ಶನಿವಾರ, ಡಿಸೆಂಬರ್ 3, 2022
26 °C
ಮಳಲಿಮಠ: ಕಾರ್ತಿಕ ದೀಪೋತ್ಸವ ಮತ್ತು ಜನ ಜಾಗೃತಿ ಧರ್ಮಸಭೆಯಲ್ಲಿ ರಂಭಾಪುರಿ ಶ್ರೀ ಆಶಯ

ಅಜ್ಞಾನದ ಕತ್ತಲೆ ಕಳೆಯಲು ಗುರುವಿನ ಮಾರ್ಗದರ್ಶನ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳಲಿಮಠ (ಕೋಣಂದೂರು): ‘ಹೊರಗಿನ ಕತ್ತಲೆ ಕಳೆಯಲು ದೀಪ ಬೆಳಗಬಹುದು. ಆದರೆ, ಒಳಗಿರುವ ಅಜ್ಞಾನದ ಕತ್ತಲೆಯನ್ನು ಕಳೆಯಲು ಗುರುವಿನ ಬೋಧಾಮೃತ ಅವಶ್ಯಕ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. 

ಸಮೀಪದ ಮಳಲಿ ಮಠದಲ್ಲಿ ಭಾನುವಾರ ನಡೆದ ಕಾರ್ತಿಕ ದೀಪೋತ್ಸವ ಮತ್ತು ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ನಾವೆಲ್ಲಾ ಸದೃಢವಾಗಿ ಬೆಳೆದಿದ್ದೇವೆ. ಆದರೆ, ಮನುಷ್ಯನ ಮನಸ್ಸುಗಳು ಮಲೀನಗೊಂಡಿವೆ. ಶಾಂತಿ ನೆಮ್ಮದಿ ಮಾಯವಾಗಿದೆ. ಎಲ್ಲ ರಂಗಗಳಲ್ಲೂ ಅಸ್ತವ್ಯಸ್ತ, ಅರಾಜಕತೆ ಕಾಣುತ್ತಿದೆ. ಇಂತಹ ಸಂದರ್ಭಗಳಲ್ಲಿ ಮಠಗಳು ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ’ ಎಂದು ಹೇಳಿದರು.

‘ನಮ್ಮ ಸಂಸ್ಕೃತಿಯ ಬಗ್ಗೆ ಇಂದಿನ ಮಕ್ಕಳಿಗೆ ತಿಳಿ ಹೇಳುವ ವಿಚಾರದಲ್ಲಿ ಉದಾಸೀನ ತೋರಬಾರದು. ಧರ್ಮ, ದೇವರು, ಭಾಷೆ, ಪ್ರಾಂತ್ಯಗಳ ಹೆಸರಿನಲ್ಲಿ ಇಂದು ನಡೆಯಬಾರದ ದುರ್ಘಟನೆಗಳು ನಡೆಯುತ್ತಿರುವುದು ನಾಗರಿಕ ಸಮಾಜದ ಲಕ್ಷಣಗಳಲ್ಲ. ಹಚ್ಚುವುದೇ ಆದರೆ ದೀಪವನ್ನು ಹಚ್ಚು, ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿಯನ್ನು ಆರಿಸು. ಆದರೆ, ದೀಪವನ್ನಲ್ಲ. ಮನುಷ್ಯ ಉರಿಯುತ್ತಿದ್ದಾನೆ
ಹೊರತು ಬೆಳಗುತ್ತಿಲ್ಲ. ಅಧ್ಯಾತ್ಮ ಜ್ಞಾನದ ಕೊರತೆಯಿಂದಾಗಿ ಮನುಷ್ಯ ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಮನುಷ್ಯನ ಮನಸ್ಸು ಸಂಕುಚಿತಗೊಂಡು ಅನಾಗರಿಕ ಜೀವನ ಮತ್ತು ಸ್ವೇಚ್ಛಾಚಾರ ಹೊಂದಿ ಮಾನಸಿಕ ಶಾಂತಿ ಕಳೆದುಕೊಳ್ಳುತ್ತಿದ್ದಾನೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಕಾರ್ಯಕ್ರಮವನ್ನು ಉದ್ಘಾಟಸಿ, ‘ಮಠಗಳು ವಿಶ್ವವಿದ್ಯಾಲಯಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಮೌಲ್ಯಗಳ ನಿರ್ಮಾಣ ಮಠಗಳಿಂದ ಸಾಧ್ಯವಾಗುತ್ತಿದೆ. ಆಧುನಿಕ ಶಿಕ್ಷಣ ಶಕ್ತಿಯನ್ನು ಕೊಡುತ್ತಿಲ್ಲ. ಬದಲಾಗಿ ಅನೇಕ ಅಪರಾಧಗಳಿಗೆ ಕಾರಣವಾಗುತ್ತಿರುವುದು ವಿಷಾದ ನೀಯ. ಪೊಲೀಸ್ ಠಾಣೆಗಳ ಬೇಡಿಕೆಗೆ ಹೋಲಿಸಿದರೆ ಶಾಲೆಗಳ ಬೇಡಿಕೆ ಕ್ಷೀಣಿಸಿದೆ. ಮನುಷ್ಯನಾಗುವ ಶಿಕ್ಷಣ ಸಿಗದೇ ಇರುವುದು ಇಂದಿನ ದುರಂತ’ ಎಂದರು.

ಮಳಲಿಮಠ ಮಹಾಸಂಸ್ಥಾನದ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೇಲೂರು
ಶಾಸಕ ಕೆ.ಎಸ್.ಲಿಂಗೇಶ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉದ್ಯಮಿ ಕೆ.ಆರ್.ಪ್ರಕಾಶ್, ಬಿ.ಯುವರಾಜ, ಕೆ.ಎಂ.ಚನ್ನಬಸಪ್ಪ ಗೌಡ್ರು, ವೀರೇಶ್ ಆಲುವಳ್ಳಿ, ಎಚ್.ಎಸ್.ಜಗದೀಶ,
ಎಸ್.ಎಸ್.ಜ್ಯೋತಿ ಪ್ರಕಾಶ ಮಾತನಾಡಿದರು.

ಬಂಕಾಪುರ, ಕವಲೇದುರ್ಗ, ಬೇರುಗುಂಡಿ, ಹಾರನಹಳ್ಳಿ, ಕುಮಾರಪಟ್ಟಣ, ಶಾಂತಪುರ, ಕೋಣಂದೂರು, ಸಂಗೊಳ್ಳಿ, ಕಡೇನಂದಿಹಳ್ಳಿ, ಹನುಮಾಪುರ, ಕುಮಾರಪಟ್ಟಣ ಶ್ರೀಗಳು ಭಾಗವಹಿಸಿದ್ದರು. ಬಿ.ಎಂ.ಸುರೇಶ್ ಗವಾಯಿಗಳು ಪ್ರಾರ್ಥಿಸಿದರು. ಶಿವಪ್ರಕಾಶ್ ಪಾಟೀಲ ಕಗ್ಗಲಿ ಸ್ವಾಗತಿಸಿ, ಎನ್.ವರ್ತೇಶ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು