ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಮಧ್ಯೆ ಕಿರಿಯರ ರಾಜಕಾರಣ

ಭದ್ರಾವತಿ ನಗರಸಭಾ ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ
Last Updated 13 ಏಪ್ರಿಲ್ 2021, 5:06 IST
ಅಕ್ಷರ ಗಾತ್ರ

ಭದ್ರಾವತಿ: ನಗರಸಭೆ ಚುನಾವಣೆಯಲ್ಲಿ ಹಿರಿಕರ ನಡುವೆ ಕಿರಿಯರ ರಾಜಕಾರಣದ ಸದ್ದು ಜೋರಾಗಿ ಕೇಳುತ್ತಿರುವುದು ಪಕ್ಷಗಳ ಪಾಲಿಗೆ ಒಂದಿಷ್ಟು ನಡುಕ ಹುಟ್ಟಿಸಿದೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿನ ಹಿರಿಕರ ಅನುಭವ ಹೆಚ್ಚಿದ್ದರೂ ಇವರಿಗೆ ಸಡ್ಡು ಹೊಡೆಯುವ ಎಎಪಿ, ಜೆಡಿಯು, ಸ್ನೇಹಜೀವಿ ಪೊಲೀಸ್ ಉಮೇಶ್ ಬಳಗ, ಎಸ್‌ಡಿಪಿಐ, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಸೇರಿ ಹಲವು ಪಕ್ಷೇತರರು ಕಣಕ್ಕೆ ಇಳಿಯಲು ಸಜ್ಜಾಗಿರುವುದು ಚುನಾವಣಾ ಕಣವನ್ನು ರಂಗಾಗಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಬಲದ ಜತೆಗೆ ಅವರನ್ನು ನಂಬಿರುವ, ಪಕ್ಷ ರಾಜಕಾರಣ ಒಪ್ಪುವ ದೊಡ್ಡ ಪಡೆಯೇ ಶಕ್ತಿಯಾಗಿ ನಿಂತಿದ್ದು, ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಟಿ. ನಾಗರಾಜ್, ಬಿ.ಕೆ. ಮೋಹನ್, ರೇಣುಕಮ್ಮ ಅವರ ಶಕ್ತಿಯೂ ಕೆಲಸ ಮಾಡಲಿದೆ.

ಇದಲ್ಲದೆ ನಗರಸಭೆ ರಚನೆ ನಂತರ ಎರಡು ಮೂರು ಬಾರಿ ಗೆಲುವು ಸಾಧಿಸಿರುವ ನಾಲ್ಕೈದು ಮಂದಿ ಹಿರಿಯ ಸದಸ್ಯರ ಬಲವೂ ಸೇರಿರುವುದು ಸಹಜವಾಗಿ ಅದರ ಶಕ್ತಿ ಹೆಚ್ಚು ಮಾಡಿದೆ.

ಜೆಡಿಎಸ್ ಪಕ್ಷಕ್ಕೆ ನಾಯಕರ ಕೊರತೆ ಇಲ್ಲ ಎಂಬ ಸ್ಥಿತಿ ಇದೆ. ಅಪ್ಪಾಜಿ ಶಕ್ತಿ ಈಗಲೂ ಪ್ರತಿಧ್ವನಿಸುತ್ತಿದೆ. ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಮೂರ್ನಾಲ್ಕು ಬಾರಿ ಗೆದ್ದ ಅನುಭವ ಹೊಂದಿರುವ ಬದರಿನಾರಾಯಣ, ರಾಜು, ರವಿಕುಮಾರ್ ಅವರ ಸ್ಥಳೀಯ ಸಂಸ್ಥೆಯ ರಾಜಕಾರಣದ ಅನುಭವ ಅವರ ಪಕ್ಷಕ್ಕೆ ವರವಾಗಲಿದೆ.

ಇನ್ನು ಚುನಾವಣಾ ತಂತ್ರಗಾರಿಕೆಗೆ ಹೆಸರು ಪಡೆದಿರುವ ಎಸ್. ಕುಮಾರ್ ಸದ್ಯ ಜೆಡಿಎಸ್ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೆ, ಇತ್ತ ಅಪ್ಪಾಜಿ ಪತ್ನಿ ಶಾರದಮ್ಮ ಹಾಗೂ ಪುತ್ರ ಅಜಿತ್ ಅವರ ಕಾರ್ಯಕರ್ತರ ನಡುವಿನ ಒಡನಾಟ ಪಕ್ಷದ ಶಕ್ತಿ ಹೆಚ್ಚಿಸಿದ್ದರೆ ಕಿರಿಯರಿಗೆ ಪಕ್ಷದ ಟಿಕೆಟ್ ನೀಡಿರುವುದು ವಿಶೇಷ ಎನಿಸಿದೆ.

ಬಿಜೆಪಿಯಲ್ಲಿ ಅತಿ ಹೆಚ್ಚು ಬಾರಿ ಸದಸ್ಯರಾದ ವಿ. ಕದಿರೇಶ್ ಅವರಿಗೆ2ನೇ ಪಟ್ಟಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅವರು ಮೂರು ಬಾರಿ ನಗರಸಭಾ ಸದಸ್ಯರಾಗಿ, ಅದಕ್ಕೂ ಹಿಂದೆ ನಾಲ್ಕು ಬಾರಿ ಪುರಸಭಾ ಸದಸ್ಯರಾಗಿ ಹೆಸರು
ಮಾಡಿದ್ದಾರೆ.

ಇನ್ನು ಎರಡು ಬಾರಿ ಸದಸ್ಯರಾದ ಜಿ. ಆನಂದಕುಮಾರ್ ಸೇರಿ ಅನೇಕ ಅನುಭವಿಗಳ ಪಡೆ ಬಿಜೆಪಿಯಲ್ಲಿದ್ದು, ಈಗ ಘೋಷಿಸಿರುವ 21 ಮಂದಿಯ ಮೊದಲ ಪಟ್ಟಿಯಲ್ಲಿ ಬಹುತೇಕ ಕಿರಿಯರಿಗೆ ಆದ್ಯತೆ ನೀಡಿರುವುದು ವಿಶೇಷ ಎನಿಸಿದೆ.

ಯುವಪಡೆಯ ಹೋರಾಟ: ಪ್ರಮುಖ ರಾಜಕೀಯ ಪಕ್ಷಗಳ ಹೊರತಾಗಿ ಐದು ವರ್ಷಗಳಿಂದ ಸದ್ದಿಲ್ಲದೆ ಸಂಘಟನೆ ನಡೆಸಿರುವ ಎಎಪಿ ಪಕ್ಷದ ರವಿಕುಮಾರ್ ಮತ್ತು ತಂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ತಂತ್ರಗಾರಿಕೆ
ನಡೆಸಿದೆ.

ವಿಶೇಷವಾಗಿ ಅಲ್ಪಸಂಖ್ಯಾತ ಕ್ಷೇತ್ರವನ್ನು ಗುರಿಯಾಗಿಟ್ಟುಕೊಂಡು ಎಎಪಿ ಯುವ ಸಮುದಾಯಕ್ಕೆ ಆದ್ಯತೆ ನೀಡುವ ಗುರಿಯೊಂದಿಗೆ
ಹೆಜ್ಜೆ ಹಾಕಿದೆ.

ಜೆಡಿಯು ಅಭ್ಯರ್ಥಿಗಳ ಹುಡುಕಾಟಕ್ಕೆ ಮೊರೆಹೋದರೂ ಮುಖಂಡ ಶಶಿಧರ ಎಸ್. ಗೌಡ ಯುವಕರನ್ನು ಮನವೊಲಿಸಿ ಕಣಕ್ಕೆ ಇಳಿಸುವ ಕಸರತ್ತಿಗೆ ಮುಂದಡಿ ಇಟ್ಟಿದ್ದಾರೆ.

ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಯುವಕರು ತಮ್ಮ ಮತ ಹೆಚ್ಚಿರುವ ಕಡೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ನಿರ್ಧಾರವನ್ನು ಈಗಾಗಲೇ ಘೋಷಿಸಿದ್ದಾರೆ.

ವಿಶೇಷವಾಗಿ ಸಮಾಜಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿರುವ ಸ್ನೇಹಜೀವಿ ಪೊಲೀಸ್ ಉಮೇಶ್ ಬಳಗ ರಾಜಕೀಯ ವಂಚಿತರಾದ ಯುವಕರನ್ನು, ಮಹಿಳೆಯರನ್ನು ಗುರುತಿಸಿ ಕಣಕ್ಕೆ ಇಳಿಸುವ ಕೆಲಸಕ್ಕೆ ಮುಂದಡಿ ಇಟ್ಟಿದೆ. ಈಗಾಗಲೇ 15ಕ್ಕೂ ಹೆಚ್ಚು ಕಡೆ ಅಭ್ಯರ್ಥಿಗಳ ಆಯ್ಕೆ ಮಾಡಿ ಪಕ್ಷಗಳಿಗೆ ಸಡ್ಡು ಹೊಡೆದಿದೆ.

ವಿವಿಧ ಪಕ್ಷಗಳ ಘಟಾನುಘಟಿ ಹಿರಿಯ ರಾಜಕಾರಣಿಗಳ ನಡುವೆ ಕಣಕ್ಕೆ ಇಳಿಯುತ್ತಿರುವ ಯುವ ಸಮುದಾಯ ತಮ್ಮ ಗೆಲುವಿನ ನಾಗಾಲೋಟ ಇಲ್ಲವೇ ಮತಗಳಿಕೆ ಪ್ರಮಾಣದ ಮೂಲಕ ಯಾರಿಗೆ ತಡೆಯೊಡ್ಡುತ್ತಾರೆ ಎಂಬುದೇ ಸದ್ಯ ಚರ್ಚೆಯಲ್ಲಿರುವ ವಿಷಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT