ಬುಧವಾರ, ಮೇ 12, 2021
23 °C
ಕೊರೊನಾ ಸಂಕಷ್ಟದ ಕಾಲದಲ್ಲಿ ಹೆಚ್ಚುವರಿ 10 ಲಕ್ಷ ಮಾನವ ದಿನಗಳ ಬಳಕೆ

ಉದ್ಯೋಗ ಖಾತ್ರಿಗೆ ಬೇಕಿದೆ ಇನ್ನಷ್ಟು ಕಣ್ಗಾವಲು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೂಲಿ ಪಾವತಿ ₹ 299ಕ್ಕೆ ಏರಿಕೆ, 100 ದಿನಗಳ ಮಿತಿಯನ್ನು ಅತಿವೃಷ್ಟಿ, ಅನಾವೃಷ್ಟಿ, ಕೊರೊನಾ ಸಂಕಷ್ಟದಲ್ಲಿ 150ಕ್ಕೆ ಹೆಚ್ಚಿಸಿರುವುದು ಗ್ರಾಮೀಣ ಕೂಲಿ ಕಾರ್ಮಿಕರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದೆ. ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ, ಪ್ರಾಮಾಣಿಕವಾಗಿ ಯೋಜನೆ ಬಳಸಿಕೊಂಡರೆ ಹಳ್ಳಿಗಳ ಜನರ ಬದುಕು ಮತ್ತಷ್ಟು ಸುಂದರವಾಗಲಿದೆ.

ಜಿಲ್ಲೆಯ 271 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಾರ್ಮಿಕರಿಗೆ 2020–21ನೇ ಸಾಲಿನಲ್ಲಿ 41.56 ಲಕ್ಷ ಮಾನವ ದಿನಗಳ ಕೆಲಸ ನೀಡಲಾಗಿದೆ. ನಿಗದಿಯಾಗಿದ್ದ ₹ 223.48 ಕೋಟಿಯಲ್ಲಿ ₹ 154.67 ಕೋಟಿ ವಿನಿಯೋಗಿಸಲಾಗಿದೆ. ಕೊರೊನಾ ಸಂಕಷ್ಟಗಳ ಮಧ್ಯೆಯೂ ಶೇ 90.35ರಷ್ಟು ಗುರಿ ಸಾಧಿಸಲಾಗಿದೆ. ಕೆರೆಗಳಿಗೆ ಕಾಯಕಲ್ಪ, ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ, ದನದ ಕೊಟ್ಟಿಗೆಳ ನಿರ್ಮಾಣಕ್ಕೆ ಖಾತ್ರಿ ಅಡಿ ಮೊದಲ ಆದ್ಯತೆ ದೊರಕಿದೆ. 

1,023 ಕೆರೆಗಳಿಗೆ ಕಾಯಕಲ್ಪ: ಉದ್ಯೋಗ ಖಾತ್ರಿ ನಿಯಮಗಳ ಪ್ರಕಾರ ಅನುದಾನದಲ್ಲಿ ಶೇ 60ರಷ್ಟು ಕೂಲಿಗೆ, ಶೇ 40ರಷ್ಟು ಸಾಮಗ್ರಿಗಳಿಗೆ ಖರ್ಚು ಮಾಡಲು ಅವಕಾಶವಿದೆ. ಇತರೆ ಎಲ್ಲ ಕಾಮಗಾರಿಗಳಿಗಿಂತ ಕೆರೆ ಹೂಳೆತ್ತುವ ಕೆಲಸದಲ್ಲಿ ಹೆಚ್ಚು ಹಣ ಕೂಲಿಗೇ ವಿನಿಯೋಗಿಸಬಹುದು. ಹಾಗಾಗಿ, ಬಹುತೇಕ ಪಂಚಾಯಿತಿಗಳು ಕೆರೆ ಹೂಳೆತ್ತುವ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ 1,023 ಕೆರೆಗಳಲ್ಲಿ ಹೂಳೆತ್ತುವ ಕೆಲಸ ನಡೆದಿದೆ. ಅದಕ್ಕಾಗಿ 10,43.878 ಮಾನವ ದಿನಗಳನ್ನು ಸೃಜಿಸಲಾಗಿದೆ. ಅಂದರೆ ಉದ್ಯೋಗ ಖಾತ್ರಿ ಯೋಜನೆ ಅಡಿ ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳಲ್ಲಿ ಶೇ 25ಕ್ಕೂ ಹೆಚ್ಚು ಕೆಲಸ ಕೆರೆಗಳಲ್ಲೇ ಕೊಡಲಾಗಿದೆ. 

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಒತ್ತು:

ಜಿಲ್ಲೆಯ ತೋಟಗಾರಿಕಾ ಬೆಳೆಗಳನ್ನು ಉತ್ತೇಜಿಸಲು ಸಣ್ಣ ರೈತರಿಗೆ ₹ 2.50 ಲಕ್ಷದವರೆಗೂ ನೆರವು ನೀಡಲಾಗುತ್ತಿದೆ. 3,286 ರೈತರಿಗೆ ಅಡಿಕೆ, ಬಾಳೆ, ತೆಂಗು, ಕೊಕೊ ಮತ್ತಿತರ ಬೆಳೆಗಳನ್ನು ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. 5 ಲಕ್ಷ ಮಾನವ ದಿನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. 1,866 ದನದ ಕೊಟ್ಟಿಗೆಗಳನ್ನು ನಿರ್ಮಿಸಲಾಗಿದೆ. ಅದಕ್ಕಾಗಿ 86 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ.

ಅಂತರ್ಜಲ ಚೇತನಕ್ಕೆ ₹ 252 ಕೋಟಿ:

ಜಿಲ್ಲೆಯಲ್ಲಿ ಅಂತರ್ಜಲ ಚೇತನ ಯೋಜನೆಗೆ ₹ 252 ಕೋಟಿ ಬಳಸಲಾಗಿದೆ. ಯೋಜನೆ ಮೂಲಕ 8.82 ಲಕ್ಷ ಜನರಿಗೆ ಕೆಲಸ ದೊರೆತಿದೆ. 32,731 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಖಾತ್ರಿಯ 260 ಕಾಮಗಾರಿಗಳಲ್ಲಿ 181 ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಮೀಸಲಿಡಲಾಗಿದೆ. ಸ್ವಾಭಾವಿಕ ಸಸ್ಯವರ್ಗ ಹೆಚ್ಚಿಸುವ ಮಹತ್ವದ ಯೋಜನೆ ರೂಪುಗೊಂಡಿದೆ. ಮಾವು, ಹಲಸು, ನೇರಲೆ, ಸೀಬೆ ಮತ್ತಿತರ ಜಾತಿಯ ಹಣ್ಣುಗಳ ಸುಮಾರು 18 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. 345 ಕಿರು ಜಲಾನಯನಗಳ ಸುಮಾರು 5 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸುವ ಗುರಿ ಹೊಂದಲಾಗಿದೆ. 

ಖಾತ್ರಿ ಕೆಲಸದಲ್ಲೂ ಅಕ್ರಮ: ಕೆಲವು ಪಂಚಾಯಿತಿಗಳಲ್ಲಿ ಕೈಗೊಂಡ ಉದ್ಯೋಗ ಖಾತ್ರಿ ಕೆಲಸಗಳಲ್ಲೂ ಅಕ್ರಮಗಳು ನಡೆದಿವೆ. ಕೆಲಸ ಮಾಡಿಸದೆ, ಕೆಲಸಕ್ಕೆ ಬಾರದ ಕಾರ್ಮಿಕರ ಖಾತೆಗಳಿಗೆ ಹಣ ಜಮೆ ಮಾಡಿ ಅವರಿಂದ ಅರ್ಧದಷ್ಟು ಹಣ ಮರಳಿ ಪಡೆಯುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಶಾಲೆಗಳ ಕಟ್ಟಡ, ಚೆಕ್‌ ಡ್ಯಾಂ, ತೋಟ, ಕೊಟ್ಟಿಗೆಗಳನ್ನು ಮಾಡದೇ ಹಣ ಪಡೆದ ಪ್ರಕರಣಗಳು ವರದಿಯಾಗಿವೆ. ಹಲವು ಭಾಗಗಳಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಇಂತಹ ಎಲ್ಲ ನ್ಯೂನತೆ ಸರಿಪಡಿಸಿಕೊಂಡರೆ ಖಾತ್ರಿ ಪರಿಣಾಮಕಾರಿಯಾಗಿಸಬಹುದು ಎನ್ನುವುದು ಹಲವು ಗ್ರಾಮಸ್ಥರ ಆಶಯ.

ಮರಳಿದ ಕೂಲಿ ಕಾರ್ಮಿಕರಿಗೆ ಖಾತ್ರಿ

ಕೊರೊನಾ ಸಂಕಷ್ಟದ ಪರಿಣಾಮ ಜಿಲ್ಲೆಗೆ ಮರಳಿದ ಕೂಲಿ ಕಾರ್ಮಿಕರಿಗೆ ಖಾತ್ರಿ ಕೆಲಸ ಕೊಡುವ ಮೂಲಕ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಹೊಸ ದಾಖಲೆ ಬರೆದಿದೆ. ಹೊಸದಾಗಿ 6,822 ಜನರು ಜಾಬ್‌ಕಾರ್ಡ್ ನೀಡಿ, 10 ಲಕ್ಷ ಮಾನವ ದಿನಗಳನ್ನು ಹೆಚ್ಚುವರಿಯಾಗಿ ನೀಡಿದೆ. 2019–20ನೇ ಸಾಲಿನಲ್ಲಿ 32 ಲಕ್ಷ ಮಾನವ ದಿನಗಳನ್ನು ಬಳಕೆ ಮಾಡಲಾಗಿತ್ತು. 2020–21ನೇ ಸಾಲಿನಲ್ಲಿ 41.56 ಲಕ್ಷ ಮಾನವ ದಿನಗಳ ಕೆಲಸ ನೀಡಲಾಗಿದೆ.

ನಮ್ಮ ಹಳ್ಳಿ ನಮ್ಮ ನೀರು ಯೋಜನೆ ಅಡಿ 1154 ಕೆರೆಗಳು, ಜಲಮೂಲ ಪುನಃಶ್ಚೇತನ ಕಾರ್ಯಕ್ರಮದ ಅಡಿ 243 ಕಲ್ಯಾಣಿಗಳು, ಗೋಕಟ್ಟೆಗಳಿಗೆ ಪುನರುಜ್ಜೀವನ ನೀಡಲಾಗಿದೆ. ರೈತರ ಹೊಲ, ಗದ್ದೆಗಳಲ್ಲಿ 24 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.

ಭರಪೂರ ಕಾಮಗಾರಿ

ತೀರ್ಥಹಳ್ಳಿ: ಕೊರೊನಾ ಹಾಗೂ ಆರ್ಥಿಕ ಹಿಂಜರಿತದಿಂದ ಬಸವಳಿದ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ. ನರೇಗಾದಿಂದ ಮೇಲಿನಕುರುವಳ್ಳಿ ಜನರು ಜೀವನ ರೂಪಿಸಿಕೊಳ್ಳಲು ಮುಂದಾಗಿದ್ದಾರೆ.

ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ವಿಶೇಷ ಕಾಳಜಿಯಿಂದ ಕಾಮಗಾರಿಗಳಿಗೆ ವೇಗ ದೊರೆತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ಪಂಚಾಯಿತಿ ಸದಸ್ಯರಿಗೆ
₹ 2 ಲಕ್ಷ ಹಣ ಮೀಸಲಿಟ್ಟಿದೆ. ಎಲ್ಲಾ ನೂತನ ಸದಸ್ಯರು ಫಲಾನುಭವಿಗಳಿಗೂ ಕೆಲಸ ನೀಡಲಾಗಿದೆ. 230 ಕೆಲಸಗಾರರು ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ಕೆಲಸದಲ್ಲಿ ಭಾಗಿಯಾಗಿದ್ದಾರೆ.

ಮೇಲಿನಕುರುವಳ್ಳಿ ಗ್ರಾಮದ ವಾಟಗಾರು, ಹೆಗ್ಗೇಬೈಲು, ಕುಂಬಾರದಡಿಗೆ, ಹುಲಿಕೊಡಿಗೆ, ತಿರಳೇಬೈಲು, ಬುಕ್ಲಾಪುರ, ಕಳಗಾರು, ಹೊರಬೈಲು ಗ್ರಾಮದಲ್ಲಿನ ಹಳ್ಳದ ದಂಡೆ ಬಲಪಡಿಸುವ ಕಾಮಗಾರಿಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಹೆನ್ನಂಗಿ, ವಾಟಗಾರು ಕೆರೆ, ಬಿಳಿಗೆ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಫಲಾನುಭವಿಗಳು ನಿರತರಾಗಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ನಾಗೇಂದ್ರಾಚಾರ್‌ ಖಾತ್ರಿ ಯೋಜನೆಯಲ್ಲಿನ ಕಾಮಗಾರಿಗಳ ಮೇಲೆ ನಿಗಾ ವಹಿಸುವ ಮೂಲಕ ಕಾಮಗಾರಿಗಳಿಗೆ ಮೆರುಗು ತಂದಿದ್ದಾರೆ.

‘ಬಿಡಿಗೂಲಿಗಾಗಿ ಊರೂರು ಅಲೆದು ಜೀವನ ನಡೆಸುತ್ತಿದ್ದೆ. ಇದೀಗ ನಮ್ಮ ಮನೆಯ ಸಮೀಪದಲ್ಲೇ ಹೆಚ್ಚು ಕೂಲಿ ಪಡೆದು ಕೆಲಸ ಮಾಡುತ್ತಿದ್ದೇನೆ. ಬೇರೆ ಊರುಗಳಿಗೆ ಹೋಗಿ ಕೆಲಸ ಹುಡುಕುವ ಕಷ್ಟ ತಪ್ಪಿದೆ’ ಎನ್ನುತ್ತಾರೆ ಉದ್ಯೋಗ ಖಾತ್ರಿ ಫಲಾನುಭವಿ ಪ್ರೇಮಾ ವೆಂಕಟೇಶ್.

ಭತ್ತಕ್ಕೂ ಖಾತ್ರಿ ಬಳಕೆ

ಸಾಗರ: ಅಡಿಕೆ ಬೆಳೆಗಾರರಿಗೆ ಅನುಕೂಲವಾಗಲಿ ಎಂದು ತೋಟದ ನಡುವೆ ಬಸಿಗಾಲುವೆ ಕಾಮಗಾರಿ ನಿರ್ಮಾಣವನ್ನೂ ಖಾತ್ರಿ ಯೋಜನೆ ವ್ಯಾಪ್ತಿಯೊಳಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದ್ದರು.

ಈ ಬೇಡಿಕೆಗೆ ಸ್ಪಂದಿಸಿದ ಸಂಸದ ಬಿ.ವೈ.ರಾಘವೇಂದ್ರ ಬಸಿಗಾಲುವೆ ನಿರ್ಮಾಣ ಕಾಮಗಾರಿ
ಯನ್ನು ಖಾತ್ರಿ ಯೋಜನೆ ವ್ಯಾಪ್ತಿಯೊಳಗೆ ಸೇರಿಸಿದ್ದಾರೆ. ಇದರಿಂದಾಗಿ ಅಡಿಕೆ ಬೆಳೆಗಾರರಿಗೆ ಎಕರೆಗೆ ಬಸಿಗಾಲುವೆ ನಿರ್ಮಾಣಕ್ಕೆ ಖರ್ಚಾಗುತ್ತಿದ್ದ ಸುಮಾರು ₹ 1.5 ಲಕ್ಷ ಉಳಿತಾಯವಾದಂತಾಗಿದೆ.

ಅದೇ ರೀತಿ ಭತ್ತದ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಭತ್ತದ ನಾಟಿ ಹಾಗೂ ಕೊಯ್ಲು ಕೆಲಸವನ್ನು ಕೂಡ ಖಾತ್ರಿ ಯೋಜನೆ ಕಾಮಗಾರಿ ವ್ಯಾಪ್ತಿಯೊಳಗೆ ಸೇರಿಸಬೇಕು ಎಂಬ ಬೇಡಿಕೆ ಮಂಡಿಸಲಾಗಿದೆ. ಇದು ಈಡೇರಿದರೆ ಸಂಕಷ್ಟದಲ್ಲಿರುವ ಭತ್ತದ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಸಾಗರ ತಾಲ್ಲೂಕಿನಲ್ಲಿ ಒಂದು ವರ್ಷದ ಅವಧಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಲ್ಲಿ ಗುರಿ ಮೀರಿ ಒಟ್ಟಾರೆಯಾಗಿ ಶೇ 104ರಷ್ಟು ಸಾಧನೆಯಾಗಿದೆ. ಕೊರೊನಾ ಕಾರಣಕ್ಕೆ ನಗರ ಪ್ರದೇಶಗಳನ್ನು ತೊರೆದು ಊರಿಗೆ ಮರಳಿದವರಿಗೆ
ಖಾತ್ರಿ ಯೋಜನೆ ಕೆಲಸ ಕೈ ಹಿಡಿದಿದೆ.

ಕೆರೆ ಹೂಳೆತ್ತುವ, ಕಾಲುವೆ, ಇಂಗುಗುಂಡಿ, ಸಾರ್ವಜನಿಕ ಬಾವಿ, ಕೃಷಿ ಬಾವಿ, ಹೊಸ ತೋಟ ನಿರ್ಮಾಣ, ರಸ್ತೆ ಬದಿಗಳಲ್ಲಿ ಗಿಡ ನೆಡುವ ಅರಣ್ಯೀಕರಣ ಕಾಮಗಾರಿ ಸೇರಿ ಹತ್ತು ಹಲವು ಕಾಮಗಾರಿಗಳನ್ನು ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ.

ತಾಲ್ಲೂಕಿನ ಕುದರೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 181, ಆವಿನಹಳ್ಳಿ ಶೇ 176, ಚೆನ್ನಗೊಂಡ ಶೇ 140, ಸೈದೂರು ಶೇ 133, ಗೌತಮಪುರ ಶೇ 131, ಸಂಕಣ್ಣ ಶ್ಯಾನುಭೋಗ್ ಶೇ 117, ಹೆಗ್ಗೋಡು ಶೇ 115, ಯಡಜಿಗಳಮನೆ ಶೇ 115, ಮರತ್ತೂರು
ಶೇ 114, ಕಾನ್ಲೆ ಶೇ 109, ತ್ಯಾಗರ್ತಿ ಶೇ 109, ಭಾನ್ಕುಳಿ ಶೇ 108, ಹಿರೇನೆಲ್ಲೂರು ಶೇ 108, ಪಡವಗೋಡು
ಶೇ 106, ಹಿರೇಬಿಲಗುಂಜಿ ಶೇ 104, ಹೊಸೂರು ಶೇ 103, ಕೆಳದಿ ಶೇ 102ರಷ್ಟು ಪ್ರಗತಿಯನ್ನು ಕಾಮಗಾರಿಯಲ್ಲಿ ಸಾಧಿಸಿದೆ.

ಹಿಂದಿನ ವರ್ಷಗಳಲ್ಲಿ ಕೂಲಿ ಕೆಲಸ ಮಾಡಿದವರಿಗೆ ಕೂಲಿ ಹಣ ಪಾವತಿಯಾಗುವಲ್ಲಿ ವಿಳಂಬವಾಗುತ್ತಿತ್ತು. ಕಳೆದ ವರ್ಷ ಈ ಸಮಸ್ಯೆಯಾಗಿಲ್ಲ. ಒಟ್ಟು ₹ 22.87 ಕೋಟಿ ಮೊತ್ತದ ಕೆಲಸ ಆಗಿದೆ. ಈ ಪೈಕಿ ಕಾಮಗಾರಿಗಳ ಸಾಮಾಗ್ರಿಗಳ ಬಿಲ್ ₹  5.55 ಕೋಟಿ, ಕೂಲಿ ಹಣದ ಮೊತ್ತ ₹ 17.32 ಕೋಟಿಯಾಗಿದೆ.

ನೀರಿನ ಸಮಸ್ಯೆಗೆ ಪರಿಹಾರ

ತ್ಯಾಗರ್ತಿ: ಸರ್ಕಾರದ ಯೋಜನೆಗಳು ಸದುಪಯೋಗಗೊಳ್ಳಬೇಕಾದರೆ ಸ್ಥಳೀಯರು, ಜನಪ್ರತಿನಿಧಿಗಳ ಶ್ರಧ್ಧೆ ಹಾಗೂ ಪ್ರಾಮಾಣಿಕತೆ ಬಹುಮುಖ್ಯ. ಜನರ ಸ್ಪಂದನೆ ದೊರೆತರೆ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯು ಸಫಲತೆ ಕಾಣುತ್ತದೆ ಎಂಬುದಕ್ಕೆ ತ್ಯಾಗರ್ತಿ ಗ್ರಾಮವೇ ಸಾಕ್ಷಿ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ತ್ಯಾಗರ್ತಿಯಲ್ಲಿ ಹೂಳು ತುಂಬಿ ಮುಚ್ಚಿರುವ ತ್ಯಾಗರ್ತಿ ಗ್ರಾಮದ ಭಟ್ಟರ ಕೆರೆ ₹ 10 ಲಕ್ಷ, ಉಂಡಾಡಿಕಟ್ಟೆ ಕೆರೆ ₹ 10 ಲಕ್ಷ, ತ್ಯಾಗರ್ತಿ ಇಂಡವಳ್ಳಿ ಕೆರೆ ₹ 10 ಲಕ್ಷ, ಅಮ್ಮನ ಕೆರೆ ₹ 10 ಲಕ್ಷ, ತೆಪ್ಪದ ಕೆರೆ ₹ 5 ಲಕ್ಷ, ಕುಕ್ಕಡಗದ್ದೆ ಕೆರೆ ₹ 5 ಲಕ್ಷ, ಕುಡಿಗೇರಿ ಊರಿನ ಕೆರೆ ₹ 10 ಲಕ್ಷ, ಕುಡಿಗೇರಿ ಭೈರದೇವರ ಕೆರೆ ₹ 10 ಲಕ್ಷ, ಸಾಡಗಳಲೆ ಊರಿನ ಕೆರೆ ₹ 10 ಲಕ್ಷ, ಬೆಳಂದೂರು ಚೆನ್ನಮ್ಮಲ್ಲಿ ಕೆರೆ ₹ 10 ಲಕ್ಷ, ಚನ್ನಾಪುರ ಕೆರೆ ₹ 10 ಲಕ್ಷ ವೆಚ್ಚದಲ್ಲಿ ಒಟ್ಟು 11 ಕೆರೆಗಳ ಹೂಳೆತ್ತುವ ಕಾಮಗಾರಿಗೆ ₹ 1 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ಈಗಾಗಲೇ ಪ್ರತಿನಿತ್ಯ 324 ಕಾರ್ಮಿಕರು, 9 ಕಾಯಕ ಬಂಧುಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕೆರೆಗಳು ಅಭಿವೃದ್ಧಿಗೊಂಡರೆ ಮಳೆಗಾಲದಲ್ಲಿ ನೀರು ಶೇಖರಣೆಗೊಂಡು ಅಂತರ್ಜಲ ವೃದ್ಧಿಯಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂಬ ಉದ್ದೇಶದಿಂದ ಕೆರೆಗಳ ಅಭಿವೃದ್ಧಿಯನ್ನೇ ಕೈಗೆತ್ತಿಕೊಂಡಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹೇಳುತ್ತಾರೆ.

ಪೂರ್ಣಗೊಳ್ಳದ ಚೆಕ್‌ಡ್ಯಾಂ; ಮರುಕಳಿಸದ ವೈಭವ

ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಎರಡು ವರ್ಷಗಳ ಹಿಂದೆ ಶರಾವತಿ ಉಗಮ ಸ್ಥಾನ ಅಂಬುತೀರ್ಥದಿಂದ ಹರಿದು ಬರುವ ನದಿ ಪಾತ್ರದ ನೀರಿಗೆ ಹೊಸನಗರ ಮಾರ್ಗದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದ ಗವಟೂರು ಹೊಳೆಗೆ ಅಡ್ಡಲಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹ 8 ಲಕ್ಷ ವೆಚ್ಚದಲ್ಲಿ ಕಿರು ಚೆಕ್‌ಡ್ಯಾಂ ನಿರ್ಮಿಸಿತ್ತು.

ಕಡು ಬೇಸಿಗೆಯಲ್ಲಿ ಸುತ್ತ ಮುತ್ತಲ ಗ್ರಾಮೀಣ ಪ್ರದೇಶ ಜನ–ಜಾನುವಾರು ಹಾಗೂ ಕಾಡು ಪ್ರಾಣಿಗಳಿಗೂ ಕುಡಿಯುವ ನೀರಿನ ಬವಣೆ ತಪ್ಪಿಸಲು ಈ ಯೋಜನೆ ರೂಪುಗೊಂಡಿತ್ತು. ಚೆಕ್‌ಡ್ಯಾಂಗೆ ಪೂರಕವಾಗಿ ಗೇಟ್‌ವಾಲ್‌ ಅಳವಡಿಕೆ ಹಾಗೂ ಪ್ರವಾಸಿಗರು ಇಲ್ಲಿ ಸ್ನಾನ, ಶೌಚಕ್ಕಾಗಿ ನೀರಿನ ಬಳಿ ಮೆಟ್ಟಿಲು ನಿರ್ಮಿಸಲು ನಿರ್ಧರಿಸಲಾಗಿತ್ತು. ಅಂದಾಜು ₹ 5 ಲಕ್ಷ ವೆಚ್ಚ ಯೋಜನೆ ಅರ್ಧಕ್ಕೆ ನಿಂತಿದೆ. ಈ ಯೋಜನೆ ಪೂರ್ಣಗೊಂಡರೆ ಗತಕಾಲದ ಹೊಳೆ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ವೈಭವ ಮರುಕಳಿಸಲಿದೆ ಎನ್ನುತ್ತಾರೆ ಸ್ಥಳೀಯರಾದ ಸೋಮಶೇಖರಪ್ಪ ಗೌಡ.

ಶಿವಮೊಗ್ಗ–ಹೊಸನಗರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಿಪ್ಪನ್‌ಪೇಟೆಯಿಂದ 3 ಕಿ.ಮೀ ದೂರದ ಗವಟೂರು ಹೊಳೆ (ಮೂಲ ಶರ್ಮಿಣಾವತಿ ನದಿ) ಪಾತ್ರದಲ್ಲಿ ಮಳೆಗಾಲದಲ್ಲಿ ಬಿದ್ದ ನೀರು ವರ್ಷಪೂರ್ತಿ ಹರಿಯುತ್ತಿತ್ತು. ನೂರಾರು ಎಕರೆ ಪ್ರದೇಶದ ಭತ್ತದ ಬೆಳೆಗಳಿಗೂ ಈ ನೀರು ಆಶ್ರಯ ತಾಣವಾಗಿತ್ತು. ಹಲವು ವರ್ಷಗಳಿಂದ ಬೇಸಿಗೆಯಲ್ಲಿ ನದಿ ನೀರು ಕ್ಷೀಣಿಸತೊಡಗಿದೆ.

ಮೂರು ದಶಕ ಹಿಂದೆ ನಡೆಯುತ್ತಿದ್ದ ಹೊಳೆ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ನೆರೆ ಜಿಲ್ಲೆಗಳಾದ ಹಾಸನ, ಅರಸೀಕೆರೆ, ಹೊನ್ನಾಳಿ, ಸಕಲೇಶಪುರ ಭಾಗಗಳಿಂದ ಹೋರಿಗಳನ್ನು ತಂದು ಕೊಡು–ಕೊಳ್ಳುವಿಕೆಯ ವ್ಯಾಪಾರದ ಭರಾಟೆ ಜೋರಾಗಿತ್ತು. ಅಪ್ಪನೊಂದಿಗೆ ಹೋರಿಕೊಳ್ಳಲು ಹೋಗುತ್ತಿದ್ದೆ ಎನ್ನುತ್ತಾರೆ ಬೈರಾಪುರದ ಶಿಕ್ಷಕ ಮಂಜಪ್ಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು