ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಸರ್ಕಾರಿ ಶಾಲೆ ದಾಖಲಾತಿಗೆ ಮುಗಿಬಿದ್ದ ಜನ, 1200 ದಾಟಿದ ಮಕ್ಕಳ ಸಂಖ್ಯೆ

ದಾಖಲಾತಿ ಪ್ರಕ್ರಿಯೆ ಮುಗಿದರೂ ಅರ್ಜಿ ಸಲ್ಲಿಕೆ
Last Updated 27 ಮೇ 2022, 7:07 IST
ಅಕ್ಷರ ಗಾತ್ರ

ಶಿವಮೊಗ್ಗ: ಶಾಲೆಯಲ್ಲಿ ಮಕ್ಕಳ ಸಂಖ್ಯೆ ಭರ್ತಿಯಾಗಿದೆ. ದಾಖಲಾತಿ ಪ್ರಕ್ರಿಯೆಯನ್ನೇ ನಿಲ್ಲಿಸಿದ್ದಾರೆ. ಆದರೂ, ‘ಇದೇ ಶಾಲೆಗೆ ನಮ್ಮ ಮಕ್ಕಳು ಸೇರಬೇಕು’ ಎನ್ನುವುದು ಪಾಲಕರ ಒತ್ತಾಸೆ. ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಲು ಪೋಷಕರು ಹರಸಾಹಸ ಪಡಬೇಕಿದೆ. ಗುಣಮಟ್ಟದ ಶಿಕ್ಷಣ ಇನ್ನಿತರೆ ಸೌಲಭ್ಯಗಳ ಕಾರಣ ನಿರೀಕ್ಷೆ ಮೀರಿ ಮಕ್ಕಳು ದಾಖಲಾತಿ ಪಡೆಯುತ್ತಿದ್ದಾರೆ.

ಈ ಪರಿಯಾಗಿ ಬೇಡಿಕೆ ಸೃಷ್ಟಿಯಾಗಿರುವುದು ನಗರದ ಸರ್ಕಾರಿ ಶಾಲೆಗೆ. ನಗರದ ದುರ್ಗಿಗುಡಿಯ ಸರ್ಕಾರಿ ಮಾದರಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಈಗಾಗಲೇ ಮಕ್ಕಳು ಹೆಚ್ಚಾಗಿದ್ದಾರೆ. ಇನ್ನಷ್ಟು ಹೆಚ್ಚಾದರೆ ಬೋಧನೆ, ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಕಷ್ಟವಾಗಲಿದೆ. ಪ್ರಮುಖವಾಗಿ ಮಕ್ಕಳಿಗೆ ಆಸನದ ಕೊರತೆ ಎದುರಾಗಲಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು. ಆದರೆ, ಪಾಲಕರು ತಮ್ಮ ಮಕ್ಕಳು ಇದೇ ಶಾಲೆಗೆ ಸೇರಿಸಲು ಒತ್ತಡ ಹೇರುತ್ತಿದ್ದಾರೆ.

ಶಾಲೆಯಲ್ಲಿ 900 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶವಿದೆ. ಈಗಾಗಲೇ ಈ ಶಾಲೆಯಲ್ಲಿ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನೂ ದಾಖಲಾತಿಗೆ ಅರ್ಜಿಗಳು ಬರುತ್ತಲೇ ಇವೆ.

ಸ್ಮಾರ್ಟ್ ಸರ್ಕಾರಿ ಶಾಲೆ: ಸರ್ಕಾರಿ ಶಾಲೆ ಎಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಲ್ಲಿನ ದುರ್ಗಿಗುಡಿ ಶಾಲೆ ಈಗ ಖಾಸಗಿ ಶಾಲೆಗೂ ಸಡ್ಡುಹೊಡೆದು ಸ್ಮಾರ್ಟ್ ಆಗಿದೆ. ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್‍ಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ದುರ್ಗಿಗುಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಈಗಾಗಲೇ ಮಾದರಿಯಾಗಿ ಸ್ಮಾರ್ಟ್ ತರಗತಿಗಳನ್ನು ಪ್ರಾರಂಭಿಸಲಾಗಿದೆ.

ಸರ್ಕಾರದ ಪಠ್ಯಕ್ರಮವನ್ನು ಡಿಜಿಟಲೀಕರಣಗೊಳಿಸಿ ಶಾಲೆಗೆ ನೀಡಲಾಗಿದೆ. ಇವುಗಳ ಜತೆಗೆ ಯೂಟ್ಯೂಬ್ ಹಾಗೂ ಗೂಗಲ್ ಮೂಲಕ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತಿದೆ. ಅವುಗಳನ್ನು ಕೆ-ಯಾನ್ ಪ್ರೊಜೆಕ್ಟರ್ ಮೂಲಕ ಸ್ಮಾರ್ಟ್ ಬೋರ್ಡ್ ಮೇಲೆ ಪ್ರದರ್ಶಿಸಲಾಗುತ್ತಿದೆ. ಹೀಗೆ ಪ್ರದರ್ಶನಗೊಂಡ ಪಠ್ಯಗಳ ಕುರಿತು ಆವಶ್ಯಕತೆ ಇದ್ದಾಗ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದಾರೆ.

ಸ್ಮಾರ್ಟ್ ಬೋರ್ಡ್ ಮೇಲೆ ಬರೆಯಲು, ಪಠ್ಯವನ್ನು ಮೇಲೆ ಕೆಳಗೆ ಚಲಿಸುವಂತೆ ಮಾಡಲು ಸ್ಟೈಲಸ್ ಎಂಬ ಪೆನ್ ಬಳಸಲಾಗುತ್ತದೆ. ಸ್ಟೈಲಸ್ ಸಹಾಯದಿಂದ ಕಪ್ಪು ಹಲಗೆಯ ಮೇಲೆ ಬರೆಯುವಂತೆ ಸ್ಮಾರ್ಟ್ ಬೋರ್ಡ್ ಮೇಲೆಯೂ ಬರೆದು ವಿವರಿಸಲಾಗುತ್ತಿದೆ.

ಪೋಷಕರ ಅಳಲು: ಕೋವಿಡ್‌ ಕಾರಣದಿಂದ ಜನರ ಆರ್ಥಿಕತೆಗೆ ಬಾರಿ ಹೊಡೆತ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದರಿಂದ ನಗರದ ಹಲವು ಸರ್ಕಾರಿ ಶಾಲೆಗಳು ಭರ್ತಿಯಾಗಿವೆ.

‘ನಮಗೆ ಇದೇ ಶಾಲೆಗೆ ಸೇರಿಸಬೇಕು ಎಂಬ ಆಸೆ ಇದೆ.ಶಾಲೆಗೆ ಹೋಗಿ ಕೇಳಿದರೆ ದಾಖಲಾತಿ ಮುಗಿದಿದೆ. ಈಗ ಆಗಲ್ಲ ಬೇಕಾದರೆ ಮುಂದಿನ ವರ್ಷ ಮೊದಲೇ ಬಂದು ಸೇರಿಸಿ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ನಾವು ಲಕ್ಷಾಂತರ ಖರ್ಚು ಮಾಡಿ ಖಾಸಗಿ ಶಾಲೆಗೆ ಸೇರಿವಷ್ಟು ಶಕ್ತರಾಗಿಲ್ಲ. ಇಲ್ಲಿ ಶಿಕ್ಷಣ ಚೆನ್ನಾಗಿದೆ ಎಂದು ಮೂರು ದಿನಗಳಿಂದ ಓಡಾಡುತ್ತಿದ್ದೇವೆ’ ಎಂದು ಪೋಷಕರಾದ ಬಸಪ್ಪ ಅಳಲು ತೋಡಿಕೊಂಡರು.

ಹೆಚ್ಚುವರಿ ಕೊಠಡಿಗೆ ಮನವಿ
ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರವೇಶಕ್ಕೆ ಬೇಡಿಕೆ ಹೆಚ್ಚಿದೆ. ಖಾಸಗಿ ಆಂಗ್ಲ-ಮಾಧ್ಯಮ ಶಾಲೆಗಳ ಹಲವು ವಿದ್ಯಾರ್ಥಿಗಳು ಈ ಶಾಲೆಗೆ ಅರ್ಜಿ ಸಲ್ಲಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡವರೇ ಹೆಚ್ಚಾಗಿರುವ ಕಾರಣ ಶಾಲೆಗೆ ಬೇಡಿಕೆ ಹೆಚ್ಚಾಗಿದೆ. ದಾಖಲಾತಿ ಮುಗಿದಿದೆ ಎಂದರೂ ಪೋಷಕರು ಕೇಳುತ್ತಿಲ್ಲ. ಕೆಲವರಂತೂ ಅಧಿಕಾರಿಗಳು, ರಾಜಕಾರಣಗಳಿಂದ ಶಿಫಾರಸು ಮಾಡಿಸುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಠಡಿಗಳನ್ನು ನೀಡುವಂತೆ ಮನವಿ ಸಲ್ಲಿಸಲಾಗಿದೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಎಚ್‌.ಸಿ. ಮಲ್ಯಾನಾಯ್ಕ್‌.

*
ದುರ್ಗಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮಕ್ಕೆ ಪ್ರತ್ಯೇಕ ಶಾಲೆ ತೆರೆಯುವ ಕುರಿತು ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಾಧಕ–ಬಾಧಕಗಳನ್ನು ಚರ್ಚಿಸಿ ಪ್ರತ್ಯೇಕ ಶಾಲೆ ಆರಂಭದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಲಾಗುವುದು.
-ಸಿ.ಆರ್‌. ಪರಮೇಶ್ವರಪ್ಪ, ಡಿಡಿಪಿಐ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT