ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಗ್ರಾಮೀಣ ಆಸ್ಪತ್ರೆಗಳಲ್ಲಿ ಸ್ಮಶಾನ ಮೌನ

ಕೃಷಿ ಕೆಲಸ ಬಿಟ್ಟು ಲಸಿಕೆಗಾಗಿ ಅಲೆದಾಟ, ಮದುವೆ ಮನೆಗಳಿಂದಲೇ ವೈರಸ್‌ ಕಾಟ
Last Updated 5 ಜೂನ್ 2021, 1:40 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಮಾನ್ಯ ಜ್ವರ, ತಲೆನೋವು, ಶೀತವಾದರೆ ಗ್ರಾಮದ ಯುವಕರು ಸೈಕಲ್ ತುಳಿದುಕೊಂಡು, ಬೈಕ್‌ ಏರಿ ದಟ್ಟ ಕಾನನದ ಮಧ್ಯೆ 16 ಕಿ.ಮೀ. ಸಾಗಿ ಶಿವಮೊಗ್ಗದ ಆಸ್ಪತ್ರೆಗಳನ್ನು ತಲುಪಬೇಕು. ಗ್ರಾಮದ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಯುವಕರು, ಯಜಮಾನರೇ ಕೋವಿಡ್‌ನಿಂದ ಮಲಗಿದ್ದಾರೆ. ಮಂಗನಕಾಯಿಲೆ ಹರಡಿದಾಗಲೂ ಇಷ್ಟೊಂದು ಜನರು ಒಮ್ಮೆಲೆ ಕಾಯಿಲೆ ಬಿದ್ದು ಮಲಗಿರಲಿಲ್ಲ ಎಂದು ಗ್ರಾಮದ ಶಿಕ್ಷಕ ಹೆಬ್ಬೂರು ಧರ್ಮಪ್ಪ ಅವರು ಶೆಟ್ಟಿಹಳ್ಳಿಯ ಚಿತ್ರಣ ಬಿಚ್ಚಿಟ್ಟರು.

ಅಭಯಾರಣ್ಯದ ಮಧ್ಯೆ 102 ಮನೆಗಳ ಗುಚ್ಛವಿರುವ ಗ್ರಾಮ ಶೆಟ್ಟಿಹಳ್ಳಿ. ಕಾಡಿನೊಳಗಿನ ಈ ಗ್ರಾಮ ಇತರೆ ಜನ ವಸತಿಗಳಿಂದ ಬಹುದೂರದಲ್ಲೇ ಇದೆ. ಇಂತಹ ಗ್ರಾಮದಲ್ಲಿ ನಡೆದ ಮದುವೆಯ ನಂತರ ಬಹುತೇಕ ಮನೆಗಳ ಜನರು ಕೋವಿಡ್‌ನಿಂದ ಬಳಲುತ್ತಿದ್ದಾರೆ. ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಟ್ಟ 100 ಜನರಲ್ಲಿ 37 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಗ್ರಾಮಗಳನ್ನೂ ಈಗಾಗಲೇ ರೆಡ್‌ಜೋನ್‌ಗಳು ಎಂದು ಜಿಲ್ಲಾಡಳಿತ ಘೋಷಿಸಿದೆ. ಸೋಂಕಿತರನ್ನು ಗಾಜನೂರು ಕೋವಿಡ್‌ ಕೇಂದ್ರಕ್ಕೆ ಸೇರಿಸಲಾಗಿದೆ. ಪುರದಾಳು ಪಂಚಾಯಿತಿಯಿಂದ ಸ್ಯಾನಿಟೈಸ್‌ ಮಾಡುವುದೂ ಸೇರಿ ಅಗತ್ಯ ಕ್ರಮಗಳನ್ನೆಲ್ಲ ಕೈಗೊಳ್ಳಲಾಗಿದೆ. ಅಧಿಕಾರಿಗಳು, ವೈದ್ಯರು ಗ್ರಾಮಕ್ಕೇ ತೆರಳಿ ನೆರವಾಗಿದ್ದಾರೆ.

ಮಲೆನಾಡಿನ ಹಲವು ಗ್ರಾಮಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಮದುವೆ, ಬಾಡೂಟ ಸಮಾರಂಭಗಳೇ ಕಾರಣ. ಜಿಲ್ಲೆಯ 271 ಗ್ರಾಮ ಪಂಚಾಯಿತಿಗಳ 603 ಗ್ರಾಮಗಳಲ್ಲಿ (ಒಟ್ಟು1,580 ಗ್ರಾಮಗಳು) 12 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಲಾಕ್‌ಡೌನ್‌ ಆರಂಭವಾದ (ಏ.24ರಿಂದ) ದಿನದಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 1,595 ಮದುವೆಗಳು ನಡೆದಿವೆ. ಈ ಮದುವೆಗಳೇ ಜಿಲ್ಲೆಯ ಗ್ರಾಮಗಳ ಕೊರೊನಾ ಹಾಟ್‌ಸ್ಪಾಟ್‌ಗಳು.

ಭದ್ರಾವತಿ ತಾಲ್ಲೂಕಿನ ಅರಹತೊಳಲು ಗ್ರಾಮದಲ್ಲಿ ಒಮ್ಮೆಲೇ ಹಲವರಿಗೆ ಸೋಂಕು ಕಾಣಿಸಿಕೊಂಡಿದೆ. ವಾರದ ಅವಧಿಯಲ್ಲೇ 8 ಜನರು ಮೃತಪಟ್ಟಿದ್ದಾರೆ. ಪರೀಕ್ಷೆಗೆ ಒಳಪಡಿಸಿದಾಗ 39 ಜನರಲ್ಲಿ ಸೋಂಕು ದೃಢಪಟ್ಟಿದೆ. ‘ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕೋವಿಡ್‌ನಿಂದ ಮೃತಪಟ್ಟವರು ಮೂವರಷ್ಟೇ. ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಗ್ರಾಮವನ್ನು ಸೀಲ್‌ಡೌನ್‌ ಮಾಡಿದ್ದು, ಆನಂತರ ಒಂದೂ ಪ್ರಕರಣ ಬೆಳಕಿಗೆ ಬಂದಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಪ್ರಭಾಕರ್.

ಶಿವಮೊಗ್ಗ ತಾಲ್ಲೂಕಿನ ತುಂಗಾ, ಭದ್ರಾ ನದಿಗಳ ಸಂಗಮ ಕೂಡಲಿಯಲ್ಲಿ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಗ್ರಾಮದ ಶೇ 99ರಷ್ಟು ಜನರು ಮಾಸ್ಕ್‌ ಧರಿಸದೆ, ಅಂತರ ಕಾಪಡಿಕೊಳ್ಳದೇ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದರು. ಬಹುತೇಕ ಗ್ರಾಮಗಳಲ್ಲೂ ಅದೇ ಸ್ಥಿತಿಯ ದರ್ಶನವಾಯಿತು. ಹೊಳಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏಳು ವೈದ್ಯರ ಹುದ್ದೆಗಳಲ್ಲಿ ನಾಲ್ಕು ಖಾಲಿ ಇವೆ. ದಂತ ವೈದ್ಯರನ್ನು ಹೊರತುಪಡಿಸಿದರೆ ಇಬ್ಬರೇ ಎಲ್ಲವನ್ನೂ ನಿಭಾಯಿಸುತ್ತಿದ್ದರು.

ಜಿಲ್ಲೆಯ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆ, ಲಸಿಕೆ ಹಾಕುವ ಕಾರ್ಯವನ್ನು ಮಧ್ಯಾಹ್ನ 1ರ ಒಳಗೆ ಪೂರ್ಣಗೊಳಿಸಲಾಗಿತ್ತು. ಬಹುತೇಕ ಸಿಬ್ಬಂದಿ ಮನೆಗೆ ತೆರಳಿದ್ದರು. ಸರ್ಕಾರ ಕೋವಿಡ್‌ ರೋಗಿಗಳ ದಾಖಲಾತಿಗೆ ಅಲ್ಲಿ ಅವಕಾಶ ನೀಡಿಲ್ಲ. ಲಾಕ್‌ಡೌನ್ ಕಾರಣ ಇತರೆ ರೋಗಿಗಳು ಬರುತ್ತಿಲ್ಲ. ಹಾಗಾಗಿ, ಆಸ್ಪತ್ರೆಗಳಲ್ಲಿ ಸ್ಮಶಾನ ಮೌನ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದ ಕೋವಿಡ್‌ ಕೇಂದ್ರದಲ್ಲಿ 64 ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. 36 ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯವಿದೆ. ‘ಪ್ರಜಾವಾಣಿ’ ತಂಡ ಕೇಂದ್ರಕ್ಕೆ ಭೇಟಿ ನೀಡಿದಾಗ ಕೋವಿಡ್‌ ರೋಗಿಯೊಬ್ಬರನ್ನು ನೆಲದ ಮೇಲೆ ಮಲಗಿಸಲಾಗಿತ್ತು. ‘ಆತನಿಗೆ ಬುದ್ಧಿ ಸ್ವಾಧೀನದಲ್ಲಿ ಇಲ್ಲ. ಕೆಳಗೆ ಬೀಳುತ್ತಾನೆ ಎಂದು ಕೆಳಗೆ ಹಾಸಿಗೆ ಹಾಕಿದ್ದೇವೆ’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಎಚ್‌.ಜಿ.ಶಿವಾನಂದ ಅವರು ಸಮಜಾಯಿಷಿ ನೀಡಿದರು.

ಸಾಹಿತಿ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಅವರು ತಮ್ಮ ಶಾಲೆಯ ವಾಹನಗಳನ್ನು ಕೋವಿಡ್‌ ಪೀಡಿತರ ಸೇವೆಗಾಗಿ ಉಚಿತವಾಗಿ ನೀಡಿದ್ದಾರೆ ಎನ್ನುವ ಅಂಶವನ್ನು ಹಲವರು ಸ್ಮರಿಸಿದರು. ಕೋವಿಡ್‌ ರೋಗಿಗಳ ಮಾಹಿತಿ ಪಡೆಯಲು ಪ್ರತಿ ಕೇಂದ್ರದಲ್ಲೂ ಇಬ್ಬರು ಶಿಕ್ಷಕರನ್ನು ನೇಮಿಸಿದ್ದು, ಅವರು ಸುರಕ್ಷತಾ ಕಿಟ್‌ಗಳಿಲ್ಲದೇ ಕಾರ್ಯನಿರ್ವಹಿಸುತ್ತಿದ್ದರು. ‘ತಾಲ್ಲೂಕಿನಲ್ಲಿ ಒಂದು ಸಾವಿರ ಶಿಕ್ಷಕರು ಇದ್ದಾರೆ. 56 ಶಿಕ್ಷಕರಷ್ಟೇ ಕೋವಿಡ್‌ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ. 17 ದಿನಗಳಿಂದ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಡುವೇ ಇಲ್ಲ’ ಎನ್ನುವುದು ಶಿಕ್ಷಕ ಷಣ್ಮುಖಪ್ಪ ಅಳಲು.

ಶಿರಾಳಕೊಪ್ಪ ಮಾರ್ಗದ ಅಂಬಾರಕೊಪ್ಪ ಕೋವಿಡ್‌ ಆರೈಕೆ ಕೇಂದ್ರದಲ್ಲಿ ರೋಗಲಕ್ಷಣಗಳು ಇಲ್ಲದ 125 ಜನರು ಇದ್ದಾರೆ. ಊಟ, ಉಪಚಾರ ಚೆನ್ನಾಗಿದೆ. ಮನೆಯವರಂತೆ ನೋಡಿಕೊಳ್ಳುತ್ತಾರೆ ಎಂದು ಅಲ್ಲಿ ಆಶ್ರಯ ಪಡೆದಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಸೂರು ಬಸವರಾಜು ಖುಷಿಪಟ್ಟರು.

ಸಾಗರ ತಾಲ್ಲೂಕು ಆನಂದಪುರಂ, ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿದ್ದರೂ ಕೋವಿಡ್‌ ರೋಗಿಗಳನ್ನು ತುರ್ತಾಗಿ ಶಿವಮೊಗ್ಗಕ್ಕೆ ಕಳುಹಿಸಲು ವ್ಯವಸ್ಥಿತ ಆಂಬುಲೆನ್ಸ್‌ಗಳೇ ಇಲ್ಲ ಎಂದು ನಾಗರಿಕರು ದೂರಿದರು.

ಇರುವ ಒಬ್ಬರೇ ವೈದ್ಯರಿಗೂ ಕೋವಿಡ್‌

ಭದ್ರಾವತಿ ತಾಲ್ಲೂಕಿನ ಮೈದೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ದಿನ ಸುಮಾರು 200 ಹೊರ ರೋಗಿಗಳು ತಪಾಸಣೆಗೆ ಬರುತ್ತಾರೆ. ಇರುವ ಒಬ್ಬರೇ ವೈದ್ಯರು ಕೋವಿಡ್‌ನಿಂದ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿರುವ ಸಿಬ್ಬಂದಿಯೇ ಹೊಣೆ ನಿಭಾಯಿಸುವ ಒತ್ತಡದಲ್ಲಿದ್ದಾರೆ.

ಕೋವಿಡ್‌ ಲಸಿಕೆಗೆ ಅಲೆದಾಟ: ಎರಡು ದಿನಕ್ಕೆ ಒಮ್ಮೆ ದೊರೆಯುವ ಸ್ವಲ್ಪ ಲಸಿಕೆಯನ್ನೇ ಸುತ್ತಲ ಪಂಚಾಯಿತಿಗಳಿಗೂ ಕಳುಹಿಸಲಾಗುತ್ತದೆ. ಹಾಗಾಗಿ, ಅಲ್ಲಿನ ಜನರಿಗೆ ಕೃಷಿ ಚಟುವಟಿಕೆ ಬಿಟ್ಟು ನಿತ್ಯವೂ ಲಸಿಕೆ ಕೇಳಿಕೊಂಡು ಅಲೆಯುವುದೇ ಕೆಲಸವಾಗಿದೆ.

‘ಒಂದು ವಾರದಿಂದ ನಿತ್ಯವೂ ಬಂದು ಹೋಗುತ್ತೇನೆ. ಲಸಿಕೆ ಇಲ್ಲ ಎನ್ನುತ್ತಾರೆ. ಕೆಲಸ ಬಿಟ್ಟು ಅಲೆಯುವುದಕ್ಕೆ ಮನೆಯಲ್ಲೂ ಕಿರಿಕಿರಿ ಮಾಡುತ್ತಾರೆ. ಈ ವಯಸ್ಸಿನಲ್ಲಿ ಎಂಥ ಶಿಕ್ಷೆ ನಮಗೆ?’ ಎಂದು ಅಳಲು ತೋಡಿಕೊಂಡರು 69 ವರ್ಷ ವಯಸ್ಸಿನ ಹನುಮಂತಪ್ಪ.

***
ಆಮ್ಲಜನಕ ಘಟಕ ಆರಂಭವಾದ ಮೇಲೆ ಹಲವು ಜನರ ಜೀವ ಉಳಿದಿವೆ. 36 ಹಾಸಿಗೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

– ಡಾ.ಎಚ್‌.ಜಿ.ಶಿವಾನಂದ್‌, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಶಿಕಾರಿಪುರ

***

ಲಸಿಕೆ ಪಡೆಯಲು ವಾರದಿಂದ ಆಸ್ಪತ್ರೆಗೆ ಅಲೆಯುತ್ತಿರುವೆ. ಹೊಲದ ಕೆಲಸ ಮಾಡಲೂ ಆಗಿಲ್ಲ.

–ಹನುಮಂತಪ್ಪ, ರೈತ, ಮೈದೊಳಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT