ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಕುಡ್ನಲ್ಲಿ ಸೇತುವೆ ತಲುಪಲು ಇಲ್ಲ ಸಮರ್ಪಕ ರಸ್ತೆ!

ಶೃಂಗೇರಿ– ತೀರ್ಥಹಳ್ಳಿ ಸಂಪರ್ಕ ರಸ್ತೆಗೆ ಅಧಿಕಾರಿಗಳ ನಿರಾಸಕ್ತಿ
Published 21 ಮಾರ್ಚ್ 2024, 7:10 IST
Last Updated 21 ಮಾರ್ಚ್ 2024, 7:10 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಶೃಂಗೇರಿ ಸಂಪರ್ಕದ ಕುಡ್ನಲ್ಲಿ ಸೇತುವೆಗೆ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೇ ಜನರು ಪರದಾಡುವಂತಾಗಿದೆ. ಅನುದಾನದ ಕೊರತೆ ಇಲ್ಲದಿದ್ದರೂ, ಸಂಬಂಧಿಸಿದವರ ನಿರಾಸಕ್ತಿಯು ಕಾಮಗಾರಿಯ ವೇಗವನ್ನು ಕುಗ್ಗಿಸಿದೆ.

ಸೇತುವೆ ಕಾಮಗಾರಿ 2020ರಲ್ಲೇ ಪೂರ್ಣಗೊಂಡಿದೆ. ಆದರೆ, ಅರಣ್ಯ, ಲೋಕೋಪಯೋಗಿ ಇಲಾಖೆಯ ಜಟಾಪಟಿಯಲ್ಲಿ ಸಂಪರ್ಕ ರಸ್ತೆ ಇಲ್ಲದೆ ಜನರ ಬಳಕೆಗೆ ಲಭ್ಯವಾಗಿಲ್ಲ. ಮಳೆಗಾಲದಲ್ಲಿ ಕೆಸರಿನಿಂದಾಗಿ ನಡೆದುಕೊಂಡು ಹೋಗುವುದು ಕಷ್ಟವಾಗಿದೆ. ಬೇಸಿಗೆಯಲ್ಲಿ ಮಣ್ಣಿನದಾರಿ ಸರಿಪಡಿಸುವುದೇ ತಲೆನೋವಾಗಿ ಪರಿಣಮಿಸಿದೆ.

ಶೃಂಗೇರಿ, ತೀರ್ಥಹಳ್ಳಿ ಸಂಪರ್ಕಕ್ಕೆ ಸೇತುವೆ ನಿರ್ಮಿಸಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರ ಬಸವಾನಿ ರಾಮಶರ್ಮ ಅವರ ಕನಸಾಗಿತ್ತು. ಈ ಬಗ್ಗೆ 1970ರಿಂದಲೇ ಪ್ರಯತ್ನ ನಡೆದಿತ್ತು. ಬದಲಾದ ರಾಜಕೀಯ ಸನ್ನಿವೇಶದಿಂದ ಕುಡ್ನಲ್ಲಿಯ ಬದಲಿಗೆ, ಸಮೀಪದ ತೀರ್ಥಮುತ್ತೂರು ಬಳಿ ಸೇತುವೆ ನಿರ್ಮಾಣವಾಯಿತು. ಇದರಿಂದ ಕುಡ್ನಲ್ಲಿ ಸೇತುವೆ ಬೇಡಿಕೆ ಸ್ವಲ್ಪ ಕಡಿಮೆಯಾಯಿತು.

ಮತ್ತೆ 2007ರಲ್ಲಿ ಸೇತುವೆಗಾಗಿ ಸ್ಥಳೀಯರು ಬೇಡಿಕೆ ಇಟ್ಟರು. 2018ರ ವಿಧಾನಸಭಾ ಚುನಾವಣೆ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಕುಡ್ನಲ್ಲಿ ಸೇತುವೆ ಪೂರ್ಣಗೊಂಡಿದ್ದರೂ ಸಂಪರ್ಕದ ರಸ್ತೆ ತಡೆಗೋಡೆ ಇಲ್ಲದೆ ಕುಸಿಯುತ್ತಿರುವುದು
ಕುಡ್ನಲ್ಲಿ ಸೇತುವೆ ಪೂರ್ಣಗೊಂಡಿದ್ದರೂ ಸಂಪರ್ಕದ ರಸ್ತೆ ತಡೆಗೋಡೆ ಇಲ್ಲದೆ ಕುಸಿಯುತ್ತಿರುವುದು

ಬಳಿಕ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್)‌ ₹ 18 ಕೋಟಿ ವೆಚ್ಚದ ಸೇತುವೆಗೆ ಅನುಮೋದನೆ ನೀಡಿತು. ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ 2020ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಸೇತುವೆಗೆ ಉತ್ತಮ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಪರದಾಟ ಮುಂದುವರಿದಿದೆ. ತೀರ್ಥಹಳ್ಳಿ ಸಂಪರ್ಕದ ಬಸವಾನಿ ರಸ್ತೆಗೆ ಹೆಚ್ಚುವರಿ ₹ 1.95 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ನನೆಗುದಿಗೆ ಬಿದ್ದಿದೆ.

ಪ್ರಸ್ತಾವ ತಿರಸ್ಕರಿಸಿದ ಅರಣ್ಯ ಇಲಾಖೆ:

150 ಮೀಟರ್‌ ರ‍್ಯಾಂಪ್‌ ಮತ್ತು ರಸ್ತೆ ಕಾಮಗಾರಿಗಾಗಿ ಹೆಚ್ಚುವರಿ ₹ 1.90 ಕೋಟಿ ಅನುದಾನ ಮೀಸಲಿಡಲಾಗಿದೆ. ಲೋಕೋಪಯೋಗಿ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ತಿರಸ್ಕರಿಸಿದೆ. 90 ಡಿಗ್ರಿ ರಸ್ತೆ ನಿರ್ಮಾಣದಿಂದ ಮರಗಳಿಗೆ ಹಾನಿಯಾಗುತ್ತದೆ. ಹಿಂದಿನಿಂದ ಬಳಕೆಯಲ್ಲಿರುವ ದೋಣಿ ಮಾರ್ಗದ ಬಂಡಿ ರಸ್ತೆಗೆ ಅಭ್ಯಂತರ ಇಲ್ಲ ಎಂದು ಅರಣ್ಯ ಇಲಾಖೆ ಅಭಿಪ್ರಾಯಪಟ್ಟಿದೆ. ಇಲಾಖೆಗಳ ನಡುವಿನ ಜಟಾಪಟಿಯಲ್ಲಿ ಹಾಲ್ಮುತ್ತೂರು, ಕಮ್ಮರಡಿ, ಬಸವಾನಿ, ಶುಂಠಿಕಟ್ಟೆ, ಹೊಳೆಕೊಪ್ಪ, ದೇವಂಗಿ, ಕೊಪ್ಪ, ಶೃಂಗೇರಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ತಾತ್ಕಾಲಿಕ ಸಮಸ್ಯೆಗಳು ಬಗೆಹರಿದಿವೆ. ಶೀಘ್ರ ರಸ್ತೆ ಕಾಮಗಾರಿ ಮುಕ್ತಾಯವಾಗಲಿದೆ’ ಎಂದು ಕೆಆರ್‌ಡಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಲಿಂಗರಾಜ್ ತಿಳಿಸಿದ್ದಾರೆ.

ಗ್ರಾಮಸ್ಥರು ನಿರ್ಮಿಸಿದ ಮಣ್ಣಿನ ರಸ್ತೆ
ಗ್ರಾಮಸ್ಥರು ನಿರ್ಮಿಸಿದ ಮಣ್ಣಿನ ರಸ್ತೆ
ಬಿ.ಕೆ. ಉದಯ್‌ ಕುಮಾರ್
ಬಿ.ಕೆ. ಉದಯ್‌ ಕುಮಾರ್
ಶರತ್‌ ಕುಮಾರ್
ಶರತ್‌ ಕುಮಾರ್
ಕಾಳಜಿ ಇಲ್ಲದ ಕಾರಣದಿಂದ ಕಿಮ್ಮನೆ ರತ್ನಾಕರ ಅವಧಿಯ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಸರ್ಕಾರದ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ. ಅಧಿಕಾರಿಗಳು ಸ್ವಪ್ರತಿಷ್ಠೆ ಬಿಟ್ಟು ರಸ್ತೆ ನಿರ್ಮಿಸಬೇಕು
–ಬಿ.ಕೆ. ಉದಯ್‌ ಕುಮಾರ್‌ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ (ಬಸವಾನಿ)
ಬಸವಾನಿ ಕಮ್ಮರಡಿ ಸಂಪರ್ಕಕ್ಕೆ ಕುಡ್ನಲ್ಲಿ ಸೇತುವೆ ಅಗತ್ಯವಾಗಿದೆ. ರಸ್ತೆ ಇಲ್ಲದೆ ಓಡಾಟ ನಡೆಸುವುದೇ ಕಷ್ಟಕರವಾಗಿದೆ
–ಶರತ್‌ ಕುಮಾರ್ ಮಾರ್ಗ ಬಳಕೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT