ಳ ಗಿಡಗಳಿವೆ. ಜೀವ ವೈವಿಧ್ಯದ ನೆಲೆ. ವಿವಿಧ ಬಗೆಯ ಸಸ್ತನಿ, ಉಭಯವಾಸಿ ಪ್ರಾಣಿಗಳು ಒಳಗೊಂಡಂತೆ ಪಕ್ಷಿ ಸಂಕುಲಗಳು ಈ ಪ್ರದೇಶದಲ್ಲಿ ನೆಲೆಸಿವೆ.

ತಾಲ್ಲೂಕಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ಮಾಲೀಕತ್ವ ಪಡೆಯಲು ಅರ್ಜಿ ಸಲ್ಲಿಸಿದ ಪರಿಣಾಮ ತಮ್ಮ ಹೆಸರಿಗೆ ಭೂ ಮಂಜೂರಾತಿ ಪಡೆದಿದ್ದಾರೆ. ಸರ್ಕಾರ ಅರಣ್ಯ ಕಾಯ್ದೆ ಉಲ್ಲಂಘಿಸಿ ಡ್ರೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವ ಸೊಪ್ಪಿನಬೆಟ್ಟ, ಹುಲಿಜಾಡು, ದೇವರಬನ, ಗೋಮಾಳ ಸೇರಿ ಗ್ರಾಮಗಳ ಅಭಿವೃದ್ಧಿಗೆ ಮೀಸಲಿಟ್ಟ ಮುಪ್ಪತ್ತು ಭೂಮಿಯನ್ನು ಕಂದಾಯ ಇಲಾಖೆ ಬಗರ್‌ಹುಕುಂನಲ್ಲಿ ರೈತರಿಗೆ ಮಂಜೂರಾತಿ ನೀಡಲು ಕಾನೂನಿನಲ್ಲಿ ಅವಕಾಶ ನೀಡಿರುವುದು ಸಮಗ್ರ ಅರಣ್ಯ ಉಳುವಿಗೆ ಸವಾಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿ.

ಓಟೂರು, ಹಾಲಗಳಲೆ, ಕಾಸರಗುಪ್ಪೆ, ಚಂದ್ರಗುತ್ತಿ, ತವನಂದಿ, ಬೆಟ್ಟದಕೂರ್ಲಿ, ತಲಗಡ್ಡೆ, ಕುಪ್ಪಗಡ್ಡೆ, ಕುಳಗ, ತಾಳಗುಪ್ಪ ಗ್ರಾಮಗಳ ಅರಣ್ಯವನ್ನು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ದುಷ್ಕರ್ಮಿಗಳು ಲಾಕ್‌ಡೌನ್ ಅವಧಿಯಲ್ಲಿ ಇಲಾಖೆಯ ಕಣ್ಣು ತಪ್ಪಿಸಿ ಕೆಲವು ಕಡೆಗಳಲ್ಲಿ ಬೆಲೆಬಾಳುವ ಮರಗಳನ್ನು ಕಡಿತಲೆ ಮಾಡಿದ್ದಾರೆ. ಅಂತಹವರ ಮೇಲೆ ಸೊರಬ ಹಾಗೂ ಆನವಟ್ಟಿ ಅರಣ್ಯ ವಲಯಗಳಲ್ಲಿ 250ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ.

