ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ | ಜಾತೀಯತೆ ಮೇಲೆ ಬೆಳಕು ಚೆಲ್ಲುವ ಕೃತಿ: ಸರೋಜಾ ಎಂ.ಎಸ್.

‘ಪುರೋಹಿತಶಾಹಿ ಮತ್ತು ಗುಲಾಮಗಿರಿ’ ಕೃತಿ ಕುರಿತು ಸರೋಜಾ ಅಭಿಮತ
Published 30 ಮೇ 2024, 15:37 IST
Last Updated 30 ಮೇ 2024, 15:37 IST
ಅಕ್ಷರ ಗಾತ್ರ

ಸಾಗರ: ‘ಭಾರತೀಯ ಸಮಾಜದಲ್ಲಿ ಜಾತೀಯತೆ ಎಂಬುದು ಹೇಗೆ ಆಳವಾಗಿ ಬೇರೂರಿದೆ ಎಂಬುದರ ಮೇಲೆ ಜ್ಯೋತಿಬಾ ಫುಲೆ ಅವರ ‘ಪುರೋಹಿತಶಾಹಿ ಮತ್ತು ಗುಲಾಮಗಿರಿ’ ಕೃತಿ ಬೆಳಕು ಚೆಲ್ಲುತ್ತದೆ’ ಎಂದು ಉಪನ್ಯಾಸಕಿ ಸರೋಜಾ ಎಂ.ಎಸ್. ಹೇಳಿದರು.

ನಗರದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಗುರುವಾರ ಏರ್ಪಡಿಸಿದ್ದ ‘ಹೊಸ ಓದು’ ಮಾಲಿಕೆ ಕಾರ್ಯಕ್ರಮದಲ್ಲಿ ಜ್ಯೋತಿಬಾ ಫುಲೆ ಅವರ ‘ಪುರೋಹಿತಶಾಹಿ ಮತ್ತು ಗುಲಾಮಗಿರಿ’ ಕೃತಿ ಕುರಿತು ಅವರು ಮಾತನಾಡಿದರು.

‘ಪೂಜೆ– ಪುನಸ್ಕಾರ, ಪಂಚಾಂಗ, ಜ್ಯೋತಿಷ್ಯ, ಪಾಪ– ಪುಣ್ಯ, ಸ್ವರ್ಗ– ನರಕ ಮೊದಲಾದ ಕಲ್ಪನೆಗಳನ್ನು ಜನರ ತಲೆಯಲ್ಲಿ ತುಂಬಿ ದೇವರು ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿರುವ ಪುರೋಹಿತಶಾಹಿ ವರ್ಗ ಹೇಗೆ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಹವಣಿಸುತ್ತದೆ ಎಂಬುದನ್ನು ಜ್ಯೋತಿಬಾ ಫುಲೆ ತಮ್ಮ ಕೃತಿಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಅವರು ವಿವರಿಸಿದರು.

‘ಆರ್ಯರು ಮೂಲತಃ ಭಾರತದವರಲ್ಲವಾದರೂ ನಾವು ಇಲ್ಲಿಯವರೇ ಎಂದು ಸುಳ್ಳು ಪ್ರತಿಪಾದನೆ ಮಾಡುವ ಅಂಶಗಳನ್ನು ಅಲ್ಲಗಳೆಯಲು ಲೇಖಕರು ಸಂಶೋಧನಾತ್ಮಕ ಪುರಾವೆಗಳನ್ನು ಕೃತಿಯಲ್ಲಿ ಒದಗಿಸುತ್ತಾರೆ. ಈ ಮೂಲಕ ಆರ್ಯರ ಮೂಲ, ಜನ್ಮ ವೃತ್ತಾಂತದ ಕುರಿತು ವಿಮರ್ಶಾತ್ಮಕ ವಿಚಾರಗಳನ್ನು ಕೃತಿ ಒಳಗೊಂಡಿದೆ’ ಎಂದು ಅವರು ತಿಳಿಸಿದರು.

‘ಧರ್ಮದ ಆಚರಣೆಗಳ ಹೆಸರಿನಲ್ಲಿ ಸೃಷ್ಟಿಯಾಗಿರುವ ‘ಮಿಥ್’ಗಳನ್ನು ಒಡೆಯುವ ಕೆಲಸವನ್ನು ಜ್ಯೋತಿಬಾ ಫುಲೆ ತಮ್ಮ ಕೃತಿಯಲ್ಲಿ ಮಾಡಿದ್ದಾರೆ. ಮತ್ತೊಂದು ಧರ್ಮ ಅಥವಾ ದೇಶದಲ್ಲೂ ಇಂತಹ ಮಿಥ್‌ಗಳಿವೆ ಎಂಬುದು ನಮ್ಮಲ್ಲಿನ ಪೊಳ್ಳುತನಗಳಿಗೆ ಸಮರ್ಥನೆಯಾಗಬಾರದು’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕಿ ವೃಂದಾ ಹೆಗಡೆ ಅಭಿಪ್ರಾಯಪಟ್ಟರು.

‘ಭಾರತದಲ್ಲಿನ ಅಸ್ಪೃಶ್ಯತೆ ಹಾಗೂ ಅಮೆರಿಕಾದಲ್ಲಿನ ಗುಲಾಮಿ ಪದ್ದತಿಯ ನಡುವೆ ಇರುವ ಸಾಮ್ಯತೆಯನ್ನು ಪರಿಶೀಲಿಸುತ್ತ ಲೇಖಕರು ಅಮೆರಿಕಾದಲ್ಲಿರುವಂತೆ ಭಾರತದಲ್ಲಿ ಮಾನವರನ್ನು ಮಾರಾಟ ಮಾಡುವ ಪದ್ದತಿ ಇಲ್ಲ ಎಂದು ಉಲ್ಲೇಖಿಸಿದ್ದಾರೆ. ಆದರೆ, ಹೀಗೆ ಮಹಿಳೆಯರನ್ನು ಮಾರಾಟ ಮಾಡುವ ಪದ್ದತಿ ನಮ್ಮಲ್ಲೂ ಇತ್ತು ಎಂಬುದಕ್ಕೆ ಕೆಳದಿಯ ಐತಿಹಾಸಿಕ ಸಂಗ್ರಹಾಲಯದಲ್ಲಿ ಪುರಾವೆಗಳಿವೆ’ ಎಂದು ಅವರು ತಿಳಿಸಿದರು.

ವಾ.ಮ.ಗಂಗಾಧರ, ರೂಪೇಶ್, ಪರಮೇಶ್ವರ ಕೆ.ಆಲಳ್ಳಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ಪರಸ್ಪರ ಸಾಹಿತ್ಯ ವೇದಿಕೆಯ ಸರ್ಫ್ರಾಜ್ ಚಂದ್ರಗುತ್ತಿ, ಎಸ್.ಎಂ.ಗಣಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT