ಭಾನುವಾರ, ಮೇ 22, 2022
21 °C

ಬೀದಿ ಬದಿ ವ್ಯಾಪಾರಿಗಳಿಗೆ ಮಳಿಗೆ ಹಂಚಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ವಿನೋಬನಗರದ ಶಿವಾಲಯದ ಪಕ್ಕದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಬೀದಿ ಬದಿಯ ವ್ಯಾಪಾರಸ್ಥರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ದಲಿತ ಕ್ರಿಯಾ ಸಮಿತಿ ಕಾರ್ಯಕರ್ತರು ಮಂಗಳವಾರ ಲಕ್ಷ್ಮೀ ಚಿತ್ರಮಂದಿರ ಬಳಿ ರಸ್ತೆ ತಡೆ ನಡೆಸಿ, ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಸಿದರು.

ಮಳಿಗೆಗಳನ್ನು ಲಕ್ಷ್ಮೀ ಚಿತ್ರಮಂದಿರ ಬಳಿಯ ಫುಟ್‌ಪಾತ್ ವ್ಯಾಪಾರಿಗಳಿಗೆ ಹಂಚಿಕೆ ಮಾಡುವುದಾಗಿ ಪಾಲಿಕೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದವರು ಭರವಸೆ ನೀಡಿದ್ದರು. ಕಳೆದ 15 ವರ್ಷಗಳಿಂದ ಆ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಗುರುತಿಸಿ ಪಟ್ಟಿ ಮಾಡಿ ಅಧಿಕೃತವಾಗಿ ವಿತರಣೆ ಕೂಡ ಮಾಡಲಾಗಿತ್ತು. ಆದರೆ, ಮಳಿಗೆ ಹಂಚಿಕೆಯಲ್ಲಿ ಲೋಪವಾದ ಕಾರಣ ತಡೆಹಿಡಿಯಲಾಗಿತ್ತು. ಈಗ ಮತ್ತೆ ಸ್ಮಾರ್ಟ್‌ ಸಿಟಿ ಕಾಮಗಾರಿ ಅಂಗವಾಗಿ ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡುತ್ತಿದ್ದು, ಅವರ ಬದುಕು ಮೂರಾಬಟ್ಟೆಯಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರಬೇಕು. ಮಳಿಗೆಗಳನ್ನು ಅರ್ಹರಿಗೆ ವಿತರಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ಮಳಿಗೆ ನೀಡುವುದಾಗಿ ಮಾತು ಕೊಟ್ಟಿದ್ದರು. ಆದರೆ, ಕಾರ್ಯಗತಗೊಳಿಸಲು ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

ದಿಢೀರ್ ರಸ್ತೆ ತಡೆಯಿಂದ ಟ್ರಾಫಿಕ್ ಜಾಮ್ ಉಂಟಾಯಿತು. ರಸ್ತೆ ತಡೆ ಮಾಡದಂತೆ ಪೊಲೀಸರು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ರಸ್ತೆ ತಡೆ ನಡೆಸಿದ್ದರಿಂದ 15 ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಿಪಿಐ ರವಿಕುಮಾರ್ ಮಧ್ಯ ಪ್ರವೇಶಿಸಿ ಪ್ರತಿಭಟನಕಾರರ ಮನವೊಲಿಸಿದ್ದರಿಂದ ರಸ್ತೆತಡೆ ಸ್ಥಗಿತಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ವಿ. ಭಗವಾನ್, ಶಮಿ, ಮದನ್, ಚಂದ್ರು, ಮಂಜುನಾಥ್, ಯಶೋದಾ, ಚಂದ್ರಮ್ಮ, ಲತಾ, ರತ್ನಮ್ಮ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.