1988ರ ಅರಣ್ಯ ಕಾಯ್ದೆ ಪ್ರಕಾರ ಪರಿಸರ ಸಮತೋಲನಕ್ಕೆ ಶೇ 33ರಷ್ಟು ಅರಣ್ಯ ಭೂಮಿ ಹೊಂದಿರಬೇಕು. ಮನುಷ್ಯ ದುರಾಸೆಯಿಂದ ಭೂ ಕಬಳಿಕೆ ಮಾಡಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಅಧಿಕಾರಿಗಳಿಗೆ ಸರ್ಕಾರದ ಕಾಯ್ದೆ ಪಾಲನೆ ಮಾಡುವುದು ಹಾಗೂ ಪರಿಸರ ಉಳಿಸುವ ಜವಾಬ್ದಾರಿ ಇದ್ದರೂ ರಾಜಕೀಯ ಬೆಂಬಲದಿಂದ ಸಾಗುವಳಿದಾರರು ರಾಜಾರೋಷವಾಗಿ ಅರಣ್ಯ ನಾಶಕ್ಕೆ ಮುಂದಾಗಿರುವುದು ಇಲಾಖೆಗೆ ಧರ್ಮ ಸಂಕಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಅರಣ್ಯ ಉಳಿವಿಗೆ ಕೆಲವರು ಶ್ರಮಿಸುತ್ತಿರುವುದು ಶ್ಲಾಘನೀಯ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಮರಗಳ ಅಕ್ರಮ ಕಡಿತಕ್ಕೂ ಶುಲ್ಕ!
ಸೊರಬ ಪಟ್ಟಣದ ಮಗ್ಗಲಲ್ಲೇ ಇರುವ ಹಳೇಸೊರಬ ಗ್ರಾಮದ ಸರ್ವೆ ನಂ. 254ರಲ್ಲಿ 400 ಎಕರೆಯನ್ನು ‘ದೇವರ ಕಾಡು’ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಜೀವವೈವಿಧ್ಯ ತಾಣವಾಗಿ ನಿರ್ಮಿಸಲು ರಾಜ್ಯ ಜೀವವೈವಿಧ್ಯ ಮಂಡಳಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಒಟ್ಟು ಭೂಪ್ರದೇಶಕ್ಕೆ ಗಡಿ ಗುರುತಿಸಲಾಗಿದೆ. ಈ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರು ದುಷ್ಕರ್ಮಿಗಳಿಗೆ ಕುಮ್ಮಕ್ಕು ನೀಡಿ ಒಂದು ಮರ ಕಡಿದುಕೊಳ್ಳಲು ಗ್ರಾಮ ಸಮಿತಿಗೆ ತಲಾ ₹ 250 ನೀಡುವಂತೆ ತಾಕೀತು ಮಾಡಿದ್ದಾರೆ. ಸಮಿತಿ ರಶೀದಿ ನೀಡಿರುವುದು ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿದೆ.

ಲಾಕ್‌ಡೌನ್ ಅರಣ್ಯ ನಾಶ; ಮಂಡಳಿ ಉಲ್ಲೇಖ
ಶಿವಮೊಗ್ಗ ಜಿಲ್ಲೆಯ ಹಲವೆಡೆ ಲಾಕ್‌ಡೌನ್ ಅವಧಿಯಲ್ಲಿ ಅರಣ್ಯ ನಾಶ ಮಾಡಲಾಗಿದೆ ಎಂದು ಜೀವ ವೈವಿಧ್ಯ ಮಂಡಳಿ ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸೊರಬ ತಾಲ್ಲೂಕಿನ ಹಳೆ ಸೊರಬ ದೇವರಕಾನು ಅರಣ್ಯ, ಆನವಟ್ಟಿ ಬಳಿಯ ದುಗ್ಲಿ ಹೊಸೂರು, ಚೌಡಿಕಾನು, ತೆಕ್ಕೂರು, ನಿಟ್ಟಕ್ಕಿ ಹಳ್ಳಿಗಳಲ್ಲಿ ಶುಂಠಿ ಮಾಫಿಯಾ ತಂಡ ಅರಣ್ಯ ನಾಶದಲ್ಲಿ ನಿರತವಾಗಿದೆ. ಮಟಗುಪ್ಪೆ, ಕಾರಹೊಂಡ, ಬೀರದೇವರ ವನ, ಎಲಸಿ ಗ್ರಾಮಗಳಲ್ಲೂ ವ್ಯಾಪಕ ಅರಣ್ಯ ನಾಶ ನಡೆಯುತ್ತಿದೆ. ‌ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬಿಳಿಸಿರಿ, ಮಂಚಾಲೆ, ಬೊಮ್ಮತ್ತಿ, ಚಿತ್ರಟ್ಟಿ, ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಗುಡ್ಡೆಕೊಪ್ಪದಲ್ಲಿ ಮೈಸೂರು ಕಾಗದ ಕಾರ್ಖಾನೆಗೆ ಸೇರಿದ 50 ಎಕರೆಗೂ ಹೆಚ್ಚು ವಿಸ್ತೀರ್ಣದ ನೆಡುತೋಪನ್ನು ಅತಿಕ್ರಮಣ ಮಾಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬಳಿ ಕಟಾವು ಮಾಡಲು ಪ್ರಯತ್ನಿಸಿದ್ದು, ಸ್ಥಳೀಯರು ತಡೆದಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅರಣ್ಯನಾಶ: ಭೂ ಕುಸಿತದ ಆತಂಕ
ಹೊಸನಗರ:
ಮಲೆನಾಡ ನಡುಮನೆ ಎಂದು ಹೆಸರಾದ ಹೊಸನಗರ ತಾಲ್ಲೂಕಿನಲ್ಲಿ ಅರಣ್ಯ ನಾಶ ಅವ್ಯಾಹತವಾಗಿ ನಡೆಯುತ್ತಿದೆ. ಕೋವಿಡ್ ಲಾಕ್‌ಡೌನ್ ಪರಿಣಾಮ ನೇರವಾಗಿ ಅರಣ್ಯ ಪ್ರದೇಶದ ಮೇಲೆರಗಿದ್ದು ದಿನ ನಿತ್ಯ ಅರಣ್ಯ ಭೂಮಿ ಕಬಳಿಕೆ ಹೆಚ್ಚುತ್ತಿದೆ.

ಪೇಟೆ ಪಟ್ಟಣದಿಂದ ಹಳ್ಳಿಗೆ ಬಂದ ಯುವಕರು ಖಾಲಿ ಕೈಯಲ್ಲಿ ಕೂರಲಿಲ್ಲ. ತಮ್ಮ ತೋಟ ಮನೆ ಪಕ್ಕದ ಭೂ ಒತ್ತುವರಿಗೆ ಕೈ ಹಾಕಿದ್ದು ಎಕರೆಗಟ್ಟಲೆ ಅರಣ್ಯ ಭೂಮಿ ನಾಶ ಮಾಡಿದ ದೂರುಗಳು ದಾಖಲಾಗಿವೆ.

ಅರಣ್ಯ ನಾಶವೊಂದು ಸಮೂಹ ಸನ್ನಿಯಂತೆ ವ್ಯಾಪಿಸಿದೆ. ಒತ್ತುವರಿ ನೆಪದಲ್ಲಿ ಕಾಡು ಕೃಷಿ ಪ್ರದೇಶವಾಗಿ ಬದಲಾಗುತ್ತಿದೆ. ಹಿಂದೆಲ್ಲ ನಾಟಾಕ್ಕಾಗಿ ಮರಗಳ ಕಡಿತಲೆ ಆಗುತ್ತಿದ್ದವು. ಇಂದು ಕೃಷಿ ಉದ್ದೇಶಕ್ಕಾಗಿಯೇ ಕಾಡು ಕಡಿಯಲಾಗುತ್ತಿದೆ. ರಾಜಕೀಯ ಶಕ್ತಿಗಳ ಬೆಂಬಲವೂ ಕಾಡು ನಾಶಕ್ಕೆ ಕಾರಣವಾಗಿದೆ.

ತಗ್ಗು ಪ್ರದೇಶ, ಗದ್ದೆಯಲ್ಲಿ ಅಡಿಕೆ ತೋಟ ಮಾಡುವುದು ವಾಡಿಕೆ ಕ್ರಮ. ಆದರೆ, ಇಂದು ಎಲ್ಲೆಡೆ ಅಡಿಕೆ ತೋಟ ಮೈದಳೆಯುತ್ತಿವೆ. ರೈತರು ಅತಿ ಆಸೆಗೆ ಬಿದ್ದು ಸಮೃದ್ಧವಾಗಿ ಬೆಳೆದಿದ್ದ ಕಾಡಿಗೆ ಕೊಡಲಿ ಇಟ್ಟಿದ್ದಾರೆ. ಅಡಿಕೆ ತೋಟ ಮಾಡುತ್ತಿದ್ದಾರೆ.

ತಾಲ್ಲೂಕಿನ ನಗರ ಹೋಬಳಿಯಲ್ಲಿ ಹಿಂದೆ ಸಮೃದ್ಧ ಕಾಡು ನಳನಳಿಸುತ್ತಿತ್ತು. ಮುಳುಗಡೆ ಪ್ರದೇಶದ ಮಧ್ಯೆ ದಟ್ಟ ಕಾನನದ ಸೊಬಗು ಕಣ್ಣಿಗೆ ಹಬ್ಬ ನೀಡುತ್ತಿತ್ತು. ಇದೀಗ ಕಾಡಿಗೆ ಬೆಂಕಿ ಬಿದ್ದಿದೆ. ಕಾಡು ನಾಡಾಗಿದೆ. ಹಗಲು– ರಾತ್ರಿ ಜೆಸಿಬಿ ಯಂತ್ರ ಬಳಸಿ ಗುಡ್ಡಗಾಡು ಪ್ರದೇಶ ಸಮತಟ್ಟು ಮಾಡಲಾಗಿದೆ. ಗುಡ್ಡಗಳು ಕರಗಿ ಅಡಿಕೆ ತೋಟಗಳಾಗಿವೆ.

‘ಗುಡ್ಡಗಾಡು ಪ್ರದೇಶ ಸಮತಟ್ಟು ಆಗಿರುವುದು ಹತ್ತಾರು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಗುಡ್ಡ ಕುಸಿತ ಮಾಮೂಲಿ ಆಗಿದೆ. ಪ್ರಕೃತಿ ಮೇಲಿನ ಆಕ್ರಮಣ ಮುಂದುವರಿದರೆ ಕೊಡಗು ಜಿಲ್ಲೆಯಲ್ಲಿ ಆದ ಅನಾಹುತ ಹೊಸನಗರದಲ್ಲೂ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎನ್ನುತ್ತಾರೆ ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ.
-ರವಿ ನಾಗರಕೊಡಿಗೆ

***

ಸರ್ಕಾರಿ ಭೂಮಿ ಒತ್ತುವರಿಗೆ ವರವಾದ ಲಾಕ್‌ಡೌನ್
ಸಾಗರ:
ಲಾಕ್‌ಡೌನ್ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಳ್ಳಿಗಳಿಗೆ ಬರುವುದಿಲ್ಲ ಎಂದು ಯೋಚಿಸಿ ಸರ್ಕಾರಿ ಭೂಮಿ ಒತ್ತುವರಿ ಪ್ರವೃತ್ತಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಾಣುತ್ತಿದೆ.

ಅರಣ್ಯ ಭೂಮಿಗೆ ಸಂಬಂಧಿಸಿದಂತೆ ತಮಗೆ ಸೇರಿದ ಪ್ರದೇಶವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಟ್ರಂಚ್ ಹೊಡೆದು ಗುರುತಿಸಿಕೊಂಡಿದ್ದಾರೆ. ಕಂದಾಯ ಭೂಮಿಗೆ ಹೋಲಿಸಿದರೆ ಅರಣ್ಯ ಭೂಮಿ ಒತ್ತುವರಿಗೆ ಮುಂದಾಗಲು ಧೈರ್ಯ ಮಾಡುತ್ತಿರುವವರ ಸಂಖ್ಯೆ ಕಡಿಮೆ ಇದೆ.

ಲಾಕ್‌ಡೌನ್‌ನಿಂದಾಗಿ ನಗರ ಪ್ರದೇಶಗಳಲ್ಲಿ ವಿವಿಧ ವೃತ್ತಿ ನಡೆಸುತ್ತಿರುವವರು ಹಳ್ಳಿಗಳಿಗೆ ಮರಳಿದ್ದಾರೆ. ತಮ್ಮದೇ ಕೃಷಿ ಭೂಮಿ ಇರುವವರು ಅಲ್ಲಿ ಸಾಗುವಳಿಯಲ್ಲಿ ತೊಡಗಿದ್ದಾರೆ. ಜತೆಗೆ ಅದಕ್ಕೆ ಹೊಂದಿಕೊಂಡು ಅರಣ್ಯ ಅಥವಾ ಕಂದಾಯ ಭೂಮಿ ಇದ್ದರೆ ಜೆಸಿಬಿ ಹಾಗೂ ಹಿಟಾಚಿ ಯಂತ್ರ ಬಳಸಿ ಸರ್ಕಾರಿ ಭೂಮಿ ಸಮತಟ್ಟುಗೊಳಿಸಿ ಅಲ್ಲಿ ಬೆಳೆ ತೆಗೆಯಲು ಮುಂದಾಗುತ್ತಿದ್ದಾರೆ. ಪೇಟೆಯಲ್ಲಿದ್ದಾಗ ಗಳಿಸಿ ಉಳಿಸಿದ ಹಣವನ್ನು ಅವರು ಈ ಕೆಲಸಕ್ಕೆ ವೆಚ್ಚ ಮಾಡುತ್ತಿದ್ದಾರೆ.

ತಾಲ್ಲೂಕಿನ ಹೀರೆನೆಲ್ಲೂರು ಗ್ರಾಮದ ಸರ್ವೆ ನಂ. 213, 214ರಲ್ಲಿನ ಸುಮಾರು 15 ಎಕರೆ ಪ್ರದೇಶದಲ್ಲಿ ಗ್ರಾಮ ಅರಣ್ಯ ಸಮಿತಿಯಿಂದ ನೆಡುತೋಪು ಬೆಳೆಸಲಾಗಿತ್ತು. ಈಗ ಸಂಪೂರ್ಣವಾಗಿ ಒತ್ತುವರಿ ಮಾಡಿ ಸಮತಟ್ಟುಗೊಳಿಸಲಾಗಿದೆ. ರಾಜಕೀಯ ಒತ್ತಡದ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮೌನ ವಹಿಸುವಂತಾಗಿದೆ.

2020ರ ಲಾಕ್‌ಡೌನ್ ಹೊತ್ತಿಗೆ ತಾಲ್ಲೂಕಿನ ತ್ಯಾಗರ್ತಿ, ಜಂಬಾನೆ, ಬಿಳಿಸಿರಿ, ಉಳ್ಳೂರು, ಸಿರಗುಪ್ಪೆ, ಮಂಕಳಲೆ, ಸಿರಿವಂತೆ, ಸೈದೂರು, ಕಣಸೆ, ಆವಿನಹಳ್ಳಿ, ಮತ್ತಿಕೆರೆ ಗ್ರಾಮಗಳಲ್ಲಿ 7.25 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ವರ್ಷದ ಲಾಕ್‌ಡೌನ್ ಅವಧಿಯಲ್ಲಿ ಕಾನ್ಲೆ, ಹೂಂಕೇರಿ, ಸಿರಿವಂತೆ, ಗುಡ್ಡೇಕೇರಿ, ಇಡುವಾಣಿ, ಕೆಳದಿ, ಹಿರೇನೆಲ್ಲೂರು, ಮಡಸೂರು, ಕೆರೋಡಿ ಗ್ರಾಮಗಳಲ್ಲಿ 6.7 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಈವರೆಗೆ ವರದಿಯಾಗಿದೆ.

ಹಲವು ಕಡೆ ರಾಜಕೀಯ ಒತ್ತಡ ಬಂದ ಕಾರಣ ಒತ್ತುವರಿಯಾದ ಪ್ರದೇಶ ಅರಣ್ಯ ಭೂಮಿಯಾಗಿದ್ದರೂ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಿ ಕೇವಲ ಮರ ಕಡಿದ ಪ್ರಕರಣ ದಾಖಲಿಸಲಾಗಿದೆ. ಒತ್ತುವರಿದಾರರನ್ನು ರಕ್ಷಿಸಿದ ಉದಾಹರಣೆಗಳಿವೆ. ಅರಣ್ಯ ಭೂಮಿ, ಕಾನು, ಸೊಪ್ಪಿನ ಬೆಟ್ಟಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಬಲ ಇಚ್ಛಾಶಕ್ತಿ ತೋರದೆ ಇದ್ದಲ್ಲಿ ಮಲೆನಾಡಿನ ಈ ಪ್ರದೇಶ ಮತ್ತಷ್ಟು ಪ್ರತಿಕೂಲ ಸನ್ನಿವೇಶ ಎದುರಿಸುವುದು ಖಚಿತ ಎನ್ನುತ್ತಾರೆ ಪರಿಸರವಾದಿಗಳು.
-ಎಂ.ರಾಘವೇಂದ್ರ

***

ಅರಣ್ಯಕ್ಕೆ ಮುಳುವಾದ ಹಳ್ಳಿಗೆ ಹಿಂದಿರುಗಿದವರ ಅಡಿಕೆ ಮೋಹ
ತೀರ್ಥಹಳ್ಳಿ:
ಬದುಕು ಕಟ್ಟಿಕೊಳ್ಳುವ ಸಲುವಾಗಿ ಹಳ್ಳಿಗಳನ್ನು ತೊರೆದು ನಗರ ಸೇರಿದ ಮಲೆನಾಡಿನ ಜನರು ಕೋವಿಡ್ ವೇಳೆಯಲ್ಲಿ ಅರಣ್ಯ ನಾಶಕ್ಕೆ ಕಾರಣರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಕಾರಣಕ್ಕೆ ಹಳ್ಳಿಗಳಿಗೆ ವಾಪಸ್‌ ಬಂದವರು ಲಾಕ್‌ಡೌನ್ ಅವಧಿಯಲ್ಲಿ ಮಲೆನಾಡಿನಲ್ಲಿ ಕಾಡು ಕಡಿದು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ನೈಸರ್ಗಿಕ ಕಾಡಿಗೆ ಕಂಟಕ ಎದುರಾಗಿದೆ. ಅಕ್ರಮವಾಗಿ ಅರಣ್ಯ ನಾಶಪಡಿಸಿರುವ ಕುರಿತು ತಾಲ್ಲೂಕು ವ್ಯಾಪ್ತಿಯಲ್ಲಿ (ಹಳೆ ಒತ್ತುವರಿ ಮೇಲೆ) 170 ಜನರ ಮೇಲೆ ಅರಣ್ಯ ಒತ್ತುವರಿ ಪ್ರಕರಣ ದಾಖಲಿಸಲಾಗಿದೆ. ಹೊಸ ಒತ್ತುವರಿ ಮೇಲೆ ಯಾವುದೇ ದೂರು ದಾಖಲಾಗಿಲ್ಲ.

ಅರಣ್ಯ ಇಲಾಖೆ ತಾಲ್ಲೂಕು ವ್ಯಾಪ್ತಿಯಲ್ಲಿ ಹೊಸ ಒತ್ತುವರಿಗೆ ಅವಕಾಶ ನೀಡದೆ ಇರುವುದರಿಂದ ಒತ್ತುವರಿಗೆ ಕಡಿವಾಣ ಹಾಕಿದೆ. ಹಳೆ ಒತ್ತುವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಹೆಚ್ಚಾಗಿರುವುದರಿಂದ ಕಾಡುನಾಶಕ್ಕೆ ಅವಕಾಶ ಕಲ್ಪಿಸಿದಂತಾಗಿದೆ. ಪಿತ್ರಾರ್ಜಿತ ಆಸ್ತಿಯಲ್ಲಿನ ಖುಷ್ಕಿ, ತರಿ ಜಮೀನು ಪ್ರದೇಶದ ಸಾಗುವಳಿಗೆ ಜನರು ಮುಂದಾಗಿರುವುದರಿಂದ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಸಾಗುವಳಿ ಪ್ರದೇಶ ವಿಸ್ತರಣೆಯಾಗಿದೆ.

ನಗರಗಳಲ್ಲಿ ದುಡಿದ ಹಣವನ್ನು ಬಹುತೇಕರು ಮಲೆನಾಡಿನಲ್ಲಿ ಕೃಷಿಗೆ ವಿನಿಯೋಗಿಸಿದ್ದಾರೆ. ಪಾಳುಬಿದ್ದ ಖುಷ್ಕಿ, ತರಿ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಇಂಥಹ ಪ್ರದೇಶದಲ್ಲಿನ ಮರಗಿಡಗಳನ್ನು ನಾಶಪಡಿಸಲಾಗಿದೆ. ಹಿಡುವಳಿದಾರರ ಅನುಭವದಲ್ಲಿನ ಹಳೆ ಒತ್ತುವರಿ ಪ್ರದೇಶದಲ್ಲಿ ನಡೆದ ಕೃಷಿ ಚಟುವಟಿಕೆಯಿಂದ ಅರಣ್ಯ ನಾಶವಾಗಿದೆ. 1978ಕ್ಕೂ ಹಿಂದಿನ ಒತ್ತುವರಿ ಪ್ರದೇಶದ ತೆರವಿಗೆ ಅವಕಾಶ ನೀಡದಂತೆ ಸರ್ಕಾರ ಆದೇಶ ನೀಡಿದೆ. 3 ಎಕರೆ ಒಳಗಿನ ಪ್ರದೇಶದ ಹಿಂದಿನ ಒತ್ತುವರಿಗೆ ಅರಣ್ಯ ಇಲಾಖೆ ಯಾವುದೇ ತೊಂದರೆ ನೀಡಬಾರದು ಎಂಬ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ. ಹಳೆ ಒತ್ತುವರಿ ಪ್ರದೇಶದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆ ಜೋರಾಗಿದೆ.

ತಂತ್ರಜ್ಞಾನದ ಜೋಡಣೆಯಿಂದ ಅರಣ್ಯ ಇಲಾಖೆ ಒತ್ತುವರಿ ಪ್ರದೇಶವನ್ನು ಸ್ಯಾಟಲೈಟ್ ಮೂಲಕ ವೀಕ್ಷಿಸಿ ಪ್ರತಿ 22 ದಿನಗಳಿಗೊಮ್ಮೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಎಚ್ಚರಿಸುವುದರಿಂದ ಒತ್ತುವರಿಗೆ ಕಡಿವಾಣ ಹೇರಲಾಗಿದೆ. ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಅರಣ್ಯ ಇಲಾಖೆಗೆ ಒತ್ತುವರಿ ತಡೆಯುವುದು ಸವಾಲಾಗಿದೆ.

‘ತಾಲ್ಲೂಕು ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಒತ್ತುವರಿಗೆ ಅವಕಾಶ ನೀಡಿಲ್ಲ. ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ’ ಎನ್ನುತ್ತಾರೆ ತೀರ್ಥಹಳ್ಳಿ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ಚಂದ್ರ.

ಅಡಿಕೆಗೆ ಬೆಲೆ ಹೆಚ್ಚಿದೆ. ಮಲೆನಾಡಿಗೆ ಒಗ್ಗುವ ಬೆಳೆಯಾದ ಅಡಿಕೆ ಗಿಡಗಳನ್ನು ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಾಗಿ ನೆಡಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಹಳ್ಳಿಗಳಿಗೆ ಮರಳಿದ ನಗರವಾಸಿಗರು ಪಿತ್ರಾರ್ಜಿತ ಆಸ್ತಿಯಲ್ಲಿನ ಭೂಮಿ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜೀವನ ಭದ್ರತೆಯ ಆತಂಕವನ್ನು ಕೊರೊನಾ ಸೋಂಕು ಹೆಚ್ಚು ಮಾಡಿದೆ. ಮಲೆನಾಡಿನ ಅವಿಭಕ್ತ ಕುಟುಂಬಗಳು ವಿಭಜನೆಯಾಗುತ್ತಿವೆ. ಸೋಂಕಿಗೆ ಹೆದರಿ ಊರು ಸೇರಿದವರು ತಮಗೆ ಸೇರಿದ ಹಿಡುವಳಿ ಭೂಮಿಯಲ್ಲಿ ಅಡಿಕೆ ತೋಟ ನಿರ್ಮಾಣ ಮಾಡುವಲ್ಲಿ ನಿರತರಾಗಿದ್ದಾರೆ. ಒತ್ತುವರಿ ಭೂಮಿಯಲ್ಲಿ ಸಾಗುವಳಿಗೆ ಮಂದಾಗಿರುವ ಪರಿಣಾಮ ತಾಲ್ಲೂಕಿನಲ್ಲಿ ದಾಖಲೆ ಇಲ್ಲದ ಸಾಗುವಳಿ ಭೂಮಿಯ ವಿಸ್ತಾರ ಹೆಚ್ಚಾಗುತ್ತಿದೆ.
-ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT