ಗುರುವಾರ , ಜನವರಿ 21, 2021
24 °C

ಆರೋಪಿಗಳ ಬಂಧನಕ್ಕೆ ಆಗ್ರಹ; ಹಿಂದೂ–ಮುಸ್ಲಿಂ ಸಂಘಟನೆಗಳ ಪ್ರತ್ಯೇಕ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರದಲ್ಲಿ ಈಚೆಗೆ ನಡೆದ ಬಜರಂಗ ದಳದ ಮುಖಂಡನ ಮೇಲಿನ ಹಲ್ಲೆ, ಆನಂತರದ ಬೆಳವಣಿಗೆಗಳಲ್ಲಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎರಡೂ ಕೋಮಿನ ಸದಸ್ಯರು ಬುಧವಾರ ಬೇರೆಬೇರೆ ಠಾಣೆಗಳ ಮುಂದೆ ಪ್ರತಿಭಟನೆ ನಡೆಸಿದರು.

ಹಿಂದೂ ಸಮಾಜದ ಯುವಕರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕೋಟೆ ಪೊಲೀಸ್ ಠಾಣೆ ಮುಂದೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಜರಂಗ ದಳದ ಮುಖಂಡ ಹಾಗೂ ಇತರೆ ಯುವಕರ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ನಡೆದು ಒಂದು ತಿಂಗಳು ಕಳೆದರೂ ಗೂಂಡಾಗಳನ್ನು ಬಂಧಿಸಿಲ್ಲ. ಆದರೆ, ಹಲ್ಲೆ ಮಾಡಿದವರನ್ನು ಬಿಟ್ಟು ಹಲ್ಲೆಗೊಳಗಾದ ಯುವಕರನ್ನೆ ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು  ಆರೋಪಿಸಿದರು.

ಹಿಂದೂ ಯುವಕರನ್ನು ಬೆಳಗಿನ ಜಾವ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿದ್ದಾರೆ. ಯಾರ ಒತ್ತಡ ಎಂಬುದೇ ಅರ್ಥವಾಗುತ್ತಿಲ್ಲ.
ಪೊಲೀಸ್ ಇಲಾಖೆ ಒಂದು ಕೋಮಿನ ಹಿಂದೆ ಕೆಲಸ ಮಾಡುತ್ತಿದೆ. ತಕ್ಷಣ ಪ್ರಕರಣ ವಾಪಸ್ ಪಡೆದು ಬಂಧಿತ ಹಿಂದು ಯುವಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಮುಖಂಡರಾದ ರಾಮು, ಇ.ವಿಶ್ವಾಸ್, ಬಳ್ಳೆಕೆರೆ ಸಂತೋಷ್, ಭವಾನಿ ಶಂಕರ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮುಸ್ಲಿಂ ಮುಖಂಡರ ಪ್ರತಿಭಟನೆ:

ಅತ್ತ ಕೋಟೆ ಪೊಲೀಸ್ ಠಾಣೆ ಮುಂದೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ಇತ್ತ ದೊಡ್ಡಪೇಟೆ ಠಾಣೆ ಮುಂದೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ರಾತ್ರಿವೇಳೆ ಮನೆಗೆ ಬಂದು ಮುಸ್ಲಿಂ ಯುವಕರನ್ನು ಬಂಧಿಸಲಾಗುತ್ತಿದೆ. ಗಲಾಟೆಗಳು ನಡೆದು ತಿಂಗಳಾದರೂ ನಿಜವಾದ ದುಷ್ಕರ್ಮಿಗಳನ್ನು ಪತ್ತೆ ಮಾಡಿಲ್ಲ. ಅಮಾಯಕ ಯುವಕರನ್ನು ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸರು ಅತ್ಯಂತ ಹೀನಾಯವಾಗಿ ಬೈದು ಅವಮಾನ ಮಾಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂಧಿಸಿದರೆ ಹೇಗೆ? ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂಧಿತ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಮುಖಂಡ ಪರ್ವೇಜ್ ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು