ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲು ತನದಲ್ಲಿ ವಂಚನೆ, ಮೋಸ ಇಲ್ಲ.

‘ಕೃಷಿ ಮತ್ತು ತೋಟಗಾರಿಕಾ ಮೇಳ’ದಲ್ಲಿ ನಂದಿವೇರಿ ಮಠ ಶಿವಕುಮಾರ್ ಸ್ವಾಮಿಜಿ ಅಭಿಮತ
Last Updated 20 ಮಾರ್ಚ್ 2023, 7:05 IST
ಅಕ್ಷರ ಗಾತ್ರ

ಶಿವಮೊಗ್ಗ: ನೈತಿಕತೆ ಇಲ್ಲದ ನಾಯಕರು ಜೈಲಿಗೆ ಹೋಗಿ ಹೊರ ಬಂದು, ಜನಪ್ರತಿನಿಧಿ ಆಗಿರುವ ಈ ವಾತಾವರಣದಲ್ಲಿ ಸಜ್ಜನರು, ಸಾತ್ವಿಕರು, ಕೃಷಿಕರು ಬದುಕಬೇಕಿದೆ ಹಾಗೂ ಕೃಷಿಕರಿಂದ ದೇಶ ಸುಭೀಕ್ಷ ಆಗಬೇಕಿದೆ ಎಂದು ಗದಗದ ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ್ ಸ್ವಾಮೀಜಿ ಹೇಳಿದರು.

ಇಲ್ಲಿನ ನವುಲೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕೃಷಿ ಮತ್ತು ತೋಟಗಾರಿಕಾ ಮೇಳ’ದಲ್ಲಿ ಅವರು ಮಾತನಾಡಿದರು.

‘ಒಕ್ಕಲುತನ ಶ್ರೇಷ್ಠ. ಇಲ್ಲಿ ವಂಚನೆ, ಮೋಸ ಇಲ್ಲ. ಪಂಚಭೂತಗಳನ್ನು ಬಳಸಿಕೊಂಡು, ಪರಿಸರಕ್ಕೆ ಅನುಗುಣವಾಗಿ ಮಣ್ಣನ್ನು ಹದ ಮಾಡಿಕೊಂಡು ಒಕ್ಕಲುತನ ಮಾಡುವ ರೀತಿಯು ಭಾರತೀಯ ಪರಂಪರೆ, ಸಂಸ್ಕೃತಿಗೆ ಕಿರೀಟದಂತೆ. ಕೃಷಿ ದೇಶದಲ್ಲಿ ತುಂಬಾ ಮೇಲ್ಮಟ್ಟದಲ್ಲಿತ್ತು. ಪ್ರಸ್ತುತ ತುಂಬಾ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ ಕೃಷಿ ವಿಜ್ಞಾನಿಗಳು ಕೃಷಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಒಕ್ಕಲುತನ ಉಳಿಯಬೇಕಾದರೆ ಪಶುಸಂಗೋಪನೆಗೆ ಹೆಚ್ಚು ಒತ್ತು ನೀಡಬೇಕು. ಕೃಷಿಕರು ಆಕಳು, ಎತ್ತು, ಕೃಷಿಗೆ ಪೂರಕವಾದ ಪ್ರಾಣಿಗಳನ್ನು ಸಾಕಬೇಕು. ಅದರ ಜೊತೆಗೆ ಇಂದಿನ ಯುವಕರು ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು. ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಮಣ್ಣು ಜೀವ ಕಳೆದುಕೊಳ್ಳುತ್ತಿದೆ. ಅದಕ್ಕೆ ಪಶುಸಂಗೋಪನೆ ಮೂಲಕ ಪ್ರಾಣಿಗಳನ್ನು ಸಾಕಿ, ತಿಪ್ಪೆ ಗೊಬ್ಬರದ ಮೂಲಕ ಕೃಷಿಯನ್ನು ಜೀವಂತ ಪಡಿಸಬೇಕು’ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್.ಪಾಟೀಲ್ ಅವರು ಮಾತನಾಡಿ, ‘ಭೂಮಿಯ ಮೇಲೆ ಫಲವತ್ತಾದ ಮಣ್ಣಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಮಣ್ಣನ್ನು ಉಳಿಸಲು ಯುವಕರು ನೈಸರ್ಗಿಕ ಕೃಷಿಯನ್ನು ಅನುಸರಿಸಬೇಕು. ರೈತರು ಆರ್ಥಿಕವಾಗಿ ಸಧೃಡರಾಗಲು ಸಮಗ್ರ ಕೃಷಿಯತ್ತ ಗಮನ ಹರಿಸಬೇಕು. ಮೊಲ ಸಾಕಾಣಿಕೆ, ಜೇನು ಸಾಕಾಣಿಕೆ, ಕುರಿ, ಕೋಳಿ ಸಾಕಾಣಿಕೆ ಮೂಲಕವೂ ಹೆಚ್ಚಿನ ಲಾಭ ಪಡೆಯಬಹುದು’ ಎಂದರು.

‘ಸಿರಿ ಧಾನ್ಯಗಳು ಪರಿಸರ ಸ್ನೇಹಿ. ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಪಾಶ್ಚಾತ್ಯ ಆಹಾರ ಪದ್ಧತಿಯಿಂದ ಈ ಧಾನ್ಯಗಳ ಮಹತ್ವ ಮರೆತು ಅನೇಕ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಗೋದಿ ನಮ್ಮ ಮೂಲ ಬೆಳೆ ಅಲ್ಲ. ಆದರೂ ಅದನ್ನು ವ್ಯಾಪಕವಾಗಿ ಬಳಸುತ್ತಿದ್ದೇವೆ. ಸಿರಿಧಾನ್ಯಗಳನ್ನು ಪ್ರತಿ ನಿತ್ಯ ಬಳಸುವುದರಿಂದ ಮಧುಮೇಹದಂತಹ ಕಾಯಿಲೆಯನ್ನು ದೂರ ಇಡಬಹುದು’ ಎಂದು ಬೆಂಗಳೂರು, ಸಿರಿಧಾನ್ಯಗಳ ಯೋಜನೆಗಳ ಕೃಷಿ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ. ಟಿ. ನಾಗರಾಜ್ ಅವರು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಆರ್.ಸಿ. ಜಗದೀಶ್, ಕೃಷಿ ಮತ್ತು ತೋಟಗಾರಿಕೆ ಮೇಳದ ವಿಸ್ತರಣಾ ನಿರ್ದೇಶಕ ಡಾ. ಬಿ. ಹೇಮ್ಲಾ ನಾಯಕ್, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಮೃತ್ಯುಂಜಯ ವಾಲಿ, ಪ್ರಮುಖರಾದ ವೀರಭದ್ರಪ್ಪ ಪೂಜಾರಿ, ತೀರ್ಥೇಶ್ ಎಚ್. ಆರ್ ಇದ್ದರು.

ವ್ಯಾಪಾರಿಗಳ ಪ್ರತಿಭಟನೆ

ಶಿವಮೊಗ್ಗ: ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕಾ ಮೇಳ ವೇದಿಕೆಯಲ್ಲಿ ಭಾನುವಾರ ಕೆಲ ಮಳಿಗೆ ವ್ಯಾಪಾರಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಮಾ. 17ರಿಂದ ಪ್ರಾರಂಭವಾಗಿರುವ ಕೃಷಿ ಮೇಳ ಮೂರು ದಿನ ಪೂರೈಸಿದೆ. ಆದರೆ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸುತ್ತಿಲ್ಲ. ಮೇಳದ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮತ್ತೊಂದೆಡೆ, ಮೇಳದಲ್ಲಿ ತೆರೆದ ಮಳಿಗೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ-ವಹಿವಾಟು ನಡೆಯುತ್ತಿಲ್ಲ. ಸಾವಿರಾರು ರೂ. ನಷ್ಟ ಅನುಭವಿಸಿದೆ ಎಂದು ಕೆಲ ಮಳಿಗೆ ವ್ಯಾಪಾರಿಗಳು ಅಳಲು ತೋಡಿಕೊಂಡರು.

ಪ್ರತಿಭಟನೆಯಿಂದ ವೇದಿಕೆ ಸಭಾಂಗಣದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಶ್ವವಿದ್ಯಾಲಯದ ಅಧಿಕಾರಿಗಳು ಪ್ರತಿಭಟನಕಾರರನ್ನು ತಿಳಿಗೊಳಿಸಿದರು.

ಆಕರ್ಷಕ ಶ್ವಾನ ಪ್ರದರ್ಶನ

ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು.

35ಕ್ಕೂ ಹೆಚ್ಚಿನ ತಳಿಯ ಶ್ವಾನಗಳು ಭಾಗಿಯಾಗಿದ್ದವು. ಪೊಲೀಸ್ ಇಲಾಖೆಯ 15 ಬಗೆಯ ಶ್ವಾನಗಳು ಪ್ರಮುಖ ಆಕರ್ಷಣೆಯಾಗಿದ್ದವು. ಶ್ವಾನ ಪ್ರದರ್ಶನ ವೀಕ್ಷಣೆಗೆ ನೂರಾರು ಜನರು ಆಗಮಿಸಿದ್ದರು. ಪ್ರದರ್ಶನದಲ್ಲಿ ವಿಜೇತ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು. ನವುಲೆ, ಕೃಷಿ ವಿಶ್ವವಿದ್ಯಾನಿಲಯ ಅಧ್ಯಾಪಕಿ ಡಾ. ದಿವ್ಯ ಹಾಗೂ ಡಾ.ಅಶೋಕ್ ಮತ್ತು ಪಶುಸಂಗೋಪನಾ ಇಲಾಖೆ ವೈದ್ಯರು ಯಶಸ್ವಿಯಾಗಿ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT