ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಭೂಮಿ ಕೊರತೆ ಅಂತ್ಯಸಂಸ್ಕಾರಕ್ಕೂ ಕಸರತ್ತು

Last Updated 30 ಮೇ 2022, 4:03 IST
ಅಕ್ಷರ ಗಾತ್ರ

ಶಿವಮೊಗ್ಗ: ನಿಧನರಾದವರಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ಎಲ್ಲ ಧರ್ಮಗಳಲ್ಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಜಿಲ್ಲೆಯಲ್ಲಿ ಸಾಕಷ್ಟು ಸ್ಮಶಾನ ಭೂಮಿಗಳಿದ್ದರೂ ಮೂಲಸೌಕರ್ಯಗಳ ಕೊರತೆ ಇದೆ. ಜಾಗದ ವಿವಾದಗಳಿವೆ. ಒತ್ತುವರಿ ಆರೋಪಗಳಿವೆ.

ಜಾತಿ, ಧರ್ಮಗಳ ಜನರಿಗೆ ಪ್ರತ್ಯೇಕ ಭೂಮಿ ಇದ್ದರೂ ಅವು ಸಮಪರ್ಕವಾಗಿಲ್ಲ. ಕೆಲವು ಜಾತಿಗಳ ಜನರು ಜಾಗಕ್ಕಾಗಿ ಇಂದಿಗೂ ಹೋರಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರ ಸೇರಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸ್ಮಾಶನಕ್ಕೆ ಜಾಗವೇ ಇಲ್ಲ. ರಸ್ತೆ ಬದಿ, ಕೆರೆ–ಕಟ್ಟೆಗಳ ಅಂಗಳಗಳಲ್ಲಿಯೇ ಶವಸಂಸ್ಕಾರ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ 1,471 ಜನವಸತಿಯ ಗ್ರಾಮಗಳಿವೆ. 1,295 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದ್ದರೂ ಸೌಲಭ್ಯ ಕಲ್ಪಿಸಿರುವುದು 471 ಗ್ರಾಮಗಳಲ್ಲಿ ಮಾತ್ರ. 341 ಗ್ರಾಮಗಳಲ್ಲಿ ಸರ್ಕಾರಿ ಜಮೀನು ನೀಡಲಾಗಿದೆ. ಸ್ಮಶಾನಕ್ಕೆ ಪ್ರತ್ಯೇಕ ಭೂಮಿ ಇಲ್ಲದ ಕಾರಣ 483 ಗ್ರಾಮಗಳಲ್ಲಿ ಕಾನು, ಸೊಪ್ಪಿನ ಬೆಟ್ಟ, ಅರಣ್ಯ ಭೂಮಿಗಳಲ್ಲೇ ಶವಸಂಸ್ಕಾರ ನಡೆಸಲಾಗುತ್ತಿದೆ. 200 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದ ಕಾರಣ ಯಾರಾದರೂ ಮೃತಪಟ್ಟರೆ ಪರದಾಡುವ ಸ್ಥಿತಿ ಇದೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 22 ಸ್ಮಶಾನಗಳಿವೆ. ರಾಗಿಗುಡ್ಡದಲ್ಲೇ ಮೂರು ರುದ್ರಭೂಮಿಗಳಿವೆ. ಹಲವು ರುದ್ರಭೂಮಿಗಳು ವಿವಾದಕ್ಕೀಡಾಗಿವೆ. ನಗರದ ನೇತಾಜಿ ವೃತ್ತದಲ್ಲಿರುವ ಕ್ರೈಸ್ತ ಸಮುದಾಯಕ್ಕೆ ಸೇರಿದ ಸ್ಮಶಾನ ಜಾಗದಲ್ಲಿ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಯವರು ನೀರಿನ ಟ್ಯಾಂಕ್‌ ಕಟ್ಟಿದ್ದನ್ನು ಖಂಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ನಗರದ ಗುಡ್ಡೇಕಲ್‌ ಸಮೀಪ ಇರುವ ಸ್ಮಶಾನ ಜಾಗ ಅತಿಕ್ರಮಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುಡ್ಡೇಕಲ್ ಸ್ಮಶಾನ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಲಾಗಿದೆ.

ಶವ ಹೂಳಲೂ ಅಸ್ಪೃಶ್ಯತೆ: ಶಿವಮೊಗ್ಗ ತಾಲ್ಲೂಕಿನ ಸೂಗೂರಿನ ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ದಲಿತರು ಶವ ಹೂಳಲೂ ಅವಕಾಶ ಇರಲಿಲ್ಲ. ತುಂಗಭದ್ರಾ ನದಿಯ ತಟದಲ್ಲಿ ಹೂಳುವ ಅನಿವಾರ್ಯತೆಇತ್ತು. ದಲಿತರು ಮೃತಪಟ್ಟಾಗ ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಂದಾಯ ಇಲಾಖೆ ದಲಿತರಿಗಾಗಿಯೇ ಒಂದು ಎಕರೆ ಸ್ಮಶಾನ ಭೂಮಿ ಮಂಜೂರು ಮಾಡಿದ ನಂತರ ಸಮಸ್ಯೆ ಬಗೆಹರಿದಿದೆ. ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಕ್ಕೆ ಜಾಗವಿಲ್ಲದೆ ರಸ್ತೆ ಬದಿಗಳಲ್ಲೇ ಶವ ಸಂಸ್ಕಾರ ಮಾಡುತ್ತಿದ್ದಾರೆ.

ನಿದಿಗೆ ಹೋಬಳಿ ಹಾಲಲಕ್ಕವಳ್ಳಿ ಗ್ರಾಮದ ಸರ್ವೆ ನಂ.19 ರಲ್ಲಿ 2 ಎಕರೆ ಜಾಗವನ್ನು ಸ್ಮಶಾನಕ್ಕೆಂದು ಸರ್ಕಾರ ಮಂಜೂರು ಮಾಡಿ 2016ರಲ್ಲಿಯೇ ಕಾಯ್ದಿರಿಸಿತ್ತು. ಆದರೆ, ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಮೇಲ್ಜಾತಿಯ ಬಲಾಢ್ಯರು ಒತ್ತುವರಿ ಮಾಡಿಕೊಂಡು ಪರಿಶಿಷ್ಟರು ಶವಗಳನ್ನು ಹೂಳಲು ಜಾಗವಿಲ್ಲದಂತೆ ಮಾಡಿದ್ದಾರೆ’ ಎಂದು ಗ್ರಾಮಸ್ಥರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

‘ಪರಿಶಿಷ್ಟ ಜಾತಿಯವರು ಗೌರಯುತವಾಗಿ ಶವ ಸಂಸ್ಕಾರ ಮಾಡಲು ಅವಕಾಶವಿಲ್ಲದಿರುವುದು ಬೇಸರದ ಸಂಗತಿ. ಹಾಲಲಕ್ಕವಳ್ಳಿ ಅಲ್ಲದೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪರಿಶಿಷ್ಟರು ಹೆಣ ಹೂಳಲು ಜಾಗವಿಲ್ಲದೆ ಪರಿತಪಿಸುವಂತಾಗಿದೆ’ ಎಂದು ಆರೋಪಿಸಿದ್ದರು.

ಗ್ರಾಮೀಣ ಭಾಗದಲ್ಲಿ ಪರದಾಟ

ಕೆ.ಎನ್. ಶ್ರೀಹರ್ಷ

ಭದ್ರಾವತಿ: ತಾಲ್ಲೂಕಿನ 165 ಗ್ರಾಮಗಳ ಪೈಕಿ 132 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇದ್ದು, ಉಳಿದ ಕಡೆ ಸ್ಮಶಾನ ಭೂಮಿ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿಸಲಾಗಿದೆ ಎಂದು ತಹಶೀಲ್ದಾರ್ ಆರ್. ಪ್ರದೀಪ್ ತಿಳಿಸಿದರು.

ಪ್ರತಿ ಗ್ರಾಮದಲ್ಲೂ ಅಧಿಕೃತ ಸ್ಮಶಾನ ಇರುವ ಸಂಬಂಧ ತಾಲ್ಲೂಕು ಆಡಳಿತ ಕೆಲಸ ನಡೆಸಿದೆ. ಇದಕ್ಕೆ ಅವಶ್ಯ ಇರುವ ಜಾಗದ ಸಮಸ್ಯೆ ಕಾರಣದಿಂದ ಕೆಲಸದ ಪ್ರಗತಿಯಲ್ಲಿ ವಿಳಂಬವಾಗಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದೆ ಎಂದರು.

ನಗರ ವ್ಯಾಪ್ತಿಯಲ್ಲಿ ಹುತ್ತಾಕಾಲೊನಿ, ಬೈಪಾಸ್ ರಸ್ತೆ ಹಾಗೂ ಹಳೇನಗರ ಭಾಗದಲ್ಲಿ ಸ್ಮಶಾನಗಳಿದ್ದು, ಅವನ್ನು ಹೈಟೆಕ್ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಖಾಸಗಿ ಸಹಭಾಗಿತ್ವದಲ್ಲಿ ಸಹ ನೆರವು ಪಡೆದು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ.

ಭಾವಸಾರ ಕ್ಷತ್ರಿಯ ಸಮಾಜದಿಂದ ದಹನ ಪ್ರಕ್ರಿಯೆಗೆ ಅಗತ್ಯ ಇರುವ ವ್ಯವಸ್ಥೆ ಮಾಡಿಕೊಟ್ಟಿರುವುದು ನಾಗರಿಕರ ಪಾಲಿಗೆ ಒಂದಿಷ್ಟು ನೆರವಾಗಿದೆ.

ಈ ಕುರಿತು ಸಮಾಜದ ಅಧ್ಯಕ್ಷ ದುಗ್ಗೇಶ್ ಪ್ರತಿಕ್ರಿಯಿಸಿ, ‘ಈಗಾಗಲೇ ಹಳೇನಗರ ಮತ್ತು ಹುತ್ತಾಕಾಲೊನಿ ಸ್ಮಶಾನ ಜಾಗದಲ್ಲಿ ದಹನ ಕ್ರಿಯೆಗೆ ಅಗತ್ಯ ಇರುವ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಇದಲ್ಲದೇ ವಿದ್ಯುತ್ ಚಿತಾಗಾರ ವ್ಯವಸ್ಥೆಗೆ ಸ್ಥಳೀಯ ಆಡಳಿತ ಕ್ರಮ ಜರುಗಿಸಿದೆ. ಶಾಸಕ ಬಿ.ಕೆ. ಸಂಗಮೇಶ್ವರ ಅವರ ಅನುದಾನದಲ್ಲೂ ಸಾಕಷ್ಟು ಕೆಲಸ ಆಗಿರುವುದರಿಂದ ಸ್ವಚ್ಛ ವಾತಾವರಣ ನಗರದ ಸ್ಮಶಾನ ಭಾಗದಲ್ಲಿ ಕಾಣಲು ಸಾಧ್ಯವಾಗಿದೆ.

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಾಟ

ನಿರಂಜನ ವಿ.

ತೀರ್ಥಹಳ್ಳಿ: ರುದ್ರಭೂಮಿ (ಸ್ಮಶಾನ) ಮಂಜೂರು ಮಾಡುವಂತೆ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಕಿಮ್ಮತ್ತಿಲ್ಲ. ಸರ್ಕಾರದ ಆದೇಶದಂತೆ ರುದ್ರಭೂಮಿ ಒಳಗೊಂಡ ಗ್ರಾಮದ ಕನಸು ನನಸಾಗಿಲ್ಲ. ಶವ ಇಟ್ಟುಕೊಂಡು ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಬೇಕಾದ ಅನಿವಾರ್ಯ ಇನ್ನೂ ಬಗೆಹರಿದಿಲ್ಲ.

ಹಲವು ಜಾತಿಗಳಿಗೆ ಸೇರಿದ ನೂರಾರು ಮನೆಗಳಿರುವ ಮಲೆನಾಡಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಸಜ್ಜಿತ ರುದ್ರಭೂಮಿ ಇಲ್ಲ. ಆಡಳಿತ ಗಭೀರವಾಗಿ ಪರಿಗಣಿಸದಿರುವುದರಿಂದ ಸ್ಮಶಾನ ಜಾಗ ಗುರುತಿಸಲು ಕಂದಾಯ ಇಲಾಖೆ ಕೈಚೆಲ್ಲಿ ಕುಳಿತಿದೆ.

ಜನಪ್ರತಿನಿಧಿಗಳ ಆಡಳಿತ ಇರುವ ಸಂದರ್ಭ ತ್ರೈಮಾಸಿಕ ಪ್ರಗತಿ ಸಭೆಯಲ್ಲಿ ಜಾಗ ಗುರುತಿಸುವಂತೆ ತಾಲ್ಲೂಕು ಪಂಚಾಯಿತಿ ಸದಸ್ಯರು ತಾಕೀತು ಮಾಡುತ್ತಿದ್ದರು. ಪ್ರಸ್ತುತ ಆಡಳಿತ ಇಲ್ಲದಿರುವುದರಿಂದ ಅಧಿಕಾರಿಗಳ ಕಾನೂನು ಮೇಲುಗೈ ಸಾಧಿಸುವಂತಾಗಿದೆ.‌ ಶೆಡ್‌ ನಿರ್ಮಾಣವಾದರೂ ಉದ್ಘಾಟನೆಗೊಳ್ಳುತ್ತಿಲ್ಲ.

ತುಂಗಾ ನದಿ ಪಾತ್ರ ಜನ ಜೀವನಕ್ಕಾಗಿ ಆಶ್ರಯಿಸಲಾಗಿದೆ. ಕೆಲವರು ಸಾಗುವಳಿ, ವಾಸದ ಪ್ರದೇಶವಾಗಿ ಅತಿಕ್ರಮಿಸಿಕೊಂಡಿದ್ದರಿಂದ ರುದ್ರಭೂಮಿಗೆ ಜಾಗ ಗುರುತಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಗ್ರಾಮಠಾಣ ಪ್ರದೇಶವಿದ್ದರೂ ರುದ್ರಭೂಮಿಗೆ ಜಾಗ ಮಂಜೂರಾತಿಗೆ ಆಡಳಿತ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯ ಪ್ರದೇಶದ ಕಗ್ಗಂಟು: ಅರಣ್ಯ ಪ್ರದೇಶದಲ್ಲಿ ಊರ ಹೊರಗೆ ಶವ ಸಂಸ್ಕಾರ ನಡೆಸಲಾಗುತ್ತಿತ್ತು. 70ರ ದಶಕದಲ್ಲಿ ಜಾರಿಗೆ ಬಂದ ಅರಣ್ಯ ಕಾಯ್ದೆ ರುದ್ರಭೂಮಿಗಳನ್ನು ಅತಿಕ್ರಮಿಸಿತು. ಸ್ಮಶಾನಪಟ್ಟೆಯ ಮೇಲೆ ಬೇಲಿ ಮಾಡಿಕೊಳ್ಳದ ಗ್ರಾಮಸ್ಥರು ಕಾಲಕ್ರಮೇಣ ಜಾಗಕ್ಕಾಗಿ ಪರದಾಟ ನಡೆಸುವಂತಾಯಿತು. ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದವರು ಪ್ರತ್ಯೇಕ ಜಾಗದಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಹಿಂದೂಗಳ ತುಳಸಿಕಟ್ಟೆ ರುದ್ರಭೂಮಿಗೆ ಸರಿಯಾದ ವ್ಯವಸ್ಥೆ ಇಲ್ಲ. ಅನುಕೂಲ ಇದ್ದವರು ತಮ್ಮ ಜಮೀನಿನ ಒಳಗೆ ಅಂತ್ಯಕ್ರಿಯೆ ನಡೆಸಿದರೆ, ಇಲ್ಲದವರು ಇಲಾಖೆಯೊಂದಿಗೆ ಕಾದಾಡಿ ಅರಣ್ಯ ಪ್ರದೇಶದಲ್ಲಿ ಸುಡಬೇಕಾಗಿದೆ.

ಸ್ಮಶಾನ ಭೂಮಿಗೆ ಬೇಕು ಸಂರಕ್ಷಣೆ ಕವಚ

ವಿ. ಸಂತೋಷ್‌ಕುಮಾರ್‌

ಕಾರ್ಗಲ್‌: ಇಲ್ಲಿನ ಶರಾವತಿ ನದಿ ತೀರದಲ್ಲಿರುವ ಮರಳುಕೋರೆಯ ಹಿಂದೂ ರುದ್ರಭೂಮಿಗೆ ಸಂರಕ್ಷಣೆಯ ಕವಚವನ್ನು ತೊಡಿಸುವ ಅವಶ್ಯಕತೆ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದಿದ್ದ ಕಾರ್ಮಿಕ ವರ್ಗಕ್ಕಾಗಿ ಶವಸಂಸ್ಕಾರಕ್ಕೆಂದು ಗುರುತಿಸಿದ ಜಾಗವಿದು. ಅನಾದಿ ಕಾಲದಿಂದಲೂ ಹಿಂದೂಗಳು ನದಿ ತೀರವನ್ನು ಕೇಂದ್ರೀಕರಿಸಿ, ಶವಗಳನ್ನು ಹೂಳುವ ಮತ್ತು ಅಗ್ನಿ ಸ್ಪರ್ಶದ ಮೂಲಕ ಅಂತ್ಯಸಂಸ್ಕಾರ ನೇರವೇರಿಸುವ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ.

ಕಾರ್ಗಲ್ ಸುತ್ತಮುತ್ತಲಿನ ಗ್ರಾಮದವರು ಮತ್ತು ಮಜಿರೆ ಗ್ರಾಮದಲ್ಲಿ ಸಾವು ನೋವುಗಳು ಸಂಭವಿಸಿದಾಗ ತಮ್ಮದೇ ಸ್ವಂತ ಜಾಗದಲ್ಲಿ ಅಂತಿಮ ಕ್ರಿಯಾ ಕರ್ಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಕಾರ್ಗಲ್ ಕೇಂದ್ರ ಪ್ರದೇಶದ ಕೆಪಿಸಿ ಉದ್ಯೋಗಿಗಳು, ಕೂಲಿ ಕಾರ್ಮಿಕರು, ಕೊಳಚೆ ನಿರ್ಮೂಲನಾ ಮಂಡಳಿಯ ಪ್ರದೇಶಗಳು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಇರುವ ತುಂಡು ಭೂಮಿಯಲ್ಲಿ ಅಂತಿಮ ಕ್ರಿಯಾ ಕರ್ಮ ನೆರವೇರಿಸಲು ಅನುಕೂಲವಾಗಿಲ್ಲ.

ಹಾಲಿ ಸ್ಮಶಾನ ಭೂಮಿಯಲ್ಲಿ ಗಿಡಗಳು ಬೆಳೆದಿದ್ದು, ಗಡಿ ಪ್ರದೇಶಗಳೇ ಗುರುತಿಸದಂತಹ ಪರಿಸ್ಥಿತಿ ಇದೆ. ರಸ್ತೆ ಬದಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತಿರುವುದನ್ನು ಗಮನಸಿದ ಸ್ಥಳೀಯ ಆಡಳಿತ ಕಾಂಪೌಂಡ್‌ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಆದರೆ, ಇದು ಪೂರ್ಣವಾಗಬೇಕಿದೆ. ಸ್ಮಶಾನ ಭೂಮಿಯಲ್ಲಿ ರಾತ್ರಿ ಸಂದರ್ಭದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಆಗಬೇಕಾಗಿದೆ. ಹೊಳೆ ಅನತಿ ದೂರದಲ್ಲಿದ್ದರೂ ಸ್ಮಶಾನದಲ್ಲಿ ಸುವ್ಯವಸ್ಥಿತ ನೀರಿನ ತೊಟ್ಟಿ ಅಳವಡಿಸಿ ಅಗತ್ಯ ಸಂದರ್ಭದಲ್ಲಿ ನೀರು ಸಿಗುವ ವ್ಯವಸ್ಥೆ ಮಾಡಬೇಕಿದೆ. ನೂತನವಾಗಿ ಚಿತಾಗಾರವನ್ನು ನಿರ್ಮಾಣ ಮಾಡಿದ್ದು, ಚಿತಾಗಾರದ ಆವರಣದ ಸುತ್ತಲೂ ಚೊಕ್ಕವಾಗಿಡಲು ಅಗತ್ಯ ಕ್ರಮವನ್ನು ಸ್ಥಳೀಯ ಆಡಳಿತ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ಮಲೆನಾಡಿನಲ್ಲಿ ಹಿಂದೂ ಸಮುದಾಯದ ಬಹುತೇಕರು ಹೆಣ ಸುಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೆಡ್‌ಗಳು ಇಲ್ಲವಾಗಿವೆ. ಮಳೆಗಾಲದಲ್ಲಿ ಸುಡುವುದಕ್ಕೆ ಜಾಗ ಸಿಗುವುದಿಲ್ಲ. ನಿರ್ಮಾಣವಾಗಿರುವ ಶೆಡ್‌ಗಳನ್ನು ಹಾಳು ಬಿಡಲಾಗಿದೆ. ಮುಡುಬ ರಾಘವೇಂದ್ರ, ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ

ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು. ಗಂಭೀರ ಸಮಸ್ಯೆಗಳಿರುವೆಡೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಶೈಲ ಎನ್.‌, ಇಒ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT