ಮಂಗಳವಾರ, ಮಾರ್ಚ್ 21, 2023
23 °C
ಜಿಲ್ಲಾ ಕಾರ್ಯಕಾರಿಣಿ; ಸಂಸದ ಬಿ.ವೈ. ರಾಘವೇಂದ್ರ ಅಭಿಮತ

ವಿಐಎಸ್‍ಎಲ್, ಎಂಪಿಎಂ ದುಃಸ್ಥಿತಿ: ಬಿಜೆಪಿ ಕಾರಣವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ಹಿಂದಿನ ಸರ್ಕಾರಗಳು ನಡೆಸಿದ ಅಸಮರ್ಪಕ ಆಡಳಿತದಿಂದಾಗಿ ಇಲ್ಲಿನ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟಿತು. ವಿಐಎಸ್‍ಎಲ್ ಕಾರ್ಖಾನೆ ದುಸ್ಥಿತಿಗೆ ತಲುಪಿತು. ಅದಕ್ಕೆ ಬಿಜೆಪಿ ಸರ್ಕಾರ ಕಾರಣವಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಲ್ಲಿನ ಸಿದ್ಧಾರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿ ಅಧಿಕಾರಕ್ಕೆ ಬಂದನಂತರ ಎರಡೂ ಕಾರ್ಖಾನೆಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತ ಬಂದಿದೆ. ಇಲ್ಲಿನ ಕಾರ್ಮಿಕರ ಹಿತಕ್ಕಾಗಿ ಮಾಚೇನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಾಹಿ ಗಾರ್ಮೆಂಟ್ಸ್ ಆರಂಭವಾಗುವಂತೆ ಮಾಡಿ ಈ ಕ್ಷೇತ್ರದ ಎರಡು ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ’ ಎಂದರು.

‘ಕಾರ್ಮಿಕರ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಘೋಷಿಸಿ ಅವುಗಳನ್ನು ಅನುಷ್ಠಾನಕ್ಕೆ ತಂದಿದೆ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಎಂದಿಗೂ ಭದ್ರಾವತಿ ಕ್ಷೇತ್ರವನ್ನು ಕಡೆಗಣಿಸಿಲ್ಲ. ವಿಐಎಸ್‍ಎಲ್ ಮತ್ತು ಎಂಪಿಎಂ ಪುನರಾರಂಭಿಸಲು ಏನೇನು ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದೇವೆ. ಎಂಪಿಎಂಗೆ ಕೊನೇ ಮೊಳೆ ಹೊಡೆದದ್ದೇ ಸಿದ್ದರಾಮಯ್ಯ ಎಂಬುದನ್ನು ಯಾರೂ ಮರೆಯಬಾರದು. ಬರಲಿರುವ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸುತ್ತದೆ’ ಎಂದರು.

ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದರೂ ಸಹ ದೇಶದ ಎಲ್ಲ ಜನರ ಹಿತ ಕಾಯುವ ರೀತಿ ಆಡಳಿತ ನಡೆಸಿ ಮಾದರಿಯಾಗಿದೆ. ಬಿಜೆಪಿ ಯಾವುದೇ ವರ್ಗವನ್ನು ಓಲೈಕೆ ಮಾಡದೇ ದೇಶದ ಸಮಸ್ತ ನಾಗರೀಕರ ಹಿತ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಜನಮನ್ನಣೆ ಗಳಿಸಿದೆ. ಕೆಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ ಜನಪರ ಯೋಜನೆಗಳ ಅನುಷ್ಠಾನದಿಂದಾಗಿ ಪಕ್ಷ ಬಹುಮತ ಗಳಿಸಿ ಪುನಃ ಅಧಿಕಾರಕ್ಕೆ ಬರಲಿದೆ. ಭದ್ರಾವತಿಯನ್ನೂ ಒಳಗೊಂಡಂತೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತ
ಪಡಿಸಿದರು.

‘ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಪಕ್ಷದಲ್ಲಿ ಕಾರ್ಯಕರ್ತರು ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಾದಿ-ಬೀದಿಯಲ್ಲಿ ಚರ್ಚಿಸುವುದನ್ನು ಸಹಿಸುವುದಿಲ್ಲ. ಏನೇ ಭಿನ್ನಾಭಿಪ್ರಾಯ ಅಥವಾ ಅತೃಪ್ತಿ ಇದ್ದರೂ ಪಕ್ಷದೊಳಗೆ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಚಚಿಸಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ಟಿ.ಡಿ.ಮೇಘರಾಜ್ ವಹಿಸಿದ್ದರು. ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಭಾರತಿಶೆಟ್ಟಿ, ರುದ್ರೇಗೌಡ, ಡಿ.ಎಸ್.ಅರುಣ್, ಆಯನೂರು ಮಂಜುನಾಥ್, ವಿಧಾನಪರಿಷತ್‌ ಮಾಜಿ ಸದಸ್ಯ ಭಾನುಪ್ರಕಾಶ್, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್, ಶಿವರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು