ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ಬಹುಉಪಯೋಗಿ ಬೆಳೆಯಲ್ಲಿ ಯಶಸ್ಸು ಕಂಡ ರೈತ

ಪ್ರಗತಿಪರ ಕೃಷಿಕ ಭಂಡಾರಹಳ್ಳಿ ಬಿ.ಟಿ.ಶ್ರೀಧರ
Last Updated 11 ಆಗಸ್ಟ್ 2021, 5:53 IST
ಅಕ್ಷರ ಗಾತ್ರ

ಭದ್ರಾವತಿ: ಕುಟುಂಬಕ್ಕಿರುವ ಐದು ಎಕರೆ ಭೂಮಿಯನ್ನು ಸಮಗ್ರವಾಗಿ ಬಳಕೆ ಮಾಡಿಕೊಂಡು ವಿವಿಧ ಬೆಳೆಯನ್ನು ಬೆಳೆಯುವ ಮೂಲಕ ಯಶಸ್ವಿ ಕೃಷಿಕರಾದವರು ಭಂಡಾರಹಳ್ಳಿ ಬಿ.ಟಿ.ಶ್ರೀಧರ.

ತೆಂಗು, ಅಡಿಕೆ, ಭತ್ತ, ರಾಗಿ ಜತೆಗೆ ಮನೆಗೆ ಅಗತ್ಯ ಇರುವ ಕಾಫಿ, ಮೆಣಸು, ತರಕಾರಿ ಕೃಷಿಯಲ್ಲೂ ಛಾಪು ಮೂಡಿಸಿರುವ ಅವರು ಡಯಾಂಜಾ ಮೂಲಕ ಗೊಬ್ಬರ ಸಮಸ್ಯೆ ನೀಗಿಸಿಕೊಳ್ಳುವ ಪ್ರಯತ್ನ ನಡೆಸಿದವರು. (ಡಯಾಂಜಾ– ಇದು ಗೊಬ್ಬರದ ಬೀಜ. ಇದನ್ನು ಜಮೀನಿನಲ್ಲಿ ಹಾಕಿದ ನಂತರ ಅದು ಗಿಡವಾಗಿ ಬೆಳೆಯುತ್ತದೆ. ನಂತರ ಅದನ್ನು ತುಂಡು ಮಾಡಿ ಅಥವಾ ರೋಟರ್ ಹೊಡೆದರೆ ಗೊಬ್ಬರವಾಗುತ್ತದೆ)

ಎಂಪಿಎಂ ಸಕ್ಕರೆ ಕಾರ್ಖಾನೆ ಇದ್ದಾಗ ಕಬ್ಬು ಬೆಳೆದು ಹಲವು ಪ್ರಶಸ್ತಿ ಪಡೆದ ಶ್ರೀಧರ ಅವರು, ಹೆಚ್ಚಿನ ಭತ್ತ ಇಳುವರಿ ತೆಗೆದ ವಿಭಾಗಕ್ಕೂ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದರು. ಸದಾ ಹೊಸ ಪ್ರಯೋಗದ ತುಡಿತ ಇರುವ ಹೈನುಗಾರಿಕೆಗೂ ಹೆಜ್ಜೆ ಇಟ್ಟು ಯಶ ಕಂಡಿದ್ದಾರೆ.

50 ಕೆ.ಜಿ. ಗೊಬ್ಬರದಲ್ಲಿ ಒಂದು ಎಕರೆ ಭತ್ತದ ಬೆಳೆಯನ್ನು ಸಮೃದ್ಧವಾಗಿ ಕಾಣುವ ಇವರು ಸಾವಯವ ಕೃಷಿ ಪ್ರಯೋಗದ ಜತೆಗೆ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಎಕರೆ ಪ್ರದೇಶದಲ್ಲಿ 16 ಕ್ವಿಂಟಲ್ ರಾಗಿ ಬೆಳೆದಿರುವ ಶ್ರೀಧರ್‌ ಭತ್ತದ ಇಳುವರಿಯಲ್ಲೂ ಸಾಧನೆಯನ್ನು ಮಾಡಿ ಕೃಷಿ ಇಲಾಖೆಯ ಪ್ರಶಸ್ತಿ ವಿಭಾಗಕ್ಕೆ ಆಯ್ಕೆಯಾದ ಕೀರ್ತಿ ಅವರ ಮುಡಿಗಿದೆ.

20 ಕಾಫಿ ಗಿಡಗಳನ್ನು ಅಡಿಕೆ ತೋಟದ ನಡುವೆ ಹಾಕಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಜತೆಗೆ ಮೆಣಸಿನ ಬಳ್ಳಿ ಹಬ್ಬಿಸಿ ಅದರ ಮೂಲಕವೂ ಆದಾಯ ಕಾಣುವ ಪ್ರಯತ್ನ ನಡೆಸಿ ಒಂದಷ್ಟು ಯಶ ಕಂಡಿದ್ದಾರೆ. ನಿತ್ಯದ ಅಗತ್ಯಕ್ಕೆ ತಕ್ಕಷ್ಟು ತರಕಾರಿ ಬೆಳೆಯುವುದನ್ನು ರೂಢಿ ಮಾಡಿರುವ ಅವರು ಐದು ಹಸುಗಳ ಮೂಲಕ ದೊರೆಯುವ ಗೊಬ್ಬರವನ್ನು ಜಮೀನಿಗೆ ಬಳಸಿಕೊಂಡು ರಾಸಾಯನಿಕ ಗೊಬ್ಬರ ಬಳಕೆ ಮೇಲೆ ಮಿತಿ ಹೇರಿಕೊಂಡಿದ್ದಾರೆ.

ಇರುವ ಕೃಷಿ ಭೂಮಿಯಲ್ಲೇ ಹಲವು ವಿಧದ ಬೆಳೆಗಳನ್ನು ಬೆಳೆಯುವ ಮೂಲಕ ಹೊಸ ರೀತಿಯ ಪ್ರಯೋಗಗಳಿಗೆ ಮುಂದಡಿ ಇಟ್ಟಿರುವ ಭಂಡಾರಹಳ್ಳಿ ಶ್ರೀಧರ ಅವರ ಸಾಧನೆ ಯುವ ರೈತರಿಗೆ ಅನುಕರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT