ಸೋಮವಾರ, ಆಗಸ್ಟ್ 8, 2022
24 °C
ಕೃಷಿಯಲ್ಲಿ ಮಾತ್ರವಲ್ಲ ಇವರು ಕೋಳಿ ಸಾಕಣೆಯಲ್ಲೂ ಮುಂದೆ

ತೋಟವನ್ನೇ ಪ್ರಯೋಗ ಶಾಲೆ ಮಾಡಿಕೊಂಡ ಶಂಕರಮನೆ ಅರುಣ್

ನಿರಂಜನ ವಿ. Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ತಾಲ್ಲೂಕು ಕೇಂದ್ರದಿಂದ 8 ಕಿ.ಮೀ. ದೂರದ ಉಂಟೂರುಕಟ್ಟೆ ಕೈಮರ ಸಮೀಪದ ರೈತ ಶಂಕರಮನೆ ಅರುಣ್ ಹಲವು ಪ್ರಯೋಗಗಳನ್ನು ಮೈಗೂಡಿಸಿಕೊಂಡಿದ್ದು, ಸಾಂಪ್ರದಾಯಿಕ, ಆಧುನಿಕ ಕೃಷಿ ಶಾಲೆಯ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.

18 ವರ್ಷಗಳ ಕೃಷಿ ಜೀವನದಲ್ಲಿ ಪ್ರತಿವರ್ಷ ಒಂದೊಂದು ಪ್ರಯೋಗ ಮಾಡಿದ್ದಾರೆ. ಮಲೆನಾಡಿನ ಸಾಂಪ್ರದಾಯಿಕ ಕೃಷಿಗಳಾದ ತೆಂಗು, ಅಡಿಕೆ, ಬಾಳೆ, ಏಲಕ್ಕಿ ಬೆಳೆದಿದ್ದಾರೆ. ಆಧುನಿಕ ಮಾದರಿಯ ಹಣ್ಣಿನ ಗಿಡಗಳಾದ ರಂಬೂಟಾನ್, ಮ್ಯಾಂಗೋಸ್ಟಿನ್‌, ದುರಿಯನ್‌, ಬಟರ್ ಫ್ರೂಟ್, ಲೀಚಿ ಸೇರಿದಂತೆ ವೈವಿಧ್ಯಮಯ ಹಣ್ಣುಗಳನ್ನು ಬೆಳೆದಿದ್ದಾರೆ. ಜತೆಗೆ ಅಪ್ಪೆಮಿಡಿ, ಜೀರಿಗೆ ಅಪ್ಪೆ ಸೇರಿ 6 ಬಗೆಯ ಮಾವಿನ ಗಿಡಗಳನ್ನು ಬೆಳೆಸುತ್ತಿದ್ದಾರೆ.

ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರಾಗಿ, ಎರಡೂವರೆ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ಮಾಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸತತ 12ನೇ ವರ್ಷ ನಿರ್ದೇಶಕರಾಗಿ, ಪ್ರಸ್ತುತ ಅಧ್ಯಕ್ಷರಾಗಿ ಇತರ ಕೃಷಿಕರಿಗೂ ನೆರವಾಗುತ್ತಿದ್ದಾರೆ.

ಮಾರುಕಟ್ಟೆ ಇಲ್ಲದೆ ನಷ್ಟ: ಕೇರಳ ಮೂಲದ ಜಿ.ಕೆ. 380 ನಾಟಿ ತಳಿಯ ಮೊಟ್ಟೆ ಕೋಳಿಗಳ ಉದ್ಯಮವನ್ನು ಕೆಲವು ಕಾಲ ನಡೆಸಿದ್ದರು. 48 ಕೋಳಿಗಳ ಮೂರು ಯೂನಿಟ್‌ಗಳಿಂದ ದಿನವೊಂದಕ್ಕೆ 120 ಮೊಟ್ಟೆಗಳನ್ನು ಪಡೆಯುತ್ತಿದ್ದರು. ಮಾರುಕಟ್ಟೆ ವಿಸ್ತರಣೆ ದರ ಅಧಿಕವಾದ್ದರಿಂದ ಮೊಟ್ಟೆ ಕೋಳಿ ಉದ್ಯಮವನ್ನು ನಿಲ್ಲಿಸಿದರು. ‘ಇಲ್ಲಿನ ಅನುಭವ ಬಾಯ್ಲರ್ ಕೋಳಿ ಸಾಕಾಣಿಕೆಗೆ ಅನುಕೂಲವಾಗಿದೆ’ ಎನ್ನುತ್ತಾರೆ ಅರುಣ್.

ಯಶಸ್ವಿ ಕುಕ್ಕುಟೋದ್ಯಮ: 11 ವರ್ಷಗಳಿಂದ ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ. ಪ್ರಸ್ತುತ 5 ಸಾವಿರ ಮರಿಗಳ ಕೋಳಿ ಸಾಕಾಣಿಕೆ
ಘಟಕ ಸ್ಥಾಪನೆ ಮಾಡಿದ್ದಾರೆ. 48 ದಿನಗಳ ಕಾಲ ಘಟಕದಲ್ಲಿ ಬೆಳೆದ ಕೋಳಿಗಳು 2ರಿಂದ 3 ಕೆ.ಜಿ. ಬೆಳೆದು ಮಾರಾಟಕ್ಕೆ ಅಣಿಯಾಗಿವೆ. ವರ್ಷದಲ್ಲಿ ಸುಮಾರು 6 ಬ್ಯಾಚ್‌ಗಳನ್ನು ಕಂಪನಿಗೆ ಹಾಗೂ ಖಾಸಗಿಯಾಗಿ ಮಾರಾಟ ಮಾಡುತ್ತಿದ್ದಾರೆ. ಒಂದು ಬ್ಯಾಚ್‌ಗೆ ಸುಮಾರು ₹50 ಸಾವಿರ ಆದಾಯ ಪಡೆಯುತ್ತಾರೆ.

***

‘ಕಡಿಮೆ ಖರ್ಚಿನ ಶೆಡ್’

‘5 ಸಾವಿರ ಚದರ ಅಡಿಯ ಕೋಳಿ ಸಾಕಾಣಿಕೆ ಘಟಕವನ್ನು ಅಡಿಕೆ ಮರಗಳ ತುಂಡುಗಳಿಂದ ಮಾಡಲಾಗಿದೆ. ಸಿಮೆಂಟ್, ಕಬ್ಬಿಣ, ಮರದ ಬಳಕೆ ಕಡಿಮೆ ಮಾಡಿದ್ದು, ಕೊಂಚ ಲಾಭದಾಯಕ ಎನಿಸಿದೆ. ಇದೇ ಮಾದರಿಯನ್ನು ಸ್ಥಳೀಯರು ಅಳವಡಿಸಿಕೊಂಡಿದ್ದಾರೆ’ ಎಂದು ಅವರು ಹೇಳುತ್ತಾರೆ.

***

ತಮ್ಮನ ನೆನಪಿಗೆ ಬಸ್ ನಿಲ್ದಾಣ

ಸಾರ್ವಜನಿಕರ ಅನೂಕೂಲಕ್ಕೆ ಬಹಳ ವರ್ಷಗಳಿಂದ ಶಂಕರಮನೆ ಬಸ್ ನಿಲ್ದಾಣಕ್ಕೆ ಬೇಡಿಕೆ ಇತ್ತು. ಸೇನೆಯಲ್ಲಿ ಸೇವೆ ಸಲ್ಲಿಸಿ ಮೃತಪಟ್ಟ  ಸೋದರ ಅಂಬರೀಶ್ ಹೆಸರಿನಲ್ಲಿ ಶಂಕರಮನೆ ದಂಡಿನಕೂಡಿಗೆ ಬಸ್ ನಿಲ್ದಾಣ ನಿರ್ಮಿಸಿಕೊಡುವ ಮೂಲಕ ಕೃಷಿ, ಸಾರ್ವಜನಿಕ ಜೀವನದ ಜೊತೆಗೆ ಪರೋಪಕಾರಿ ಜೀವನ ನಡೆಸಿಕೊಂಡು
ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು