ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮದ್ವತಿ ನದಿ ಮೂಲದ ದೇವರ ಕಾಡಿಗೆ ಕೊಡಲಿ

ಬೇಲಿ ನಿರ್ಮಿಸಿ, ಗಿಡ ನೆಟ್ಟು ಅರಣ್ಯ ಸಂರಕ್ಷಿಸಿದ್ದ ಸ್ಥಳೀಯ ಗ್ರಾಮಸ್ಥರ ಶ್ರಮ ವ್ಯರ್ಥ
Last Updated 27 ಆಗಸ್ಟ್ 2021, 3:19 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಕುಮದ್ವತಿ ನದಿ ಉಗಮ ಸ್ಥಾನದ ಸಮೀಪ ಇರುವ ಬಿಲ್ಲೇಶ್ವರ ಗುಡ್ಡದ ದೇವರ ಕಾಡು ಕಡಿದು ಹಲವರು ಸಾಗುವಳಿ ಮಾಡುತ್ತಿದ್ದು, ಆ ಪ್ರದೇಶದ ಹಲವು ಗ್ರಾಮಗಳ ಜನರು ಹೋರಾಟಕ್ಕೆ ಮತ್ತೆ ಸಜ್ಜುಗೊಳ್ಳುತ್ತಿದ್ದಾರೆ.

ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೇಶ್ವರ– ಕುಮದ್ವತಿ ಮೂಲದಲ್ಲಿನ ತೀರ್ಥ ಕ್ಷೇತ್ರ ಉಳಿಸಲು 2002ರಲ್ಲೇ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಅಂದು ಸಹ ಕೆಲವು ಪಟ್ಟಭದ್ರರು ನದಿ ಉಗಮ ಸ್ಥಾನದ ಸುತ್ತಲು ಇರುವ ಅರಣ್ಯದ ಅಮೂಲ್ಯ ಮರ, ಗಿಡಗಳನ್ನು ಕಡಿಯುವ ಪ್ರಕ್ರಿಯೆ ಆರಂಭಿಸಿದ್ದರು. ಹೋರಾಟ ಬಿರುಸುಗೊಂಡ ನಂತರ ಅರಣ್ಯ ಇಲಾಖೆ ಒತ್ತುವರಿಗೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು.

ಭವಿಷ್ಯದಲ್ಲಿ ಒತ್ತುವರಿ ತಡೆಯಲು ಅಂದು ದೂರದೃಷ್ಟಿ ಹೊಂದಿದ್ದ ಗ್ರಾಮಗಳ ಮುಖಂಡರು, ಪರಿಸರ ಪ್ರಿಯರು, ಯುವಕರು ಸೇರಿಕೊಂಡು ಗ್ರಾಮ ಅರಣ್ಯ ಸಂರಕ್ಷಣಾ ಸಮಿತಿಗಳನ್ನು ರಚಿಸಿಕೊಂಡಿದ್ದರು.

₹ 20 ಲಕ್ಷ ವೆಚ್ಚ ಮಾಡಿ ಕಾಡಿಗೇ ಬೇಲಿ ನಿರ್ಮಿಸಿದ್ದರು. ಕಲ್ಲುಕಂಬಗಳನ್ನು ನೆಟ್ಟು, ತಂತಿ ಬಿಗಿದಿದ್ದರು. ಬೇಲಿ ಹಾಕಲು ಸಾಧ್ಯವಾಗದ ಸ್ಥಳಗಳಲ್ಲಿ ಟ್ರಂಚ್‌ ನಿರ್ಮಿಸಿ ಒತ್ತುವರಿ ಹಾವಳಿಗೆ ಇತಿಶ್ರೀ ಹಾಡಿದ್ದರು. ಹತ್ತು ಹಲವು ಜಾತಿಯ ಕಾಡು ಮರಗಳನ್ನು ಬೆಳೆಸಿ, ಪೋಷಿಸಿದ್ದರು. ಗ್ರಾಮಸ್ಥರೇ ಸಂರಕ್ಷಿಸಿದ ಆ ಪ್ರದೇಶವನ್ನು ‘ದೇವರ ಕಾಡು’ ಎಂದೇ ಜನರು ಕರೆಯುತ್ತಾರೆ.

ನೀರಿನ ಮೂಲಕ್ಕೂ ಸಂಚಕಾರ: ಬಿಲ್ಲೇಶ್ವರ ಗುಡ್ಡ ಸುತ್ತಲ ಗ್ರಾಮಗಳಿಂದ 200 ಅಡಿಗಿಂತಲೂ ಎತ್ತರದಲ್ಲಿದೆ. ಅಲ್ಲಿ ಜಿನುಗುವ ನೈಸರ್ಗಿಕ ನೀರು ನದಿಯಾಗಿ, ಹಳ್ಳ, ಕೊಳ್ಳಗಳಾಗಿ ಹರಿಯುತ್ತದೆ. ಸಾಗುವಳಿದಾರರು ಅಂತಹ ನೀರಿನ ಮೂಲಗಳಿಗೂ ಸಂಚಕಾರ ತಂದಿದ್ದಾರೆ.

ಬಿಲ್ಲೇಶ್ವರ ದೇವಾಲಯದ ಹಿಂಭಾಗ 150 ಎಕರೆ ಕಾಡು ನಳನಳಿಸುತ್ತಿದೆ. ಅಲ್ಲಿರುವುದು ಶೇ 90ರಷ್ಟು ದಟ್ಟ ಅರಣ್ಯ. ಶೇ 10ರಷ್ಟು ಬಿದಿರುಮಟ್ಟಿ, ಸಣ್ಣಪುಟ್ಟ ಗಿಡಗಳಿವೆ. ಈಗಾಗಲೇ ಹಲವು ಮರಗಿಡಗಳನ್ನು ಕಡಿಯಲಾಗಿದೆ. ಹೊನ್ನೆಬೈಲು, ಕಡಸೂರು ಸರ್ವೆ ನಂಬರ್ 97, 91,93, 94,96, 98, 155, 164, 165ರಲ್ಲೂ ಸಾಗುವಳಿ ಮಾಡಲಾಗಿದೆ. ತಕ್ಷಣ ಒತ್ತುವರಿ ವಿರುದ್ಧ ಕ್ರಮ ಕೈಗಳ್ಳಬೇಕು ಎಂದು ಹುಂಚ ಗ್ರಾಮ ಭೂಮಿ ಸಂರಕ್ಷಣಾ ಸಮಿತಿ, ಬಿಲ್ಲೇಶ್ವರ ಗ್ರಾಮ ಅರಣ್ಯ ಸಮಿತಿ ಕಾರ್ಯಕರ್ತರು ಹೊಸನಗರ ವಲಯ ಅರಣ್ಯಾಧಿಕಾರಿ, ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ. ಸಾಗುವಳಿಗೆ ಮಂಜೂರಾತಿ ನೀಡಬಾರದು. ಭೂ ಕಬಳಿಕೆ ತಡೆಯಬೇಕು ಎಂದು ಸಾಗರ ಉಪ ವಿಭಾಗಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

***

ಪ್ರಭಾವ, ಹಣಕ್ಕೆ ಮಂಜೂರಾತಿ ಪತ್ರ!

ಬಿಲ್ಲೇಶ್ವರ ಅರಣ್ಯ ಪ್ರದೇಶ ಸೇರಿ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಬೇಕಾಬಿಟ್ಟಿ ಭೂಮಿ ಮಂಜೂರು ಮಾಡಲಾಗಿದೆ. ದಟ್ಟ ಅರಣ್ಯ, ಕಾನು ಪ್ರದೇಶಗಳಲ್ಲಿ ಜಂಟಿ ಸರ್ವೆ ನಡೆಸದೇ, ಪಟ್ಟಭದ್ರರ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಸ್ಥಳೀಯ ಅರಣ್ಯ ಸಮಿತಿಗಳ ಅಭಿಪ್ರಾಯವನ್ನೂ ಪಡೆದಿಲ್ಲ ಎಂದು ಗ್ರಾಮ ಅರಣ್ಯ ಸಮಿತಿ ಮುಖಂಡರು ಆರೋಪಿಸಿದ್ದಾರೆ.

ಮೊದಲು ಅರಣ್ಯ ಒತ್ತುವರಿ ಮಾಡಿ ಭೂಮಿಯ ಖಾತೆ ಪಡೆದವರು ಅವುಗಳನ್ನು ಮಾರಾಟ ಮಾಡಿ, ಹೊಸದಾಗಿ ಸಾಗುವಳಿ ಮಾಡಿದ್ದಾರೆ. ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಅಂಥವರಿಗೂ ಮತ್ತೆ ಭೂಮಿ ಮಂಜೂರು ಮಾಡಲಾಗಿದೆ. ಒಂದೇ ಕುಟುಂಬದ ಹಲವರಿಗೆ ಭೂಮಿ ಮಂಜೂರು ಮಾಡಲಾಗಿದೆ. ಸರ್ವೆ ನಂಬರ್‌ನಲ್ಲಿ ಹೆಚ್ಚಿನ ಪ್ರಮಾಣದ ಸಾಗುವಾನಿ ಮರಗಳಿವೆ. ಅವುಗಳನ್ನು ಕಡಿಯುತ್ತಿದ್ದಾರೆ. ಅಂಥ ಭೂಮಿಗೂ ಹಕ್ಕುಪತ್ರ ನೀಡಲಾಗಿದೆ ಎಂದು ಹೊನ್ನೆಬೈಲು, ಕಡತೂರು ಗ್ರಾಮಸ್ಥರು ಸಾಗರ ಉಪವಿಭಾಗಾಧಿಕಾರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT