ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲಾನಾ ಆಜಾದ್ ಶಾಲೆ ಹೆಸರಿನಲ್ಲಿ ರಾಜಕಾರಣ ಸಲ್ಲ: ಶಾಸಕ ಎಚ್. ಹಾಲಪ್ಪ ಹರತಾಳು

ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿಕೆ
Last Updated 12 ನವೆಂಬರ್ 2021, 4:52 IST
ಅಕ್ಷರ ಗಾತ್ರ

ಸಾಗರ: ನಗರದ ಕೆಳದಿ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಸರ್ಕಾರಿ ಶಾಲೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ನಗರಸಭೆ ಕಚೇರಿಯಲ್ಲಿ ಗುರುವಾರ ನಗರದ ಮೌಲಾನಾ ಆಜಾದ್ ಸರ್ಕಾರಿ ಶಾಲೆ, ತಾಲ್ಲೂಕಿನ ತುಮರಿ, ತ್ಯಾಗರ್ತಿ ಗ್ರಾಮದ ಸರ್ಕಾರಿ ಶಾಲೆ ವಿವಾದದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೌಲಾನಾ ಆಜಾದ್ ಶಾಲೆಯ ಜೊತೆಗೆ ತಾಲ್ಲೂಕಿನ ತುಮರಿ, ತ್ಯಾಗರ್ತಿ ಗ್ರಾಮಗಳ ಸರ್ಕಾರಿ ಶಾಲೆಯ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದವನ್ನು ಕೂಡ ಸೌಹಾರ್ದಯುತವಾಗಿ ಬಗೆಹರಿಸಲಾಗುವುದು. ಈ ಬಗ್ಗೆ ಕೆಲವು ಕಾನೂನಿನ ತೊಡಕುಗಳಿದ್ದು, ಅದನ್ನು ಪರಿಶೀಲಿಸಿ ಶಾಲೆಯ ಜಾಗ, ಕಟ್ಟಡಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಮೌಲಾನಾ ಆಜಾದ್ ಸರ್ಕಾರಿ ಶಾಲೆಯನ್ನು ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಇರುವ ಉರ್ದು ಶಾಲೆಯಲ್ಲೇ ನಡೆಸಬೇಕು ಎಂದು ಸರ್ಕಾರಿ ಸುತ್ತೋಲೆ ಇದೆ. ಈ ಪ್ರಕಾರ 2017-18ನೇ ಸಾಲಿನಲ್ಲಿ ಗಾಂಧಿನಗರದಲ್ಲಿರುವ ಉರ್ದು ಶಾಲೆಯಲ್ಲಿ ಈ ಶಾಲೆ ಆರಂಭವಾಯಿತು. ನಂತರ ಅದನ್ನು ಸುಭಾಷ್ ನಗರದ ಈದ್ಗಾ ಮೈದಾನದಲ್ಲಿರುವ ಉರ್ದು ಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈಗ ಅಲ್ಲಿನ ಶಾಲಾ ಕಟ್ಟಡ ಶಿಥಿಲಗೊಂಡಿರುವುದರಿಂದ ಮೌಲಾನಾ ಶಾಲೆಯನ್ನು ಗಾಂಧಿನಗರ ಉರ್ದು ಶಾಲೆಗೆ ಸ್ಥಳಾಂತರಿಸುವುದು ಅನಿವಾರ್ಯ ಎಂದರು.

ಈದ್ಗಾ ಮೈದಾನ ಇರುವ ಸ್ಥಳದಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ತಾತ್ಕಾಲಿಕವಾಗಿ ಮೌಲಾನಾ ಶಾಲೆಯ ಮಕ್ಕಳಿಗೆ ಸಿದ್ದೇಶ್ವರ ಸರ್ಕಾರಿ ಶಾಲೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಲ್ಲಿ ತರಗತಿ ಕೊರತೆ ಇರುವುದರಿಂದ ಮೌಲಾನಾ ಶಾಲೆಯ ಮಕ್ಕಳಿಗೆ ಅವಕಾಶ ಮುಂದುವರಿಸಲು ಸಾಧ್ಯವಿಲ್ಲ. ಇದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಮೌಲಾನಾ ಶಾಲೆ ಆಡಳಿತದ ವಿಷಯ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದೆ. ಈ ಶಾಲೆ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಪ್ರತಿಭಟನೆ ಹೆಸರಿನಲ್ಲಿ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಈ ಪ್ರವೃತ್ತಿ ಮುಂದುವರಿದರೆ ಅಂತಹವರ ವಿರುದ್ಧ ಪ್ರತಿಯಾಗಿ ಮತ್ತೊಂದು ಪ್ರತಿಭಟನೆ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದರು.

ತುಮರಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಸ.ನಂ. 24ರಲ್ಲಿದೆ. ಆದರೆ, ಶಾಲೆಗೆ ಮಂಜೂರಾಗಿರುವ ಜಾಗ ಇರುವುದು ಸ.ನಂ.26ರಲ್ಲಿ. ಈಗ ಶಾಲೆಯ ಕಟ್ಟಡ ಹಾಗೂ ಕ್ರೀಡಾಂಗಣ ಇರುವ ಪ್ರದೇಶ ಖಾಸಗಿ ವ್ಯಕ್ತಿಯೊಬ್ಬರಿಗೆ 1950ರಲ್ಲಿ ದರಖಾಸ್ತಿನಲ್ಲಿ ಮಂಜೂರಾಗಿದ್ದು, 90ರ ದಶಕದಲ್ಲಿ ಅವರು ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. 2017ರಲ್ಲಿ ಖಾಸಗಿ ವ್ಯಕ್ತಿ ಹೆಸರಿಗೆ ಪಹಣಿ ಏರಿಸಲಾಗಿದೆ ಎಂದು ತಿಳಿಸಿದರು.

‘ಸರ್ಕಾರಿ ಶಾಲೆ ಹಾಗೂ ಕ್ರೀಡಾಂಗಣಕ್ಕೆ ಸಂಬಂಧಿಸಿದ ಜಾಗದ ಮೇಲೆ ನಾವು ಹಕ್ಕು ಪ್ರತಿಷ್ಠಾಪಿಸುವುದಿಲ್ಲ ಎಂದು ಖಾಸಗಿ ವ್ಯಕ್ತಿ ತಹಶೀಲ್ದಾರ್‌ ಅವರಿಗೆ ಲಿಖಿತವಾಗಿ ತಿಳಿಸಿದ್ದಾರೆ. ಶಾಲೆ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಪಕ್ಕಾಪೋಡಿ ಮಾಡಿಕೊಡಲು ಅವರು ಕೇಳಿದ್ದಾರೆ. ಹೀಗಾಗಿ ಶಾಲೆಯ ಜಾಗಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ’ ಎಂದು ತಿಳಿಸಿದರು.

ತ್ಯಾಗರ್ತಿ ಗ್ರಾಮದ ಸರ್ಕಾರಿ ಶಾಲೆ ಇರುವುದು ಸ.ನಂ. 3ರಲ್ಲಿ. ಆದರೆ, ಶಾಲೆಗೆ ಜಾಗ ಮಂಜೂರಾಗಿರುವುದು ಸ.ನಂ.6ರಲ್ಲಿ. ಈಗ ಶಾಲೆ ಇರುವ ಜಾಗಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಮತ್ತೊಬ್ಬರಿಗೆ ದಾನಪತ್ರ ಬರೆದುಕೊಟ್ಟಿದ್ದು, ಅದು ಕಾನೂನಿನ ಪ್ರಕಾರ ನೋಂದಣಿಯಾಗಿರುವುದಿಲ್ಲ. ಹೀಗೆ ಕೆಲವು ಕಾನೂನಿನ ಸಿಕ್ಕುಗಳಿದ್ದು ಸಂಬಂಧಪಟ್ಟ ವ್ಯಕ್ತಿಗಳನ್ನು ಕರೆಯಿಸಿ ಮಾತುಕತೆ ಮಾಡಲಾಗುವುದು ಎಂದು ಹೇಳಿದದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸದಸ್ಯರಾದ ಟಿ.ಡಿ. ಮೇಘರಾಜ್, ಮೈತ್ರಿ ಪಾಟೀಲ್, ಕೆ.ಆರ್. ಗಣೇಶ್ ಪ್ರಸಾದ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಪೌರಾಯುಕ್ತ ರಾಜು ಡಿ. ಬಣಕಾರ್. ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ. ನಾಗಪ್ಪ, ಕಂದಾಯಾಧಿಕಾರಿ ಸಂತೋಷ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT