ಮಂಗಳವಾರ, ಮೇ 17, 2022
26 °C
ಕುವೆಂಪು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪತ್ರಕರ್ತ ಪಿ. ಸಾಯಿನಾಥ್

ಸಮಾಜ ಸುಧಾರಣೆಗೂ ಹೆಣಗಾಡುತ್ತಿರುವ ಪತ್ರಿಕೋದ್ಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬೃಹದಾಕಾರದಲ್ಲಿ ಬೆಳೆದಿರುವ ಮಾಧ್ಯಮ ಸಣ್ಣ ಪ್ರಮಾಣದಲ್ಲಿ ಸಮಾಜ ಸುಧಾರಣೆ ತರಲು ಒದ್ದಾಡುತ್ತಿದೆ. ಬಹುತೇಕ ಮಾಧ್ಯಮಗಳು ಸರ್ಕಾರಗಳ ತುತ್ತೂರಿಯಾಗಿವೆ ಎಂದು ಪತ್ರಕರ್ತ ಪಿ. ಸಾಯಿನಾಥ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ ಡಾ.ಶಾಂತಿನಾಥ ದೇಸಾಯಿ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘200 ವರ್ಷಗಳ ಭಾರತೀಯ ಪತ್ರಿಕೋದ್ಯಮದ ಪ್ರಸಕ್ತ ಸ್ಥಿತಿಗತಿ’ ವಿಷಯ ಕುರಿತು ಮಾತನಾಡಿದರು.

ಮಾಧ್ಯಮಗಳ ಕಾರ್ಪೊರೇಟ್ ಒಡೆತನ ಮತ್ತು ಸಂಪಾದಕ ಸ್ಥಾನಗಳಲ್ಲಿ ಒಂದು ಜಾತಿಯ ಜನರ ಏಕಸ್ವಾಮ್ಯತೆಯಿಂದಾಗಿ ಸಮಾಜದ ಜ್ವಲಂತ ಸಮಸ್ಯೆಗಳು ವರದಿಯಾಗುತ್ತಿಲ್ಲ. ಕೇವಲ ಶ್ರೀಮಂತರ, ಉಳ್ಳವರ ಸಂಬಂಧಿ ವಿಷಯಗಳು, ಅವರ ಅಗತ್ಯಗಳನ್ನು ಪೂರೈಸುವ ವರದಿಗಳನ್ನು ನೀಡುತ್ತಿರುವ ಮಾಧ್ಯಮಗಳು ‘ಮ್ಯಾಕ್‌ಡೊನಾಲ್ಡೈಸೇಶನ್’ ಪ್ರಕ್ರಿಯೆಗೆ ಒಳಗಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಬಾಲಗಂಗಾಧರ ತಿಲಕ್ ಸೇರಿ ಹಲವರು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ಪ್ರತಿದಿನವೂ ಸ್ವಾತಂತ್ರ್ಯ ಹೋರಾಟ, ರಾಜಕೀಯ, ಸಾಮಾಜಿಕ ಸುಧಾರಣೆಗಳ ಕುರಿತು ಹೆಚ್ಚು ಹೆಚ್ಚು ಬರಹಗಳನ್ನು ಪ್ರಕಟಿಸುತ್ತಿದ್ದರು. ಅಂದು ಮಾಧ್ಯಮ ಬಹಳ ಸಣ್ಣ ಪ್ರಮಾಣದಲ್ಲಿತ್ತು. ಅಂತಹ ಸಮಯದಲ್ಲಿ ಅದು ಅವಿದ್ಯಾವಂತರನ್ನೂ ಸೇರಿ ಎಲ್ಲರನ್ನೂ ತಲುಪುವ ಮೂಲಕ ಹೋರಾಟ, ಸುಧಾರಣೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿತ್ತು ಎಂದು ಗತ ಇತಿಹಾಸದ ಮೆಲುಕು ಹಾಕಿದರು.

ಭಾರತೀಯ ಪತ್ರಿಕೋದ್ಯಮ ಸಂಕಷ್ಟದಲ್ಲಿದೆ. ಉತ್ತರಪ್ರದೇಶದ ಗಂಗಾ ನದಿಯಲ್ಲಿ ಹೆಣಗಳು ತೇಲಿದ ವರದಿ ನೀಡಿದ ಮಾಧ್ಯಮಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾಹೀರಾತು ನೀಡುವುದನ್ನೇ ನಿಲ್ಲಿಸುವ ಮೂಲಕ ಮೂಗುದಾರ ಹಾಕುವ ಕೆಲಸ ನಡೆದಿತ್ತು. ಭಾರತದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲು 52 ಕಾಯ್ದೆಗಳು ಅಸ್ತಿತ್ವದಲ್ಲಿದ್ದವು. ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ, ವಿಪತ್ತು ನಿರ್ವಹಣೆ ಕುರಿತ ಕಾಯ್ದೆಗಳನ್ನೂ ಪತ್ರಕರ್ತರ ಮೇಲೆ ದಾಖಲಿಸಲಾಗಿದೆ. ಪ್ರಸ್ತುತ ಅವುಗಳ ಸಂಖ್ಯೆ 62ಕ್ಕೇರಿದೆ. ಪತ್ರಕರ್ತರ ಮೇಲೆ ಕ್ಷುಲ್ಲಕ ಕಾರಣಗಳಿಗೂ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ನೋಟಿಸ್ ನೀಡದೆ ಬಂಧಿಸಲಾಗುತ್ತಿದೆ, ಬೆದರಿಸಲಾಗುತ್ತಿದೆ ಎಂದು ದೂರಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಕುಲಸಚಿವೆ ಜಿ.ಅನುರಾಧಾ, ಪರೀಕ್ಷಾಂಗ ಕುಲಸಚಿವ ಡಾ.ನವೀನ್ ಕುಮಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ನಾಗ್ಯಾನಾಯ್ಕ್ ಮಾತನಾಡಿದರು. ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಇಂಗ್ಲಿಷ್‌ ವಿಭಾಗದ ಡಾ.ರೇಚಲ್ ಬಾರಿ, ಡಾ.ರಾಮ್ ಪ್ರಸಾದ್, ಡಾ.ಪೂರ್ಣಾನಂದ, ಡಾ.ವೀಣಾ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು