ಬುಧವಾರ, ಡಿಸೆಂಬರ್ 8, 2021
18 °C

ಶಿವಮೊಗ್ಗ: 30ಕ್ಕೆ ಹಿಂದುಳಿದ ವರ್ಗಗಳ ಧರಣಿ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ಈದ್ಗಾ ಮೈದಾನದಲ್ಲಿ ಅ.30ರಂದು ಬೆಳಿಗ್ಗೆ 11ಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದೊಂದಿಗೆ ಧರಣಿ ನಡೆಸಲಾಗುತ್ತಿದೆ. ಒಕ್ಕೂಟದ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಈಗಾಗಲೇ ಎಂಟು ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ಶಿವಮೊಗ್ಗದಲ್ಲಿ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಿವಮೊಗ್ಗ ಜಿಲ್ಲೆಯ ಹಾಗೂ ಎಲ್ಲಾ ಸಮುದಾಯದ ಹಾಲಿ, ಮಾಜಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಹಿಂದುಳಿದ ವರ್ಗಗಳ ಸಮಾಜದ ಮುಖಂಡರು, ಪ್ರಗತಿಪರರು ಭಾಗವಹಿಸುವರು. ಸುಮಾರು 10 ಸಾವಿರ ಜನರು ಈ ಧರಣಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

2015ರಲ್ಲಿ ಅಂದಿನ ಸರ್ಕಾರ ₹ 170 ಕೋಟಿ ಖರ್ಚು ಮಾಡಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ನೇತೃತ್ವದಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು. 2 ‘ಎ’ ಮೀಸಲಾತಿ ಪಟ್ಟಿಗೆ  ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದುವರಿದ ಪ್ರಬಲವಾಗಿರುವ ಜಾತಿಗಳನ್ನು ಸೇರಿಸಬಾರದು ಎಂದು ಆಗ್ರಹಿಸಿದರು.

ಪ್ರವರ್ಗ 1 ಮತ್ತು 2 ‘ಎ’ನಲ್ಲಿ ಸುಮಾರು 2 ಕೋಟಿ ಜನಸಂಖ್ಯೆ ಇದೆ. ಅವುಗಳ ಅಭಿವೃದ್ಧಿಗೆ ₹ 80 ಕೋಟಿ ಮೀಸಲಿಡಲಾಗಿದೆ. ₹  20 ಕೋಟಿ ಬಿಡುಗಡೆ ಮಡಲಾಗಿದೆ. ಈ ವರ್ಗಗಳ ಅಭಿವೃದ್ಧಿಗಾಗಿ ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ ₹ 2 ಸಾವಿರ ಕೋಟಿ ನೀಡಬೇಕು. ಇತರೆ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ವಿ.ರಾಜು, ಹೋರಾಟದ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಎಂ.ಶ್ರೀಕಾಂತ್, ಸಹ ಸಂಚಾಲಕ ಎನ್.ರಮೇಶ್, ಮುಖಂಡರಾದ ಎಸ್.ಪಿ. ಶೇಷಾದ್ರಿ, ಹುಲ್ತಿಕೊಪ್ಪ ಶ್ರೀಧರ್, ಗೋಪಾಲ್, ಕೃಷ್ಣಮೂರ್ತಿ, ಎಸ್.ಟಿ.ಹಾಲಪ್ಪ, ಪಂಡಿತ್‌ ವಿ.ವಿಶ್ವನಾಥ್ (ಕಾಶಿ), ಧರ್ಮರಾಜ್, ನಾಗರಾಜ್ ಕಂಕಾರಿ, ಕೆ.ರಂಗನಾಥ್, ಜಿ.ಟಿ.ಮಂಜುನಾಥ್, ಎಚ್.ಫಾಲಾಕ್ಷಿ  ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು