ಮಂಗಳವಾರ, ಜನವರಿ 19, 2021
17 °C

PV Web Exclusive: ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರೆಲ್ಲ ನಮ್ಮವರೇ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯ 244 ಪಂಚಾಯಿತಿಗಳ 2,605 ಸ್ಥಾನಗಳಲ್ಲಿ ಗೆಲುವು ಪಡೆದ ಅಭ್ಯರ್ಥಿಗಳಲ್ಲಿ ತಮ್ಮ ಪಕ್ಷದ ಬೆಂಬಲಿಗರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂದು ಮೂರೂ ಪಕ್ಷಗಳು ಬಿಂಬಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.

1,192 ಕ್ಷೇತ್ರಗಳಲ್ಲಿ 155 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. 2,450 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.  6,973 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಡಿ.30ರ ತಡರಾತ್ರಿವರೆಗೂ ಎಣಿಕೆ ನಡೆದು ಫಲಿತಾಂಶ ಹೊರಬಂದಿದೆ.

ಗೆಲುವು ಪಡೆದ 2,605 ಅಭ್ಯರ್ಥಿಗಳಲ್ಲಿ 1,508 ಅಭ್ಯರ್ಥಿಗಳು ಬಿಜೆಪಿ ಬೆಂಬಲಿತರು ಎಂದು ಸ್ವತಃ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಅವರು 1,050 ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರು ಎಂದು ಘೋಷಿಸಿದ್ದಾರೆ. ಜೆಡಿಎಸ್‌ ಮುಖಂಡರೂ ತಮ್ಮ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಈ ಬಾರಿ ಚುನಾಯಿತರಾಗಿದ್ದಾರೆ ಎಂದಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತ ಚುನಾವಣೆ. ಆದರೂ, ಪ್ರಮುಖ ಪಕ್ಷಗಳು ತಮಗಾಗಿ ದುಡಿದ ಕಾರ್ಯಕರ್ತರನ್ನು ಕಣಕ್ಕಿಳಿಸುವ ಮೂಲಕ, ಬೆಂಬಲಿಸುವ ಮೂಲಕ ಅವರಿಗೆ ಪ್ರಜಾಪ್ರಭುತ್ವದ ತಳ ಹಂತದ ವ್ಯವಸ್ಥೆಯಲ್ಲಿ ಸ್ಥಾನಮಾನ ದೊರಕಿಸಲು ಪ್ರಯತ್ನಿಸುತ್ತವೆ. ಗೆದ್ದ ಅಭ್ಯರ್ಥಿಗಳು ತಮ್ಮದೇ ಪಕ್ಷದವರು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಪಕ್ಷದ ಕಾರ್ಯಕರ್ತರಾಗಿ ದುಡಿದವರು, ಕಾರ್ಯಕರ್ತರು, ಮುಖಂಡರು, ಪಕ್ಷಗಳ ಜತೆ ಒಡನಾಟ ಇಟ್ಟುಕೊಂಡ ಲೆಕ್ಕಾಚಾರದ ಆಧಾರದಲ್ಲಿ ಪ್ರತಿ ಪಕ್ಷವೂ ತನ್ನ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದೇ ಬಿಂಬಿಸಿಕೊಳ್ಳುತ್ತದೆ.

ಕುರುಡು ಕಾಂಚಾಣ ಕುಣಿಯುತ್ತಲಿತ್ತು: ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಾಕಷ್ಟು ಪೈಪೋಟಿ ಕಂಡುಬಂತು. ಉದ್ಯೋಗ ಖಾತ್ರಿ ಯೋಜನೆ ಸೇರಿ ಗ್ರಾಮ ಪಂಚಾಯಿತಿಗಳಿಗೆ ಹತ್ತು ಹಲವು ಯೋಜನೆಗಳ ಬಲ, ಹಲವು ಮೂಲಗಳಿಂದ ಅನುದಾನದ ಹರಿವು ಮತ್ತಿತರ ಕಾರಣಗಳಿಂದ ಗ್ರಾಮ ಪಂಚಾಯಿತಿಗಳು ಬಲಗೊಂಡಿವೆ. ಬಹುತೇಕರು ಪಂಚಾಯಿತಿ ವ್ಯವಸ್ಥೆಯನ್ನು ಹಣ ಮಾಡುವ ತಾಣಗಳು ಎಂದು ಭಾವಿಸತೊಡಗಿದ್ದಾರೆ. ಇದರಿಂದ ಸಹಜವಾಗಿ ಗ್ರಾಮಾಡಳಿತದಲ್ಲಿ ಅಧಿಪತ್ಯ ಸ್ಥಾಪಿಸಲು ಪೈಪೋಟಿ ಏರ್ಪಟ್ಟಿದೆ. ಅದಕ್ಕಾಗಿ ಗೆಲ್ಲಲು ವಾಮಮಾರ್ಗಗಳ ಮೊರೆಹೋಗಿದ್ದಾರೆ.

ಶಿಕಾರಿಪುರ, ಸೊರಬ, ಸಾಗರ, ಹೊಸನಗರ, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯ ಹಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಣ ಹಂಚಿಕೆ ಯಾವುದೇ ಅಡತಡೆ ಇಲ್ಲದೆ ನಡೆದಿದೆ. ಕುಕ್ಕರ್, ಮಿಕ್ಸಿ, ಕೋಳಿ, ಕುರಿ ಮಾಂಸ, ಮಹಿಳೆಯರಿಗೆ ಸೀರೆ, ಮೂಗುತಿ ಸೇರಿ ಬೆಳ್ಳಿ, ಬಂಗಾರದ ಸಾಮಗ್ರಿಗಳನ್ನೂ ವಿತರಿಸಿದ್ದಾರೆ. ಸಾಮಗ್ರಿ ನೀಡಿದ ನಂತರ ದೇವರ ಮೇಲೆ ಆಣೆ, ಪ್ರಮಾಣ ಮಾಡಿಸಿಕೊಂಡಿದ್ದಾರೆ. ಹಣದ ಹಂಚಿಕೆ ನಡೆದಿರುವ ಆರೋಪಗಳು ಕೇಳಿಬಂದಿವೆ. ಕೆಲವರು ಹಣ ಹಂಚಿಕೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಏನೇ ಆರೋಪ ಕೇಳಿಬಂದರೂ, ಅಧಿಕೃತವಾಗಿ ಯಾವ ಭಾಗದಲ್ಲೂ ಪ್ರಕರಣಗಳು ದಾಖಲಾಗಿಲ್ಲ.

ಹೆಚ್ಚಿನ ಸಂಖ್ಯೆಯ ವಿದ್ಯಾವಂತರ ಲಗ್ಗೆ: ಈ ಬಾರಿ ಪಂಚಾಯಿತಿ ಚುನಾವಣೆಯ ವಿಶೇಷವೆಂದರೆ ಅಧಿಕ ಸಂಖ್ಯೆಯಲ್ಲಿ ವಿದ್ಯಾವಂತ ಯುವಕ, ಯುವತಿಯರು ಆಯ್ಕೆಯಾಗಿದ್ದಾರೆ. ಕೊರೊನಾ ಲಾಕ್‌ಡೌನ್ ಕಾರಣ ಊರುಗಳಿಗೆ ಹಿಂದಿರುಗಿದ್ದ ಯುವ ಪಡೆ, ಗ್ರಾಮಸ್ಥರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಣೆ, ಸಣ್ಣಪುಟ್ಟ ಕಾರ್ಯಗಳಿಗೆ ನೆರವಾಗಿದ್ದಾರೆ. ಆಗುಂಬೆ ಪಂಚಾಯಿತಿಯಲ್ಲಿ ವಿದೇಶದಲ್ಲಿ ನೆಲಸಿದ್ದ ಎಂಬಿಎ ಪದವೀಧರ ಶಶಾಂಕ್ ಗ್ರಾಮಕ್ಕೆ ಹಿಂದಿರುಗಿದ್ದು, ಅಲ್ಲಿ 15 ವರ್ಷಗಳಿಂದ ಪಂಚಾಯಿತಿ ಸದಸ್ಯರಾಗಿದ್ದ ಹಸಿರು ಮನೆ ನಂದನ್‌ ಅವರನ್ನು ಸೋಲಿಸಿದ್ದಾರೆ. ಮಂಡಗದ್ದೆ ಪಂಚಾಯಿತಿಯಲ್ಲಿ ಸತತ 9 ಬಾರಿ ಗೆಲುವು ಕಂಡಿದ್ದ ಮಹೇಶ್ ಗೌಡ ಅವರು ಸೋಲು ಕಂಡಿದ್ದಾರೆ. ಹಲವು ಪಂಚಾಯಿತಿಗಳಲ್ಲಿ ಹೊಸ ಮುಖಗಳ ಪ್ರವೇಶವಾಗಿದೆ. ಯುವಕರು ಸಾಮಾನ್ಯರ ಆಶೋತ್ತರಗಳಿಗೆ ಧ್ವನಿಯಾಗುವ ಭರವಸೆ ಮೂಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು