ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ | ಶುಭ ಶುಕ್ರವಾರ: ಏಸುಕ್ರಿಸ್ತರ ಬಲಿದಾನದ ಸ್ಮರಣೆಯ ಕ್ಷಣ

ಕಿರಣ್‌ ಕುಮಾರ್
Published 29 ಮಾರ್ಚ್ 2024, 6:48 IST
Last Updated 29 ಮಾರ್ಚ್ 2024, 6:48 IST
ಅಕ್ಷರ ಗಾತ್ರ

ಭದ್ರಾವತಿ: ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣೆಯಾಗಿ ಶುಭ ಶುಕ್ರವಾರ (ಗುಡ್‌ ಫ್ರೈಡೇ) ಎಲ್ಲೆಡೆ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸಲಾಗುತ್ತದೆ. ಇದು ತ್ಯಾಗ, ಕ್ಷಮೆ, ಪ್ರೀತಿ ಪ್ರತೀಕವಾಗಿದೆ.

ಭದ್ರಾವತಿ ಸೇರಿದಂತೆ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿಯೂ ಬೆಳಿಗ್ಗೆಯಿಂದಲೇ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ, ಶಿಲುಬೆಯ ಆರಾಧನೆ, ಸಂಗ್ಯ ಮತ್ತಿತರ ಪ್ರಾರ್ಥನೆ ವಿಧಿ ವಿಧಾನಗಳು ನಡೆಯುತ್ತವೆ.

ಭದ್ರಾವತಿಯ ಹಳೇ ನಗರ, ನ್ಯೂಟೌನ್, ಪೇಪರ್ ಟೌನ್, ಹಾರೇಹಳ್ಳಿ, ಮಾವಿನಕೆರೆ ದೇವಾಲಯಗಳಲ್ಲಿ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ವಿವಿಧ ರೀತಿಯ ಸೇವೆಗಳಲ್ಲಿ, ಪ್ರಾರ್ಥನೆಗಳಲ್ಲಿ ಅಂದಿನ ದಿನ ಮೀಸಲಿಡುತ್ತಾರೆ.

ಯೇಸು ಕ್ರಿಸ್ತರ ಬಂಧನದಿಂದ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಐತಿಹಾಸಿಕವಾಗಿ ನಡೆದ ಘಟನೆಗಳನ್ನು ಸ್ಮರಿಸಲಾಗುತ್ತದೆ. ಅದನ್ನೆ ಶಿಲುಬೆ ಹಾದಿ ಎಂದು ಕರೆಯಲಾಗುತ್ತದೆ.

ಇದಕ್ಕೆ 40 ದಿನದ ತ್ಯಾಗ, ಉಪವಾಸ ಪ್ರಾರ್ಥನೆ ಇರುತ್ತದೆ. ಅಂದು 40ನೇ ದಿನದ ಕೊನೆ ದಿನವಾದ್ದರಿಂದ ಕ್ರೈಸ್ತ ಧರ್ಮದ ನಿಯಮದ ಪ್ರಕಾರ ಕಡ್ಡಾಯ ಉಪವಾಸ ದಿನವಾಗಿ ಆಚರಿಸಲಾಗುತ್ತದೆ. ಭಕ್ತರು ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ದೇವಾಲಯ ಹೊರಭಾಗದಲ್ಲಿ ಧ್ಯಾನಿಸಿ ಪ್ರಾರ್ಥಿಸಲಾಗುತ್ತದೆ.

ನಂತರ ಚರ್ಚ್‌ ಒಳಭಾಗದಲ್ಲಿ ಪ್ರಾರ್ಥನೆಯ ವಿಧಿಗಳು ಪ್ರಾರಂಭವಾಗುತ್ತದೆ. ಬೈಬಲ್‌ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ಕಥನ ಓದುತ್ತಾರೆ. ಬಳಿಕ ಪ್ರವಚನ ನೀಡಲಾಗುತ್ತದೆ ಎಂದು ಗಾಂಧಿನಗರ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರುಗಳಾದ ಫಾದರ್ ಸ್ಟೀವನ್ ಡೇಸಾ ತಿಳಿಸಿದರು.

ಯೇಸು ಕ್ರಿಸ್ತರ ಮರಣದ ದಿನ ಶುಭ ಶುಕ್ರವಾರ ಹೇಗೆ ?

‘ಶುಭ ಶುಕ್ರವಾರ’ ಅಥವಾ ‘ಗುಡ್ ಫ್ರೈಡೇ’ ಎಂಬುದು ಯೇಸುಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು; ಆದರೆ ‘ಶುಭ’ವಾಗಿದೆ. ಕ್ರಿಸ್ತರು ಸಾರಿದ ಪ್ರೀತಿ ಕ್ಷಮೆ ಮತ್ತು ತ್ಯಾಗಗಳು ಶುಭ ಶುಕ್ರವಾರದಂದು ಆತನ ಮರಣದಲ್ಲಿ ಅವುಗಳ ಪ್ರಸ್ತುತತೆಯನ್ನು ನೆನಪಿಸುವ ಕಾರಣ ಆತನ ಮರಣ ಕ್ರೈಸ್ತರಿಗೆ ಶುಭವಾಗಿದೆ ಎಂದು ಕಾರೆಹಳ್ಳಿ ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೆಡ ತಿಳಿಸಿದರು. ’ಅಂದು ದೇವಾಲಯದಲ್ಲಿರುವ ಪ್ರತಿಮೆಗಳನ್ನು ನೇರಳೆ ಬಣ್ಣದ ಬಟ್ಟೆಯಿಂದ ಮುಚ್ಚಲಾಗುತ್ತದೆ. ಮನೆಗಳಲ್ಲಿ ಗಂಜಿ ಚಟ್ನಿಯ ಆಹಾರ ಸೇವಿಸಲಾಗುತ್ತದೆ. 40 ದಿವಸದ ತ್ಯಾಗದ ಉಳಿತಾಯದ ಹಣದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಾಗುತ್ತದೆ‘ ಎಂದು ಸಿಸ್ಟರ್ ಹಿಲರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT