ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿಗೆ ಶರಾವತಿ ನದಿ ನೀರು: ಯೋಜನೆ ವಿರುದ್ಧ ತೀವ್ರ ಹೋರಾಟ

ವಿವಿಧ ಪಕ್ಷ, ಸಂಘ ಸಂಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ನಿರ್ಣಯ
Published : 27 ಆಗಸ್ಟ್ 2024, 16:10 IST
Last Updated : 27 ಆಗಸ್ಟ್ 2024, 16:10 IST
ಫಾಲೋ ಮಾಡಿ
Comments

ಸಾಗರ: ಬೆಂಗಳೂರಿಗೆ ಶರಾವತಿ ನದಿ ನೀರನ್ನು ಹರಿಸುವ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಹಂತ ಹಂತವಾಗಿ ತೀವ್ರ ಹೋರಾಟ ರೂಪಿಸಲು ಮಂಗಳವಾರ ನಡೆದ ವಿವಿಧ ಪಕ್ಷ, ಸಂಘ ಸಂಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಮೊದಲ ಹಂತದಲ್ಲಿ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ವಿವಿಧ ಪಕ್ಷಗಳ ಪ್ರಮುಖರನ್ನು ಭೇಟಿಯಾಗಿ ಎರಡೂ ಯೋಜನೆಗಳನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಮನವಿ ನೀಡುವುದು, ನಂತರದ ಹಂತಗಳಲ್ಲಿ ಪ್ರತಿಭಟನೆ, ಧರಣಿ, ಪಾದಯಾತ್ರೆ, ಬಂದ್ ಸೇರಿ ವಿವಿಧ ಸ್ವರೂಪದ ಹೋರಾಟಗಳನ್ನು ಕೈಗೊಳ್ಳಲು ಸಭೆ ತೀರ್ಮಾನಿಸಿದೆ.

‘2019ರಲ್ಲೆ ಬೆಂಗಳೂರಿಗೆ ಶರಾವತಿ ನದಿ ನೀರನ್ನು ಹರಿಸುವ ಯೋಜನೆ ಪ್ರಸ್ತಾಪಕ್ಕೆ ಬಂದಿತ್ತು. ಆದರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರ ತೀವ್ರ ಪ್ರತಿರೋಧ ವ್ಯಕ್ತವಾದ ನಂತರ ಅಂದಿನ ಸರ್ಕಾರ ಅದಕ್ಕೆ ಮಣಿದು ಯೋಜನೆಯನ್ನು ಕೈಬಿಟ್ಟಿತ್ತು. ಈಗ ಮತ್ತೊಮ್ಮೆ ಯೋಜನೆಯ ಪ್ರಸ್ತಾಪ ಮುನ್ನಲೆಗೆ ಬಂದಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಪರಿಸರ ತಜ್ಞ ಅಖಿಲೇಶ್ ಚಿಪ್ಪಳಿ ಅಭಿಪ್ರಾಯಪಟ್ಟರು.

‘ಸಮುದ್ರಕ್ಕೆ ಸೇರಿ ವ್ಯರ್ಥವಾಗುವ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಲಾಗುತ್ತದೆ ಎಂಬ ತಪ್ಪು ಅಭಿಪ್ರಾಯವನ್ನು ಹರಿಬಿಡಲಾಗುತ್ತಿದೆ. ನದಿ ಸಮುದಾಯಕ್ಕೆ ಸೇರಿದ್ದು. ಅದರ ಹರಿವು ನಿರಂತರವಾಗಿ ಸಮರ್ಪಕವಾಗಿದ್ದರೆ ಮಾತ್ರ ಅದರಿಂದ ಹಲವು ನೈಸರ್ಗಿಕ ಸೇವೆ ದೊರಕುತ್ತದೆ. ಇಲ್ಲದಿದ್ದರೆ ಅನೇಕ ಪ್ರಾಕೃತಿಕ ವಿಕೋಪ, ಜಲಚರಗಳ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸಲು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳ್ಳಲು ನದಿಯ ತಿರುವನ್ನೇ  ಬದಲಿಸಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಶರಾವತಿ ನದಿಯನ್ನೇ ಅಪಹರಿಸಿದಂತೆ. ಪಶ್ಚಿಮಘಟ್ಟವನ್ನು ನಾಶಪಡಿಸಿ ಆನೆಪಥವನ್ನು ಛಿದ್ರಗೊಳಿಸಿ ಯೋಜನೆ ಜಾರಿಗೆ ಮುಂದಾದರೆ ಭಾರಿ ಅನಾಹುತ ಕಾದಿದೆ’ ಎಂದು ಎಚ್ಚರಿಸಿದರು.

‘ಕುಡಿಯುವ ನೀರು ಪ್ರತಿಯೊಬ್ಬರಿಗೂ ಅನಿವಾರ್ಯ ಎಂಬುದು ನಿಜ. ಆದರೆ, ಬೆಂಗಳೂರಿನಲ್ಲಿ ಪ್ರತಿ ವರ್ಷ 15 ಟಿಎಂಸಿಯಷ್ಟು ನೀರು ಮಳೆ ನೀರಿನಿಂದ ಸಂಗ್ರಹವಾಗುತ್ತದೆ. ಈ ನೀರಿನ ಸದ್ಬಳಕೆ ಜೊತೆಗೆ ಅಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರಿನ ಕುಡಿಯುವ ನೀರಿನ ಕೊರತೆ ನಿವಾರಣೆಯಾಗುತ್ತದೆ’ ಎಂದು ತಿಳಿಸಿದರು.

‘ತಾಂತ್ರಿಕ, ವೈಜ್ಞಾನಿಕ, ಪಾರಿಸಾರಿಕ ಹೀಗೆ ಯಾವುದೇ ದೃಷ್ಟಿಯಿಂದ ನೋಡಿದರೂ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕಾರ್ಯ ಸಾಧುವಲ್ಲ. ಈ ಎರಡೂ ಯೋಜನೆಗಳಿಗೆ ಶರಾವತಿ ಕೊಳ್ಳದಲ್ಲಿ ಉತ್ಪಾದನೆ ಆಗುವುದಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ’ ಎಂದು ಇಂಧನ ತಜ್ಞ ಶಂಕರ್ ಶರ್ಮ ಹೇಳಿದರು.

‘ಯೋಜನೆಯನ್ನು ವಿರೋಧಿಸಿ ಈಗಾಗಲೇ ನಾಡಿನ ಪ್ರಮುಖ ಲೇಖಕರು, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಸರ್ಕಾರ ಸುಲಭಕ್ಕೆ ಬಗ್ಗುವುದಿಲ್ಲ. ಎರಡೂ ಯೋಜನೆಗಳ ವಿರುದ್ಧ ಪ್ರಬಲವಾದ ಜನಾಭಿಪ್ರಾಯವನ್ನು ಜನಜಾಗೃತಿಯ ಮೂಲಕ ಮೂಡಿಸಿ ಶಾಶ್ವತವಾಗಿ ಯೋಜನೆ ರದ್ದಾಗುವವರೆಗೂ ಪಕ್ಷಾತೀತ ಹೋರಾಟ ನಡೆಸುವ ಅಗತ್ಯವಿದೆ’ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು ಅಭಿಪ್ರಾಯಪಟ್ಟರು.

ಪ್ರಮುಖರಾದ ಕಲಸೆ ಚಂದ್ರಪ್ಪ, ಕೆ.ಆರ್.ಗಣೇಶ್ ಪ್ರಸಾದ್, ದಿನೇಶ್ ಶಿರವಾಳ, ಉಮಾಮಹೇಶ್ವರ, ನಾರಾಯಣಮೂರ್ತಿ ಕಾನುಗೋಡು, ಕೃಷ್ಣಮೂರ್ತಿ, ಧನುಷ್, ಎಸ್.ಎಲ್.ಎನ್. ಸ್ವಾಮಿ, ಜಯರಾಮ್, ನಮಿಟೊ, ಧರ್ಮರಾಜ್ ಮಾತನಾಡಿದರು.

ಸಂಘಟಕರಾದ ಡಿ.ದಿನೇಶ್, ಸಂತೋಷ್ ಸದ್ಗುರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಯು.ಜೆ.ಮಲ್ಲಿಕಾರ್ಜುನ . ಅ.ರಾ.ಲಂಬೋದರ್, ಮಧುರಾ ಶಿವಾನಂದ್, ದೇವೇಂದ್ರಪ್ಪ ಯಲಕುಂದ್ಲಿ, ಕುರುವರಿ ಸೀತಾರಾಮ್, ಎಂ.ಪಿ.ಲಕ್ಷ್ಮಿನಾರಾಯಣ್, ಎಂ.ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT