ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಪಂಚಾಯಿತಿ ರದ್ದತಿಯತ್ತ ಸರ್ಕಾರದ ಚಿತ್ತ

ರದ್ದತಿ ಪ್ರಕ್ರಿಯೆ ಪೂರ್ಣಗೊಂಡರೆ ತಾಲ್ಲೂಕು ಪಂಚಾಯಿತಿಯ 3,273 ಸದಸ್ಯರು ಅಧಿಕಾರ ವಂಚಿತ
Last Updated 12 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಎರಡು ಹಂತದ ವ್ಯವಸ್ಥೆಯತ್ತ ಒಲವು ತೋರಿರುವ ರಾಜ್ಯ ಸರ್ಕಾರ, ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿಗಳನ್ನು ಉಳಿಸಿಕೊಂಡು ತಾಲ್ಲೂಕು ಪಂಚಾಯಿತಿಗಳನ್ನು ರದ್ದುಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿದೆ.

ತಾಲ್ಲೂಕು ಪಂಚಾಯಿತಿಗಳನ್ನು ರದ್ದು ಮಾಡುವ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರು ಈಗಾಗಲೇ ‘ಬ್ಯುಸಿನೆಸ್‌ ಅಡ್ವೈಸರಿ ಕಮಿಟಿ’, ವಿಧಾನ ಸಭಾಧ್ಯಕ್ಷರು, ಸರ್ಕಾರದ ಪ್ರಮುಖರ ಬಳಿ ಅನೌಪಚಾರಿಕವಾಗಿ ಚರ್ಚಿಸಿದ್ದಾರೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲು ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮತಿಸಿದ್ದಾರೆ. ಸದನದಲ್ಲಿ ತೆಗೆದುಕೊಂಡ ನಿರ್ಣಯ, ಸರ್ಕಾರದ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ 31 ಜಿಲ್ಲಾ ಪಂಚಾಯಿತಿ, 229 ತಾಲ್ಲೂಕು ಪಂಚಾಯಿತಿಗಳಿವೆ. ಪುನರ್‌ವಿಂಗಡಣೆ ನಂತರ ಜಿಲ್ಲಾ ಪಂಚಾಯಿತಿಗಳ 1,190 ಕ್ಷೇತ್ರಗಳು ಹಾಗೂ ತಾಲ್ಲೂಕು ಪಂಚಾಯಿತಿಗಳ3,273 ಕ್ಷೇತ್ರಗಳು ಲಭ್ಯವಾಗಲಿವೆ. ರದ್ದತಿ ಪ್ರಕ್ರಿಯೆ ಪೂರ್ಣಗೊಂಡರೆ ತಾಲ್ಲೂಕು ಪಂಚಾಯಿತಿಯ 3,273 ಸದಸ್ಯರು ಅಧಿಕಾರ ವಂಚಿತರಾಗಲಿದ್ದಾರೆ.

‘ತಾಲ್ಲೂಕು ಪಂಚಾಯಿತಿಗಳನ್ನು ರದ್ದು ಮಾಡಬೇಕು. ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಸಾಕು ಎನ್ನುವುದು ಬಹು ವರ್ಷಗಳ ಬೇಡಿಕೆ. ಇದಕ್ಕೆ ವೈಯಕ್ತಿಕವಾಗಿ ನನ್ನ ಸಹಮತವೂ ಇದೆ. ಮುಂದಿನ ಅಧಿವೇಶನದಲ್ಲಿ ಚರ್ಚಿಸಿದ ನಂತರ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಇದಕ್ಕೆಲ್ಲ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಬಾರಿಯ ತಾಲ್ಲೂಕು ಪಂಚಾಯಿತಿ ಚುನಾವಣೆಯ ಮೇಲೆ ರದ್ದತಿ ಪ್ರಕ್ರಿಯೆ ಪರಿಣಾಮ ಬೀರುವುದಿಲ್ಲ’ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ.

ಪ್ರಸ್ತುತ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಅವಧಿ ಏಪ್ರಿಲ್‌–ಮೇನಲ್ಲಿ ಕೊನೆಗೊಳ್ಳಲಿದೆ. ಈಚೆಗೆ ಹಲವು ಗ್ರಾಮೀಣ ಪ್ರದೇಶಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆಯಾಗಿರುವ ಕಾರಣ ಕ್ಷೇತ್ರಗಳ ಪುನರ್‌ ವಿಗಂಡಣೆ ಮಾಡಲು ಚುನಾವಣಾ ಆಯೋಗ ಸೂಚಿಸಿದೆ. ಫೆ.19ರಿಂದಲೇ ಪುನರ್‌ ವಿಗಂಡಣಾ ಕಾರ್ಯಗಳು ಆರಂಭವಾಗಲಿವೆ.

ತಾಲ್ಲೂಕು ಪಂಚಾಯಿತಿಗಳಿಗೆ ಯಾವುದೇ ವಿಶೇಷ ಅನುದಾನ, ಅಧಿಕಾರವಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಬರುತ್ತವೆ. ಹತ್ತುಹಲವು ಯೋಜನೆಗಳು ನೇರವಾಗಿ ಕಾರ್ಯಗತಗೊಳ್ಳುತ್ತವೆ. ಜಿಲ್ಲಾ ಪಂಚಾಯಿತಿ ಉಸ್ತುವಾರಿ ನೋಡಿಕೊಳ್ಳುತ್ತದೆ. ಮಧ್ಯದಲ್ಲಿರುವ ತಾಲ್ಲೂಕು ಪಂಚಾಯಿತಿಗಳು ಹೆಸರಿಗಷ್ಟೆ ಎನ್ನುವಂತಾಗಿವೆ.

‘ತಾಲ್ಲೂಕು ಪಂಚಾಯಿತಿಗಳು ದುರ್ಬಲಗೊಳ್ಳಲು ಆಯಾ ಕ್ಷೇತ್ರಗಳ ಶಾಸಕರ ಅಧಿಕಾರ ಕೇಂದ್ರಿತ ವ್ಯವಸ್ಥೆ ಕಾರಣ. ಅವರ ಒತ್ತಾಸೆಯಿಂದಲೇ ಸರ್ಕಾರ ಇಂತಹ ನಿರ್ಧಾರ ಮಾಡುತ್ತಿದೆ. ಅವುಗಳನ್ನು ರದ್ದು ಮಾಡುವ ಬದಲು ಬಲವರ್ಧನೆ ಮಾಡಬೇಕು. ಗ್ರಾಮಾಡಳಿತದ ಸುಗಮ ನಿರ್ವಹಣೆಗೆ ಮೂರು ಹಂತದ ವ್ಯವಸ್ಥೆ ಅಗತ್ಯವಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ಆರ್. ಷಡಾಕ್ಷರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT