ಈ ಸೇತುವೆ ‘ದ್ವೀಪ’ವಾಗಿದ್ದ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಕೊಂಡಿಯಾಗಿದೆ. ಇಂಥ ದಿನಕ್ಕಾಗಿ ‘ದ್ವೀಪವಾಸಿ’ಗಳು ಹಲವು ದಶಕಗಳಿಂದ ಆಸೆಗಣ್ಣಿನಿಂದ ಕಾಯ್ದುಕುಳಿತಿದ್ದರು. ಈಗ ಆ ದಿನ ಬಂದೇಬಿಟ್ಟಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ ನಡುವೆ ಹೊಳೆಬಾಗಿಲಲ್ಲಿ ಶರಾವತಿಯ ಹಿನ್ನೀರಿನಲ್ಲಿ ನಿರ್ಮಾಣಗೊಂಡ ದೇಶದ ಎರಡನೇ ಅತೀ ದೊಡ್ಡ ತೂಗು ಸೇತುವೆ ಜುಲೈ 14 ರಂದು ಸಂಚಾರಕ್ಕೆ ಮುಕ್ತವಾಗಲಿದೆ.

ನಾನು ದೇಶದ ಎರಡನೇ ಅತೀ ದೊಡ್ಡ ತೂಗು ಸೇತುವೆ ಮೇಲೆ ನಿಂತಿದ್ದೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ ನಡುವೆ ಹೊಳೆಬಾಗಿಲಲ್ಲಿ ಶರಾವತಿಯ ಹಿನ್ನೀರಿನುದ್ದಕ್ಕೂ ಎದ್ದು ನಿಂತಿದೆ. ಸಂಚಾರಕ್ಕೆ ಮುಕ್ತವಾಗುತ್ತಿರುವ ಸೇತುವೆಯನ್ನು ಕಣ್ತುಂಬಿಕೊಳ್ಳಲು, ಅದರ ಮೇಲೆ ಮೊದಲ ಹೆಜ್ಜೆ ಇಟ್ಟು ನೆನಪಿನ ಕೋಶದಲ್ಲಿ ಜೋಪಾನ ಮಾಡಿಕೊಳ್ಳಲು ಹಲವರು ಬರುತ್ತಿದ್ದಾರೆ. ಸೇತುವೆ ಮೇಲೆ ನಿಂತು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು, ವಿಡಿಯೊ, ರೀಲ್ಸ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಈ ಭಾಗದಲ್ಲಿ ಈಗ ಎಲ್ಲೆಲ್ಲಿಯೂ ಈ ಸೇತುವೆಯದೇ ‘ಮಾತು–ಕತೆ’.

ಈ ಸೇತುವೆ ನಿರ್ಮಾಣಕ್ಕೂ ಹಿಂದಿನ ಕಥೆ ಹೀಗಿದೆ..

ನಲವತ್ತರ ದಶಕದಲ್ಲಿ ಜೋಗದ ಬಳಿ ಜಲ ವಿದ್ಯುತ್ ಉತ್ಪಾದನೆಗೆ ನೀರು ಸಂಗ್ರಹಕ್ಕೆ ಸಾಗರ ತಾಲ್ಲೂಕಿನ ಮಡೇನೂರು ಬಳಿ ಶರಾವತಿ ನದಿಗೆ ‘ಹಿರೇಭಾಸ್ಕರ’ ಹೆಸರಲ್ಲಿ ಅಣೆಕಟ್ಟೆ ನಿರ್ಮಿಸಲಾಯಿತು. ಅಲ್ಲಿಯವರೆಗೂ ಮಲೆನಾಡಿನ ಸಾಮಾನ್ಯ ಹಳ್ಳಿ, ಪೇಟೆಗಳಂತಿದ್ದ ಕರೂರು–ಬಾರಂಗಿ ಹೋಬಳಿಗಳ ಭೂ ಪ್ರದೇಶ ಶರಾವತಿಯ ಹಿನ್ನೀರು ಹಾದಿಯಲ್ಲಿ ‘ದ್ವೀಪ’ವಾಗಿ ಬದಲಾಗಿಬಿಟ್ಟವು.

ಮುಂದೆ ಜೋಗದ ಪರಿಸರದಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶ ಹೆಚ್ಚುತ್ತಿದ್ದಂತೆಯೇ ಮೊದಲಿಗೆ ಮೈಸೂರು ಸಂಸ್ಥಾನ ನಿರ್ಮಿಸಿದ್ದ ‘ಹಿರೇಭಾಸ್ಕರ’ ಎಂಬ ಪುಟ್ಟ ಅಣೆಕಟ್ಟೆಯನ್ನು ಮುಳುಗಿಸಿ ಲಿಂಗನಮಕ್ಕಿ ಜಲಾಶಯ (1964) ಎದ್ದುನಿಂತಿತು. ಇದರಿಂದ ಶರಾವತಿಯ ಹಿನ್ನೀರ ಒಡಲಲ್ಲಿ ನೀರು ಸಂಗ್ರಹದ ಅಗಾಧತೆ ಹೆಚ್ಚುತ್ತಿದ್ದಂತೆಯೇ ಎರಡೂ ಹೋಬಳಿಗಳ ವ್ಯಾಪ್ತಿಯ 60ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 20 ಸಾವಿರ ಜನರು ಸಂಪರ್ಕದಿಂದ ವಂಚಿತರಾದರು.

ಈ ಹೊತ್ತಿನಲ್ಲಿ ಮರದ ಹುಟ್ಟು, ಬುಟ್ಟಿ, ನಾಡದೋಣಿಗಳೇ ‘ದ್ವೀಪ’ದ ಜನರು ಮತ್ತು ಸಾಗರ ಪಟ್ಟಣದ ನಡುವೆ ಸಂಪರ್ಕ ಕೊಂಡಿ ಆಗಿದ್ದವು. ಎರಡು ದೋಣಿಗಳನ್ನು ಸೇರಿಸಿ ರೂಪಿಸುತ್ತಿದ್ದ ‘ಜಂಗಲ್’ನಲ್ಲಿ ಎತ್ತಿನಬಂಡಿ, ಅಡಿಕೆ, ಕಾಳುಮೆಣಸು ಸಾಗಿಸಬೇಕಿತ್ತು. ಮಳೆಗಾಲ, ಗಾಳಿ ತೀವ್ರವಾಗಿದ್ದಾಗ ತಿಂಗಳುಗಟ್ಟಲೇ ದೋಣಿಗಳ ಓಡಾಟ ಸಾಧ್ಯವಾಗುತ್ತಿರಲಿಲ್ಲ. ಇದು ಸ್ಥಳೀಯರ ಬದುಕನ್ನು ಅಸಹನೀಯವಾಗಿಸುತ್ತಿತ್ತು. ಅದೊಮ್ಮೆ ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ದೋಣಿ ಕರೂರು ಬಳಿ ಮುಗುಚಿ ವಧು–ವರರ ಸಮೇತ 22 ಜನರು ನೀರು ಪಾಲಾಗಿದ್ದರು.

ಲಾಂಚ್ ಸೇವೆ ಬಂತು

ದುರಂತದ ನಂತರ ಸಮಸ್ಯೆಯ ಗಂಭೀರತೆ ಅರಿತ ಸರ್ಕಾರ ‘ದ್ವೀಪ’ದ ಜನರ ಓಡಾಟಕ್ಕೆ 1969ರಲ್ಲಿ ಲಾಂಚ್ ಸೇವೆಯನ್ನು ಆರಂಭಿಸಿತು. ಆಗ ಅಕ್ಕಿ–ಬೇಳೆ, ರೋಗ–ರುಜಿನ, ಹೆರಿಗೆ–ಬಾಣಂತನ, ಶಾಲೆ–ಕಾಲೇಜು, ಕೃಷಿ ಕಾರ್ಯ ಎಲ್ಲದಕ್ಕೂ ಲಾಂಚ್ನ ಹಾದಿ ಕಾಯಬೇಕಿತ್ತು. ಲಾಂಚ್ ಬಂದಾಗಲಷ್ಟೇ ಅಲ್ಲಿನ ಜನರ ಬದುಕು ಚಲನಶೀಲವಾಗುತ್ತಿತ್ತು.

ಎರಡು ಲಾಂಚ್ಗಳು ಇದ್ದಾಗಲೂ ಸಂಜೆ ಆರು ಗಂಟೆಯ ನಂತರ ತಾಲ್ಲೂಕು ಕೇಂದ್ರ ಸಾಗರಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅವು ಸಂಚಾರ ನಿಲ್ಲಿಸುತ್ತಿದ್ದಂತೆಯೇ ‘ದ್ವೀಪ’ದ ಜನರ ಬದುಕು ಸ್ತಬ್ಧಗೊಳ್ಳುತ್ತಿತ್ತು. ಹೆರಿಗೆ ನೋವು ಬಂದರೆ, ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಬೆಳಕು ಹರಿಯುವವರೆಗೂ ಕಾದು ಕುಳಿತುಕೊಳ್ಳಲೇಬೇಕಿತ್ತು. ತೀವ್ರ ಕಾಯಿಲೆಯವರಾದರೆ ಸತ್ತು ಹೋದರು ಎಂದೇ ಲೆಕ್ಕ. ಅಡಿಕೆಗೆ ಸಾಗರವೇ ಮಾರುಕಟ್ಟೆ. ಊರ ಮಕ್ಕಳ ಶಿಕ್ಷಣಕ್ಕೂ ಅಲ್ಲಿಗೇ ಹೋಗಬೇಕಿತ್ತು. 40 ಕಿಲೋಮೀಟರ್ ದೂರದ ಆ ಊರಿಗೆ ಕಾರ್ಗಲ್–ಕೋಗಾರ್ ಮೂಲಕ 110 ಕಿಲೋಮೀಟರ್ ಸುತ್ತಿ ಬಳಸಿ ಹೋಗಬೇಕು. ನಾವು ಇಲ್ಲಿಯವರೆಗೂ ‘ದ್ವೀಪ’ದವರು ಆಗಿದ್ದೆವು. ಸೇತುವೆ ಆಗಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಇನ್ನು ನಾಗರಿಕರು ಅನ್ನಿಸಿಕೊಳ್ಳಲಿದ್ದೇವೆ ಎಂದು ಜೆಟ್ಟಿನಬೈಲು ಪಿ.ಟಿ.ಸುಬ್ಬರಾವ್ ನಗೆ ಚೆಲ್ಲುತ್ತಾರೆ.

‘ದ್ವೀಪ’ ವ್ಯಾಪ್ತಿಯ ಸುಳ್ಳೊಳ್ಳಿಯಿಂದ ಹಾರಿಗೆಯ ಆಸ್ಪತ್ರೆಗೆ ತುಂಬು ಗರ್ಭಿಣಿಯನ್ನು ಕರೆದೊಯ್ಯಲು ಉದ್ದಾನೆಯ ಲಾಂಚ್ ಬಳಿಗೆ ಕರೆದೊಯ್ಯುವಾಗ ಜೋರು ಮಳೆ. ದಾರಿ ಮಧ್ಯೆಯೆ ಆಕೆಗೆ ಹೆರಿಗೆ ನೋವು ಹೆಚ್ಚಾಯಿತು. ಮರದ ಕೆಳಗೆ ಜೀಪು ನಿಲ್ಲಿಸಿ ಬೆಡ್ಶೀಟ್ನಿಂದ ಗಾಜು ಮುಚ್ಚಿದೆ. ದಾರಿ ಮಧ್ಯೆಯೇ ಹೆರಿಗೆ ಆಯ್ತು ಎಂದು ಹೊಳೆಬಾಗಿಲಲ್ಲಿ 15 ವರ್ಷಗಳಿಂದ ಜೀಪು ಓಡಿಸುತ್ತಿರುವ ಬಿಳಿಗಾರಿನ ಸುರೇಶ್ ಜೈನ್ ನೆನಪಿಸಿಕೊಂಡರು.

ಇಪ್ಪತ್ತು ವರ್ಷಗಳಿಂದ ಈಚೆಗೆ ಹಿನ್ನೀರಿನಾಚೆಯ ಸಿಗಂದೂರು ಕ್ಷೇತ್ರ ಪ್ರವರ್ಧಮಾನಕ್ಕೆ ಬಂದು ರಾಜ್ಯದ ಪ್ರಮುಖ ಯಾತ್ರಾ ಸ್ಥಳವಾಯಿತು. ನಾಡಿನೆಲ್ಲೆಡೆಯಿಂದ ನಿತ್ಯ ಬರುತ್ತಿದ್ದ ಸಾವಿರಾರು ಜನರು ಓಡಾಟಕ್ಕೆ ಅದೇ ಲಾಂಚ್ ಸೇವೆಯನ್ನೇ ಅವಲಂಬಿಸಿದ್ದರು. ಜೊತೆಗೆ ‘ದ್ವೀಪ’ ಭಾಗದಲ್ಲೂ ಜನಸಂಖ್ಯೆ ಹೆಚ್ಚಳ, ಉದ್ಯೋಗ, ವ್ಯವಹಾರ ನಿಮಿತ್ತ ಹೊರ ಪ್ರಪಂಚದ ಅವಲಂಬನೆಯೂ ಹೆಚ್ಚಿತು. ಅಲ್ಲಿಯವರೆಗೂ ಕೊಂಚ ಸುಲಭವಾಗಿದ್ದ ಲಾಂಚ್ ಓಡಾಟ ಸ್ಥಳೀಯರು–ಹೊರಗಿನವರ ನಡುವೆ ಪೈಪೋಟಿಗೆ, ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿತು.

ಇದು 2004ರಲ್ಲಿ ನಡೆದ ಘಟನೆ. ಆಗ ಒಂದೇ ಲಾಂಚ್ ಇತ್ತು. ಹೊಳೆಬಾಗಿಲಿನಿಂದ ಗಜಾನನ ಬಸ್ನ ಕೊನೆಯ ಟ್ರಿಪ್. ಲಾಂಚ್ ಹತ್ತಲು ಪ್ರವಾಸಿಗರನ್ನು ಸಾಲಿನಲ್ಲಿ ನಿಲ್ಲಿಸಲಾಗಿತ್ತು. ಬ್ಯಾಕೋಡಿನ ಯುವಕನೊಬ್ಬನಿಗೆ ಹಾವು ಕಚ್ಚಿತ್ತು. ಗುಮ್ಮನಬೈಲ್ನ ಹೆಣ್ಣುಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಇಬ್ಬರನ್ನೂ ಒಂದೇ ವಾಹನದಲ್ಲಿ ಕೂರಿಸಿ ಲಾಂಚ್ ಹತ್ತಿಸಲು ಮುಂದಾದರು. ಆಗ ಸಾಲಿನಲ್ಲಿ ನಿಂತಿದ್ದ ಯಾತ್ರಿಕರು ಜಗಳ ತೆಗೆದರು. ಹಾವು ಕಚ್ಚಿದ್ದ ಸ್ಥಳಕ್ಕೆ ಕಟ್ಟು ಹಾಕಿದ್ದರಿಂದ ಆ ಯುವಕ ನೋವಿನಿಂದ ಬೊಬ್ಬೆ ಹಾಕುತ್ತಿದ್ದ. ಮಹಿಳೆಗೆ ಹೆರಿಗೆ ನೋವು. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಅಷ್ಟೊತ್ತಿಗೆ ಒಂದೂವರೆ ಗಂಟೆ ಅಲ್ಲಿಯೇ ಕಳೆದಿತ್ತು. ಆ ದಿನ ತಮ್ಮೂರಲ್ಲೇ ಸ್ಥಳೀಯರು ಪರಕೀಯರಾಗಿ ಹೊರಗಿನಿಂದ ಬಂದವರಿಂದ ದಬಾವಣೆಗೆ ಒಳಗಾಗಿದ್ದರು. ಆ ಘಟನೆ ಈ ಭಾಗದಲ್ಲಿ ಸೇತುವೆಯ ಕೂಗಿಗೆ ಬಲ ತಂದುಕೊಟ್ಟಿತ್ತು.

‘ಹತ್ತಾರು ಘಟನೆಗಳು ಲಾಂಚ್ ಹೊರತಾಗಿ ಪರ್ಯಾಯ ಸಂಪರ್ಕ ವ್ಯವಸ್ಥೆಯ ಯೋಚನೆಗೆ ಇಂಬುಕೊಟ್ಟವು. ಹಿನ್ನೀರಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಬೇಡಿಕೆ ಒಡಮೂಡಿತು. ಮುಂದೆ ಪಕ್ಷಾತೀತವಾಗಿ ಹೋರಾಟ ವೇದಿಕೆಯ ಹುಟ್ಟಿಗೆ ನಾಂದಿಯಾಯಿತು. ಹಿರಿಯರಾದ ಕಾಗೋಡು ತಿಮ್ಮಪ್ಪ ನಮ್ಮ ಬೆನ್ನಿಗೆ ನಿಂತರು. ಹೋರಾಟ ಗಂಭೀರ ಸ್ವರೂಪ ಪಡೆದು ಸರ್ಕಾರದ ಗಮನ ಸೆಳೆದಿತ್ತು. ಆದರೆ, ಅದು ಹಲವು ಅಡಚಣೆಗಳಿಂದ ಕಾರ್ಯಗತಗೊಂಡಿರಲಿಲ್ಲ’ ಎಂದು ಅಂಬಾರಗೋಡ್ಲು–ಕಳಸವಳ್ಳಿ ಸೇತುವೆ ಹೋರಾಟ ಸಮಿತಿ ಮುಖಂಡ ಪ್ರಸನ್ನ ಕೆರೆಕೈ ಹೇಳುತ್ತಾರೆ.

ಹಿನ್ನೀರು ಹಾದಿಯಲ್ಲಿ ಸೇತುವೆ ನಿರ್ಮಾಣದಲ್ಲಿ ತುಮರಿಯ ಕೃಷಿಕ ಟಿ.ಎಂ.ಶ್ರೀಧರ ಮೊದಲು ಪ್ರಯತ್ನ ಆರಂಭಿಸಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತ ವಲಯದಲ್ಲಿದ್ದ ಶ್ರೀಧರ, ಎಂಜಿನಿಯರ್ಗಳನ್ನು ಕರೆಸಿ ಹಿನ್ನೀರಿನಲ್ಲಿ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಿದ್ದರು. ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಅದನ್ನು ದೆಹಲಿಗೂ ತೆಗೆದುಕೊಂಡು ಹೋಗಿದ್ದರು. ಗೌಡರು ಅಧಿಕಾರದಿಂದ ಇಳಿಯುತ್ತಿದ್ದಂತೆಯೇ ಆ ಪ್ರಸ್ತಾವ ಮೂಲೆಗೆ ಸೇರಿತ್ತು. ಮುಂದೆ ಬಿ.ಎಸ್. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಆರ್ಎಸ್ಎಸ್ ಮುಖಂಡ ಚದುರವಳ್ಳಿಯ ಪರಮೇಶ್ವರ ಸೇತುವೆ ವಿಚಾರದಲ್ಲಿ ಅವರ ಬೆನ್ನು ಬಿದ್ದರು ಎನ್ನುತ್ತಾರೆ ಕರೂರು ಹೋಬಳಿ ಗ್ರಾಮ ಪಂಚಾಯ್ತಿಗಳ ಒಕ್ಕೂಟದ ಅಧ್ಯಕ್ಷರೂ ಆದ ಜೆಟ್ಟಿನಬೈಲು ಪಿ.ಟಿ.ಸುಬ್ಬರಾವ್.

‘ದ್ವೀಪ’ದ ಜನರು ನಿರ್ಣಯ ಕೈಗೊಂಡ ತಕ್ಷಣ ಹಿನ್ನೀರಲ್ಲಿ ಸೇತುವೆ ನಿರ್ಮಾಣ ಕೆಲಸ ಆಗಿಬಿಡುವಂತಹದ್ದಾಗಿರಲಿಲ್ಲ. ಸೀಮಿತ ಪ್ರದೇಶದ 20 ಸಾವಿರ ಜನರಿಗೆ ಇಂತಹದ್ದೊಂದು ಯೋಜನೆ ಬೇಕೇ? ಇದರಿಂದ ರಾಜ್ಯಕ್ಕೆ ಏನು ಲಾಭ ಇದೆ? ಆದಾಯ ರೂಪದಲ್ಲಿ ಹಾಕಿದ ಬಂಡವಾಳ ವಾಪಸ್ ಬರಲಿದೆಯೇ? ಎಂಬ ಪ್ರಶ್ನೆಗಳೂ ಅಧಿಕಾರಶಾಹಿಯಿಂದ ಎದುರಾಗಿದ್ದವು. ಅರಣ್ಯ, ವನ್ಯಜೀವಿ ವಲಯ, ಪರಿಸರ ಸೂಕ್ಷ್ಮ ಪ್ರದೇಶದ ಅಡಚಣೆ ನಿವಾರಣೆಯ ಜೊತೆಗೆ ದೊಡ್ಡಮಟ್ಟದ ಹಣಕಾಸಿನ ಬೆಂಬಲವೂ ಬೇಕಿತ್ತು. ಈ ಹೊತ್ತಿನಲ್ಲಿ ಬೆನ್ನಿಗೆ ನಿಂತವರು ಆಗ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ. ಅವರು ತೋರಿದ ರಾಜಕೀಯ ಇಚ್ಛಾಶಕ್ತಿ ಫಲವಾಗಿ ಸೇತುವೆಯ ವಿಷಯ ಬಜೆಟ್ನಲ್ಲಿ ಸೇರ್ಪಡೆಗೊಂಡು ₹100 ಕೋಟಿ ಮೀಸಲಿಟ್ಟಿದ್ದರು ಎಂದು ಸುಬ್ಬರಾವ್ ಸ್ಮರಿಸುತ್ತಾರೆ.

ಕರೂರು–ಬಾರಂಗಿ ಹೋಬಳಿಯಲ್ಲಿರುವವರಲ್ಲಿ ಹೆಚ್ಚಿನವರು ಶರಾವತಿ ಯೋಜನೆ ಸಂತ್ರಸ್ತರು. ಅವರ ತ್ಯಾಗಕ್ಕೆ ಬೆಲೆ ಕೊಟ್ಟು, ಸಾಮಾಜಿಕ ನ್ಯಾಯಕ್ಕೆ ಮನ್ನಣೆ ಕೊಡಬೇಕೇ ಹೊರತು ಅಲ್ಲಿಂದ ಲಾಭ ನಿರೀಕ್ಷೆ ಬೇಡ ಎಂದು ಅಧಿಕಾರಶಾಹಿಗೆ ಯಡಿಯೂರಪ್ಪ ಕಿವಿಮಾತು ಹೇಳಿದರು?. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಇಲ್ಲಿನ ಸಂಗತಿಗಳ ಮನದಟ್ಟು ಮಾಡಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಕೆ ಆಗಿ ಜಿಲ್ಲಾ ಮುಖ್ಯರಸ್ತೆ ಆಗಿದ್ದ ಸಾಗರ–ಮರಕುಟಿಕ ರಸ್ತೆ, ರಾಷ್ಟ್ರೀಯ ಹೆದ್ದಾರಿ 369E ಆಗಿ ಮೇಲ್ದರ್ಜೆಗೇರಿತು. ಸಂಚಾರ ದಟ್ಟಣೆ ಸೇರಿದಂತೆ ಅಗತ್ಯ ಮಾನದಂಡಗಳೇನೂ ಇಲ್ಲದ ರಸ್ತೆಯೊಂದು ಏಕಾಏಕಿ ಇಷ್ಟೊಂದು ದೊಡ್ಡ ಸ್ಥಾನಮಾನ ಪಡೆದದ್ದು ದೇಶದ ಇತಿಹಾಸದಲ್ಲಿಯೇ ವಿರಳಾತಿ ವಿರಳ.

‘ಸೇತುವೆ ಆಗಿರೋದರಿಂದ ತುಂಬಾ ಅನುಕೂಲವಾಗಿದೆ. ಬೇಕಾದ ವಸ್ತುಗಳನ್ನು ನಾವೇ ತಂದುಕೊಳ್ಳಬಹುದು. ಇಲ್ಲಿಯವರೆಗೂ ಹಿನ್ನೀರು ದಾಟಬೇಕೆಂದರೆ ಲಾಂಚ್ನ ಸಮಯಕ್ಕೆ ಹೋಗಬೇಕಿತ್ತು. ಇನ್ನು ನಮ್ಮ ಬದುಕಿನ ಅಗತ್ಯಕ್ಕೆ ಸಮಯವನ್ನು ಹೊಂದಿಸಿಕೊಳ್ಳಲಿದ್ದೇವೆ. ಟೈಲರಿಂಗ್ ವೃತ್ತಿ ನನ್ನದು. ಹಿಂದೆ ವಿದ್ಯುತ್ ಸಂಪರ್ಕ ಇರಲಿಲ್ಲ. ಆ ದಿನಗಳಲ್ಲಿ ದೀಪದ ಬೆಳಕಲ್ಲಿ ಬಟ್ಟೆ ಹೊಲಿದಿದ್ದೇನೆ. ದ್ವೀಪಕ್ಕೆ ಮೊದಲ ಬಾರಿಗೆ ಕರೆಂಟ್ ಬಂದಾಗ ಬೆಳಕು ಕಂಡು ಖುಷಿ ಪಟ್ಟಿದ್ದೆ. ಈಗ ಸೇತುವೆ ಆಗಿರುವುದಕ್ಕೂ ಅಷ್ಟೇ ಖುಷಿ ಆಗಿದೆ’ ಎಂದು ತುಮರಿಯ ಎಚ್.ವಿ.ಶಾರದಮ್ಮ ನಿರಾಳತೆ ಭಾವವನ್ನು ವ್ಯಕ್ತಪಡಿಸಿದರು.

ಒಂದು ಸೇತುವೆಯು ‘ದ್ವೀಪ’ದಂತೆ ಬದುಕಿದ್ದ ಸಾವಿರಾರು ಜೀವಗಳಿಗೆ ಬಿಡುಗಡೆಯ ಅನುಭವವನ್ನು ನೀಡುತ್ತಿದೆ. ಹೊರಗಿನ ಪ್ರಪಂಚದೊಂದಿಗೆ ಸಂರ್ಪಕವನ್ನು ಬೆಸೆಯುತ್ತಿದೆ. ಎಂಟು ದಶಕಗಳ ಬಂಧನ, ಯಾತನೆಗೆ ಕೊನೆಗಾಣಿಸುತ್ತಿದೆ. ಇಲ್ಲಿನ ಜನರ ಬದುಕು ಇನ್ನು ಮುಂದೆ ಮುಕ್ತ...ಮುಕ್ತ...ಮುಕ್ತ...

ದೇಶದ ಎರಡನೇ ದೊಡ್ಡ ತೂಗುಸೇತುವೆ..

‘ಅಂಬಾರಗೋಡ್ಲು–ಕಳಸವಳ್ಳಿ ನಡುವೆ 2.44 ಕಿಲೋಮೀಟರ್ ಉದ್ದದ ತೂಗು ಸೇತುವೆ ನಿರ್ಮಾಣ ಆಗಿದ್ದು, ₹573 ಕೋಟಿ ವೆಚ್ಚವಾಗಿದೆ. ಅದರಲ್ಲಿ 740 ಮೀಟರ್ ದೂರ ಕೇಬಲ್ ನೆರವಿನಿಂದ ಇರುವ ತೂಗು ಸೇತುವೆ ಆಗಿದ್ದು, ನಾಲ್ಕು ಪಿಲ್ಲರ್ಗಳ ಮೇಲೆ ನಿಂತಿದೆ. 2019ರ ಡಿಸೆಂಬರ್ನಲ್ಲಿ ಕಾಮಗಾರಿ ಆರಂಭವಾಯಿತು. ಕೋವಿಡ್ ಮತ್ತಿತರ ಕಾರಣಕ್ಕೆ ಮೂರು ವರ್ಷಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಐದೂವರೆ ವರ್ಷ ತೆಗೆದುಕೊಂಡಿತು’ ಎನ್ನುವ ಮಾಹಿತಿಯನ್ನು ಸೇತುವೆ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಪೀರ್ಪಾಷಾ ನೀಡಿದರು.

‘ಇಲ್ಲಿ ಶರಾವತಿ ಹಿನ್ನೀರು ಪೂರ್ಣ ಭರ್ತಿ ಆದಾಗ 150 ಅಡಿಯಷ್ಟು ಆಳ ನೀರು ಸಂಗ್ರಹವಾಗಿರುತ್ತದೆ. ಹೀಗಾಗಿ ಸೇತುವೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದ ಉತ್ಕೃಷ್ಟ ತಾಂತ್ರಿಕತೆ ಬಳಸಿ ವಿನ್ಯಾಸಗೊಳಿಸಲಾಗಿದೆ. ಪ್ರವಾಹ, ಗಾಳಿಯ ಒತ್ತಡವನ್ನು ನಿಭಾಯಿಸುವ ಜೊತೆಗೆ 100 ಟನ್ ತಾಳಿಕೊಳ್ಳುವ ಸಾಮರ್ಥ್ಯ ಸೇತುವೆ ಹೊಂದಿದೆ. ಗುಜರಾತ್ನ ಓಖಾ ಬಳಿ ನರ್ಮದಾ ನದಿಗೆ ನಿರ್ಮಿಸಿರುವ ತೂಗುಸೇತುವೆ ಬಳಿಕ ದೇಶದಲ್ಲಿ ನಿರ್ಮಾಣಗೊಂಡ ಎರಡನೇ ಅತಿ ದೊಡ್ಡ ತೂಗು ಸೇತುವೆ ಇದು’ ಎನ್ನುತ್ತಾರೆ.

ಲಾಂಚ್ ಓಡಾಟಕ್ಕೆ 56 ವರ್ಷ!

ಬರೋಬ್ಬರಿ 56 ವರ್ಷಗಳು ಶರಾವತಿ ಹಿನ್ನೀರು ಭಾಗದ ಸಂಪರ್ಕ ಸೇತುವಾಗಿದ್ದ ಲಾಂಚ್ಗಳು ಇಲ್ಲಿನ ಜನರ ಭಾವಕೋಶದಲ್ಲಿ ಶಾಶ್ವತವಾಗಿ ಉಳಿಯಲಿವೆ. ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆಯೇ ಲಾಂಚ್ಗಳ ಸೇವೆಯ ಅಗತ್ಯ ಇಲ್ಲವಾಗಲಿದೆ. ಆದರೆ, ಲಾಂಚ್ಗಳ ಓಡಾಟ ನಿಲ್ಲಿಸದೇ ಅವುಗಳನ್ನು ಹಿನ್ನೀರಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ಯೋಜನೆ ಸಿದ್ಧಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.