ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಅತಿವೃಷ್ಟಿ ಪೀಡಿತ ಪಟ್ಟಿ: ಹೊಸನಗರ, ತೀರ್ಥಹಳ್ಳಿಗೆ ಇಲ್ಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಅತಿವೃಷ್ಟಿ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳನ್ನು ಪರಿಗಣಿಸದೇ ಇರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ರಾಜ್ಯ ಸರ್ಕಾರ ಮುಂಗಾರು ಮಳೆಯಿಂದ ತೀವ್ರ ಹಾನಿಗೊಳಗಾದ 13 ಜಿಲ್ಲೆಗಳ 61 ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ಎಂದು ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ಸೇರಿವೆ. ಸಾಗರ, ಸೊರಬ, ಶಿಕಾರಿಪುರ ಹಾಗೂ ಶಿವಮೊಗ್ಗ ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಹೆಚ್ಚು ಹಾನಿ ಸಂಭವಿಸಿದ ಹಾಗೂ ಅತಿ ಹೆಚ್ಚು ಮಳೆಯಾದ ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳನ್ನು ಈ ಪಟ್ಟಿಯಿಂದ ಕೈ ಬಿಟ್ಟಿರುವುದು ಆಚ್ಚರಿ ಮೂಡಿಸಿದೆ. ಈ ಎರಡೂ ತಾಲ್ಲೂಕಿನಲ್ಲಿ ಗುಡ್ಡ ಕುಸಿತ, ಧರೆ ಕುಸಿತ ಪ್ರಕರಣಗಳು, ಕಾಲು ಸಂಕ ಕೊಚ್ಚಿ ಹೋದ ಪ್ರಕರಣಗಳು ಹೆಚ್ಚಿದ್ದರೂ ಅತಿವೃಷ್ಟಿ ಪೀಡಿತ ಎಂದು ಪರಿಗಣಿಸದೇ ಇರುವುದು ವಿಪರ್ಯಾಸ ಎಂದು ತೀರ್ಥಹಳ್ಳಿಯ ಅಖಿಲೇಶ್ ಪ್ರತಿಕ್ರಿಯಿಸಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ₹ 490 ಕೋಟಿ ಅಧಿಕ ನಷ್ಟ ಸಂಭವಿಸಿದೆ. ಇದರಲ್ಲಿ ಹೆಚ್ಚಿನ ನಷ್ಟ ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲೇ ಉಂಟಾಗಿದೆ. ಒಂದೇ ದಿನದಲ್ಲಿ 400 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿತ್ತು. ಇಷ್ಟೆಲ್ಲ ಅನಾಹುತ ಸಂಭವಿಸಿದ್ದರೂ ಈ ಎರಡು ತಾಲ್ಲೂಕುಗಳು ಅತಿವೃಷ್ಟಿ ಪೀಡಿತ ಪಟ್ಟಿಯಿಂದ ಹೊರಗುಳಿದಿವೆ. ಈ ತರತಮ್ಯ ಏಕೆ ಎಂದು ಹೊಸನಗರದ ಅನಂತ್ ಪ್ರಶ್ನಿಸಿದರು.

ಪಟ್ಟಿಗೆ ಸೇರಿಸಲು ಈಗಲೂ ಅವಕಾಶವಿದೆ
ಬಿದ್ದ ಮಳೆಯ ಪ್ರಮಾಣವನ್ನು ಆಧರಿಸಿಯೇ ಅತಿವೃಷ್ಟಿ ಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈಗಲೂ ಅತಿವೃಷ್ಟಿ ಪೀಡಿತ ತಾಲ್ಲೂಕುಗಳನ್ನು ಪಟ್ಟಿಗೆ ಸೇರಿಸಲು ಅವಕಾಶವಿದೆ.
-ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.